ರಮೇಶ ದೊಡ್ಡಪುರ, ಬೆಂಗಳೂರು
BBMP ಮೀಸಲಾತಿ ಪ್ರಕಟಿಸುವಾಗ ತಮ್ಮ ಕ್ಷೇತ್ರಗಳನ್ನು ಟಾರ್ಗೆಟ್ ಮಾಡಲಾಗಿದೆ ಎಂಬ ಪ್ರತಿಪಕ್ಷಗಳ ಬಹಿರಂಗ ವಿರೋಧಕ್ಕೆ ರಾಜ್ಯ ಸರ್ಕಾರ ಬಿಡಿಗಾಸು ಮನ್ನಣೆಯನ್ನೂ ನೀಡಿಲ್ಲ. ಆಗಸ್ಟ್ 3ರಂದು ಪ್ರಕಟಿಸಿದ್ದ ಮೀಸಲು ಕರಡು ಅಧಿಸೂಚನೆಯ ಯಥಾವತ್ತು ಪಟ್ಟಿಯನ್ನು ಅಂತಿಮ ಅಧಿಸೂಚನೆಯಾಗಿ ಆಗಸ್ಟ್ 16ರಂದು ಪ್ರಕಟಿಸಿದೆ.
2021ರ ಜನಗಣತಿಯ ಆಧಾರದ ಮೇರೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 243 ವಾರ್ಡ್‌ವಾರು ಮೀಸಲಾತಿ ಪಟ್ಟಿಯ ಕರಡನ್ನು ಆಗಸ್ಟ್ 3ರಂದು ಪ್ರಕಟಿಸಲಾಗಿತ್ತು. ಈ ಬಗ್ಗೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಲು ಒಂದು ವಾರ ಅವಕಾಶ ನೀಡಲಾಗಿತ್ತು.
ಕರಡು ಅಧಿಸೂಚನೆಗೆ ಸುಮಾರು ಎರಡು ಸಾವಿರ ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದವು. ಅವುಗಳಲ್ಲಿ ಹೆಚ್ಚಿನವು ಕಾಂಗ್ರೆಸ್ ಶಾಸಕರಿರುವ ಕ್ಷೇತ್ರಗಳಾಗಿದ್ದವು.
ನಿಯಮದ ಪ್ರಕಾರ ಮಹಿಳಾ ಮೀಸಲಾತಿಯನ್ನು ಶೇ.50 ನಿಗದಿಪಡಿಸಬೇಕು. ಅದರಂತೆ, ಒಟ್ಟು 243 ವಾರ್ಡ್‌ಗಳಲ್ಲಿ 130ನ್ನು ಮಹಿಳಾ ಮೀಸಲಾತಿ ಮಾಡಲಾಗಿತ್ತು. ಆದರೆ ಕಾಂಗ್ರೆಸ್‌ನ ದಿನೇಶ್ ಗುಂಡೂರಾವ್ ಪ್ರತಿನಿಧಿಸುವ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಎಲ್ಲ ಏಳೂ ವಾರ್ಡ್‌ಗಳನ್ನೂ ಮಹಿಳಾ ಮೀಸಲು ನಿಗದಿ ಮಾಡಲಾಗಿತ್ತು. ದತ್ತಾತ್ರೇಯ ದೇವಸ್ಥಾನ ವಾರ್ಡ್-ಸಾಮಾನ್ಯ ಮಹಿಳೆ, ಗಾಂಧಿನಗರ ವಾರ್ಡ್- ಹಿಂದುಳಿದ ವರ್ಗ್-1 ಮಹಿಳೆ, ಸುಭಾಷ್ ನಗರ ವಾರ್ಡ್- ಎಸ್‌ಸಿ ಮಹಿಳೆ, ಓಕಳಿಪುರ ವಾರ್ಡ್- ಎಸ್‌ಸಿ ಮಹಿಳೆ, ಬಿನ್ನಿಪೇಟೆ ವಾರ್ಡ್- ಸಾಮಾನ್ಯ ಮಹಿಳೆ, ಕಾಟನ್‌ಪೇಟೆ ವಾರ್ಡ್- ಸಾಮಾನ್ಯ ಮಹಿಳೆ, ಚಿಕ್ಕಪೇಟೆ ವಾರ್ಡ್- ಸಾಮಾನ್ಯ ಮಹಿಳೆ ಮೀಸಲಾತಿ ನಿಗದಿ ಮಾಡಲಾಗಿತ್ತು.
ನಂತರದಲ್ಲಿ ಕಾಂಗ್ರೆಸ್‌ನ ರಾಮಲಿಂಗಾರೆಡ್ಡಿ ಪ್ರತಿನಿಧಿಸುವ ಬಿಟಿಎಂ ಲೇಔಟ್ ಕ್ಷೇತ್ರದಲ್ಲಿರುವ ಒಂಭತ್ತು ವಾರ್ಡ್‌ಗಳ ಪೈಕಿ ಸುದ್ದಗುಂಟೆ ಪಾಳ್ಯ ವಾರ್ಡ್(ಸಾಮಾನ್ಯ) ಹೊರತುಪಡಿಸಿ ಉಳಿದೆಲ್ಲವನ್ನೂ ಮಹಿಳಾ ಮೀಸಲು ಮಾಡಲಾಗಿತ್ತು. ಕಾಂಗ್ರೆಸ್‌ನ ಸೌಮ್ಯ ರೆಡ್ಡಿ ಪ್ರತಿನಿಧಿಸುವ ಜಯನಗರ ವಿಧಾನಸಭಾ ಕ್ಷೇತ್ರದ ಆರು ವಾರ್ಡ್‌ಗಳ ಪೈಕಿ ಜೆ.ಪಿ. ನಗರ(ಸಾಮಾನ್ಯ) ಹೊರತುಪಡಿಸಿ ಉಳಿದೆಲ್ಲವನ್ನೂ ಮಹಿಳಾ ಮೀಸಲು ಮಾಡಲಾಗಿತ್ತು. ಕಾಂಗ್ರೆಸ್‌ನ ಅಖಂಡ ಶ್ರೀನಿವಾಸಮೂರ್ತಿ ಪ್ರತಿನಿಧಿಸುವ ಪುಲಿಕೇಶಿ ನಗರ ವಿಧಾನಸಭಾ ಕ್ಷೇತ್ರದ ಏಳು ವಾರ್ಡ್‌ಗಳ ಪೈಕಿ ಸಗಾಯಪುರಂ ವಾರ್ಡ್(ಸಾಮಾನ್ಯ) ಹೊರತುಪಡಿಸಿ ಉಳಿದ ಆರನ್ನು ಮಹಿಳಾ ಮೀಸಲು ಮಾಡಲಾಗಿತ್ತು. ಕಾಂಗ್ರೆಸ್‌ನ ರಿಜ್ವಾನ್ ಅರ್ಷದ್ ಪ್ರತಿನಿಧಿಸುವ ಶಿವಾಜಿ ನಗರ ಕ್ಷೇತ್ರದಲ್ಲಿ ಅಲಸೂರು ವಾರ್ಡ್(ಎಸ್‌ಸಿ) ಹೊರತುಪಡಿಸಿ ಉಳಿದ ಐದು ವಾರ್ಡ್‌ಗಳನ್ನು ಮಹಿಳಾ ಮೀಸಲು ಮಾಡಲಾಗಿತ್ತು. ಕಾಂಗ್ರೆಸ್‌ನ ಎನ್.ಎ. ಹ್ಯಾರಿಸ್ ಪ್ರತಿನಿಧಿಸುವ ಶಾಂತಿನಗರ ಕ್ಷೇತ್ರದ ದೊಮ್ಮಲೂರು ವಾರ್ಡ್(ಎಸ್‌ಸಿ) ಹೊರತುಪಡಿಸಿ ಉಳಿದ ಆರೂ ವಾರ್ಡ್‌ಗಳು ಮಹಿಳಾ ಮೀಸಲಾಗಿದ್ದವು.
ಕಾಂಗ್ರೆಸ್‌ನ ಬಿ.ಜಡ್ ಜಮೀರ್ ಅಹ್ಮದ್ ಖಾನ್ ಪ್ರತಿನಿಧಿಸುವ ಚಾಮರಾಜಪೇಟೆ ಕ್ಷೇತ್ರದ ಆರು ವಾರ್ಡ್‌ಗಳಲ್ಲಿ ಆಜಾದ್ ನಗರ(ಎಸ್‌ಸಿ) ಹೊರತುಪಡಿಸಿ ಉಳಿದೆಲ್ಲ ಮಹಿಳಾ ಮೀಸಲಾತಿ ನಿಗದಿಯಾಗಿತ್ತು. ಜೆಡಿಎಸ್‌ನ ಆರ್. ಮಂಜುನಾಥ್ ಪ್ರತಿನಿಧಿಸುವ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಹನ್ನೆರಡು ವಾರ್ಡ್‌ಗಳಲ್ಲಿ ಹೆಗ್ಗನಹಳ್ಳಿ(ಸಾಮಾನ್ಯ) ಹಾಗೂ ಕಮ್ಮಗೊಂಡನಹಳ್ಳಿ(ಎಸ್‌ಸಿ) ಹೊರತುಪಡಿಸಿ ಎಲ್ಲ ಹತ್ತು ವಾರ್ಡ್‌ಗಳನ್ನೂ ಮಹಿಳಾ ಮೀಸಲು ಮಾಡಲಾಗಿತ್ತು.
ಕೆಲವೇ ಮಹಿಳಾ ಮೀಸಲು
ಒಂದೆಡೆ ವಿಧಾನಸಭಾ ಕ್ಷೇತ್ರದ ಸಂಪೂರ್ಣ ಹಾಗೂ ಬಹಳಷ್ಟು ವಾರ್ಡ್‌ಗಳನ್ನು ಮಹಿಳಾ ಮೀಸಲು ಮಾಡಿದ್ದರೆ ಮತ್ತೊಂದೆಡೆ ಮಹಿಳಾ ಮೀಸಲಾತಿಯೇ ಇಲ್ಲದ ವಿಧಾನಸಭಾ ಕ್ಷೇತ್ರವೂ ಇತ್ತು. ಬಿಜೆಪಿಯ ಉದಯ್ ಬಿ ಗರುಡಾಚಾರ್ ಪ್ರತಿನಿಧಿಸುವ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಏಳು ವಾರ್ಡ್‌ಗಳಲ್ಲಿ ಒಂದೂ ಮಹಿಳಾ ಮೀಸಲಾತಿ ನಿಗದಿ ಮಾಡಿರಲಿಲ್ಲ.
ಬಿಜೆಪಿಯ ಡಾ. ಸಿ.ಎನ್. ಅಶ್ವತ್ಥನಾರಾಯಣ ಪ್ರತಿನಿಧಿಸುವ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಏಳು ವಾರ್ಡ್‌ಗಳಲ್ಲಿ ರಾಜಮಹಲ್ ಗುಟ್ಟಹಳ್ಳಿಗೆ ಮಾತ್ರ ಮಹಿಳಾ ಮೀಸಲಾತಿ ನೀಡಲಾಗಿತ್ತು. ಬಿಜೆಪಿಯ ಅರವಿಂದ ಲಿಂಬಾವಳಿ ಪ್ರತಿನಿಧಿಸುವ ಮಹದೇವಪುರ ವಿಧಾನಸಭಾ ಕ್ಷೇತ್ರದ 12 ವಾರ್ಡ್‌ಗಳಲ್ಲಿ ಹಗದೂರು ಮತ್ತು ಮಾರತ್ತಹಳ್ಳಿ ಮಾತ್ರ ಮಹಿಳಾ ಮೀಸಲಾತಿ ನಿಗದಿಪಡಿಸಲಾಗಿತ್ತು.
ಬಿಜೆಪಿ ಶಾಸಕರ ವ್ಯಾಪ್ತಿಯ 145 ವಾರ್ಡ್‌ಗಳಲ್ಲಿ 50 ಅಂದರೆ ಶೇ. 34.4 ಮಹಿಳಾ ಮೀಸಲು ಮಾಡಲಾಗಿತ್ತು. ಆದರೆ ಕಾಂಗ್ರೆಸ್ ಶಾಸಕರ ವ್ಯಾಪ್ತಿಯ 86 ವಾರ್ಡ್‌ಗಳಲ್ಲಿ 62 ಅಂದರೆ ಶೇ.72 ಮಹಿಳಾ ಮೀಸಲು ನಿಗದಿ ಮಾಡಲಾಗಿತ್ತು. ಜೆಡಿಎಸ್ ಶಾಸಕರ ವ್ಯಾಪ್ತಿಯ 12 ವಾರ್ಡ್‌ಗಳಲ್ಲಿ 9ನ್ನು ಮಹಿಳಾ ಮೀಸಲು ಮಾಡಲಾಗಿತ್ತು.
ಇದನ್ನೂ ಓದಿ | BBMP ಮೀಸಲಾತಿ: ವಿಕಾಸಸೌಧಕ್ಕೆ ಮುತ್ತಿಗೆ, UD ಕಚೇರಿ ಬೋರ್ಡ್ ಬದಲಿಸಿದ ಕಾಂಗ್ರೆಸ್ ನಾಯಕರು
ಕಾಂಗ್ರೆಸ್ ಪ್ರತಿಭಟನೆ ವ್ಯರ್ಥ
BBMP ಮೀಸಲಾತಿ ನಿಗದಿಯಿಂದ ತಮಗೆ ಅನ್ಯಾಯವಾಗುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಈ ಕುರಿತು ಬೆಂಗಳೂರಿನ ಎಲ್ಲ ಕಾಂಗ್ರೆಸ್ ಶಾಸಕರೂ ಆಗಸ್ಟ್ 5ರಂದು ಸುದ್ದಿಗೋಷ್ಠಿ ನಡೆಸಿದ್ದರು. ಆರ್‌ಎಸ್‌ಎಸ್ ಕಚೇರಿ ಕೇಶವ ಕೃಪಾದಲ್ಲಿ ಹಾಗೂ ಬಿಜೆಪಿ ಕಚೇರಿಯಲ್ಲಿ ಸಿದ್ಧಪಡಿಸಿಟ್ಟುಕೊಂಡಿದ್ದ ಪಟ್ಟಿಯನ್ನು ನಗರಾಭಿವೃದ್ಧಿ ಇಲಾಖೆ ಅನುಮೋದಿಸಿದೆ. ನಗರಾಭಿವೃದ್ಧಿ ಕಚೇರಿ ಫಲಕವನ್ನು ಬಿಜೆಪಿ ಮತ್ತು ಆರ್‌ಎಸ್‌ಎಸ್ ಕಚೇರಿ ಎಂದು ಬದಲಿಸಬೇಕು ಎಂದು ತಿಳಿಸಿದ ನಾಯಕರು, ಸುದ್ದಿಗೋಷ್ಠಿ ಮುಕ್ತಾಯದ ನೇರವಾಗಿ ವಿಕಾಸಸೌಧಕ್ಕೆ ತೆರಳಿದ್ದರು.
ಕೆಲವೇ ಸಮಯದಲ್ಲಿ ಸಿದ್ಧಪಡಿಸಿಟ್ಟುಕೊಂಡಿದ್ದ, ʻಆರ್‌ಎಸ್‌ಎಸ್ ಕಚೇರಿ, ಬಿಜೆಪಿ ಕಚೇರಿʼ ಎಂಬ ಫಲಕವನ್ನು ವಿಕಾಸಸೌಧದ ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಹೆಸರಿದ್ದ ಫಲಕದ ಮೇಲೆ ಇರಿಸಿದರು. ಈ ವೇಳೆ ಪೊಲೀಸರು ತಡೆಯಲು ಪ್ರಯತ್ನ ನಡೆಸಿದರೂ ಸಾಧ್ಯವಾಗಲಿಲ್ಲ. ಒಮ್ಮೆ ಫಲಕವನ್ನು ಇರಿಸಿದ ನಂತರ ಪೊಲೀಸರು ಅದನ್ನು ಕಿತ್ತುಹಾಕಿದರು. ಈ ವೇಳೆಯಲ್ಲಿ ಪೊಲೀಸರು ಮತ್ತು ಕಾಂಗ್ರೆಸ್ ನಾಯಕರ ನಡುವೆ ಮಾತಿನ ಚಕಮಕಿ, ನೂಕಾಟ ತಳ್ಳಾಟಕ್ಕೆ ವಿಕಾಸಸೌಧ ಸಾಕ್ಷಿಯಾಯಿತು. ಸರ್ಕಾರದ ವಿರುದ್ಧ ಘೋಷಣೆ ಕೂಗಿ ಕೆಲಕಾಲ ಧರಣಿ ನಡೆಸಿದ್ದರು.
ನ್ಯಾಯಾಲಯದ ಮೆಟ್ಟಿಲೇರಿದ ಕಾಂಗ್ರೆಸ್
ಕಾಂಗ್ರೆಸ್ ಬಹಿರಂಗವಾಗಿ ಪ್ರತಿಭಟಿಸಿದ್ದಷ್ಟೆ ಅಲ್ಲದೆ ನ್ಯಾಯಾಲಯದ ಬಾಗಿಲನ್ನೂ ತಟ್ಟಿತ್ತು. ಈ ಕುರಿತು ಸುಪ್ರೀಂಕೋರ್ಟ್ ವಿಚಾರಣೆ ನಡೆಸಿ ಆಗಸ್ಟ್ 16ರವರೆಗೆ ಯಾವುದೇ ಅಂತಿಮ ಅಧಿಸೂಚನೆ ಪ್ರಕಟಿಸದಂತೆ ಬಿಬಿಎಂಪಿಗೆ ಸೂಚನೆ ನೀಡಿತ್ತು. ಆಗಸ್ಟ್ 16ರ ಗಡುವು ಮುಗಿಯುತ್ತಿದ್ದಂತೆಯೇ ರಾಜ್ಯ ಸರ್ಕಾರ ಅಂತಿಮ ಅಧಿಸೂಚನೆ ಪ್ರಕಟಿಸಿದೆ.
ಕಾಂಗ್ರೆಸ್ ಬಹಿರಂಗವಾಗಿ ಪ್ರತಿಭಟಿಸಿದೆ, ಅನೇಕ ಬಿಜೆಪಿ ಸ್ಥಳೀಯ ಕಾರ್ಯಕರ್ತರು ಹಿನ್ನೆಲೆಯಲ್ಲೆ ಬೇಸರ ವ್ಯಕ್ತಪಡಿಸಿದ್ದರು. ಬಿಜೆಪಿ ಸಚಿವರು ತಮ್ಮ ಕ್ಷೇತ್ರಗಳಲ್ಲಿ ಬೇರೆಯವರು ಬೆಳೆಯದಂತೆ ನೋಡಿಕೊಳ್ಳಲು ಮೀಸಲಾತಿಯಲ್ಲಿ ಆಟವಾಡಿದ್ದಾರೆ ಎಂದು ಅನೇಕರು ಆರೋಪಿಸಿದ್ದರು. ಆದರೆ ಬಹಿರಂಗವಾಗಿ ಎಲ್ಲಿಯೂ ಮಾತನಾಡಿರಲಿಲ್ಲ. ಇದೀಗ ಕಾಂಗ್ರೆಸ್‌ನ ಪ್ರತಿಭಟನೆಗಾಗಲಿ, ಬಿಜೆಪಿ ಸ್ಥಳೀಯ ನಾಯಕರ ಆಂತರಿಕ ಮನವಿಗಾಗಲಿ ಸೊಪ್ಪು ಹಾಕದ ರಾಜ್ಯ ಸರ್ಕಾರ ಅಂತಿಮ ಅಧಿಸೂಚನೆ ಪ್ರಕಟಿಸಿದೆ.
ಇದನ್ನೂ ಓದಿ | BBMP | ವಾರ್ಡ್‌ವಾರು ಮೀಸಲಾತಿಯ ಅಂತಿಮ ಅಧಿಸೂಚನೆ ಪ್ರಕಟ