Site icon Vistara News

Cauvery Water Dispute: ಕಾವೇರಿ ಕೊಳ್ಳದಲ್ಲಿ ಭುಗಿಲೆದ್ದ ಆಕ್ರೋಶ; ಕೆಆರ್‌ಎಸ್‌ಗೆ ನುಗ್ಗಲು ಯತ್ನಿಸಿದ ರೈತರು ವಶಕ್ಕೆ, ಸೆ.23ಕ್ಕೆ ಮಂಡ್ಯ ಬಂದ್

Farmers Protest in KRS Dam

ಮಂಡ್ಯ/ಮೈಸೂರು: ತಮಿಳುನಾಡಿಗೆ ನೀರು (Cauvery Water Dispute) ಬಿಡಬೇಕು ಎಂಬ ಸಿಡಬ್ಲ್ಯುಎಂಎ ಆದೇಶವನ್ನು ಸುಪ್ರೀಂ ಕೋರ್ಟ್‌ ಎತ್ತಿಹಿಡಿದ ಹಿನ್ನೆಲೆಯಲ್ಲಿ ಕಾವೇರಿ ಕೊಳ್ಳದಲ್ಲಿ ರೈತರ ಆಕ್ರೋಶ ಭುಗಿಲೆದ್ದಿದೆ. ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಕಾವೇರಿ ನೀರು ಹರಿಸಬಾರದು ಎಂದು ಒತ್ತಾಯಿಸಿ ಮಂಡ್ಯ ಹಾಗೂ ಮೈಸೂರಿನಲ್ಲಿ ರೈರ ಸಂಘಟನೆಗಳು ಗುರುವಾರ ಪ್ರತಿಭಟನೆ ನಡೆಸಿದವು. ಕೆಲ ರೈತರು ಕೆಆರ್‌ಎಸ್‌ ಡ್ಯಾಂ ಬಳಿ ಧಿಕ್ಕಾರದ ಘೋಷಣೆಗಳನ್ನು ಕೂಗಿ ಜಲಾಶಯಕ್ಕೆ ನುಗ್ಗಲು ಯತ್ನಿಸಿದರು. ಆದರೆ, ಪೊಲೀಸರು ಅವರನ್ನು ತಡೆದು ವಶಕ್ಕೆ ಪಡೆದಿದ್ದಾರೆ.

ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಡ್ಯಾಂ ಬಳಿ ಸುಪ್ರಿಂ ಕೋರ್ಟ್ ತೀರ್ಪು ಖಂಡಿಸಿ ಭೂಮಿತಾಯಿ ಹೋರಾಟ ಸಮಿತಿಯ ರೈತರು ಪ್ರತಿಭಟನೆ ನಡೆಸಿ ಕೆಆರ್‌ಎಸ್‌ಗೆ ನುಗ್ಗಲು ಯತ್ನಿಸಿದರು. ಈ ವೇಳೆ ಅವರನ್ನು ತಡೆದು ಪೊಲೀಸರು ವಶಕ್ಕೆ ಪಡೆದರು.

ಸೆಪ್ಟೆಂಬರ್ 23 ರಂದು ಮಂಡ್ಯ ಬಂದ್

ತಮಿಳುನಾಡಿಗೆ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ಆದೇಶ ಹಿನ್ನೆಲೆ ಸೆ.23ರಂದು ಮಂಡ್ಯ ಬಂದ್‌ಗೆ ಮಂಡ್ಯ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ಕರೆ ನೀಡಿದೆ. ಬಂದ್ ನಡೆಸುವ ಬಗ್ಗೆ ಸಮಿತಿಯ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ಬಂದ್ ಸಂಬಂಧ ನಾಳೆ ಮತ್ತೊಂದು ಸುತ್ತಿನ ಸಭೆ ನಡೆಸಲು ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು, ವರ್ತಕರು, ಸಂಘಟನೆಗಳ ಮುಖಂಡರ ಸಭೆ ಏರ್ಪಡಿಸಲಾಗಿದೆ.

ಹೆದ್ದಾರಿಯಲ್ಲಿ ಮಲಗಿ ರೈತರ ಪ್ರತಿಭಟನೆ

ಮಂಡ್ಯದಲ್ಲಿ ಕಾವೇರಿ ಹೋರಾಟ ಮುಂದುವರಿದಿದೆ. ಸುಪ್ರೀಂ ಆದೇಶ ಖಂಡಿಸಿ ಹೆದ್ದಾರಿಯಲ್ಲಿ ಮಲಗಿ ರೈತರು ಪ್ರತಿಭಟನೆ ನಡೆಸಿದರು. ಮಂಡ್ಯದ ಸಂಜಯ್ ವೃತ್ತದಲ್ಲಿ ಹೆದ್ದಾರಿ ತಡೆದು ಆಕ್ರೋಶ ಹೊರಹಾಕಿದ ತಾಲೂಕು ರೈತ ಸಂಘದ ಸದಸ್ಯರು, ಹೆದ್ದಾರಿಯಲ್ಲಿ ಮಲಗಿ ಸುಪ್ರೀಂ ಕೋರ್ಟ್ ಹಾಗೂ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಅದೇ ರೀತಿ ನಗರದಲ್ಲಿ ಕೆಆರ್‌ಎಸ್ ಪಕ್ಷದಿಂದಲೂ ಬೃಹತ್ ಪ್ರತಿಭಟನೆ ನಡೆಸಲಾಯಿತು. ನಮ್ಮದು ನಮ್ಮದು ಕಾವೇರಿ ನಮ್ಮದು ಎಂದು ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು.

ಇದನ್ನೂ ಓದಿ | Cauvery Dispute : ಹೆಜ್ಜೆ ಹೆಜ್ಜೆಗೂ ತಪ್ಪು, ನಿರ್ಲಕ್ಷ್ಯ, ಸ್ವಾರ್ಥ ರಾಜಕಾರಣ; ಕಾವೇರಿ ಹಿನ್ನಡೆಗೆ ಕಾರಣ ಪಟ್ಟಿ ಮಾಡಿದ HDK

ರೈತ ಹಿತರಕ್ಷಣಾ ಸಮಿತಿ ಹೋರಾಟಕ್ಕೆ ತಮಿಳಿಗರ ಬೆಂಬಲ

ಸುಪ್ರೀಂ ಕೋರ್ಟ್‌ ತೀರ್ಪನ್ನು ಖಂಡಿಸಿ ಮಂಡ್ಯದಲ್ಲಿ ನಡೆದ ರೈತ ಹಿತರಕ್ಷಣಾ ಸಮಿತಿ ಹೋರಾಟಕ್ಕೆ ತಮಿಳಿಗರು ಬೆಂಬಲ ಸೂಚಿಸಿದ್ದು ಕಂಡುಬಂತು. ಪ್ರತಿಭಟನೆಯಲ್ಲಿ ಮಂಡ್ಯದ ತಮಿಳು ಕಾಲೋನಿಯ ಜನ ಪಾಲ್ಗೊಂಡು ಕಾವೇರಿ ನೀರು ಹರಿಸುವುದಕ್ಕೆ ಆಕ್ರೋಶ ಹೊರಹಾಕಿದರು.

ಮಂಡ್ಯದ ಜಿಲ್ಲಾಧಿಕಾರಿಗಳ ಕಚೇರಿ ಬಳಿಯ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಕಳೆದ ಹಲವು ದಿನಗಳಿಂದ ಮಂಡ್ಯದಲ್ಲಿ ಪ್ರತಿಭಟನೆ ನಡೆಸುತ್ತಿರುವ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಕಾರ್ಯಕರ್ತರು, ಇಂದು ಕೂಡ ಪ್ರತಿಭಟನೆ ಮುಂದವರಿಸಿದರು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ ಅವರು, ಕದ್ದುಮುಚ್ಚಿ ಸರ್ಕಾರ ನೀರನ್ನು ಹರಿಸುತ್ತಿದೆ ಎಂದು ಕಿಡಿಕಾರಿದರು.

ಮೈಸೂರಿನಲ್ಲಿ ಕಾಡಾ ಕಚೇರಿ ಮುತ್ತಿಗೆಗೆ ಯತ್ನ

ಮೈಸೂರು: ನಗರದಲ್ಲಿ ರೈತ ಪರ ಸಂಘಟನೆಗಳು ಕಾವೇರಿ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಕಾಡಾ) ಕಚೇರಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಈ ವೇಳೆ ಕಚೇರಿಗೆ ಬೀಗ ಜಡಿಯಲು ರೈತರು ಮುಂದಾದರು. ಹೀಗಾಗಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ನಡೆಯಿತು. ಕಚೇರಿ ಮುಖ್ಯದ್ವಾರದಲ್ಲೇ ರೈತರನ್ನು ಪೊಲೀಸರು ತಡೆದಾಗ, ಸ್ಥಳಕ್ಕೆ ನೀರಾವರಿ ಇಲಾಖೆ ಅಧಿಕಾರಿ ಆಗಮಿಸಿದಾಗ ರೈತರು ತರಾಟೆಗೆ ತೆಗೆದುಕೊಂಡರು.

ಇದನ್ನೂ ಓದಿ | Cauvery Dispute : ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಲೇಬೇಕು; ಪರಿಣತರ ತಂಡ ಕಳುಹಿಸಲಿ ಎಂದ ಎಂ.ಬಿ ಪಾಟೀಲ್‌

ಮಹಿಷಾಸುರನಂತೆ ಸಿಎಂ ಸ್ಟಾಲಿನ್ ಚಿತ್ರಿಸಿ ಪ್ರತಿಭಟನೆ

ಮೈಸೂರು ಗನ್‌ಹೌಸ್ ಮುಂಭಾಗ ಕರ್ನಾಟಕ ರಾಜ್ಯ ರೈತ ಸಂಘ, ಕಬ್ಬು ಬೆಳೆಗಾರರ ಸಂಘ, ಕನ್ನಡ ಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು. ಖಾಲಿ ಕೊಡ ಕೊರಳಿಗೆ ಸುತ್ತಿಕೊಂಡು ಆದೇಶಕ್ಕೆ ಧಿಕ್ಕಾರ ಕೂಗಿದ್ ಪ್ರತಿಭಟನಾಕಾರರು, ತಮಿಳುನಾಡು‌ ಸಿಎಂ ಸ್ಟಾಲಿನ್ ಫೋಟೊವನ್ನು ಮಹಿಷಾಸುರನಂತೆ ಚಿತ್ರಿಸಿ ಆಕ್ರೋಶ ಹೊರಹಾಕಿದರು. ರಾಜ್ಯದ ಸಂಕಷ್ಟ ಮನವರಿಕೆ ಮಾಡಿಕೊಟ್ಟು ನೀರು ಉಳಿಸಿಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ರೈತರು ಆಗ್ರಹಿಸಿದರು.

ರಾಜ್ಯದ ಸಂಸದರು ಸತ್ತೋದರಲ್ಲಪ್ಪೋ ಎಂದು ಬಾಯಿ ಬಡಿದುಕೊಂಡು ಆಕ್ರೋಶ

ಕಾವೇರಿ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಕಾಡಾ) ಕಚೇರಿ ಮುಂದೆ ಜಮಾವಣೆಗೊಂಡ ರೈತರು, ಮುಖ್ಯ ದ್ವಾರದ ಮುಂದೆ ತಮಟೆ ಚಳವಳಿ ನಡೆಸಿದರು. ರಾಜ್ಯದ ಸಂಸದರು ಸತ್ತೋದರಲ್ಲಪ್ಪೋ ಎಂದು ಬಾಯಿ ಬಡಿದುಕೊಂಡು ಪ್ರತಿಭಟನೆ ನಡೆಸಿ, ಕಾವೇರಿ ನೀರು ಹರಿಯಲು ಬಿಟ್ಟ ಸಂಸದರು ರಾಜೀನಾಮೆ ನೀಡುವಂತೆ ಒತ್ತಾಯಿಸಿದರು.

ಪೊರಕೆ ಚಳವಳಿ

ಮೈಸೂರು ಜಿಲ್ಲಾ ಪಂಚಾಯಿತಿ ಕಚೇರಿ ಮುಂಭಾಗ ಕರ್ನಾಟಕ ಸೇನಾ ಪಡೆ ಮತ್ತು ರಾಜ್ಯ ಒಕ್ಕಲಿಗ ಸಂಘದ ನೇತೃತ್ವದಲ್ಲಿ ಪೊರಕೆ ಪ್ರತಿಭಟನೆ ನಡೆಸಲಾಯಿತು. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಧಿಕ್ಕಾರ ಕೂಗಿ ಜನರು ಆಕ್ರೋಶ ಹೊರಹಾಕಿದರು.

Exit mobile version