ಬೆಳಗಾವಿ: ಐದು ವರ್ಷಗಳ ಹಿಂದೆ ರಾಜ್ಯಾದ್ಯಂತ ತಲ್ಲಣ ಮೂಡಿಸಿದ್ದ ಇಲ್ಲಿನ ಕುವೆಂಪು ನಗರದ ಗೃಹಿಣಿ ಹಾಗೂ ಆಕೆಯ ಇಬ್ಬರು ಪುಟ್ಟ ಮಕ್ಕಳ ಹತ್ಯೆ ಪ್ರಕರಣದಲ್ಲಿ ಆರೋಪಿ ಖುಲಾಸೆಗೊಂಡಿದ್ದಾನೆ. ಆರೋಪಿ ಪ್ರವೀಣ್ ಭಟ್ ಕೊಲೆ ಮಾಡಿದ್ದಾನೆ ಎನ್ನುವುದಕ್ಕೆ ಪ್ರತ್ಯಕ್ಷ ಸಾಕ್ಷಿ ಕೇಳಿದ ಧಾರವಾಡ ಹೈಕೋರ್ಟ್ ಪೀಠವು, ಸಾಕ್ಷ್ಯ ಕೊರತೆಯಿಂದಾಗಿ ಜೂನ್ 21ರಂದು (ಮಂಗಳವಾರ) ಆರೋಪಿಯನ್ನು ದೋಷಮುಕ್ತಗೊಳಿಸಿದೆ.
ಬೆಳಗಾವಿಯ ಕುವೆಂಪು ನಗರದಲ್ಲಿ 2015 ಆಗಸ್ಟ್ 16ರಂದು ನಸುಕಿನ ಜಾವ ತ್ರಿವಳಿ ಕೊಲೆ ನಡೆದಿತ್ತು. ಘಟನೆಯಲ್ಲಿ ರೀನಾ ಮಾಲಗತ್ತಿ, ಆದಿತ್ಯ ಮಾಲಗತ್ತಿ, ಸಾಹಿತ್ಯ ಮಾಲಗತ್ತಿ ಕೊಲೆಯಾಗಿದ್ದರು. 24 ಗಂಟೆಯಲ್ಲೇ ಆರೋಪಿ ಪ್ರವೀಣ್ ಭಟ್‌ನನ್ನು ಎಪಿಎಂಸಿ ಪೊಲೀಸರು ಬಂಧಿಸಿದ್ದರು. ತ್ರಿವಳಿ ಕೊಲೆಗೆ ರೀನಾ ಹಾಗೂ ಪ್ರವೀಣ್ ಭಟ್ ನಡುವಿನ ಅನೈತಿಕ ಸಂಬಂಧವೇ ಕಾರಣವಾಗಿತ್ತು ಎಂದು ಹೇಳಲಾಗಿತ್ತು.
ಇದನ್ನೂ ಓದಿ | ತುಮಕೂರಿನ ದಲಿತ ಮುಖಂಡನ ಕೊಲೆ; ಗುಬ್ಬಿಯಲ್ಲಿ ಟೀ ಕುಡಿಯುತ್ತಿದ್ದಾಗ ಕೊಚ್ಚಿ ಕೊಂದರು!
ಕೃತ್ಯ ನಡೆದ ಜಾಗದಲ್ಲಿ ಕೊಲೆಯಾದವರ ಜತೆ ಆರೋಪಿಯ ರಕ್ತ ಕಲೆಗಳು, ಚಾಕುವಿನ ಮೇಲೆ ಬೆರಳಿನ ಗುರುತು, ನೆಲದ ಮೇಲೆ ಹೆಜ್ಜೆ ಗುರುತು ಸಿಕ್ಕಿವೆ ಎಂದು ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ಆರೋಪಿ ಪ್ರವೀಣ್ ಹಾಗೂ ಗೃಹಿಣಿ ರೀನಾ ಅವರಿಗೆ ಕೊನೆಯದಾಗಿ ಮೊಬೈಲ್ ಕರೆ ಮಾಡಿ ಮಾತನಾಡಿದ್ದಾರೆ ಎನ್ನುವುದನ್ನೂ ಸಾಕ್ಷ್ಯ ನೀಡಲಾಗಿತ್ತು. ಇದಷ್ಟೂ ಸಾಕ್ಷ್ಯಾಧಾರ ಪರಿಗಣಿಸಿ ಪ್ರಕರಣದ ವಿಚಾರಣೆ ನಡೆಸಿದ್ದ ಬೆಳಗಾವಿ ಜಿಲ್ಲಾ ಎರಡನೇ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ ಆರೋಪಿ ಪ್ರವೀಣ್ ಭಟ್‌ಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. 2018ರ ಎಪ್ರಿಲ್ 16ರಂದು ಜೀವಾವಧಿ ಶಿಕ್ಷೆ ಪ್ರಕಟಿಸಿತ್ತು. ಈ ಆದೇಶ ಪ್ರಶ್ನಿಸಿ ಕೊಲೆ ಆರೋಪಿ ಹೈಕೋರ್ಟ್ ಮೆಟ್ಟಿಲೇರಿದ್ದ.
ಪೊಲೀಸರು ನೀಡಿದ ಸಾಕ್ಷ್ಯಾಧಾರಗಳು ಒಂದಕ್ಕೊಂದು ತಾಳೆ ಆಗದೇ ಇರುವುದರಿಂದ ಆರೋಪಿ ಪ್ರವೀಣ್ ಭಟ್‌ನನ್ನು ಖುಲಾಸೆಗೊಳಿಸಲಾಗಿದೆ. ಈ ಕುರಿತು ಹಿರಿಯ ನ್ಯಾಯವಾದಿ ಮೋಹನ್ ಮಾವಿನಕಟ್ಟಿ ಪ್ರತಿಕ್ರಿಯಿಸಿ “”ಯಾವುದೇ ಪ್ರಕರಣ ಇರಲಿ. ನ್ಯಾಯಾಲಯಕ್ಕೆ ಸಮರ್ಪಕ ಸಾಕ್ಷಿ ಮುಖ್ಯ. ನಿಜವಾದ ಆರೋಪಿಗಳಿಗೆ ಶಿಕ್ಷೆ ಆಗಬೇಕು ಎಂಬುದು ನನ್ನ ನಿಲುವು. ಆದರೆ ಅದಕ್ಕೆ ಅಗತ್ಯ ಸಾಕ್ಷಿಗಳು ಬೇಕಾಗುತ್ತವೆ. ಕೊಲೆ ನಡೆದ ಜಾಗದಲ್ಲಿ ಕೊಲೆಯಾದವರ ಜತೆಗೆ ಆರೋಪಿಯ ರಕ್ತದ ಕಲೆಗಳು, ಚಾಕುವಿನ ಮೇಲೆ ಅವರ ಬೆರಳಿನ ಗುರುತು, ನೆಲದ ಮೇಲೆ ಹೆಜ್ಜೆ ಗುರುತು ಸಿಕ್ಕಿವೆ. ಆರೋಪಿ ಪ್ರವೀಣ ಹಾಗೂ ಗೃಹಿಣಿ ರೀನಾ ಅವರಿಗೆ ಕೊನೆಯದಾಗಿ ಮೊಬೈಲ್ ಕರೆ ಮಾಡಿ ಮಾತನಾಡಿದ್ದಾರೆ ಎನ್ನುವುದನ್ನೂ ಸಾಕ್ಷ್ಯ ಮಾಡಲಾಗಿತ್ತು. ಸಾಂದರ್ಭಿಕ ಸಾಕ್ಷ್ಯಾಧಾರ ಪರಿಗಣಿಸಿ ಜಿಲ್ಲಾ ನ್ಯಾಯಾಲಯ 16 ಎಪ್ರಿಲ್ 2016 ರಂದು ಜೀವಾವಧಿ ನೀಡಿತ್ತು. ಆದರೆ, ಆರೋಪಿ ಮೇಲಿನ ಸಾಕ್ಷ್ಯಾಧಾರಗಳು ಒಂದಕ್ಕೊಂದು ತಾಳೆ ಆಗಲಿಲ್ಲ. ಹೈಕೋರ್ಟ್ ಪ್ರತ್ಯಕ್ಷ ಸಾಕ್ಷ್ಯಾಧಾರ ಕೇಳಿತು. ಭಾರತೀಯ ಕಾನೂನಿಗೆ ಬೇಕಾದ ಅಗತ್ಯ ಸಾಕ್ಷ್ಯ ಒದಗಿಸಲು ದೂರುದಾರರ ಪರ ವಕೀಲರು ವಿಫಲರಾಗಿರಬಹುದುʼʼ ಎಂದಿದ್ದಾರೆ.
ಏನಿದು ಪ್ರಕರಣ?
ಬೆಳಗಾವಿಯ ಕುವೆಂಪು ನಗರದಲ್ಲಿ ವಾಸವಾಗಿದ್ದ ರೀನಾ ಮಾಲಗತ್ತಿ ಹಾಗೂ ಯುವಕ ಪ್ರವೀಣ್ ಭಟ್ ನಡುವೆ ಸ್ನೇಹ ಬೆಳೆದಿತ್ತು. ಎರಡು ವರ್ಷದವರೆಗೆ ಇಬ್ಬರ ಮಧ್ಯೆ ಅನೈತಿಕ ಸಂಬಂಧ ಮುಂದುವರಿದಿತ್ತು. ಬಳಿಕ ಪ್ರವೀಣ್ ಅಂತರ ಕಾಯ್ದುಕೊಳ್ಳಲು ಯತ್ನಿಸಿದ್ದ. ಇದರಿಂದ ಕೋಪಗೊಂಡ ರೀನಾ ತಕರಾರು ತೆಗೆದರು. ತನ್ನಿಂದ ದೂರವಾದರೆ ಅನೈತಿಕ ಸಂಬಂಧದ ಸಂಗತಿಯನ್ನು ಬಹಿರಂಗ ಮಾಡುತ್ತೇನೆ ಎಂದೂ ಬೆದರಿಸಿದ್ದರು. ಅಂದು ಪ್ರಿಯಕರ ಪ್ರವೀಣ್ ಜನ್ಮದಿನವಿತ್ತು. ಸ್ನೇಹಿತರೊಂದಿಗೆ ಪಾರ್ಟಿ ಮುಗಿಸಿಕೊಂಡು ಬಂದಿದ್ದ ಪ್ರವೀಣ್‌ಗೆ ಟೆರೆಸ್ ಮೇಲೆ ರೀನಾ ತಡರಾತ್ರಿ ಶುಭಾಶಯ ಹೇಳಿದ್ದರು. ಬಹಳ ಹೊತ್ತು ಇಬ್ಬರೂ ಮಾತನಾಡಿದ ಬಳಿಕ ಪ್ರವೀಣ್ ಮನೆಗೆ ತೆರಳಿದ್ದ. ಬೇರೊಂದು ಯುವತಿ ಜತೆಗೆ ಯುವಕ ಜೀವನ ಕಟ್ಟಿಕೊಳ್ಳಲು ರೀನಾ ಅಡ್ಡಿಗಾಲು ಹಾಕಬಹುದು ಎಂಬ ಭಯ ಪ್ರವೀಣ್‌ಗಿತ್ತು.
ಇದನ್ನೂ ಓದಿ | ತಮಿಳುನಾಡಿನಲ್ಲಿ ಅಂತರ್ಜಾತಿ ವಿವಾಹವಾಗಿದ್ದ ಜೋಡಿ ಕೊಚ್ಚಿ ಕೊಲೆ
2015ರ ಆಗಸ್ಟ್ 16ರಂದು 3 ಗಂಟೆಗೆ ರೀನಾ ಬೆಡ್ ರೂಮಿಗೆ ಬಂದ ಆರೋಪಿ, ರೀನಾರ ಕತ್ತು ಸೀಳಿದ್ದ. ರೀನಾ ಕೂಗಾಟ ಕೇಳಿ ಮಕ್ಕಳು ಎಚ್ಚರಗೊಂಡರು. ಸಾಕ್ಷ್ಯ ನಾಶ ಮಾಡುವ ಉದ್ದೇಶದಿಂದ ರೀನಾ ಮಗ ಆದಿತ್ಯನ ಕುತ್ತಿಗೆಗೆ ಹಗ್ಗದಿಂದ ಬಿಗಿದು ಅವನನ್ನು ಬಾತ್‌ರೂಮ್‌ನಲ್ಲಿದ್ದ ಬಕೆಟ್‌ನೊಳಗೆ ಮುಳುಗಿಸಿ ಕೊಂದಿರುವುದಾಗಿ ಪ್ರವೀಣ್ ಹೇಳಿಕೆ ನೀಡಿದ್ದ. ಮಗಳನ್ನು ಕುತ್ತಿಗೆ ಹಿಸುಕಿ ಕೊಲೆ ಮಾಡಿರುವುದಾಗಿ ಬಾಯ್ಬಿಟ್ಟಿದ್ದ.
ಪೊಲೀಸರ ವಿಚಾರಣೆ ಕಾಲಕ್ಕೆ ಆರೋಪಿ ಈ ರೀತಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದ. 2018 ಏಪ್ರಿಲ್ 16ರಂದು ಪ್ರವೀಣ್‌ಗೆ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ಪ್ರಕಟಿಸಿತ್ತು.
ಇದನ್ನೂ ಓದಿ | ಹೆಣ್ಣಿನಂತೆ ಡ್ರೆಸ್ ಮಾಡಿಕೊಂಡು ಓಡಾಡುತ್ತಿದ್ದ ಕ್ರಾಸ್ ಡ್ರೆಸ್ಸರ್ ಕೊಲೆ, ರಿಕ್ಷಾ ಚಾಲಕನ ಕೃತ್ಯ