ಬೆಂಗಳೂರು: ಮಂಗಳವಾರ ಬೆಂಗಳೂರಿನಲ್ಲಿ ಹೃದಯಾಘಾತದಿಂದ ಮೃತಪಟ್ಟಿರುವ ಸಚಿವ ಉಮೇಶ್ ಕತ್ತಿಯವರ (Umesh Katti ) ಪಾರ್ಥಿವ ಶರೀರವನ್ನು ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣದಿಂದ ಏರ್‌ಲಿಫ್ಟ್ ಮಾಡಲಾಯಿತು.
ಕತ್ತಿ ಅವರ ಅಂತಿಮ ಸಂಸ್ಕಾರವು ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿರುವ ಅವರ ಸ್ವಂತ ಜಮೀನಿನಲ್ಲಿ ಬುಧವಾರ ಸಂಜೆ ಸರ್ಕಾರಿ ಗೌರವಗಳೊಂದಿಗೆ ನೆರವೇರಲಿದ್ದು, ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
ಬೆಳಗ್ಗೆ 7 ಗಂಟೆಗೆ ವಿಶೇಷ ವಿಮಾನದ ಮೂಲಕ ಏರ್‌ಲಿಫ್ಟ್ ಮಾಡಲಾಗುತ್ತದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದರು. ಆದರೆ ಹವಾಮಾನ ವೈಪರೀತ್ಯದಿಂದಾಗಿ ಒಂಭತ್ತು ಗಂಟೆಗೆ ಮುಂದೂಡಲಾಯಿತು. ಆಗಲೂ ಸಾಧ್ಯವಾಗದೆ, ಹೈದರಾಬಾದ್‌ನಿಂದ ವಿಶೇಷ ವಿಮಾನ ಆಗಮಿಸುವಷ್ಟರಲ್ಲಿ 11.30 ಆಗಿತ್ತು. ಸುಮಾರು 12.30ರ ವೇಳೆಗೆ ದೇಹವನ್ನು ವಿಮಾನಕ್ಕೆ ಇರಿಸಲಾಯಿತು.
ಪತ್ನಿ, ಮಗ, ಮಗಳು ಹಾಗೂ ಸಹೋದರ ರಮೇಶ್ ಕತ್ತಿ ಜತೆಗೂಡಿ ವಿಮಾನ ಹಾರಾಟ ಆರಂಭಿಸಿತು. ಮದ್ಯಾಹ್ನ 1.30ರ ವೇಳೆಗೆ ವಿಮಾನ ಬೆಳಗಾವಿ ತಲುಪಲಿದೆ.
ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿ ಉಮೇಶ್ ಕತ್ತಿಯವರಿಗೆ ಸೇರಿದ ಕಬ್ಬಿನ ಹೊಲವಿದ್ದು, ಉಮೇಶ್ ಕತ್ತಿಯವರ ತಂದೆ ವಿಶ್ವನಾಥ ಮಲ್ಲಪ್ಪಾ ಕತ್ತಿ ಮತ್ತು ತಾಯಿ ರಾಜೇಶ್ವರಿಯ ಸಮಾಧಿ ಪಕ್ಕದಲ್ಲಿಯೇ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಸಲಾಗಿದೆ. ವೀರಶೈವ ಲಿಂಗಾಯತ ಧರ್ಮದ ನಿಯಮದ ಪ್ರಕಾರ ಅಂತಿಮ ವಿಧಿ ವಿಧಾನಗಳು ನಡೆಯಲಿವೆ.
ಈಗಾಗಲೇ ಸಮಾಧಿಯ ಜಾಗವನ್ನು ಗುರುತಿಸಿ, ಜೆಸಿಬಿಯಿಂದ ಗುಂಡಿ ತೆಗೆಯಲಾಗುತ್ತಿದೆ. ಸುತ್ತಮುತ್ತ ಇರುವ ಕಬ್ಬನ್ನು ಕಟಾವು ಮಾಡಿ, ಗಣ್ಯರಿಗೆ, ಅಭಿಮಾನಿಗಳಿಗೆ ಅಂತಿಮ ದರ್ಶನ ಪಡೆದುಕೊಳ್ಳಲು ಜಾಗ ಮಾಡಿಕೊಡಲಾಗುತ್ತಿದೆ. ಹೊಲದ ರಸ್ತೆ ಮತ್ತು ಸುತ್ತಮುತ್ತಲಿನ ಜಾಗವನ್ನು ಸ್ವಚ್ಛಗೊಳಿಸುವ ಕಾರ್ಯ ಬೆಳಗ್ಗೆಯಿಂದಲೇ ನಡೆಯುತ್ತಿದೆ.
ಸ್ಥಳೀಯ ಗ್ರಾಮಸ್ಥರು, ಉಮೇಶ್ ಕತ್ತಿಯವರ ಒಡನಾಡಿಗಳು ಹಾಗೂ ಅಭಿಮಾನಿಗಳು ಇಲ್ಲಿಗೆ ಆಗಮಿಸಿದ್ದು, ಅವರ ಅಂತಿಮ ಸಂಸ್ಕಾರ ನಡೆಯುವ ಜಾಗವನ್ನು ಸಿದ್ಧಪಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಜಿಲ್ಲೆಯ ಮತ್ತು ಹೊರಗಿನ ಜಿಲ್ಲೆಗಳ ಸುಮಾರು ೫೦-೬೦ ಮಠಾಧೀಶರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅಂತಿಮ ಸಂಸ್ಕಾರಕ್ಕೆ ಮಾರ್ಗದರ್ಶನ ನೀಡಲಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಅಂತಿಮ ದರ್ಶನಕ್ಕೆ ವ್ಯವಸ್ಥೆ
ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿರುವ ಉಮೇಶ್ ಕತ್ತಿ ಒಡೆತನದ ವಿಶ್ವರಾಜ್ ಶಗರ್ಸ್‌ನಲ್ಲಿ ಅಂತಿಮ ದರ್ಶನಕ್ಕೆ ಸಕಲ ಸಿದ್ದತೆ, ಮಾಡಲಾಗಿದೆ. ಆಗಮಿಸು ರಾಜಕೀಯ ಗಣ್ಯರಿಗೆ ಕುಳಿತುಕೊಳ್ಳಲು ಖುರ್ಚಿ ಹಾಕಲಾಗಿದ್ದು, ಮಳೆಯಾಗುವ ಸಾಧ್ಯತೆ ಇರುವುದರಿಂದ ಶಾಮಿಯಾನ ಹಾಕಲಾಗಿದೆ.
ಜಿಲ್ಲೆಯ ಅನೇಕ ಕಡೆ ಬಂದ್
ಜಿಲ್ಲೆಯ ಹಿರಿಯ ರಾಜಕಾರಣಿ ಉಮೇಶ್ ಕತ್ತಿ ನಿಧನ ಜಿಲ್ಲೆಯ ಜನತೆಯಲ್ಲಿ ಆಘಾತ ಮೂಡಿಸಿದ್ದು, ಜಿಲ್ಲೆಯ ಅನೇಕ ಕಡೆ ಸ್ವಯಂ ಪ್ರೇರಿತ ಬಂದ್ ಆಚರಿಸಿ, ಅವರಿಗೆ ಗೌರವ ಸಲ್ಲಿಸಲಾಗುತ್ತಿದೆ. ಹುಕ್ಕೇರಿ ತಾಲೂಕಿನಲ್ಲಿ ವ್ಯಾಪಾರ-ವ್ಯವಹಾರಗಳು ಸಂಪೂರ್ಣ ಬಂದ್ ಆಗಿವೆ.
ಇದನ್ನೂ ಓದಿ | ಉಮೇಶ್ ಕತ್ತಿ ಶರೀರ ಏರ್‌ಲಿಫ್ಟ್ | ಸಂಕೇಶ್ವರ, ಬೆಲ್ಲದ ಬಾಗೇವಾಡಿಯಲ್ಲಿ ಅಂತಿಮ ದರ್ಶನ, ಸಂಜೆ ಅಂತ್ಯಸಂಸ್ಕಾರ