ಬೆಂಗಳೂರು: ರಾಜ್ಯದಲ್ಲಿ ನಡೆದ ಹಿಂದು ಕಾರ್ಯಕರ್ತರ ಹತ್ಯೆ ಮತ್ತು ಬಿಜೆಪಿ ಕಾರ್ಯಕರ್ತರ ಆಕ್ರೋಶಕ್ಕೆ ಸಂಬಂಧಿಸಿ ಕೇಂದ್ರ ಗೃಹ ಸಚಿವರು ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂಬ ವರದಿಗಳ ನಡುವೆಯೇ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮಾಹಿತಿ ಪಡೆದಿರುವುದು ನಿಜ ಎಂದಿದ್ದಾರೆ
ಗೃಹ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿ ಒಂದು ವರ್ಷ ಪೂರೈಸಿದ ಅವರು ಗುರುವಾರ ಬೆಳಗ್ಗೆ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಬಳಿಕ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದರು. ಆನಂತರ ಪತ್ರಕರ್ತರ ಜತೆ ಮಾತನಾಡಿದರು.
ʻʻಬೆಳಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದೇನೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ನಡೆದ ಪ್ರವೀಣ್ ನೆಟ್ಟಾರು ಹತ್ಯೆ ಹಾಗೂ ಬಳಿಕದ ವಿದ್ಯಮಾನಗಳ ಬಗ್ಗೆ ಅಮಿತ್ ಶಾ ಅವರು ವಿವರವಾದ ಮಾಹಿತಿ ಪಡೆದರು. ಆದರೆ, ಹೆಚ್ಚಿನ ವಿವರ ತಿಳಿಸಲಾಗದುʼʼ ಎಂದು ಹೇಳಿದರು.
ಕೊಲೆ ಪ್ರಕರಣಗಳಿಗೆ ಸಂಬಂಧಿಸಿ ರಾಜ್ಯ ಸರಕಾರ ತೆಗೆದುಕೊಂಡ ನಿಲುವಿನ ಬಗ್ಗೆ, ಸರಕಾರದ ಕಾರ್ಯ ವೈಖರಿ ಬಗ್ಗೆ ಅಮಿತ್ ಶಾ ಅವರಿಗೆ ತೃಪ್ತಿ ಇದೆ ಎಂದ ಅವರು, ಮುಖ್ಯಮಂತ್ರಿ ಬದಲಾವಣಗೆ ಕೇವಲ ಊಹಾಪೋಹ ಎಂದರು. ರಾಜ್ಯದಲ್ಲಿ ನಡೆಯುತ್ತಿರು ವಿದ್ಯಮಾನಗಳ ಬಗ್ಗೆ ತಿಳಿಯುವುದಕ್ಕಾಗಿಯೇ ಎಂದು ಅವರೇನೂ ಬಂದಿಲ್ಲ. ಬಂದಾಗ ಮಾಹಿತಿ ಪಡೆದಿದ್ದಾರೆ. ರಾಜ್ಯದ ಎಲ್ಲ ಬೆಳವಣಿಗೆಗಳ ಮಾಹಿತಿ ತ್ವರಿತವಾಗಿ ಅವರಿಗೆ ತಲುಪುತ್ತದೆ. ಇಲ್ಲಿಗೆ ಬಂದೇ ಪಡೆಯಬೇಕಾಗಿಲ್ಲ ಎಂದರು ಆರಗ ಜ್ಞಾನೇಂದ್ರ.
ಎರಡು ದಿನದಲ್ಲಿ ಪ್ರವೀಣ್ ನಿಜ ಹಂತಕರು ಬಲೆಗೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಪ್ರವೀಣ್ ನೆಟ್ಟಾರು ಮತ್ತು ಫಾಝಿಲ್ ಹತ್ಯೆಗೆ ಸಂಬಂಧಿಸಿ ಪೊಲೀಸ್ ಕಾರ್ಯಾಚರಣೆ ಕೊನೆಯ ಹಂತಕ್ಕೆ ಬಂದಿದೆ. ಫಾಝಿಲ್ ಹತ್ಯೆಯಲ್ಲಿ ಎಲ್ಲ ಆರೋಪಿಗಳನ್ನು ಬಂಧಿಸಲಾಗಿದೆ. ಪ್ರವೀಣ್ ಕೊಲೆಗೆ ಸಹಕಾರ ನೀಡಿದವರನ್ನು ಬಂಧಿಸಲಾಗಿದೆ. ನಿಜವಾದ ಕೊಲೆಗಾರರನ್ನು ಗುರುತಿಸಲಾಗಿದೆ. ಅವರು ಅತ್ತಿತ್ತ ಓಡಾಡುತ್ತಿದ್ದು, ಒಂದೆರಡು ದಿನದಲ್ಲಿ ಬಂಧನವಾಗಲಿದೆ ಎಂದಿದ್ದಾರೆ.
ಪ್ರವೀಣ್ ಹತ್ಯೆಯ ಬಳಿಕ ಕೆರಳಿದ ಕಾರ್ಯಕರ್ತರ ಆಕ್ರೋಶದ ಬಗ್ಗೆ ಮಾತನಾಡಿದ ಅವರು, ಕಾರ್ಯಕರ್ತರು ನಮ್ಮ ಕಣ್ಣು ತೆರೆಸುವ ಕೆಲಸ ಮಾಡಿದ್ದಾರೆ. ಹಾಗಂತ ಸಿದ್ಧಾಂತ ಬಿಟ್ಟು ಯಾರೂ ಹೋಗುವುದಿಲ್ಲ. ನಾವು ಏನು ಮಾಡುತ್ತಿದ್ದೇವೆ ಎಂದು ಅವರಿಗೆ ವಿವರಿಸಿದ್ದೇವೆ ಎಂದರು.
ಸದ್ಯವೇ ಪಿಎಸ್‌ಐ ಪರೀಕ್ಷೆ
ಭಾರಿ ಪ್ರಮಾಣದಲ್ಲಿ ಅಕ್ರಮ ನಡೆದ ಹಿನ್ನೆಲೆಯಲ್ಲಿ ರದ್ದುಪಡಿಸಲಾಗಿರುವ ಪಿಎಸ್‌ಐ ಪರೀಕ್ಷೆಯನ್ನು ತನಿಖೆ ಮುಗಿದ ಬಳಿಕ ನಡೆಸಲಾಗುವುದು. ಅತಿ ಶೀಘ್ರವೇ ತನಿಖೆ ನಡೆದು ವರದಿ ಬರಲಿದೆ. ಬಳಿಕ ತ್ವರಿತವಾಗಿ ಪರೀಕ್ಷೆ ನಡೆಸಲಾಗುವುದು ಎಂದರು. ಹಿಂದಿನ ಅಧಿಸೂಚನೆಯನ್ನೇ ಆಧರಿಸಿ ಪರೀಕ್ಷೆ ನಡೆಯುವುದರಿಂದ ವಯೋಮಿತಿಯ ಸಮಸ್ಯೆ ಎದುರಾಗುವುದಿಲ್ಲ ಎಂದು ವಿವರಿಸಿದರು.
ಇದನ್ನೂ ಓದಿ | Amit Shah in state | ಪ್ರವೀಣ್ ನೆಟ್ಟಾರು ಹತ್ಯೆ, ಪ್ರತಿಭಟನೆಗಳಿಂದ ಬಿಜೆಪಿಗೆ ಭಾರಿ ಡ್ಯಾಮೇಜ್, ಅಮಿತ್ ಶಾ ಕಿಡಿ