ಬಾಗಲಕೋಟೆ: ಶಿರೂರು ಗ್ರಾಮದ ಹೊರ ವಲಯದಲ್ಲಿರುವ ಹಳ್ಳದ ರಸ್ತೆಯಲ್ಲಿ, ರಮೇಶ್ ಅಂಗಡಿ ಎಂಬ ವ್ಯಕ್ತಿ, ತನ್ನ ಅಳಿಯ 38 ವರ್ಷದ ಸಂಗಪ್ಪ ಕೋಟಿ ಎಂಬವನನ್ನು ಕಲ್ಲಿನಿಂದ ತಲೆ ಜಜ್ಜಿ ಕೊಲೆ ಮಾಡಿದ್ದಾನೆ. ಒಂದು ಪಂಪ್‌ಸೆಟ್ ಹಾಗೂ ಏಳೆಂಟು ತೆಂಗಿನ ಗಿಡಗಳು ಇರುವ ತುಣುಕು ಆಸ್ತಿಗಾಗಿ ಪತ್ನಿಯ ಸಹೋದರ ಸಂಬಂಧದಲ್ಲಿ ಅಳಿಯನಾಗಬೇಕಾದವನನ್ನೇ ಕೊಲೆಗೈದಿದ್ದಾನೆ.
ಒಂದು ಕೈ ವಿಕಲತೆ ಇರುವ ಸಂಗಪ್ಪನನ್ನು ತನ್ನ ಸಹೋದರ ಸಂಬಂಧಿ ಸುನಿಲ್ ವಾಲಿ ಜೊತೆ ಸೇರಿ ರಮೇಶ್ ಅಂಗಡಿ ಕೊಲೆ ಮಾಡಿದ್ದಾನೆ. ಸಂಗಪ್ಪ ಕೋಟಿ ಬೆಳಿಗ್ಗೆ 9.30ರ ಸುಮಾರಿಗೆ ಹೊಲಕ್ಕೆ ಟಿವಿಎಸ್ ಬೈಕ್‌ನಲ್ಲಿ ಹೋಗುತ್ತಿದ್ದಾಗ ಅಡ್ಡಗಟ್ಟಿದ ರಮೇಶ್ ಹಾಗೂ ಸುನಿಲ್ ಇಬ್ಬರು ಸೇರಿ ಜಗಳ ತೆಗೆದು, ತಲೆಗೆ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾರೆ.
ಕೊಲೆಗೈದ ಬಳಿಕ ಸ್ಟೇಟಸ್‌ನಲ್ಲಿ ತಪ್ಪೊಪ್ಪಿಗೆ ಪತ್ರ ಹಾಕಿರುವ ರಮೇಶ್ ಮತ್ತು ಸುನೀಲ್ ನಂತರ ಪರಾರಿಯಾಗಿದ್ದಾರೆ. ಗ್ರಾಮಸ್ಥರು ಕೊಲೆ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಈರಪ್ಪ ಎಂಬವರಿಗೆ ಸಂಬಂಧದಲ್ಲಿ ಅಳಿಯನಾಗಬೇಕಿದ್ದ ಸಂಗಪ್ಪನನ್ನು ಚಿಕ್ಕಂದಿನಿಂದಲೇ ಸಾಕಿ ಬೆಳೆಸಿ ತನ್ನ ಮಗಳನ್ನು ಮದುವೆ ಮಾಡಿಕೊಟ್ಟಿದ್ದ. ನಂತರ ತಮ್ಮ ಪಕ್ಕದ ಹೊಲವನ್ನೇ ಖರೀದಿ ಮಾಡಿಕೊಟ್ಟಿದ್ದ. ಆದರೆ ಇತ್ತೀಚೆಗೆ ಸರ್ವೆ ಮಾಡಿಸಿದಾಗ ಈರಪ್ಪನ ಒಂದು ಪಂಪ್‌ಶೆಡ್, ಏಳೆಂಟು ತೆಂಗಿನ ಗಿಡಗಳು ಇರುವ ಜಾಗ ರಮೇಶ್ ಜಾಗದಲ್ಲಿರೋದು ಗೊತ್ತಾಗಿತ್ತು. ಆ ಜಾಗ ಬಿಟ್ಟುಕೊಡುವಂತೆ ರಮೇಶ್ ಮೇಲಿಂದ ಮೇಲೆ ಜಗಳ ತೆಗೆಯುತ್ತಿದ್ದ. ಈರಪ್ಪ ಕೂಡ ಬಿಟ್ಟು ಕೊಡೋದಕ್ಕೆ ತಯಾರಿದ್ದರು.
ಆದರೆ ಬಿಟ್ಟು ಕೊಡುವ ವಿಚಾರದಲ್ಲಿ ಸಂಗಪ್ಪ ಕೋಟಿ ಸಂಪೂರ್ಣ ಒಪ್ಪಿಗೆ ನೀಡಿರಲಿಲ್ಲ. ಇದಕ್ಕಾಗಿಯೆ ಮೇಲಿಂದ ಮೇಲೆ ಜಗಳ ನಡೆಯುತ್ತಿತ್ತು. ಇದೇ ವಿಚಾರವಾಗಿ ರಮೇಶ್ ಜಗಳ ತೆಗೆದು ಅಳಿಯನ ಕಥೆ ಮುಗಿಸಿದ್ದಾನೆ. ಕೊಲೆ ಮಾಡಿದ ರಮೇಶ್ ನಂತರ ಪತ್ರವೊಂದರ ಸ್ಟೇಟಸ್ ಇಟ್ಟುಕೊಂಡಿದ್ದಾನೆ.
ಸಂಗಪ್ಪ ಕೋಟಿ ನನಗೆ ನಾಲ್ಕು ತಿಂಗಳ ಹಿಂದೆ ಹೊಡೆದಿದ್ದು, ಅದು ಬಹಳ ನೋವಾಗುತ್ತಿತ್ತು. ಗಜೇಂದ್ರಗಢ ಆಸ್ಪತ್ರೆ, ಬಾಗಲಕೋಟೆ ಗುಳೇದ ಆಸ್ಪತ್ರೆ ಸೇರಿದಂತೆ ವಿವಿಧ ಕಡೆ ತೋರಿಸಿದ್ದೆ. ಆದರೂ ಕಡಿಮೆಯಾಗಲಿಲ್ಲ. ಆದ್ದರಿಂದ ನೋವು ತಡೆಯಲಾರದೆ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದೇನೆ, ಇದು ನಮ್ಮ ವ್ಯಯಕ್ತಿಕ ದ್ವೇಷ ಎಂದು ಬರೆದಿದ್ದಾನೆ. ಸುದ್ದಿ ತಿಳಿದ ಬಾಗಲಕೋಟೆ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಎಲ್ಲ ಆಯಾಮದಿಂದಲೂ ತನಿಖೆ ನಡೆಸುತ್ತಿದ್ದೇವೆ. ತನಿಖೆ ನಂತರ ಹೆಚ್ಚಿನ ಮಾಹಿತಿ ಹೊರಗೆ ಬರಲಿದೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಉಡುಪಿ ಜೋಡಿ ಕೊಲೆ ಭೇದಿಸಿದ ಪೊಲೀಸರು: ಚೆಲುವಿಯ ಸಂಬಂಧಿಯ ಸೆರೆ