ಬೆಳಗಾವಿ: ಮಕ್ಕಳಿಗೆ ಪೌಷ್ಟಿಕ ಆಹಾರ ಲಭ್ಯವಾಗಬೇಕು ಎಂಬ ದೃಷ್ಟಿಯಿಂದ ಪ್ರಾರಂಭಿಸಲಾಗಿದ್ದ ಮಹತ್ವಾಕಾಂಕ್ಷೆಯ ಕ್ಷೀರ ಭಾಗ್ಯ (Ksheera Bhagya) ಯೋಜನೆಗೆ ಹಿನ್ನಡೆಯಾಗುತ್ತಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ಬೆಳಗಾವಿ ಜಿಲ್ಲೆಯೊಂದರಲ್ಲೇ ಬರೋಬ್ಬರಿ ೧.೩೫ ಲಕ್ಷ ಹೆಣ್ಣು ಮಕ್ಕಳು ಶಾಲೆಯಲ್ಲಿ ಹಾಲು ಕುಡಿಯಲು ನಿರಾಕರಿಸಿದ್ದಾರೆ ಎಂಬ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ. ಇದಕ್ಕೆ ದಪ್ಪ ಆಗುವ ಕಾರಣವನ್ನು ಹೆಣ್ಣು ಮಕ್ಕಳು ಮುಂದಿಟ್ಟಿದ್ದಾರೆ.
ರಾಜ್ಯ ಸರ್ಕಾರವು ಕ್ಷೀರ ಭಾಗ್ಯ ಯೋಜನೆಯಡಿ ಸರ್ಕಾರಿ ಶಾಲಾ ಮಕ್ಕಳಿಗೆ ವಾರದಲ್ಲಿ ೫ ದಿನಗಳ ಕಾಲ ಹಾಲು ವಿತರಣೆ ಮಾಡುತ್ತಾ ಬಂದಿದ್ದು, ರಾಜ್ಯದ ಬಹುತೇಕ ಕಡೆ ಯಶಸ್ವಿಯಾಗಿಯೇ ನಡೆಯುತ್ತಿದೆ ಎಂದು ಭಾವಿಸಲಾಗಿದೆ. ಆದರೆ, ಬೆಳಗಾವಿ ಜಿಲ್ಲೆಯಲ್ಲಿ ಹಾಲು ಸೇವನೆಗೆ ಬಾಲಕಿಯರೇ ನಿರಾಕರಣೆ ಮಾಡುತ್ತಿರುವ ವಿಷಯ ಈಗ ಬೆಳಕಿಗೆ ಬಂದಿದ್ದು, ಹೊಸ ತಲೆನೋವನ್ನು ಸೃಷ್ಟಿ ಮಾಡಿದೆ.
ಎನ್‌ಎಫ್‌ಎಚ್‌ಎಸ್ – ೪ ಮತ್ತು ೫ ದತ್ತಾಂಶದಲ್ಲಿ ವರದಿಯಾಗಿರುವ ಅಂಶಗಳ ಪ್ರಕಾರ, ದೇಶ ಸೇರಿದಂತೆ ಕರ್ನಾಟಕದಲ್ಲಿಯೂ ಸಹ ಬಹುಪಾಲು ಮಕ್ಕಳು ಪೌಷ್ಟಿಕಾಂಶ ಹಾಗೂ ರಕ್ತಹೀನತೆಯ ಕೊರತೆಯಿಂದ ಬಳಲುತ್ತಿದ್ದಾರೆ. ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಮಕ್ಕಳಿಗೆ ಬಿಸಿಯೂಟ, ಕ್ಷೀರ ಭಾಗ್ಯದಂತಹ ಯೋಜನೆಗಳನ್ನು ಜಾರಿ ಮಾಡಲಾಗಿತ್ತು. ಅಲ್ಲದೆ, ಮಕ್ಕಳಿಗೆ ಇವುಗಳನ್ನು ಕಡ್ಡಾಯವಾಗಿ ಕೊಡಬೇಕಿದೆ ಎಂಬ ನಿಯಮವನ್ನೂ ಮಾಡಿರುವುದರಿಂದ ಶಿಕ್ಷಕರಿಗೆ ಈಗ ಮಕ್ಕಳ ನಿರ್ಧಾರ ಸಮಸ್ಯೆಯನ್ನುಂಟು ಮಾಡಿದೆ.
ಇದನ್ನೂ ಓದಿ | GST rate hike | ನಂದಿನಿ ಹಾಲು, ಮೊಸರು ದರದಲ್ಲಿ ಹೆಚ್ಚಳ?
ಬೆಳಗಾವಿಯಲ್ಲಿ ಸರ್ಕಾರಿ ಶಾಲೆಯ ಎಷ್ಟು ವಿದ್ಯಾರ್ಥಿಗಳಿದ್ದಾರೆ?
ಬೆಳಗಾವಿಯ ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಒಟ್ಟು 6.43 ಲಕ್ಷ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಇವರೆಲ್ಲರೂ ಸಹ ಕ್ಷೀರ ಭಾಗ್ಯ ಯೋಜನೆಯಡಿಗೆ ಬರುತ್ತಾರೆ. ಇವರಲ್ಲಿ 5,07,516 ವಿದ್ಯಾರ್ಥಿಗಳು ಮಾತ್ರ ಹಾಲು ಸೇವಿಸುತ್ತಿದ್ದು, ಉಳಿದ 1.35 ಲಕ್ಷ ವಿದ್ಯಾರ್ಥಿಗಳು ಹಾಲು ಕುಡಿಯಲು ನಿರಾಕರಿಸುತ್ತಿದ್ದಾರೆ ಎಂದು ಹೇಳಲಾಗಿದೆ.
ಹೈಸ್ಕೂಲ್ ವಿದ್ಯಾರ್ಥಿನಿಯರೇ ಹೆಚ್ಚು
ಹಾಲು ನಿರಾಕರಿಸುತ್ತಿರುವ ಹೆಣ್ಣು ಮಕ್ಕಳ ಪೈಕಿ ಹೈಸ್ಕೂಲ್‌ನಲ್ಲಿ ಅಭ್ಯಾಸ ಮಾಡುತ್ತಿರುವವರೇ ಹೆಚ್ಚು ಎಂಬ ಅಂಶ ಬೆಳಕಿಗೆ ಬಂದಿದೆ. ಎಷ್ಟೇ ಒತ್ತಾಯ ಮಾಡಿದರೂ ಕುಡಿಯಲು ನಿರಾಕರಣೆ ಮಾಡುತ್ತಿದ್ದು, ಕಾರಣ ಕೇಳಿದರೆ ದಪ್ಪ ಆಗುವ ಭೀತಿಯನ್ನು ಮುಂದಿಡುತ್ತಿದ್ದಾರೆ. ಪೌಷ್ಟಿಕಾಂಶಕ್ಕೆ ಪೂರಕವಾಗಲಿದೆ ಎಂದು ಹೇಳಿದರೂ ಸಹ ಕೆಲವು ವಿದ್ಯಾರ್ಥಿನಿಯರು ತಾವು ಬೆಳಗ್ಗೆ ಮನೆಯಲ್ಲಿ ಹಾಲು ಕುಡಿದೇ ಬರುತ್ತಿದ್ದು, ಇಲ್ಲಿ ಬೇಡ ಎಂಬ ಉತ್ತರವನ್ನು ಕೊಡುತ್ತಿದ್ದಾರೆ. ಇನ್ನು ಕೆಲವರು ಪ್ರತಿ ದಿನ ಹಾಲು ಕುಡಿಯಲು ಸಾಧ್ಯವಾಗುತ್ತಿಲ್ಲ. ಬರೀ ಹಾಲು ತಮಗೆ ಸೇರುತ್ತಿಲ್ಲ ಎಂಬ ಕಾರಣವನ್ನೂ ಕೊಡುತ್ತಿದ್ದಾರೆ ಎನ್ನಲಾಗಿದೆ.
ಕೆಎಂಎಫ್‌ಗೆ ಪತ್ರ?
ರಾಜ್ಯಾದ್ಯಂತ ಮಕ್ಕಳಿಗೆ ಹಾಲಿನ ಪುಡಿ ವಿತರಿಸುವ ಹೊಣೆ ಕೆಎಂಎಫ್‌ನದ್ದಾಗಿದ್ದು, ಅಲ್ಲಿಂದಲೇ ಪೂರೈಕೆ ಆಗುತ್ತಲಿದೆ. ಶಾಲೆಗಳಲ್ಲಿ ಹಾಲನ್ನು ಸಿದ್ಧಪಡಿಸಿ ಮಕ್ಕಳಿಗೆ ವಿತರಣೆ ಮಾಡಲಾಗುತ್ತಿತ್ತು. ಆದರೆ, ಬೆಳಗಾವಿಯಲ್ಲಿ ಒಂದೂವರೆ ಲಕ್ಷ ಹೆಣ್ಣು ಮಕ್ಕಳು ಹಾಲು ಸೇವಿಸುತ್ತಿಲ್ಲ ಎಂಬ ಅಂಶ ತಿಳಿಯುತ್ತಿದ್ದಂತೆ ಗಂಭೀರವಾಗಿ ಪರಿಗಣಿಸಿರುವ ಸಿಇಒ ದರ್ಶನ್ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಂಡಿದ್ದಾರೆನ್ನಲಾಗಿದೆ.
ಹಾಲು ಕುಡಿಯದಿರಲು ಕಾರಣಗಳೇನು?
ಬರೀ ಹಾಲನ್ನು ಕುಡಿಯಲು ಕಷ್ಟವಾಗುತ್ತಿರುವ ಅಂಶವೂ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಹಾಲಿನ ಪುಡಿಗೆ ಏಲಕ್ಕಿ, ಬಾದಾಮಿ, ಚಾಕೋಲೆಟ್ ಸೇರಿದಂತೆ ಇನ್ನಿತರ ಫ್ಲೇವರ್ ಹಾಕಲು ಸಾಧ್ಯವಾಗಲಿದೆಯೇ ಎಂದು ಬೆಳಗಾವಿ ಸಿಇಒ ದರ್ಶನ್ ಅವರು ಕೆಎಂಎಫ್‌ಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ | World Milk Day : ಭಾರತ ಈಗ ವಿಶ್ವದಲ್ಲೇ ಅತಿ ಹೆಚ್ಚು ಹಾಲು ಉತ್ಪಾದಕ! ಹೇಗೆ ಗೊತ್ತೆ?
ಎನ್‌ಎಫ್‌ಎಚ್‌ಎಸ್ ೫ ದತ್ತಾಂಶ ಹೇಳೋದೇನು?
ಎನ್‌ಎಫ್‌ಎಚ್‌ಎಸ್ ೫ ದತ್ತಾಂಶದ ಪ್ರಕಾರ ಕರ್ನಾಟಕದಲ್ಲಿ ಮಕ್ಕಳ, ಹೆಣ್ಣುಮಕ್ಕಳ ಹಾಗೂ ಮಹಿಳೆಯರಲ್ಲಿ ಪೌಷ್ಟಿಕಾಂಶದ ಕೊರತೆ ಮತ್ತು ರಕ್ತಹೀನತೆಯ ಕೊರತೆ ಬಹುವಾಗಿ ಕಾಡುತ್ತಿದ್ದು, 2015-16ರಲ್ಲಿ ಮಕ್ಕಳಲ್ಲಿ ಶೇ.60.9ರಷ್ಟಿದ್ದ ರಕ್ತಹೀನತೆಯು 2019-20ರಲ್ಲಿ ಶೇ.65.5ಕ್ಕೆ ಏರಿಕೆಯಾಗಿದೆ. ಇನ್ನು 15-49 ವರ್ಷ ವಯಸ್ಸಿನ ಮಹಿಳೆಯರಲ್ಲಿ ಇದು ಶೇ.44.8ರಿಂದ ಶೇ.47.8ಕ್ಕೆ ಏರಿಕೆಯಾಗಿದೆ. 15-49 ವರ್ಷ ವಯಸ್ಸಿನ ಪುರುಷರಲ್ಲಿ ರಕ್ತಹೀನತೆಯು ಶೇ. 18.3ರಿಂದ ಶೇ. 19.6ಕ್ಕೆ ಏರಿಕೆ ಕಂಡಿದೆ. ಇಡೀ ರಾಜ್ಯದಲ್ಲಿ ಅಂದಾಜು 60 ಲಕ್ಷ ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. 22 ಲಕ್ಷ ಮಕ್ಕಳು ಮಧ್ಯಮ ಮಟ್ಟದ ಅಪೌಷ್ಟಿಕತೆಯನ್ನು ಎದುರಿಸುತ್ತಿದ್ದರೆ, 45.3 ಲಕ್ಷ ಮಕ್ಕಳು ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಹಾಲಿನ ಪೌಷ್ಟಿಕಾಂಶದ ಬಗ್ಗೆ ಹೆಚ್ಚಿನ ಅರಿವು
ಕ್ಷೀರ ಭಾಗ್ಯದ ಹಾಲನ್ನು ನಿರಾಕರಿಸುತ್ತಿರುವ ಹೆಣ್ಣು ಮಕ್ಕಳಲ್ಲಿ ನಗರ ಪ್ರದೇಶದವರಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತಿದೆ. ಇವರೆಲ್ಲರೂ ದಪ್ಪ ಆಗುತ್ತೇವೆ ಎಂಬ ಕಾರಣವನ್ನು ಮುಂದಿಡುತ್ತಿದ್ದಾರೆ. ಇನ್ನು ಗ್ರಾಮೀಣ ಭಾಗದಲ್ಲಿ ಮನೆಯಲ್ಲಿಯೇ ಹಸು ಸಾಕಾಣಿಕೆ ಇರುವುದರಿಂದ ಮನೆಯಲ್ಲಿ ಹಾಲು ಕುಡಿದು ಬರುತ್ತಿದ್ದೇವೆ ಎಂದು ಹಲವರು ಹೇಳುತ್ತಿದ್ದಾರೆ. ಮತ್ತೆ ಕೆಲವರು ಸಾದಾ ಹಾಲು ಕುಡಿಯಲು ಹಿಂಜರಿಯುತ್ತಿದ್ದಾರೆ. ಆದರೆ, ಮುಖ್ಯವಾಗಿ ಗ್ರಾಮೀಣ ಪ್ರದೇಶದಲ್ಲಿ ಅಪೌಷ್ಟಿಕತೆ ನಿವಾರಣೆಗೆ ಹಾಲಿನ ಅವಶ್ಯಕತೆ ಹೆಚ್ಚಾಗಿದೆ. ಈ ಕಾರಣಕ್ಕೆ ಐಇಸಿ ಚಟುವಟಿಕೆ (ಇನ್ಫಾರ್ಮೇಷನ್-ಎಜುಕೇಷನ್- ಕಮ್ಯುನಿಕೇಷನ್) ಚಟುವಟಿಕೆಗೆ ಹೆಚ್ಚಿನ ಒತ್ತು ನೀಡುತ್ತಿದ್ದೇವೆ. ಹಾಲಿನಲ್ಲಿರುವ ಪೋಷಕಾಂಶಗೇಳನು? ಆರೋಗ್ಯಕ್ಕೆ ಉಪಕಾರಿ ಹೇಗೆ? ಎಂಬುದನ್ನು ತಿಳಿಸುತ್ತಿದ್ದೇವೆ. ಅನೇಕ ಕಡೆಗಳಲ್ಲಿ ಮುಖ್ಯೋಪಾಧ್ಯಾಯರು ಏಲಕ್ಕಿ ಫ್ಲೇವರ್ ಬೆರೆಸಿ ಹಾಲು ನೀಡುತ್ತಿದ್ದಾರೆ. ಬಿಸಿಯೂಟದ ತರಕಾರಿ ಖರೀದಿಯಲ್ಲಿ ಉಳಿದ ಹಣವನ್ನು ಇದಕ್ಕೆ ಬಳಕೆ ಮಾಡುತ್ತಿದ್ದಾರೆ. ಮೂರು ತಿಂಗಳಿಗೊಂದು ವಿಭಿನ್ನ ಫ್ಲೇವರ್ ನೀಡಬಹುದೇ ಎಂಬ ಕುರಿತೂ ಉನ್ನತ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ ಎಂದು ಮಧ್ಯಾಹ್ನದ ಉಪಹಾರ ಯೋಜನೆ ಅಧಿಕಾರಿ ಲೀಲಾವತಿ ಹಿರೇಮಠ ಅವರು ವಿಸ್ತಾರ ನ್ಯೂಸ್‌ಗೆ ತಿಳಿಸಿದ್ದಾರೆ.
ಇದನ್ನೂ ಓದಿ | ವಿಟಮಿನ್ ಡಿ ಕೊರತೆ ನೀಗಿಸಲು ಹಾಲು, ನೀರು ಪರಿಣಾಮಕಾರಿ; ಅಧ್ಯಯನ ವರದಿ