ಮೈಸೂರು: ಅಯೋಧ್ಯೆ ಶ್ರೀ ರಾಮ ಮಂದಿರದಲ್ಲಿ (Ayodhya Ram Mandir) ಜನವರಿ 22ರಂದು ಪ್ರಾಣ ಪ್ರತಿಷ್ಠಾಪನೆ ಮಾಡಲಿರುವ ಬಾಲ ರಾಮನ (Ram Lalla Idol) ಮೂರ್ತಿಗೆ ಮೈಸೂರಿನ ಶಿಲೆ ಬಳಕೆಯಾಗುತ್ತಿದ್ದು, ಇಲ್ಲಿನ ರೈತರೊಬ್ಬರ ಹೊಲದ ಶಿಲೆಯನ್ನು ಗುಪ್ತವಾಗಿ ಒಯ್ಯಲಾಗಿದೆ.
ಮೈಸೂರು ತಾಲೂಕಿನ ಹಾರೋಹಳ್ಳಿ ಗ್ರಾಮದ ರಾಮ್‌ದಾಸ್ ಎಂಬವರ ಜಮೀನಿನ ಕಲ್ಲನ್ನು ಹೀಗೆ ಒಯ್ಯಲಾಗಿದೆ. ರಾಮ್‌ಲಲ್ಲಾ ಮೂರ್ತಿಯ ಕೆತ್ತನೆಗೆ ಪ್ರಶಸ್ತವಾಗಿರುವ ಕೃಷ್ಣ ಶಿಲೆ ಇದು ಎಂದು ತಿಳಿದು ಬಂದಿದೆ.
ಗುಜ್ಜೇಗೌಡನಪುರದ ಶ್ರೀನಿವಾಸ್ ಎಂಬವರು ಈ ಜಮೀನು ಗುತ್ತಿಗೆ ಪಡೆದಿದ್ದರು. ಸುರೇಂದ್ರ ವಿಶ್ವಕರ್ಮ ಎಂಬವರು ಶ್ರೀನಿವಾಸ್ ಅವರ ಸಂಪರ್ಕ ಮಾಡಿದ್ದರು. ಮಾನಯ್ಯ ಬಡಿಗೇರ್ ಎಂಬವರು ಕಲ್ಲು ಪರೀಕ್ಷೆ ಮಾಡಿದ್ದರು. ನಂತರ ರಾಮಮಂದಿರ ಟ್ರಸ್ಟ್ ಸದಸ್ಯರ ಸಮ್ಮುಖದಲ್ಲಿ ಕಲ್ಲನ್ನು ಮೂರ್ತಿಗಾಗಿ ಅಂತಿಮಗೊಳಿಸಲಾಗಿತ್ತು.
ರಾಮ್‌ದಾಸ್ ಜಮೀನಲ್ಲಿ 10 ಅಡಿ ಆಳದಲ್ಲಿ ಶಿಲೆ ತೆಗೆಯಲಾಗಿದೆ. ರಾಮನ ಮೂರ್ತಿಗಾಗಿ ಸುಮಾರು 19 ಟನ್ ತೂಕದ 9 ಅಡಿ 8 ಇಂಚು ಉದ್ದದ ಶಿಲೆಯನ್ನು ತೆಗೆದು ರವಾನಿಸಲಾಗಿದೆ. ರಾಮನ ಜತೆಗೆ ಸೀತೆ, ಲಕ್ಷ್ಮಣ, ಭರತ, ಶತ್ರುಘ್ನರ ಮೂರ್ತಿಗೂ ಶಿಲೆ ಒಯ್ಯಲಾಗಿದೆ.
ಕಲ್ಲು ಕಳುಹಿಸಿ ವಿಚಾರವನ್ನು ಪ್ರಚಾರ ಮಾಡಬಾರದು ಎಂದು ಷರತ್ತು ಹಾಕಲಾಗಿತ್ತು. ಕಲ್ಲು ತೆಗೆದ ನಂತರ ಮಣ್ಣು ಮುಚ್ಚಿ ಭೂಮಿಯನ್ನು ಸಮತಟ್ಟು ಮಾಡಲಾಗಿದೆ. ರಾಮ ಮಂದಿರಕ್ಕಾಗಿ ಕಲ್ಲಿನ ಜತೆಗೆ ಇಲ್ಲಿನ ಮಣ್ಣನ್ನೂ ತೆಗದುಕೊಂಡು ಹೋಗಲಾಗಿದೆ. ಒಟ್ಟು ಸುಮಾರು 40 ಟನ್ ತೂಕದಷ್ಟು ಕಲ್ಲನ್ನು ಗ್ರಾಮಸ್ಥರು ಕಳುಹಿಸಿಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Ayodhya Airport: ಇಂದು ಅಯೋಧ್ಯೆ ಏರ್‌ಪೋರ್ಟ್, ರೈಲು ನಿಲ್ದಾಣ ಉದ್ಘಾಟಿಸಲಿದ್ದಾರೆ ಮೋದಿ