Site icon Vistara News

ಕೋಟಿ ಕೋಟಿ ಲೂಟಿ ಮಾಡಿ ಶೋಕಿ ಮಾಡಿದ ಬ್ಯಾಂಕ್‌ ಜವಾನ!

ಜವಾನ

ಬಾಗಲಕೋಟೆ: ಇವನೊಬ್ಬ ಬ್ಯಾಂಕ್‌ ಜವಾನ. ಆದರೆ, ಮಾಡಿದ್ದು ಮಾತ್ರ ೪೨೦ ಕೆಲಸ. ಸದ್ಯ ಈತ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿ ಸುಮಾರು ೪ ರಿಂದ ೪.೫ ಕೋಟಿ ರೂಪಾಯಿ ಹಣ ದೋಚಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ಎದುರಿಸುತ್ತಿದ್ದಾನೆ.

ಪ್ರವೀಣ ಪತ್ರಿ ಅಲಿಯಾಸ್ ಪಿ. ದೀಕ್ಷಿತ್ ವಂಚನೆ ಮಾಡಿದ ಆರೋಪ ಎದುರಿಸುತ್ತಿರುವ ಬ್ಯಾಂಕ್‌ ಜವಾನ. ಡಿಸಿಸಿ ಬ್ಯಾಂಕ್‌ನ ಕಮತಗಿ ಶಾಖಾ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಪ್ರವೀಣ ಪತ್ರಿ, ಬ್ಯಾಂಕ್ ಮ್ಯಾನೇಜರ್‌ಗಳ  ಕಂಪ್ಯೂಟರ್ ಐಡಿ ಹ್ಯಾಕ್ ಮಾಡಿ ಕೋಟಿ ಕೋಟಿ ದೋಖಾ ಮಾಡಿದ್ದಾನೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ ಮಾಹಿತಿ ನೀಡಿದ್ದಾರೆ.

2014ರಿಂದ ಇಲ್ಲಿಯವರೆಗೆ ನಗರದ ಗುಡೂರು, ಅಮೀನಗಢ, ಕಮತಗಿ ಬ್ಯಾಂಕ್‌ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದ ಪ್ರವೀಣ, ಮೂರು ಬ್ಯಾಂಕ್ ಮ್ಯಾನೇಜರ್‌ಗಳ ಐಡಿ ಮೂಲಕ ಇಂಟರೆಸ್ಟ್ ಆನ್ ಡಿಪಾಸಿಟ್‌ನ 4 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ವಂಚನೆ ಮಾಡಿರುವ ಶಂಕೆ ಇದೆ ಎಂದು ಅಜಯಕುಮಾರ ಹೇಳಿದ್ದಾರೆ.

ಇದನ್ನೂ ಓದಿ | ಬಾಗಲಕೋಟೆ BJP ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿರುದ್ಧ ಆಸ್ತಿ ವಿಚಾರವಾಗಿ ದಬ್ಬಾಳಿಕೆ ಆರೋಪ

ಕಮತಗಿ ಬ್ಯಾಂಕ್‌ ಶಾಖೆಯಲ್ಲಿ 56 ಲಕ್ಷ ರೂಪಾಯಿ ವಂಚನೆ ಮಾಡಿರುವುದು ದೃಢಪಟ್ಟಿದೆ. ಈ ಬಗ್ಗೆ ಪ್ರವೀಣ ಕೂಡಾ ಒಪ್ಪಿಕೊಂಡಿದ್ದಾನೆ. ಗೂಡೂರು, ಅಮೀನಗಢ ಶಾಖೆಯಲ್ಲೂ ವಂಚನೆ ಮಾಡಿರುವ ಸಾಧ್ಯತೆ ಇದ್ದು, ಬ್ಯಾಂಕ್‌ನವರೇ ತನಿಖೆಗಾಗಿ ಮೂರು ತಂಡ ನಿಯೋಜನೆ ಮಾಡಿದ್ದಾರೆ. ಚಾರ್ಟರ್ಡ್‌ ಅಕೌಂಟೆಂಟ್, ಐಟಿ ಪರಿಣಿತರು ಸೇರಿದಂತೆ ಮೂವರ ತಂಡದಿಂದ ಪರಿಶೀಲನೆ ನಡೆಸಲಾಗುತ್ತಿದ್ದು, ನಂತರ ಸ್ಪಷ್ಟ ಮಾಹಿತಿ ಸಿಗಲಿದೆ. ತನಿಖೆ ನಂತರ ಕ್ರಿಮಿನಲ್‌ ಕೇಸ್ ಹಾಕುವುದಾಗಿ ಅಜಯಕುಮಾರ್‌ ಹೇಳಿದ್ದಾರೆ.

ಪ್ರವೀಣ ಪತ್ರಿ ಅಲಿಯಾಸ್ ಪಿ ದಿಕ್ಷಿತ್

ಲೂಟಿ ಮಾಡಿದ ಹಣದಿಂದ ಆಲ್ಬಂ ಸಾಂಗ್‌ಗೆ ಖರ್ಚು

ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಸುಳಿಬಾವಿ ಗ್ರಾಮದ ನಿವಾಸಿಯಾದ ಈತ ಹಣ ಲೂಟಿ ಮಾಡಿ, ಅದರಿಂದ ಸಿನಿಮಾ, ನಾಟಕ, ಆಲ್ಬಂ ಸಾಂಗ್‌ಗೆ ಖರ್ಚು‌ ಮಾಡುತ್ತಿದ್ದ ಎನ್ನಲಾಗಿದೆ. ಯಾರದ್ದೋ ದುಡ್ಡಿನಲ್ಲಿ ಮಜಾ ಮಾಡುತ್ತಿದ್ದ ಪ್ರವೀಣ ಅಲಿಯಾಸ್‌ ಪಿ. ದೀಕ್ಷಿತ್‌, ತನ್ನನ್ನೂ ಜ್ಯೂನಿಯರ್‌ ರಘು ದೀಕ್ಷಿತ್ ಎಂದು ಹೇಳಿಕೊಂಡು ತಿರಗಾಡುತ್ತಿದ್ದ. ಖುದ್ದು ದೀಕ್ಷಿತ್ ಎಂದು ಹೆಸರನ್ನೂ ಇಟ್ಟುಕೊಂಡಿದ್ದ.

ಸದ್ಯ, ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ಪ್ರವೀಣ ಪತ್ರಿಯನ್ನು ಅಮಾನತು ಮಾಡಿದ್ದು, ಆತನಿಂದ ಪಾಸ್‌ಪೋರ್ಟ್ ಅನ್ನು ಜಪ್ತಿ ಮಾಡಲಾಗಿದೆ. ಇದರ ಜತೆಗೆ ನಿತ್ಯ ಡಿಸಿಸಿ ಬ್ಯಾಂಕ್ ಕೇಂದ್ರ ಕಚೇರಿಯಲ್ಲಿ ಇರುವಂತೆ ಸೂಚನೆ ನೀಡಲಾಗಿದೆ.

ಇದನ್ನೂ ಓದಿ | ಮೊದಲು ಚಂದ್ರಶೇಖರ್‌ ಗುರೂಜಿ ಕಾಲಿಗೆ ಬಿದ್ದರು, ನಂತರ 60 ಬಾರಿ ಇರಿದು ಕೊಂದರು!

Exit mobile version