Site icon Vistara News

ಹುಬ್ಬಳ್ಳಿ ಗಣೇಶೋತ್ಸವ | ಪೆಂಡಾಲ್‌ ಒಳಗೆ ಹಾಕಿದ್ದ ಸಾವರ್ಕರ್‌, ತಿಲಕರ ಚಿತ್ರವಿರುವ ಬ್ಯಾನರ್‌ ತೆರವು

hubballi theravu

ಹುಬ್ಬಳ್ಳಿ: ಇಲ್ಲಿನ ಈದ್ಗಾ ಮೈದಾನದಲ್ಲಿ ನಿರ್ಮಿಸಲಾಗಿರುವ ಗಣೇಶ ಪೆಂಡಾಲ್‌ನ ಒಳಗೆ ಹಾಕಿದ್ದ ವೀರ ಸಾವರ್ಕರ್‌ ಮತ್ತು ಬಾಲ ಗಂಗಾಧರ ತಿಲಕರ ಭಾವಚಿತ್ರವಿರುವ ಬ್ಯಾನರನ್ನು ಪೊಲೀಸರು ರಾತ್ರೋರಾತ್ರಿ ತೆರವುಗೊಳಿಸಿದ್ದಾರೆ.

ಈ ಬ್ಯಾನರ್‌ಗಳನ್ನು ಪೆಂಡಾಲ್‌ನ ಒಳಗೆ ಗಣೇಶ ಮೂರ್ತಿಯ ಹಿಂಭಾಗದಲ್ಲಿ ಹಾಕಲಾಗಿತ್ತು. ರಾತ್ರಿ ಪೂಜೆಯ ಬಳಿಕ ಇದನ್ನು ಹಾಕಲಾಗಿದ್ದು, ಹಾಕಿದ ಕೆಲವೇ ಗಂಟೆಗಳಲ್ಲಿ ಅವುಗಳನ್ನು ತೆರವುಗೊಳಿಸಲಾಗಿದೆ.

ತೆರವು ಯಾಕೆ?
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪನೆಯೇ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಮೈದಾನದಲ್ಲಿ ೨೦೧೧ರಲ್ಲಿ ರಾಷ್ಟ್ರ ಧ್ವಜಾರೋಹಣಕ್ಕೆ ಅನುಮತಿ ನೀಡಿದ ಬಳಿಕ ಹಲವಾರು ಸಂಘ ಸಂಸ್ಥೆಗಳು ಗಣೇಶೋತ್ಸವ ಆಚರಣೆಗೂ ಅನುಮತಿ ಕೇಳಿದ್ದವು. ಈ ಬಾರಿ ಬಹು ಹಿಂದಿನಿಂದಲೇ ನಾನಾ ರೀತಿಯಲ್ಲಿ ಪಾಲಿಕೆಯ ಮೇಲೆ ಒತ್ತಡ ಹಾಕಿಕೊಂಡು ಬಂದ ಹಿನ್ನೆಲೆಯಲ್ಲಿ ಕೊನೆಗೂ ಪಾಲಿಕೆ ಅನುಮತಿ ನೀಡಿತ್ತು. ಹೀಗೆ ಅನುಮತಿ ನೀಡಿದ್ದನ್ನು ಕೂಡಾ ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡಲಾಗಿದ್ದು, ಅಂತಿಮವಾಗಿ ಹೈಕೋರ್ಟ್‌ ಗ್ರೀನ್‌ ಸಿಗ್ನಲ್‌ ನೀಡಿದ್ದರಿಂದ ಗಣೇಶೋತ್ಸವ ನಡೆಯುತ್ತಿದೆ.

ಗಣೇಶೋತ್ಸವ ಆಚರಣೆಗೆ ಇದೇ ಮೊದಲ ಬಾರಿಗೆ ಅವಕಾಶ ಮಾಡಿಕೊಟ್ಟಿದ್ದ ಪಾಲಿಕೆ ಯಾವುದೇ ಗದ್ದಲ, ವಿವಾದಕ್ಕೆ ಕಾರಣವಾಗಬಾರದು ಎಂಬ ನೆಲೆಯಲ್ಲಿ ಹಲವು ಷರತ್ತುಗಳನ್ನು ಹಾಕಿದೆ. ಯಾವುದೇ ಕಾರಣಕ್ಕೂ ದೊಡ್ಡ ಸಂಖ್ಯೆಯಲ್ಲಿ ಗುಂಪು ಸೇರಬಾರದು. ಪೆಂಡಾಲ್‌ನ ಒಳಗೆ, ಮೈದಾನದಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ಹೊರತುಪಡಿಸಿ ಬೇರೆ ಚಟುವಟಿಕೆಗಳಿಗೆ ಅವಕಾಶ ನೀಡಲಾಗುವುದಿಲ್ಲ ಎಂದು ಹೇಳಿತ್ತು.

ಇದೇ ವೇಳೆ ಪೆಂಡಾಲ್‌ನ ಒಳಗಡೆ ಗಣೇಶ ಮೂರ್ತಿಯ ಹೊರಗಡೆ, ಯಾವುದೇ ಇತರ ಬ್ಯಾನರ್‌ಗಳನ್ನು ಪ್ರದರ್ಶನ ಮಾಡಬಾರದು ಎಂಬ ಷರತ್ತನ್ನೂ ವಿಧಿಸಿತ್ತು. ಆದರೆ, ಇದನ್ನು ಮೀರಿ ಒಳಗಡೆ ಸಾವರ್ಕರ್‌ ಮತ್ತು ತಿಲಕರ ಭಾವಚಿತ್ರವಿರುವ ಬ್ಯಾನರನ್ನು ರಾತ್ರಿ ಹಾಕಲಾಗಿತ್ತು. ಈ ಪೆಂಡಾಲ್‌ನ ಪರಿಸರದಲ್ಲಿ ಪೊಲೀಸರ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿದೆ. ಅವರ ಮಾಹಿತಿಯ ಮೇರೆಗೆ ಪಾಲಿಕೆ ಅಧಿಕಾರಿಗಳು ತೆರವು ಮಾಡಿದ್ದಾರೆ.

ಪ್ರವೇಶ ದ್ವಾರದಲ್ಲಿರುವ ಸಾವರ್ಕರ್‌ ಕಟೌಟ್‌ಗೆ ಅಡ್ಡಿಯಿಲ್ಲ
ಪೆಂಡಾಲ್‌ನ ಒಳಗೆ ಯಾವುದೇ ಇತರ ಭಾವಚಿತ್ರಗಳಿಗೆ ಅನುಮತಿ ಇಲ್ಲ ಎಂದು ಷರತ್ತು ವಿಧಿಸಿದ್ದ ಮಹಾನಗರ ಪಾಲಿಕೆ ಹೊರಗಡೆ ಪ್ರವೇಶ ದ್ವಾರದ ಬಳಿ ನಿಲ್ಲಿಸಿರುವ ಸಾವರ್ಕರ್‌ ಅವರ ಬೃಹತ್‌ ಕಟೌಟ್‌ಗೆ ಯಾವುದೇ ಅಡ್ಡಿ ಮಾಡಿಲ್ಲ.

ಪೆಂಡಾಲ್‌ನ ಮೇಲ್ಭಾಗದಲ್ಲಿ ರಾಣಿ ಚೆನ್ನಮ್ಮ ಗಜಾನನ ಉತ್ಸವ ಮಹಾಮಂಡಳದ ಹೆಸರಿನ ಬ್ಯಾನರ್‌ ಅಳವಡಿಸಲಾಗಿದ್ದು, ಬ್ಯಾನರ್‌ನಲ್ಲಿ ರಾಣಿ ಚೆನ್ನಮ್ಮ ಮತ್ತು ಸಗೊಳ್ಳಿರಾಯಣ್ಣ ಭಾವಚಿತ್ರಗಳಿವೆ.

ಈದ್ಗಾ ಮೈದಾನದ ಪ್ರವೇಶ ದ್ವಾರದ ಬಳಿ ಹಾಕಲಾಗಿರುವ ಸಾವರ್ಕರ್‌ ಬ್ಯಾನರ್‌

ಬುಧವಾರದ ಸ್ಥಿತಿ ಗತಿ ಹೇಗಿದೆ?
ಮಂಗಳವಾರ ಹಗಲಿಡೀ ಸಾಕಷ್ಟು ಜನ ಭಕ್ತರು ಈದ್ಗಾ ಮೈದಾನದ ಒಳಗೆ ಇರುವ ಪೆಂಡಾಲ್‌ನಲ್ಲಿ ಇಟ್ಟಿರುವ ಗಣೇಶನ ದರ್ಶನ ಪಡೆದರು. ಬುಧವಾರ ಬೆಳಗ್ಗಿನಿಂದಲೇ ಪೆಂಡಾಲ್‌ಗೆ ಜನರು ಆಗಮಿಸುತ್ತಿದ್ದಾರೆ. ನಾಳೆ ಸಂಜೆ ವಿಸರ್ಜನಾ ಮೆರವಣಿಗೆ ನಡೆಯಲಿದೆ. ಈದ್ಗಾ ಮೈದಾನದ ಸುತ್ತ ಸುತ್ತ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.

ಹಿಂದಿನ ಸುದ್ದಿ | ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಪಾಲಿಕೆಯಿಂದ ಅನುಮತಿ

Exit mobile version