ಬೆಳಗಾವಿ: ಬಜರಂಗದಳ ಕಾರ್ಯಕರ್ತ ಹರ್ಷನ ಹತ್ಯೆ ಆರೋಪಿಗಳನ್ನು ಜೈಲಿನಿಂದ ಎಳೆದುತಂದು ಫೈರ್ ಮಾಡಲು ಆಗುತ್ತದೆಯೇ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಪ್ರಶ್ನಿಸಿದ್ದಾರೆ.
ಹರ್ಷ ಹತ್ಯೆ ಆರೋಪಿಗಳಿಗೆ ಶಿಕ್ಷೆ ಕೊಡಿಸಿ ಎಂದು ಕೇಳಲು ಬಂದಾಗ ಗೃಹಸಚಿವ ಆರಗ ಜ್ಞಾನೇಂದ್ರ ಗದರಿಸಿ ಕಳಿಸಿದರು ಎಂದು ಹರ್ಷ ಅಕ್ಕ ಮಾಡಿದ್ದ ಆರೋಪದ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ಕಳೆದ ನಾಲ್ಕು ತಿಂಗಳ ಹಿಂದೆ ಶಿವಮೊಗ್ಗ ಜಿಲ್ಲೆಯಲ್ಲಿ ಭಜರಂಗ ದಳದ ಕಾರ್ಯಕರ್ತ ಹರ್ಷನನ್ನು ಮುಸ್ಲಿಂ ಯುವಕರು ಹತ್ಯೆಗೈದಿದ್ದರು. ಸದ್ಯ ಪ್ರಕರಣವನ್ನು ಎನ್ಐಎ ತನಿಖೆ ನಡೆಸುತ್ತಿದ್ದು, ಕೇಂದ್ರ ಕಾರಾಗೃಹದಲ್ಲಿರುವ ಆರೋಪಿಗಳಿಗೆ ಜೈಲಿನಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಹರ್ಷನ ಕುಟುಂಬದವರು ಹಾಗೂ ಬಲಪಂಥೀಯ ಸಂಗಟನೆಗಳು ಗೃಹ ಸಚಿವ ಆರಗ ಜ್ಞಾನೇಂದ್ರರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.
ಈ ಕುರಿತು ಬೆಳಗಾವಿಯ ಕುಡಚಿಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಹರ್ಷ ಕುಟುಂಬಕ್ಕೆ ನನ್ನ ಮಾತು ಕೇಳುವ ವ್ಯವಧಾನವೇ ಇಲ್ಲ. ಅವರು ಹೇಳಿದಂತೆಲ್ಲ ನಾನು ನಡೆದುಕೊಳ್ಳಲು ಆಗುವುದಿಲ್ಲ. ಒಬ್ಬ ಗೃಹ ಸಚಿವನಾಗಿ ಕಾನೂನಿನ ಪ್ರಕಾರ ನಡೆದುಕೊಳ್ಳಬೇಕು. ಆರೋಪಿಗಳನ್ನ ಎಳೆ ತಂದು ಅವರ ಮುಂದೆ ಫೈರ್ ಮಾಡಲು ಆಗುತ್ತದೆಯೇ ಎಂದು ಪ್ರಶ್ನೆ ಮಾಡಿದರು.
ಇದನ್ನೂ ಓದಿ | ನೀನು ಎಷ್ಟು ಮಾತನಾಡ್ತಿಯಾ? ಮೃತ ಹರ್ಷನ ಸಹೋದರಿಯನ್ನು ಗದರಿಸಿದ ಆರಗ ಜ್ಞಾನೇಂದ್ರ?
ಹರ್ಷನ ಕೊಲೆಯಿಂದ ಅವರ ಕುಟುಂಬಕ್ಕೆ ಎಷ್ಟು ನೋವು ತಂದುಕೊಟ್ಟಿದ್ದಯೋ ಅಷ್ಟೇ ನೋವು ನನಗೂ ಆಗಿದೆ. ಕೊಲೆ ಆರೋಪಿಗಳು ಜೈಲಿನಿಂದ ಫೋನ್ ಬಳಕೆ ಮಾಡಿರುವುದು ತಿಳಿದ ತಕ್ಷಣವೇ ಕ್ರಮ ಕೈಗೊಳ್ಳಲಾಗಿದೆ. ಸಿಬ್ಬಂದಿಯ ಮೇಲೂ ಎಫ್‌ಐಆರ್ ದಾಖಲಾಗಿದೆ. ಆದರೆ ಹರ್ಷನ ಕುಟುಂಬವು ಭೇಟಿ ಮಾಡಿದಾಗ ಪ್ರಕರಣ ಸಂಬಂಧ ಏನೇನೋ ಮಾತನಾಡಿದರು. ನಿಂತಲ್ಲೇ, ಯಾವತ್ತು ಮಾಡುತ್ತೀರಿ? ಯಾವ ಕ್ಷಣದಲ್ಲಿ ಮಾಡುತ್ತೀರಿ? ಎಂದೆಲ್ಲ ಕೇಳಿದರು.
ಹೀಗೆ ಮಾತನಾಡಿದರೆ ಗೃಹ ಸಚಿವನಾಗಿ ಏನು ಮಾತನಾಡಲು ಸಾಧ್ಯ? ಹಾಗಾಗಿ ಜಾಸ್ತಿ ಮಾತನಾಡುವುದಿಲ್ಲ ಎಂದಿರುವೆ. ಸಮಾಧಾನವಾಗಿ ಮಾತನಾಡಿ ಎಂದರೆ ಕೂಗಿಕೊಂಡು ಹೋಗಿದ್ದಾರೆ. ಜೈಲಿನೊಳಗೆ ನಡೆದ ಘಟನೆಯನ್ನೇ ಆ ಕುಟುಂಬ ಮನಸ್ಸಿಗೆ ಹಚ್ಚಿಕೊಳ್ಳಬಾರದು. ಅಗಲಿರುವ ಹರ್ಷನನ್ನು ಬದುಕಿಸಲು ಆಗುವುದಿಲ್ಲ, ಆದರೆ ಅವರ ಆತ್ಮಕ್ಕೆ ಶಾಂತಿ ನೆಲೆಸುವ ನಿಟ್ಟಿನಲ್ಲಿ ಆರೋಪಿಗಳಿಗೆ ಶಿಕ್ಷೆ ಕೊಡಿಸುತ್ತೇವೆ ಎಂದರು.
ಶಿವಮೊಗ್ಗ: ಹರ್ಷನ ಅಕ್ಕ ಅಶ್ವಿನಿ ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿದ್ದು, ಆರೋಪಿಗಳಿಗೆ ಜೈಲಿನಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಭೇಟಿ ಮಾಡಿದಾಗ ಗೃಹ ಸಚಿವರು ತಮ್ಮೂಂದಿಗೆ ಸರಿಯಾಗಿ ಮಾತನಾಡದೆ, ನಮ್ಮ ವಿರುದ್ಧವೇ ಜೋರಾಗಿ ಮಾತನಾಡಿಸಿ ಕಳುಹಿಸಿದ್ದಾರೆ. ನಾನೊಬ್ಬ ಹೆಣ್ಣು ಮಗಳು ಎಂಬುದನ್ನೂ ಮರೆತು ಜನರ ಮುಂದೆ ಹಾಗೆ ವರ್ತಿಸಿದ್ದು ಸರಿಯಲ್ಲ ಎಂದು ಅಶ್ವಿನಿ ಅಸಮಾಧಾನ ಹೊರ ಹಾಕಿದ್ದಾರೆ.
ಹರ್ಷ ತಾಯಿ ಪದ್ಮ ಮಾತನಾಡಿ, ನನ್ನ ಮಗನ ಪ್ರಕರಣ ಮುಚ್ಚಿಹೋಗುವ ಭಯ ಇದೆ. ಕೂಡಲೇ ತಪ್ಪಿತಸ್ಥರಿಗೆ ಶಿಕ್ಷೆಆಗಬೇಕು. ಗೃಹ ಸಚಿವರು ಈ ರೀತಿ ನಡೆದು ಕೊಳ್ಳಬಾರದಿತ್ತು ಎಂದಿದ್ದಾರೆ.
ಇದನ್ನೂ ಓದಿ | ಹರ್ಷ ಹತ್ಯೆ ಪ್ರಕರಣ | ಹಿಂದು ಯುವಕರಿಗೆ ಬೆಲೆಯೇ ಇಲ್ಲವೆ?: ಸಾಹಿತಿಗಳಿಂದ ಸರ್ಕಾರಕ್ಕೆ ಪತ್ರ