ಬೆಳಗಾವಿ: ಬೇರ್ಯಾರೋ ಹಾರಿಸಿದ ಗಾಳಿಪಟದ ಮಾಂಜಾ ದಾರ ಕುತ್ತಿಗೆಗೆ ಸಿಲುಕಿ ಐದು ವರ್ಷದ ಬಾಲಕನೊಬ್ಬ ಸಾವನ್ನಪ್ಪಿದ ದಾರುಣ ಘಟನೆ ಬೆಳಗಾವಿಯ ಗಾಂಧಿನಗರದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹತ್ತರಗಿ ಗ್ರಾಮದ ವರ್ಧನ್ ಬ್ಯಾಳಿ (5) ಮೃತ ಬಾಲಕ ಎಂದು ಗುರುತಿಸಲಾಗಿದೆ. ದೀಪಾವಳಿ ಹಬ್ಬಕ್ಕೆ ಬಟ್ಟೆ ಖರೀದಿಗೆ ತಂದೆಯ ಜೊತೆಗೆ ಬೆಳಗಾವಿಗೆ ಬಂದಿದ್ದ ಬಾಲಕ, ಬಟ್ಟೆ ತೆಗೆದುಕೊಂಡು ಊರಿಗೆ ತಂದೆಯ ಜೊತೆಗೆ ಬೈಕ್ ಮೇಲೆ ಹೋಗುವಾಗ ಈ ಘಟನೆ ನಡೆದಿದೆ. ಬೈಕ್ ಮೇಲೆ ಮುಂದೆ ಕುಳಿತಿದ್ದ ಬಾಲಕ ವರ್ಧನ್ ಕೊರಳಿಗೆ ಗಾಳಿಪಟದ ಮಾಂಜಾದಾರ ಬಿಗಿದುಕೊಂಡಿದೆ. ದಾರ ತೆಗೆಯಲು ಎಷ್ಟೇ ಪ್ರಯತ್ನಪಟ್ಟರೂ ಅದು ಬಿಡಿಸಿಕೊಳ್ಳದೆ ಕೊರಳಿಗೆ ಇನ್ನಷ್ಟು ಬಿಗಿಯಾಗಿ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೈಲಾನ್‌ನಿಂದ ಮಾಡಲಾದ ಮಾಂಜಾ ದಾರಗಳು ಪಕ್ಷಿಗಳ ಕೊರಳಿಗೆ ಉರುಳಾಗುತ್ತಿರುವ ತುಂಬಾ ಪ್ರಕರಣಗಳು ನಡೆದಿವೆ. ಆದರೆ ಇದೇ ಮೊದಲ ಬಾರಿಗೆ ಈ ದಾರ ಮನುಷ್ಯರ ಪ್ರಾಣ ತೆಗೆದಿದೆ.
ಇದನ್ನೂ ಓದಿ | ಗೃಹಿಣಿ ನಿಹಾರಿಕಾ ಅನುಮಾನಾಸ್ಪದ ಸಾವು; ಪತಿಯೇ ಕೊಲೆ ಮಾಡಿದ್ದಾಗಿ ಪಾಲಕರ ದೂರು