Site icon Vistara News

Covid guidelines | 10ಕ್ಕಿಂತ ಹೆಚ್ಚು ಮಕ್ಕಳಿಗೆ ಕೊರೊನಾ ಬಂದ್ರೆ ಶಾಲೆಗೆ ರಜೆ; ರಾಜ್ಯ ಸರಕಾರದ ಹೊಸ ಗೈಡ್‌ಲೈನ್ಸ್‌

covid

ಬೆಂಗಳೂರು: ಮಕ್ಕಳ ನಿರಂತರ ಕಲಿಕೆಗೆ ಕಡಿವಾಣ ಹಾಕಿದ್ದು ಕೋವಿಡ್‌ ಸೋಂಕು. ಕೊರೊನಾ ವೈರಸ್‌ ಹರಡುವಿಕೆಯಿಂದಾಗಿ ಸತತ ಎರಡು ವರ್ಷಗಳಿಂದ ಶೈಕ್ಷಣಿಕ ಚಟುವಟಿಕೆಗೆ ಪೆಟ್ಟು ಬಿದ್ದಿತ್ತು. ಇನ್ನೇನು ಮತ್ತೆ ಶಾಲೆಗಳು ಆರಂಭವಾಗಿ ಎಲ್ಲವೂ ಸರಿ ಇದೆ ಎನ್ನುವಷ್ಟರಲ್ಲಿ ಮೊನ್ನೆಯಷ್ಟೇ ರಾಜಧಾನಿ ಬೆಂಗಳೂರಿನ 2 ಖಾಸಗಿ ಶಾಲೆಗಳಲ್ಲಿ 20ಕ್ಕೂ ಹೆಚ್ಚು ಮಕ್ಕಳಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಸೋಂಕು ಹರಡುವ ತಾಣವಾಗಿ ಶಾಲೆಗಳು ಬದಲಾಗುತ್ತಿರುವುದನ್ನು ಗಮನಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆ ಇದೀಗ ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಮಾರ್ಗಸೂಚಿ (Covid guidelines) ಬಿಡುಗಡೆ ಮಾಡಿದೆ. ಒಂದು ವೇಳೆ ಶಾಲೆಯಲ್ಲಿ ೧೦ಕ್ಕಿಂತ ಹೆಚ್ಚು ಮಕ್ಕಳಿಗೆ ಕೊರೊನಾ ಸೋಂಕು ತಗಲಿದರೆ ಎರಡರಿಂದ ಮೂರು ದಿನ ಶಾಲೆಗೆ ರಜೆ ನೀಡುವಂತೆ ಸೂಚಿಸಲಾಗಿದೆ.

ಇದನ್ನೂ ಓದಿ | Covid news | ಹೆಚ್ಚಾಗುತ್ತಿದೆ ಕೊರೊನಾ, ಮಕ್ಕಳಿಗೆ ಕೋವಿಡ್‌ ಬಂತೆಂದು ಬೆಂಗಳೂರಿನ 2 ಶಾಲೆಗಳಿಗೆ ರಜೆ

ರಾಜ್ಯದಲ್ಲಿ 2022-23ನೇ ಸಾಲಿನ ಶೈಕ್ಷಣಿಕ ವರ್ಷವು ಮೇ 16 ರಿಂದ ಆರಂಭವಾಗಿದ್ದು, ಮಕ್ಕಳ ಕಲಿಕೆಗೆ ತೊಡಕು ಉಂಟಾಗದಂತೆ ಕ್ರಮವಹಿಸಲು ಕೋವಿಡ್ ನಿಯಂತ್ರಣದ ಬಗ್ಗೆ ಮಕ್ಕಳು ಹಾಗೂ ಪೋಷಕರಿಗೆ ತಿಳಿವಳಿಕೆ ಮೂಡಿಸುವಂತೆ ಸೂಚನೆ ನೀಡಲಾಗಿದೆ. ಇದರ ಅಂಗವಾಗಿ ಎಲ್ಲಾ ಶಿಕ್ಷಕರು, ಮುಖ್ಯ ಶಿಕ್ಷಕರು ಪ್ರತಿ ದಿನ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಕೋವಿಡ್ ಬಗ್ಗೆ ಅಗತ್ಯ ಅರಿವು ಮೂಡಿಸಬೇಕೆಂದು ಆದೇಶ ಹೊರಡಿಸಿದೆ.

ಏನೆಲ್ಲ ಹೊಸ ರೂಲ್ಸ್‌ ಜಾರಿ?

ಶಾಲೆಗೆ ಬರುವ ವಿದ್ಯಾರ್ಥಿಗಳು ಹಳೇ ಅಭ್ಯಾಸವನ್ನ ಮತ್ತೊಮ್ಮೆ ಕಾರ್ಯಕ್ಕೆ ತರಬೇಕಿದೆ. ವಿದ್ಯಾರ್ಥಿಗಳು ಮನೆಯಿಂದಲೇ ಶುದ್ಧ ಬಿಸಿ ನೀರನ್ನು ತರಬೇಕು. 12-14 ವರ್ಷದ ಎಲ್ಲಾ ವಿದ್ಯಾರ್ಥಿಗಳು ಕೋವಿಡ್-19 ಲಸಿಕೆಯನ್ನು ಪಡೆದಿರುವ ಬಗ್ಗೆ ಪರಿಶೀಲಿಸಬೇಕು. ಪಡೆಯದೇ ಇದ್ದಲ್ಲಿ ಆ ಮಕ್ಕಳಿಗೆ ಆರೋಗ್ಯ ಇಲಾಖೆಯಿಂದ ಕೊಡಿಸುವ ಕೆಲಸ ಆಗಬೇಕು. ಜತೆಗೆ ವಿದ್ಯಾರ್ಥಿಗಳಲ್ಲಿ ಕೋವಿಡ್ ಸೋಂಕಿನ ಲಕ್ಷಣಗಳಿದ್ದರೇ, ಆ ವಿದ್ಯಾರ್ಥಿಯನ್ನು ಆರೋಗ್ಯ ಇಲಾಖೆಯ ಸ್ಥಳೀಯ ಆಸ್ಪತ್ರೆಗಳಲ್ಲಿ ಪೋಷಕರ ಉಪಸ್ಥಿತಿಯಲ್ಲಿ ತಪಾಸಣೆಗೆ ಒಳಪಡಿಸಬೇಕು. ಕೋವಿಡ್ ಲಕ್ಷಣವಿರುವಂತ ವಿದ್ಯಾರ್ಥಿಗೆ ಕೆಲವು ದಿನಗಳು ರಜೆ ನೀಡಬೇಕು ಎಂದು ತಿಳಿಸಿದೆ.

ಯಾವುದಾದರೂ ಶಾಲೆಯಲ್ಲಿ ತರಗತಿವಾರು 10ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳಿಗೆ ಕೋವಿಡ್-19ರ ಲಕ್ಷಣಗಳು ಕಂಡು ಬಂದಲ್ಲಿ, ಸೋಂಕು ದೃಢಪಟ್ಟಲ್ಲಿ, ಕೂಡಲೇ ಅಂತಹ ಶಾಲಾ ಮುಖ್ಯೋಪಾಧ್ಯಾಯರು ಸಂಬಂಧಪಟ್ಟ ಕ್ಷೇತ್ರ ಶಿಕ್ಷಮಾಧಿಕಾರಿಗಳ ಹಾಗೂ ಜಿಲ್ಲಾ ಉಪನಿರ್ದೇಶಕರ ಪೂರ್ವಾನುಮತಿ ಪಡೆದು, ಶಾಲೆಗೆ ಎರಡು- ಮೂರು ದಿನಗಳಿಗೆ ರಜೆಯನ್ನು ಘೋಷಿಸಬೇಕು. ಆರೋಗ್ಯ ಇಲಾಖೆಯ ಸ್ಥಳೀಯ ಘಟಕ, ಜಿಲ್ಲಾಡಳಿತದ ಮಾರ್ಗದರ್ಶನ, ಸಹಕಾರದೊಂದಿಗೆ ಸಂಪೂರ್ಣ ಶಾಲಾ ಕಟ್ಟಡವನ್ನು ಸ್ಯಾನಿಟೈಸ್ ಮಾಡಿಸಬೇಕು. ಶಾಲೆಗಳಲ್ಲಿ ಶಿಕ್ಷಕರು ಮುಖ್ಯ ಶಿಕ್ಷಕರು, ಸಿಬ್ಬಂದಿ ಕಡ್ಡಾಯವಾಗಿ ಮುಖ ಗವಸನ್ನು(ಮಾಸ್ಕ್) ಧರಿಸಿರತಕ್ಕದ್ದು. 50 ವರ್ಷ ಮೇಲ್ಪಟ್ಟವರು ಮತ್ತು ಪೂರ್ವಭಾವಿ ಅನಾರೋಗ್ಯ ಲಕ್ಷಣಗಳನ್ನು (Premorbid Health Conditions ) ಹೊಂದಿರುವವರು ಅಗತ್ಯಾನುಸಾರ ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಲಾಗಿದೆ.

ಇದನ್ನೂ ಓದಿ | Congress protest | ಕೈ ನಾಯಕರ ರಾಜಭವನ ಚಲೋಗೆ ಕೋವಿಡ್‌ ನಿಯಮ ಉಲ್ಲಂಘನೆ ಅಸ್ತ್ರ ಪ್ರಯೋಗ?

Exit mobile version