ವಿಜಯಪುರ-ಬಾಗಲಕೋಟೆ: ಕೃಷ್ಣಾ ನದಿ ಹಿನ್ನೀರಿನಲ್ಲಿ ಅಪರಿಚಿತ ಯುವಕನ ಶವ ಪತ್ತೆಯಾದ ಕುರಿತು ದಾಖಲಾಗಿದ್ದ ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಪ್ರೇಮಿಗಳ ಸಾವಿನ ರಹಸ್ಯವನ್ನು ಭೇದಿಸಿದ್ದಾರೆ. ಇದರಲ್ಲಿ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಯುವಕನನ್ನು ಯುವತಿ ಕುಟುಂಬಸ್ಥರೇ ಸಾಯಿಸಿರುವುದು ಗೊತ್ತಾಗಿದೆ.
ಈ ಪ್ರಕರಣದಲ್ಲಿ ಯುವಕನ ಶವ ಪತ್ತೆಯಾಗಿದ್ದು, ಯುವತಿಯ ಶವ ಇನ್ನೂ ಪತ್ತೆಯಾಗಿಲ್ಲ. ಯುವಕನ ಕೊಲೆಗೈದು, ಯುವತಿಯನ್ನು ಆತ ಕಿಡ್ನ್ಯಾಪ್ ಮಾಡಿದ್ದಾನೆ ಎಂದು ಕೇಸ್ ದಾಖಲಿಸಿದ್ದ ಯುವತಿ ಕುಟುಂಬಸ್ಥರು ಈಗ ಅಂದರ್ ಆಗಿದ್ದಾರೆ. ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣ ಬಯಲಾಗಿದೆ. ಈ ಕುರಿತು ಸಮಗ್ರ ಮಾಹಿತಿಯನ್ನು ಬಾಗಲಕೋಟೆ ಎಸ್ಪಿ ಜಯಪ್ರಕಾಶ್ ನೀಡಿದ್ದಾರೆ.
ಪ್ರಕರಣದ ಜಾಡು ಹೀಗಿದೆ: ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಘೋಣಸಗಿ ಗ್ರಾಮದ ಯುವಕನ ಶವ ಬಾಗಲಕೋಟೆ ಜಿಲ್ಲೆ ಬೀಳಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೃಷ್ಣಾ ನದಿಯ ಹಿನ್ನೀರಿನ ಹದರಿಹಾಳ ಗ್ರಾಮದ ಬಳಿ ಪತ್ತೆಯಾಗಿತ್ತು. ಅಪರಿಚಿತ ಶವ ಪತ್ತೆ ವೇಳೆ ಕೊಲೆ ಶಂಕಿಸಿ ಪೊಲೀಸರು ತನಿಖೆ ನಡೆಸಿದ್ದರು. ಪ್ರಕರಣ ಭೇದಿಸಲು ಬಾಗಲಕೋಟೆ ಎಸ್ಪಿ ವಿಶೇಷ ತಂಡ ರಚಿಸಿದ್ದರು. ಟೀ ಶರ್ಟ್ ಮೇಲಿದ್ದ ನಿಸರ್ಗ ಸ್ಪೋರ್ಟ್ಸ್ ಕ್ಲಬ್‌ನ ಹೆಸರು ಬೆನ್ನು ಹತ್ತಿ ಅದನ್ನು ನಡೆಸುತ್ತಿದ್ದ ಶಿವಾನಂದ ಮಾಳಿ ಎಂಬವರ ಬಳಿ ವಿಚಾರಿಸಿದಾಗ ಯುವಕನ ಹೆಸರು, ವಿಳಾಸ ಪತ್ತೆಯಾಗಿತ್ತು.
ತಿಕೋಟಾ ತಾಲೂಕಿನ ಘೋಣಸಗಿ ಗ್ರಾಮದ 20 ವರ್ಷದ ಮಲ್ಲಿಕಾರ್ಜುನ ಜಮಖಂಡಿ ಹಾಗೂ ಕಳ್ಳಕವಟಗಿ ಗ್ರಾಮದ 18 ವರ್ಷದ ಗಾಯಿತ್ರಿ ಮಧ್ಯೆ ಪ್ರೇಮ ಪ್ರಕರಣ ನಡೆದಿತ್ತು. ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ವಿಜಯಪುರದ ಕಾಲೇಜಿಗೆ ಬಸ್‌ನಲ್ಲಿ ಹೋಗಿಬರುವಾಗ ಇಬ್ಬರ ಮಧ್ಯೆ ಪ್ರೇಮಾಂಕುರವಾಗಿತ್ತು. ಇಬ್ಬರ ಮನೆಯಲ್ಲೂ ವಿಚಾರ ಗೊತ್ತಾಗಿ ಬುದ್ಧಿ ಹೇಳಿದರೂ ಇವರ ಪ್ರೀತಿ ಮುಂದುವರಿದಿತ್ತು.
ಇದನ್ನೂ ಓದಿ | ತಲೆ ಮೇಲೆ ಕಲ್ಲು ಹಾಕಿ ಮಹಿಳೆಯ ಬರ್ಬರ ಕೊಲೆ
ಸೆಪ್ಟೆಂಬರ್ 23ರಂದು ರಾತ್ರಿ ಮಲ್ಲಿಕಾರ್ಜುನ ಘೋಣಸಗಿಯಿಂದ ಕಳ್ಳಕವಟಗಿ ಗ್ರಾಮದ ಯುವತಿ ಗಾಯಿತ್ರಿ ಇರುವ ತೋಟಕ್ಕೆ ಹೋಗಿದ್ದ. ತೋಟದ ಶೆಡ್‌ನ ಒಳಗೆ ಮಲ್ಲಿಕಾರ್ಜುನ- ಗಾಯಿತ್ರಿ ಮಾತಾಡುವುದನ್ನು ಕೇಳಿದ ಗಾಯಿತ್ರಿ ತಂದೆ ಗುರಪ್ಪ ಶೆಡ್ ಬಾಗಿಲು ಹಾಕಿ ಕೀಲಿ ಹಾಕಿದ್ದ. ಬೆಳಗ್ಗೆ ನಿನ್ನ ಪೋಷಕರನ್ನು ಕರೆಸಿ ಇದನ್ನು ಬಹಿರಂಗಪಡಿಸುವುದಾಗಿ ಮಲ್ಲಿಕಾರ್ಜುನನಿಗೆ ಎಚ್ಚರಿಕೆ ಕೊಟ್ಟಿದ್ದ. ಮರ್ಯಾದೆ ಹೋಗುತ್ತದೆ ಎಂದು ಅಂಜಿ ಗಾಯಿತ್ರಿ ಶೆಡ್‌ನಲ್ಲಿದ್ದ ಕ್ರಿಮಿನಾಶಕ ಸೇವಿಸಿ ಸ್ಥಳದಲ್ಲೇ ಸತ್ತಿದ್ದಳು. ಬಳಿಕ ಗಾಯಿತ್ರಿ ತಂದೆ ಗುರಪ್ಪ, ಅಜಿತ್, ಅಜ್ಜ ಮಲ್ಲಪ್ಪ ಬಂದು, ಗಾಯಿತ್ರಿ ಸಾವಿಗೆ ನೀನೇ ಕಾರಣವೆಂದು ಥಳಿಸಿ ಕಂಬಕ್ಕೆ ಕಟ್ಟಿ ಹಾಕಿ ಮಲ್ಲಿಕಾರ್ಜುನನಿಗೆ ಕ್ರಿಮಿನಾಶಕ ಕುಡಿಸಿ ಕೊಲೆ ಮಾಡಿದ್ದರು.
ಸೆ.24ರಂದು ಬೆಳಗ್ಗೆ ಇಬ್ಬರ ಶವವನ್ನೂ ಪ್ರತ್ಯೇಕವಾಗಿ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಹಿನ್ನೀರಿನಲ್ಲಿ ಹಾಕಿದ್ದರು. ಕಾರಿನಲ್ಲಿ ಶತ ಕೊಂಡೊಯ್ದು ಕೋರ್ತಿ ಕೋಲ್ಹಾರ ಸೇತುವೆ ಹಿನ್ನೀರಿನಲ್ಲಿ ಬಿಸಾಕಿದ್ದರು. ಅಕ್ಟೋಬರ್ 5ರಂದು ತಿಕೋಟಾ ಠಾಣೆಯಲ್ಲಿ ಗಾಯತ್ರಿಯ ಕಿಡ್ನಾಪ್ ಕೇಸ್ ದಾಖಲಿಸಿದ್ದರು. ಅ.6ರಂದು ಮಲ್ಲಿಕಾರ್ಜುನ ಕುಟುಂಬಸ್ಥರು ಯುವಕನ ನಾಪತ್ತೆ ಕೇಸ್ ದಾಖಲಿಸಿದ್ದರು. ಅ.10ರಂದು ಬೀಳಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವಕನ ಶವ ಪತ್ತೆಯಾಗಿತ್ತು. ಬೀಳಗಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದ ಬೆನ್ನು ಬಿದ್ದ ಪೊಲೀಸರು ಇದೀಗ ರಹಸ್ಯ ಭೇದಿಸಿದ್ದಾರೆ.
ಇದನ್ನೂ ಓದಿ | ಮಳವಳ್ಳಿ ಬಾಲಕಿ ಕೊಲೆ | ಅತ್ಯಾಚಾರ ಎಸಗಿ ಕೊಂದ ಕಾಮಪಿಪಾಸು ಶಿಕ್ಷಕ