ಮಂಡ್ಯ: ಮೈಸೂರಿನ ಕೆಆರ್‌ಎಸ್ ಸಮೀಪದ ಎಂಎನ್‌ಪಿಎಂ ಚೆಕ್ ಪೋಸ್ಟ್ (Check post) ಬಳಿ ಕರ್ತವ್ಯ ನಿರತ ಪೊಲೀಸರ ಮೇಲೆ ಉದ್ಯಮಿಯೊಬ್ಬರು ಹಲ್ಲೆ (Assault Case) ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಆರೋಪವೊಂದು ಕೇಳಿ ಬಂದಿದೆ. ಮಾಜಿ ಎಂಎಲ್‌ಸಿ ದಯಾನಂದ ರೆಡ್ಡಿ ಅವರ ಸಹೋದರ ಬಿ.ಟಿ ನಾಗರಾಜ್ ರೆಡ್ಡಿ ಎಂಬುವವರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪೊಲೀಸರು ಚೆಕ್‌ಪೋಸ್ಟ್‌ನಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಕೆಆರ್‌ಎಸ್ ಮಾರ್ಗವಾಗಿ ಬಂದಿದ್ದ ಬಿ.ಟಿ. ನಾಗರಾಜ್ ರೆಡ್ಡಿ ಅವರ ಕಾರನ್ನು ಪೊಲೀಸರು ತಡೆದು ತಪಾಸಣೆ ಮಾಡಲು ಮುಂದಾಗಿದ್ದರು. ಇದರಿಂದ ಸಿಟ್ಟಿಗೆದ್ದ ನಾಗರಾಜ್, ʻನನ್ನ ಕಾರನ್ನೇ ತಡೆಯುತ್ತೀರಾ ಎಂದು ಪೊಲೀಸ್ ಸಿಬ್ಬಂದಿಗೆ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ನಿಮ್ಮ ಮೇಲಧಿಕಾರಿಗೆ ಫೋನ್ ಮಾಡಿಕೊಡು ಎಂದು ದರ್ಪ ತೋರಿ, ಹಲ್ಲೆ ನಡೆಸಿದ್ದಾರೆ.
ಇದನ್ನೂ ಓದಿ: Karnataka Election 2023: ವಯಸ್ಸಾದವರೇ ಎಲೆಕ್ಷನ್‌ಗೆ ನಿಲ್ತಾರೆ; ನಾವ್ಯಾಕೆ ವೋಟ್ ಹಾಕಬೇಕು?: ಆಯುಕ್ತರಿಗೆ ಯುವಕನ ಪ್ರಶ್ನೆ
ಮಾಜಿ ಎಂಎಲ್‌ಸಿ ದಯಾನಂದ ರೆಡ್ಡಿಯವರ ಸಹೋದರನಾಗಿರುವ ಹಾಗೂ ಆನೇಕಲ್ ತಾಲೂಕಿನ ಬೊಮ್ಮಸಂದ್ರದಲ್ಲಿರುವ ಮಹೇಂದ್ರ ಗ್ರೂಪ್ಸ್‌ನ ಮಾಲೀಕನಾಗಿರುವ ನಾಗರಾಜ್ ರೆಡ್ಡಿ ಹಲ್ಲೆ ನಡೆಸಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸದ್ಯ ಉದ್ಯಮಿ ನಾಗರಾಜ್ ರೆಡ್ಡಿ ವಿರುದ್ಧ ಪ್ರಕರಣ ದಾಖಲಾಗಿದ್ದು, ನ್ಯಾಯಾಂಗ ಬಂಧನದಲ್ಲಿ ಇರುವುದಾಗಿ ಮಂಡ್ಯ ಎಸ್‌ಪಿ ಯತೀಶ್ ಖಚಿತಪಡಿಸಿದ್ದಾರೆ.