ರಾಮನಗರ: ಬಂಡೇ ಮಠದ ಶ್ರೀ ಬಸವಲಿಂಗ ಸ್ವಾಮೀಜಿ ಅವರ ಆತ್ಮಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಬೇರೆ ಬೇರೆ ಆಯಾಮಗಳನ್ನು ಪಡೆದುಕೊಳ್ಳುತ್ತಿದೆ. ಮಹಿಳೆಯನ್ನು ಮುಂದಿಟ್ಟುಕೊಂಡು ಹನಿ ಟ್ರ್ಯಾಪ್ ನಡೆಸಿದ ತಂಡ ಈಗಾಗಲೇ ಸ್ವಾಮೀಜಿಯಿಂದ ಲಕ್ಷಾಂತರ ರೂಪಾಯಿ ವಸೂಲಿ ಮಾಡಿದೆ ಎನ್ನಲಾಗಿದೆ. ಇನ್ನೂ ಕೋಟ್ಯಂತರ ರೂಪಾಯಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದು, ಅದನ್ನು ಹೊಂದಿಸಲಾಗದೆ ಶ್ರೀಗಳು ಪ್ರಾಣವನ್ನೇ ಕಳೆದುಕೊಂಡರು ಎಂದು ಹೇಳಲಾಗಿದೆ.
ಶ್ರೀಗಳಿಗೆ ಆಪ್ತರಾಗಿದ್ದವರೇ, ಶ್ರೀಗಳ ಜತೆಗೆ ಮಠದಲ್ಲಿ ಇದ್ದವರೇ ಈ ಹನಿಟ್ರ್ಯಾಪ್‌ನ ರೂವಾರಿಗಳಿಗೆ ಬೆಂಬಲ ನೀಡಿದ್ದಾರೆ ಎಂಬ ಅಂಶ ಮೇಲ್ನೋಟಕ್ಕೆ ಪೊಲೀಸರಿಗೆ ಗೊತ್ತಾಗಿದೆ. ಈ ಸಂಬಂಧ ಶ್ರೀಗಳ ಚಾಲಕ, ಮಠದಲ್ಲಿರುವ ಅವರ ಆಪ್ತರನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಅವರನ್ನು ವಿಚಾರಣೆ ನಡೆಸಿ ಬಿಟ್ಟಿದ್ದರೂ ವ್ಯಾಪ್ತಿ ಪ್ರದೇಶ ಬಿಟ್ಟು ಎಲ್ಲಿಗೂ ಹೋಗದಂತೆ ಎಚ್ಚರಿಕೆ ನೀಡಲಾಗಿದೆ. ಹನಿ ಟ್ರ್ಯಾಪ್ ಗ್ಯಾಂಗ್ ಕಳೆದು ಆರು ತಿಂಗಳಿನಿಂದ ಸಕ್ರಿಯವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಶ್ರೀಗಳ ಆಪ್ತವಲಯದಲ್ಲೇ ಗುರುತಿಸಿಕೊಂಡಿದ್ದ ಪ್ರಭಾವಿಗಳೇ ಸಂಚು ರೂಸಿಪಿ ಖೆಡ್ಡಾಕ್ಕೆ ಕೆಡವಿದ್ದಾರೆ ಎನ್ನಲಾಗುತ್ತಿದೆ. ಶ್ರೀಗಳ ಜೊತೆ ನಿಕಟ ಸಂಪರ್ಕ ಹೊಂದಿದ್ದ ಕೆಲ ವ್ಯಕ್ತಿಗಳೇ ಮಹಿಳೆಯನ್ನು ಶ್ರೀಗಳಿಗೆ ಪರಿಚಯ ಮಾಡಿಕೊಟ್ಟಿದ್ದರು ಎನ್ನಲಾಗುತ್ತಿದೆ. ಈ ಕುರಿತಾಗಿ ಈಗಾಗಲೇ ಏಳು ಜನರ ವಿಚಾರಣೆ ನಡೆಸಿದ್ದಾರೆ.
ವೈರಲ್ ವಿಡಿಯೊ ಸುತ್ತ ತೀವ್ರ ತನಿಖೆ
ಎರಡು ದಿನಗಳ ಹಿಂದೆ ವೈರಲ್ ಸ್ವಾಮೀಜಿ ವಿಡಿಯೊವನ್ನು ಆಧಾರವಾಗಿಟ್ಟುಕೊಂಡು ಪ್ರಧಾನ ತನಿಖೆ ನಡೆಯುತ್ತಿದೆ ಎನ್ನಲಾಗಿದೆ. ಜತೆಗೆ ಸ್ವಾಮೀಜಿಯವರು ತಮ್ಮ ಡೆತ್ ನೋಟ್‌ನಲ್ಲಿ ಉಲ್ಲೇಖಿಸಿರುವ ಅಂಶಗಳೂ ತನಿಖೆಯಲ್ಲಿ ಪ್ರಧಾನ ಪಾತ್ರ ವಹಿಸಿವೆ.
ಮಹಿಳೆಯೊಬ್ಬರನ್ನು ಮುಂದೆ ಬಿಟ್ಟು ವಿಡಿಯೊ ಮಾಡಿಕೊಂಡಿದ್ದ ಈ ತಂಡ ಬಳಿಕ ದೊಡ್ಡ ಮೊತ್ತಕ್ಕೆ ಬೇಡಿಕೆ ಇಟ್ಟಿದೆ ಎನ್ನಲಾಗಿದೆ. ಈ ಮೊತ್ತ ಸುಮಾರು ೧೦ ಕೋಟಿ ರೂ. ಎಂದು ಹೇಳಲಾಗುತ್ತಿದೆ. ಒಂದು ಕಡೆ ಈ ಟೀಮ್ ಅವರ ಬೆನ್ನು ಹತ್ತಿದ್ದರೆ ಹತ್ತು ದಿನಗಳ ಹಿಂದೆ ಮಠದ ಆಪ್ತನೇ ಒಬ್ಬ ಸ್ವಾಮೀಜಿಯ ಮೊಬೈಲ್‌ಗೆ ಈ ವಿಡಿಯೊವನ್ನು ಕಳುಹಿಸಿರುವುದು ಬೆಳಕಿಗೆ ಬಂದಿದೆ.
ಬಸವಲಿಂಗ ಸ್ವಾಮೀಜಿಯ ಆಪ್ತ ಚಾಲಕ ಸೇರಿದಂತೆ ನಾಲ್ವರ ಮೊಬೈಲ್ ಫೋನನ್ನು ವಶಕ್ಕೆ ಪಡೆದಿರುವ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಜತೆಗೆ ಆಪ್ತ ಚಾಲಕ, ಸಿಬ್ಬಂದಿಗಳ ಚಲನವಲನಗಳ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತಿದೆ.
ಶ್ರೀಗಳು ಬರೆದಿದ್ದು ೬ ಪುಟದ ಡೆತ್ ನೋಟ್?
ಬಸವ ಲಿಂಗ ಶ್ರೀಗಳು ಡೆತ್ ನೋಟ್ ಬರೆದಿಟ್ಟಿರುವುದು ಸ್ಪಷ್ಟವಾಗಿದೆ. ಆದರೆ ಬರೆದಿದ್ದು ಎಷ್ಟು ಪುಟದ ಡೆತ್ ನೋಟ್ ಎನ್ನುವ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿರಲಿಲ್ಲ. ರಾಮ ನಗರ ಎಸ್ಪಿ ಸಂತೋಷ್ ಬಾಬು ಅವರು ಹೇಳುವ ಪ್ರಕಾರ, ಶ್ರೀಗಳು ಪೊಲೀಸರಿಗೆ ಅಡ್ರೆಸ್ ಮಾಡಿ ಮೂರು ಪುಟಗಳ ಒಂದು ಡೆತ್ ನೋಟ್ ಬರೆದಿಟ್ಟಿದ್ದರೆ, ಭಕ್ತರು ಮತ್ತು ಇತರ ಸ್ವಾಮೀಜಿಗಳನ್ನು ಉದ್ದೇಶಿಸಿ ಇನ್ನೊಂದು ಮೂರು ಪುಟಗಳ ಡೆತ್ ನೋಟ್ ಬರೆದಿದ್ದಾರೆ ಎನ್ನಲಾಗಿದೆ.
ಮೊದಲು ಒಂದು ಪುಟ ಬರೆದು ಅದನ್ನು ಹರಿದು ಕಿಟಕಿಯ ಮೂಲಕ ಹೊರಗೆ ಎಸೆದಿದ್ದ ಶ್ರೀಗಳು ಉಳಿದಂತೆ ಎರಡೂ ಪತ್ರಗಳಲ್ಲಿ ಹೆಚ್ಚು ಕಡಿಮೆ ಒಂದೇ ವಿಷಯಗಳನ್ನು ಉಲ್ಲೇಖಿಸಿದ್ದಾರೆ. ಈ ಪತ್ರ ಮೊದಲು ಮಠದ ಸಿಬ್ಬಂದಿಗೆ ಸಿಕ್ಕಿದ್ದು, ಬಳಿಕ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಎಸ್‌ಪಿ ತಿಳಿಸಿದ್ದಾರೆ.
ರಿಲೀಸ್ ಮಾಡಲೆಂದೇ ವಿಡಿಯೊ!
ಆತ್ಮಹತ್ಯೆ ಮತ್ತು ವಿಡಿಯೊ ವೈರಲ್‌ಗೆ ಸಂಬಂಧಿಸಿ ಈಗಾಗಲೇ ೨೦ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಶ್ರೀಗಳ ವಿಡಿಯೊ ವೈರಲ್ ಬಗ್ಗೆ ಕೂಡ ತನಿಖೆ ಮಾಡಲಾಗುವುದು. ಕೆಲವೊಂದು ಉದ್ದೇಶಗಳನ್ನು ಇಟ್ಟುಕೊಂಡೇ ವಿಡಿಯೊ ಮಾಡಲಾಗಿರುವುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಅವರು.
ವಿಡಿಯೊ ಮಾಡಿಕೊಂಡಿರುವ ಯುವತಿಯ ಬಗ್ಗೆ ಕೆಲವೊಂದು ಸಾಕ್ಷ್ಯಾಧಾರಗಳನ್ನು ಹುಡುಕುತ್ತಿದ್ದೇವೆ. ಶ್ರೀಗಳ ಪೋನ್ ನಲ್ಲಿದ್ದ ಕಾಲ್ ಡಿಟೇಲ್ ಮುಖಾಂತರ ವಿಚಾರಣೆ ನಡೆಸಲಾಗುವುದು ಎಂದು ಎಸ್‌ಪಿ ಸಂತೋಷ್ ಬಾಬು ಹೇಳಿದರು.
ಇದನ್ನೂ ಓದಿ | Seer Suicide| ಬಂಡೆ ಮಠ ಸ್ವಾಮೀಜಿ ವಿಡಿಯೊ ವೈರಲ್, ಮೂವರು ಮಹಿಳೆಯರ ಸಹಿತ 7 ಮಂದಿ ಪೊಲೀಸ್ ಬಲೆಯಲ್ಲಿ