ಬೆಂಗಳೂರು: ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿತರಾಗಿರುವ ಬಿಬಿಎಂಪಿ ಜಂಟಿ ಆಯುಕ್ತ ಎಸ್.ಎಂ.ಶ್ರೀನಿವಾಸ್ ಮತ್ತು ಆಪ್ತ ಸಹಾಯಕ, ಎಫ್‌ಡಿಎ ಉಮೇಶ್‌ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಸೂಚಿಸಿದ್ದು, ಆರೋಪಿಗಳನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ.
ಸತತ ನಾಲ್ಕು ಗಂಟೆಗಳ ಕಾಲ ಆರೋಪಿಗಳ ವಿಚಾರಣೆ ನಡೆಸಿದ ಲೋಕಾಯುಕ್ತ ಪೊಲೀಸರು, ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಆರೋಪಿಗಳಿಗೆ ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ಕೋರಮಂಗಲ ನ್ಯಾಷನಲ್ ಗೇಮ್ ವೀಲೇಜ್‌ನಲ್ಲಿರುವ ನ್ಯಾಯಾಧೀಶರ ಮಂದೆ ಹಾಜರುಪಡಿಸಿದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು, ಆರೋಪಿಗಳನ್ನು 14 ನ್ಯಾಯಾಂಗ ಬಂಧನಕ್ಕೆ ವಹಿಸಿದರು.
ಇದಕ್ಕೂ ಮುನ್ನ ದೂರುದಾರರ ಸಮಕ್ಷಮದಲ್ಲಿ ಸುದೀರ್ಘವಾಗಿ ಆರೋಪಿಗಳನ್ನು ಲೋಕಾಯುಕ್ತ ಪೊಲೀಸರು ವಿಚಾರಣೆ ನಡೆಸಿದರು. ಬಂಧಿತ ಆರೋಪಿಗಳನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿ ದೂರುದಾರರ ದೂರಿಗೆ ಸಂಬಂಧಿಸಿದಂತೆ ಖಾತಾಗೆ ಅರ್ಜಿ ಸಲ್ಲಿಕೆ ಕುರಿತಂತೆ ದಾಖಲೆಗಳ ಪರಿಶೀಲನೆ ಮಾಡಿದರು.
ಪರಿಶೀಲನೆ ವೇಳೆ ಈಗಾಗಲೇ ಖಾತಾ ಕಡತಕ್ಕೆ ಜಂಟಿ ಆಯುಕ್ತ ಸಹಿ ಹಾಕಿ 6 ದಿನ ಕಳೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಜಂಟಿ ಆಯುಕ್ತ ಸಹಿ ಮಾಡಿದ್ದರೂ ಎಫ್‌ಡಿಎ ಉಮೇಶ್ ಕಡತ ವಿಲೇವಾರಿ ಮಾಡದ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ಪ್ರಶ್ನಿಸಿದ್ದಾರೆ. ಲೋಕಾಯುಕ್ತ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಲು ಎಫ್‌ಡಿಎ ಉಮೇಶ್ ತಡಬಾಡಯಿಸಿದರು ಎನ್ನಲಾಗಿದ್ದು, ಲಂಚದ ಹಣ ಕುರಿತಾಗಿ ಯಾವುದೇ ಮಾಹಿತಿ ಇಲ್ಲ ಬಿಬಿಎಂಪಿ ಜಂಟಿ ಆಯುಕ್ತ ಎಸ್.ಎಂ.ಶ್ರೀನಿವಾಸ್ ವಿಚಾರಣೆ ವೇಳೆ ಹೇಳಿದ್ದಾರೆ.
ಮಲ್ಲೇಶ್ವರದಲ್ಲಿರುವ ಬಿಬಿಎಂಪಿಯ ಪಶ್ಚಿಮ ವಿಭಾಗದ ಕಚೇರಿಯಲ್ಲಿರುವ ಶ್ರೀನಿವಾಸ್ ಅವರು ಲಂಚಕ್ಕಾಗಿ ಬೇಡಿಕೆ ಇಟ್ಟ ಬಗ್ಗೆ ಖಚಿತ ಮಾಹಿತಿಯನ್ನು ಪಡೆದಿದ್ದ ಲೋಕಾಯುಕ್ತ ಸೋಮವಾರ ಬೆಳಗ್ಗೆ ಲಂಚ ಸ್ವೀಕರಿಸುತ್ತಿದ್ದಾಗಲೇ ದಾಳಿ ಮಾಡಿತ್ತು. ನಾಲ್ಕು ಲಕ್ಷ ರೂ. ಸ್ವೀಕರಿಸುವಾಗಲೇ ರೆಡ್ ಹ್ಯಾಂಡ್ ಆಗಿ ಶ್ರೀನಿವಾಸ್ ಮತ್ತು ಉಮೇಶ್ ಅವರನ್ನು ಬಂಧಿಸಲಾಗಿತ್ತು.
ಎಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್, ಬೆಂಗಳೂರು ಲೋಕಾಯುಕ್ತ ಎಸ್.ಪಿ.ಶ್ರೀನಾಥ್ ಜೋಶಿ ನೇತೃತ್ವದಲ್ಲಿ ಎಸಿಬಿ ರದ್ದಾದ ಬಳಿಕ ಮೊದಲ ಲೋಕಾಯುಕ್ತ ದಾಳಿ ನಡೆದಿದೆ. ಡಿವೈಎಸ್‌ಪಿ ಮಂಜಯ್ಯ, ಶಂಕರ್ ನಾರಾಯಣ್ ಅವರನ್ನು ಒಳಗೊಂಡ ಎಂಟು ಜನರ ಟೀಮ್ ಬಿಬಿಎಂಪಿ ಕಚೇರಿ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿತ್ತು.
ಇದನ್ನೂ ಓದಿ | ರಾಜ್ಯದಲ್ಲಿ ಮತ್ತೆ ಲೋಕಾಯುಕ್ತ ಅಬ್ಬರ ಶುರು, ಬಿಬಿಎಂಪಿ ಜಂಟಿ ಆಯುಕ್ತ ಶ್ರೀನಿವಾಸ್, ಆಪ್ತ ಸಹಾಯಕನ ಅರೆಸ್ಟ್