ಮೈಸೂರು: ರಾಜ್ಯ ವಿಧಾನಸಭಾ ಚುನಾವಣೆ (Karnataka Election 2023) ಹಿನ್ನೆಲೆಯಲ್ಲಿ ಬಿಜೆಪಿ ಭಾರಿ ಪ್ರಚಾರ ತಂತ್ರದಲ್ಲಿ ನಿರತವಾಗಿದೆ. ಈಗಾಗಲೇ ಕೇಂದ್ರ ನಾಯಕರು ಅನೇಕ ಬಾರಿ ರಾಜ್ಯಕ್ಕೆ ಭೇಟಿ ನೀಡಿ ಸಭೆ, ಸಮಾರಂಭಗಳನ್ನು ನಡೆಸಿದ್ದಾರೆ. ಶುಕ್ರವಾರವಷ್ಟೇ (ಏಪ್ರಿಲ್ 21) ರಾಜ್ಯಕ್ಕೆ ಭೇಟಿ ನೀಡಿದ್ದ ಗೃಹ ಸಚಿವ ಅಮಿತ್ ಶಾ (Amit Shah) ಅವರು ಭಾನುವಾರ (ಏಪ್ರಿಲ್ 23) ಮತ್ತೆ ಆಗಮಿಸುತ್ತಿದ್ದು, ರಾತ್ರಿ ಮೈಸೂರಿಗೆ ಭೇಟಿ ನೀಡಲಿದ್ದಾರೆ.
ಅಮಿತ್ ಶಾ ಆಗಮನದಿಂದ ಕಮಲ ನಾಯಕರು ಫುಲ್ ಆ್ಯಕ್ಟಿವ್ ಆಗಿದ್ದು, ಹಳೇ ಮೈಸೂರು ಭಾಗದಲ್ಲಿ ಚುನಾವಣಾ ಕಾರ್ಯತಂತ್ರವನ್ನು ಹೆಣೆಯಲಿದ್ದಾರೆ. ಮೈಸೂರು, ಚಾಮರಾಜನಗರ ಭಾಗದಲ್ಲಿ ಅಮಿತ್ ಶಾ ಪ್ರವಾಸ ಕೈಗೊಳ್ಳಲಿದೆ.
ಇದನ್ನೂ ಓದಿ: Viral Video: ಕತ್ತರಿಸಿದ ಕೋಳಿಯನ್ನು ರಾಷ್ಟ್ರಧ್ವಜದಲ್ಲಿ ಸ್ವಚ್ಛಗೊಳಿಸಿ, ‘ನನ್ನ ದೇಶಭಕ್ತಿ ಪ್ರಶ್ನಿಸಬೇಡಿ’ ಎಂದವ ಅರೆಸ್ಟ್
ಭಾನುವಾರ ರಾತ್ರಿ 9.30ಕ್ಕೆ ಮೈಸೂರಿಗೆ ಆಗಮಿಸುವ ಅಮಿತ್ ಶಾ, ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಸೋಮವಾರ (ಏಪ್ರಿಲ್ 24) ಬೆಳಗ್ಗೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ನಾಡ ಅಧಿದೇವತೆ, ತಾಯಿ ಚಾಮುಂಡೇಶ್ವರಿ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಚಾಮರಾಜನಗರದತ್ತ ತೆರಲಿದ್ದಾರೆ.
ರೋಡ್ ಶೋದಲ್ಲಿ ಭಾಗಿ
ಚಾಮರಾಜನಗರದ ಗುಂಡ್ಲುಪೇಟೆಗೆ ಭೇಟಿ ನೀಡಲಿರುವ ಅಮಿತ್ ಶಾ ಅಲ್ಲಿ ರೋಡ್ ಶೋ ನಲ್ಲಿ ಭಾಗಿಯಾಗಲಿದ್ದಾರೆ. ಅಲ್ಲಿ ಗುಂಡ್ಲುಪೇಟೆ ಅಭ್ಯರ್ಥಿ ಸಿ.ಎಸ್. ನಿರಂಜನ್ ಕುಮಾರ್ ಪರವಾಗಿ ಮತಯಾಚನೆ ನಡೆಸಲಿದ್ದಾರೆ. ಬಳಿಕ ಹಾಸನ ಜಿಲ್ಲೆಗೆ ತೆರಳಲಿದ್ದಾರೆ. ಅಲ್ಲಿ ಪ್ರವಾಸ ನಡೆಸಿದ ಬಳಿಕ ಮೈಸೂರಿಗೆ ಆಗಮಿಸಲಿದ್ದಾರೆ.
ಇದನ್ನೂ ಓದಿ: Sarath Babu: ʻಅಮೃತವರ್ಷಿಣಿ’ ಸಿನಿಮಾ ಖ್ಯಾತಿಯ ನಟ ಶರತ್ ಬಾಬು ಆರೋಗ್ಯದಲ್ಲಿ ಮತ್ತೆ ಏರುಪೇರು
ವರುಣ ಕ್ಷೇತ್ರದ ಅಖಾಡಕ್ಕೆ ಇಳಿದ ಸೋಮಣ್ಣ
ವರುಣ ಕ್ಷೇತ್ರದ ಚುನಾವಣಾ ಕಣಕ್ಕೆ ಸಚಿವ ಸೋಮಣ್ಣ ಅವರು ಭಾನುವಾರದಿಂದ ಧುಮುಕಲಿದ್ದಾರೆ. ವರುಣ ಕ್ಷೇತ್ರದಲ್ಲಿ ಮತಯಾಚನೆಯನ್ನು ಪ್ರಾರಂಭ ಮಾಡಲಿದ್ದಾರೆ. ವರುಣ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಲ್ಲಿ ಮತಯಾಚನೆಗೆ ರೂಟ್ ಮ್ಯಾಪ್ ನಿರ್ಮಿಸಿಕೊಂಡಿದ್ದಾರೆ.
ಭುಗತಹಳ್ಳಿ, ವಾಜಮಂಗಲ, ಹಲಗಯ್ಯನಹುಂಡಿ, ವರುಣ, ದಂಡಿಕೆರೆ, ಪಿಲ್ಲಹಳ್ಳಿ, ಚಿಕ್ಕಳ್ಳಿ, ಚೋರನಹಳ್ಳಿ ಸೇರಿದಂತೆ ಇತರೆ ಗ್ರಾಮಗಳಲ್ಲಿ ಮತಯಾಚನೆ ನಡೆಸಲಿದ್ದಾರೆ. ಶನಿವಾರವಷ್ಟೇ ವರುಣ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ, ವರುಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ಪ್ರಚಾರ ನಡೆಸಿದ್ದರು.
ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಬುಡಕಟ್ಟು ಬಾಲಕಿ ಮೃತಪಟ್ಟಿದ್ದು ವಿಷದಿಂದ ಎಂದ ಪೋಸ್ಟ್ಮಾರ್ಟಮ್ ರಿಪೋರ್ಟ್; ಅತ್ಯಾಚಾರ ನಡೆದಿತ್ತಾ?
5 ದಿನ ಮತಯಾಚನೆ
ಭಾನುವಾರದಿಂದ ವರುಣ ಕ್ಷೇತ್ರದಲ್ಲಿಯೇ 5 ದಿನಗಳ ಕಾಲ ಪ್ರಚಾರ ನಡೆಸಲಿರುವ ಸೋಮಣ್ಣ ಅವರು ಹಳ್ಳಿ ಹಳ್ಳಿಗಳಿಗೆ ಭೇಟಿ ನೀಡಿ ಮತ ಕೇಳಲಿದ್ದಾರೆ. ಸಚಿವ ಸೋಮಣ್ಣ ಅವರಿಗೆ ಸಂಸದ ಪ್ರತಾಪ್ ಸಿಂಹ ಹಾಗೂ ಬಿಜೆಪಿ ನಾಯಕರು ಸಾಥ್ ನೀಡಲಿದ್ದಾರೆ.