ರಾಮನಗರ: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ (Banglore-Mysore Expressway) ವಾಹನ ಸವಾರರಿಗೆ ಮತ್ತೆ ಬರೆ ಬೀಳುತ್ತಿದೆ. ಶನಿವಾರದಿಂದ (ಏ. 1) ದರ ಪರಿಷ್ಕರಣೆ ಮಾಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆದೇಶ ಹೊರಡಿಸಿದೆ. ಬರೋಬ್ಬರಿ ಶೇಕಡಾ 22ರಷ್ಟು ದರ ಹೆಚ್ಚಳ ಮಾಡಲಾಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಟೋಲ್ ಸಂಗ್ರಹ ಆರಂಭವಾಗಿ ಕೇವಲ 17 ದಿನದಲ್ಲೇ ಮತ್ತೆ ಟೋಲ್ ದರ ಹೆಚ್ಚಳ ಮಾಡಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಆದರೆ, ಇದಕ್ಕೆ ಸಮಜಾಯಿಷಿ ನೀಡಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮ 2008ರ ಪ್ರಕಾರ ದರ ಹೆಚ್ಚಳ ಮಾಡಿದೆ ಎಂದು ಹೇಳಿಕೊಂಡಿದೆ. ಇದಕ್ಕೆ ಕಿಡಿಕಾರಿರುವ ಜನರು, ಹೆದ್ದಾರಿ ಪ್ರಾಧಿಕಾರವು ಜನಸಾಮಾನ್ಯರನ್ನು ಲೂಟಿ ಮಾಡುತ್ತಿದೆ ಎಂದು ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.
ಹೀಗಿರಲಿದೆ ಪರಿಷ್ಕೃತ ದರ
ಕಾರು/ವ್ಯಾನ್/ಜೀಪ್: ಏಕಮುಖ ಸಂಚಾರ 165 ರೂಪಾಯಿ (30 ರೂ. ಹೆಚ್ಚಳ). ದ್ವಿಮುಖ ಸಂಚಾರ – 250 ರೂಪಾಯಿ (45ರೂ ಹೆಚ್ಚಳ).
ಲಘು ವಾಹನಗಳು/ಮಿನಿಬಸ್: ಏಕಮುಖ ಸಂಚಾರ 270 ರೂಪಾಯಿ (50 ರೂ. ಹೆಚ್ಚಳ) ದ್ವಿಮುಖ ಸಂಚಾರ- 405 ರೂಪಾಯಿ (75 ರೂ. ಹೆಚ್ಚಳ)
ಟ್ರಕ್/ಬಸ್/ಎರಡು ಆ್ಯಕ್ಸೆಲ್ ವಾಹನ: ಏಕಮುಖ ಸಂಚಾರ 565 ರೂಪಾಯಿ (165 ರೂ. ಹೆಚ್ಚಳ), ದ್ವಿಮುಖ ಸಂಚಾರ- 850 ರೂಪಾಯಿ (160 ರೂಪಾಯಿ ಹೆಚ್ಚಳ)
ತ್ರಿ ಆ್ಯಕ್ಸೆಲ್ ವಾಣಿಜ್ಯ ವಾಹನಗಳು: ಏಕಮುಖ ಸಂಚಾರ 615 ರೂಪಾಯಿ (115 ರೂ. ಹೆಚ್ಚಳ), ದ್ವಿಮುಖ ಸಂಚಾರ- 925 ರೂಪಾಯಿ (225 ರೂ. ಹೆಚ್ಚಳ)
ಭಾರಿ ಕಟ್ಟಡ ನಿರ್ಮಾಣ ವಾಹಗನಳು/ ಅರ್ಥ್ ಮೂವರ್ಸ್/ 4-6 ಆ್ಯಕ್ಸೆಲ್ ವಾಹನಗಳು: ಏಕಮುಖ ಸಂಚಾರ 885 ರೂಪಾಯಿ (165 ರೂ. ಹೆಚ್ಚಳ), ದ್ವಿಮುಖ ಸಂಚಾರ- 1,330 ರೂ. ಹೆಚ್ಚಳ (250 ರೂ. ಹೆಚ್ಚಳ)
7 ಅಥವಾ ಅದಕ್ಕಿಂತ ಹೆಚ್ಚಿನ ಆ್ಯಕ್ಸೆಲ್ ವಾಹನಗಳು: ಏಕಮುಖ ಸಂಚಾರ 1,080 ರೂಪಾಯಿ (200 ರೂ. ಹೆಚ್ಚಳ) ದ್ವಿಮುಖ ಸಂಚಾರ- 1,620 ರೂ. (305 ರೂ. ಹೆಚ್ಚಳ)
ಹೆದ್ದಾರಿಗಳಲ್ಲಿ 6 ತಿಂಗಳಲ್ಲಿ ಟೋಲ್ ಪ್ಲಾಜಾ ತೆರವು, ಜಿಪಿಎಸ್ ಆಧರಿತ ಟೋಲ್ ಸಂಗ್ರಹ ವ್ಯವಸ್ಥೆ
ನವ ದೆಹಲಿ: ಸರ್ಕಾರ ಮುಂದಿನ 6 ತಿಂಗಳಲ್ಲಿ ಹೆದ್ದಾರಿಗಳಲ್ಲಿ ಈಗಿನ ಟೋಲ್ ಪ್ಲಾಜಾ (Toll plaza) ಬದಲಿಗೆ ಜಿಪಿಎಸ್ ಆಧರಿತ ಟೋಲ್ ವ್ಯವಸ್ಥೆಯನ್ನು (GPS-based toll colletction) ಅಳವಡಿಸಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಈಚೆಗೆ ತಿಳಿಸಿದ್ದರು.
ಹೆದ್ದಾರಿಗಳಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವುದು, ಮೋಟಾರು ವಾಹನಗಳಿಗೆ ಸಂಚರಿಸಿದಷ್ಟೇ ದೂರದ ಲೆಕ್ಕದಲ್ಲಿ ನಿಖರವಾಗಿ ಶುಲ್ಕ ನಿಗದಿಪಡಿಸಲು ಜಿಪಿಎಸ್ ಆಧರಿತ ಟೋಲ್ ಸಂಗ್ರಹ ಪದ್ಧತಿಯು ಸಹಕಾರಿಯಾಗಲಿದೆ ಎಂದು ಗಡ್ಕರಿ ಹೇಳಿದ್ದರು.
ಸಿಐಐ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎನ್‌ಎಚ್‌ಎಐ ಈಗ 40,000 ಕೋಟಿ ರೂಪಾಯಿ ಕಂದಾಯವನ್ನು ಸಂಗ್ರಹಿಸುತ್ತಿದೆ. ಇದು 2-3 ವರ್ಷಗಳಲ್ಲಿ 1.40 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಲಿದೆ ಎಂದು ವಿವರಿಸಿದರು.
ಇದನ್ನೂ ಓದಿ: ಸೈಬರ್ ಸೇಫ್ಟಿ ಅಂಕಣ: ಆಧಾರ್‌ಗೆ ಬ್ಲಾಕ್‌ಚೈನ್ ತಂತ್ರಜ್ಞಾನ ಆಧಾರ ಆಗಬಲ್ಲದೇ?
ಇನ್ನು ಆರು ತಿಂಗಳಲ್ಲಿ ದೇಶದಲ್ಲಿನ ಹೆದ್ದಾರಿಗಳಲ್ಲಿನ ಎಲ್ಲ ಟೋಲ್ ಪ್ಲಾಜಾಗಳನ್ನು ತೆರವುಗೊಳಿಸಿ, ಜಿಪಿಎಸ್ ಆಧರಿತ ಟೋಲ್ ವ್ಯವಸ್ಥೆಯನ್ನು ಅಳವಡಿಸಲಾಗುವುದು. 2018-19ರಲ್ಲಿ ಟೋಲ್ ಪ್ಲಾಜಾಗಳಲ್ಲಿ ವಾಹನಗಳಿಗೆ ಕಾಯುವ ಅವಧಿ 8 ನಿಮಿಷಗಳಾಗಿತ್ತು. ಈಗ 47 ಸೆಕೆಂಡ್‌ಗೆ ಇಳಿಕೆಯಾಗಿದೆ ಎಂದು ಗಡ್ಕರಿ ಹೇಳಿದ್ದನ್ನು ಸ್ಮರಿಸಬಹುದು.