Site icon Vistara News

Bharatiya Janata Party | ಬಿಜೆಪಿಗೆ ʼನವಶಕ್ತಿʼ ನೀಡಲಿದೆಯೇ ಬಳ್ಳಾರಿ ST ಸಮಾವೇಶ?

Bharatiya Janata Party ST Convention Bellary JP nadda

ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗಳು ಹತ್ತಿರವಾಗುತ್ತಿರುವಂತೆಲ್ಲ ವಿವಿಧ ಸಮುದಾಯಗಳನ್ನು ತಮ್ಮತ್ತ ಸೆಳೆಯುವ, ತಾವೇ ನಿಜವಾದ ಸಾಮಾಜಿಕ ನ್ಯಾಯದ ಹರಿಕಾರರು ಎಂದು ಸಾಬೀತುಪಡಿಸುವ ಪ್ರಯತ್ನ ಹೆಚ್ಚಾಗಿ ನಡೆಯುತ್ತಿದೆ. ಭಾರತೀಯ ಜನತಾ ಪಕ್ಷವು (Bharatiya Janata Party) ಬಳ್ಳಾರಿಯಲ್ಲಿ ನವೆಂಬರ್‌ 20ರಂದು ನವಶಕ್ತಿ ಸಮಾವೇಶವನ್ನು ಆಯೋಜಿಸಿದೆ.

ಎಸ್‌ಟಿ ಮೋರ್ಚಾದಿಂದ ಆಯೋಜಿಸಿರುವ ಕಾರ್ಯಕ್ರಮ ಬಳ್ಳಾರಿಯಲ್ಲಿ ನಡೆಯುತ್ತಿದೆಯಾದರೂ ಇದು ಇಡೀ ರಾಜ್ಯಕ್ಕೆ ಸಂದೇಶ ನೀಡುವಂತೆ ತಯಾರಿ ನಡೆದಿದೆ. ಸ್ವತಃ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಆಗಮಿಸಿ ಭಾಷಣ ಮಾಡಲಿದ್ದಾರೆ. ಕೇಂದ್ರ ಸರ್ಕಾರದ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಅರ್ಜುನ್ ಮುಂಡಾ ಭಾಗವಹಿಸಲಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಸಂಸದೀಯ ಮಂಡಳಿಯ ಸದಸ್ಯರೂ ಆದ ಬಿ.ಎಸ್.ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ಕೇಂದ್ರ ರಾಜ್ಯ ಸರ್ಕಾರಗಳ ಸಚಿವರು, ಕೋರ್ ಕಮಿಟಿ ಸದಸ್ಯರು ಪಾಲ್ಗೊಳ್ಳಲಿದ್ದಾರೆ.

ಎಸ್‌ಟಿ ಪ್ರಾಬಲ್ಯದ ಜಿಲ್ಲೆ

ಪ್ರಮುಖವಾಗಿ ಎಸ್‌ಟಿ ಸಮುದಾಯಕ್ಕೇ ಸೇರಿದ ಸಚಿವ ಬಿ. ಶ್ರೀರಾಮುಲು ತವರು ಜಿಲ್ಲೆಯಾದ್ದರಿಂದ ಅವರ ಹುಮ್ಮಸ್ಸು ಹೆಚ್ಚಾಗಿದೆ. ರಾಜ್ಯದ ಜನಸಂಖ್ಯೆಯ ಸರಾಸರಿ ಶೇ.7ರಷ್ಟಿದ್ದರೂ ಇದೀಗ ಬಿಜೆಪಿ ಸಮಾವೇಶ ನಡೆಸುತ್ತಿರುವ ಪ್ರದೇಶಗಳಲ್ಲಿ ಎಸ್‌ಟಿ ಸಮುದಾಯ ಹೆಚ್ಚಿನ ಪ್ರಾಬಲ್ಯ ಹೊಂದಿದೆ. ಸಮಾವೇಶ ನಡೆಯುತ್ತಿರುವ ಬಳ್ಳಾರಿಯಲ್ಲಿ ಒಟ್ಟು ಜನಸಂಖ್ಯೆಯ ಶೇ. 18.41 ಎಸ್‌ಟಿ ಸಮುದಾಯವಿದೆ. ಅದೇ ರೀತಿ ಕೊಪ್ಪಳ ಜಿಲ್ಲೆಯ ಜನಸಂಖ್ಯೆಯ ಶೇ. 11.82, ರಾಯಚೂರಿನ ಶೇ. 19.03, ಯಾದಗಿರಿಯ ಶೇ. 12.51, ಚಿತ್ರದುರ್ಗದ ಶೇ. 18.23 ಹಾಗೂ ಬೀದರ್‌ ಜಿಲ್ಲೆಯ ಶೇ. 13.85 ಜನಸಂಖ್ಯೆ ಎಸ್‌ಟಿ ಸಮುದಾಯದ್ದು.

ಈ ಜಿಲ್ಲೆಗಳಲ್ಲಿ ಈಗಾಗಲೆ ಶಾಸಕರ ಸಂಖ್ಯೆಯ ಲೆಕ್ಕದಲ್ಲಿ ಬಿಜೆಪಿ ಪ್ರಾಬಲ್ಯ ಹೊಂದಿದ್ದರೂ ತಳಮಟ್ಟದಲ್ಲಿ ಎಲ್ಲ ಸಮುದಾಯಗಳ ಬೆಂಬಲವನ್ನು ಇನ್ನೂ ಪಡೆಯಬೇಕು. ಇದೇ ಕಾರಣಕ್ಕೆ ಬಿಜೆಪಿಯಿಂದ ಪ್ರಮುಖವಾಗಿ ಎಸ್‌ಟಿ ಸಮುದಾಯದತ್ತ ಹೆಚ್ಚು ಗಮನಹರಿಸಲಾಗುತ್ತಿದೆ. ಉತ್ತರ ಕರ್ನಾಟಕದ ಭಾಗದ ಅತಿ ದೊಡ್ಡ ಸಮುದಾಯವಾದ ವೀರಶೈವ ಲಿಂಗಾಯತರು ಐತಿಹಾಸಿಕ ಕಾರಣಗಳಿಗೆ ಕಾಂಗ್ರೆಸ್‌ ಅನ್ನು ಬೆಂಬಲಿಸುವುದಿಲ್ಲ ಹಾಗೂ ಬಿಜೆಪಿ ಜತೆಗಿದ್ದಾರೆ. ಅದರಲ್ಲೂ ಬಿ.ಎಸ್‌. ಯಡಿಯೂರಪ್ಪ ಅವರು ಸದ್ಯದ ಮಟ್ಟಿಗೆ ವೀರಶೈವ ಲಿಂಗಾಯತ ಸಮುದಾಯದ ಪರಮೋಚ್ಛ ರಾಜಕೀಯ ನಾಯಕ ಎಂದು ಅನೇಕ ಸಂದರ್ಭಗಳಲ್ಲಿ ಸಾಬೀತಾಗಿದೆ.

ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವುದು ಎಂದರೆ ಕುರುಬ ಸಮುದಾಯ. ಈ ಸಮುದಾಯದ ಪರಮೋಚ್ಚ ನಾಯಕರಾಗಿ ಕಾಂಗ್ರೆಸ್‌ನ ಸಿದ್ದರಾಮಯ್ಯ ಇರುವುದರಿಂದ ಪೂರ್ಣ ಪ್ರಮಾಣದಲ್ಲಿ ಕುರುಬ ಸಮುದಾಯದ ಮತಗಳನ್ನು ನೆಚ್ಚಿಕೊಳ್ಳಲು ಬಿಜೆಪಿ ಸಿದ್ಧವಿಲ್ಲ. ಹೀಗಾಗಿ ಎಸ್‌ಟಿ ಸಮುದಾಯಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಬಳ್ಳಾರಿಯಲ್ಲಿ ಸಮಾವೇಶ ನಡೆಯುತ್ತಿರುವುದರಿಂದ ಶ್ರೀರಾಮುಲು ಮುಂಚೂಣಿಯಲ್ಲಿದ್ದು, ಅವರ ಜತೆಗೆ ರಾಜುಗೌಡ ಸೇರಿ ಅನೇಕರು ಎಸ್‌ಟಿ ಸಮುದಾಯವನ್ನು ಮುನ್ನಡೆಸುವ ನಾಯಕರಾಗಿ ಹೊರಹೊಮ್ಮುತ್ತಿದ್ದಾರೆ.

ಕಾಂಗ್ರೆಸ್‌ ರ‍್ಯಾಲಿಯ ಛಾಯೆ

ಇದೀಗ ಬಿಜೆಪಿ ಎಸ್‌ಟಿ ಸಮಾವೇಶ ಆಯೋಜಿಸುತ್ತಿರುವ ಬಳ್ಳಾರಿಯಲ್ಲೇ ಇತ್ತೀಚೆಗಷ್ಟೆ ರಾಹುಲ್‌ ಗಾಂಧಿ ನೇತೃತ್ವದ ಭಾರತ್‌ ಜೋಡೊ ಯಾತ್ರೆ ಸಮಾವೇಶವೂ ನಡೆದಿತ್ತು ಎನ್ನುವುದು ವಿಶೇಷ. ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿಯವರಿಗೆ ರಾಜಕೀಯ ಪುನರ್ಜನ್ಮ ನೀಡಿದ ಕ್ಷೇತ್ರ ಎಂದು ಕಾಂಗ್ರೆಸ್‌ ನಾಯಕರು ಬಳ್ಳಾರಿ ಕುರಿತು ಹೇಳುತ್ತಾರೆ. ಆದರೆ, ಬಳ್ಳಾರಿಯಲ್ಲಿ ಜಯಿಸಿ ಇಲ್ಲಿನ ಜನರನ್ನು ಸೋನಿಯಾ ಕೈಬಿಟ್ಟರು, ಮೋಸ ಮಾಡಿದರು ಎಂದು ಬಿಜೆಪಿ ಆರೋಪಿಸುತ್ತದೆ.

ಇದೀಗ ಬಳ್ಳಾರಿಯಲ್ಲೇ ಬಿಜೆಪಿಯೂ ರ‍್ಯಾಲಿ ಆಯೋಜನೆ ಮಾಡುತ್ತಿದೆ. ಈ ಮೂಲಕ ತನ್ನ ಭದ್ರ ನೆಲೆಯನ್ನು ಉಳಿಸಿಕೊಳ್ಳಲು ಪ್ರಯತ್ನ ಆರಂಭಿಸಿದೆ. 20೧೧ರ ಜನಗಣತಿಯಂತೆ ರಾಜ್ಯದಲ್ಲಿ ಶೇ.6.95 ಪರಿಶಿಷ್ಟ ಪಂಗಡದ ಜನಸಂಖ್ಯೆಯಿದೆ. ಒಟ್ಟಾರೆ ರಾಜ್ಯದಲ್ಲಿ ಸರಾಸರಿ ಶೇ.7 ಇರುವುದರಿಂದಲೇ ಇತ್ತೀಚೆಗೆ ರಾಜ್ಯ ಸರ್ಕಾರ ಒಟ್ಟು ಎಸ್‌ಟಿ ಮೀಸಲಾತಿ ಪ್ರಮಾಣವನ್ನು ಜನಸಂಖ್ಯೆಗೆ ಸರಿ ಹೊಂದಿಸುವ ನಿರ್ಧಾರ ಮಾಡಿದೆ. ಡಿಸೆಂಬರ್‌ನಲ್ಲಿ ನಡೆಯುವ ವಿಧಾನಮಂಡಲ ಅಧಿವೇಶನದಲ್ಲಿ ಮಸೂದೆ ಮಂಡನೆ ಮಾಡಿ ಒಪ್ಪಿಗೆಯನ್ನೂ ಪಡೆಯುವ ಚಿಂತನೆಯಲ್ಲಿದೆ. ಈ ನಿರ್ಧಾರವು ಬಳ್ಳಾರಿ ರ‍್ಯಾಲಿಯ ಕೇಂದ್ರಬಿಂದುವಾಗುವುದರಲ್ಲಿ ಸಂಶಯವಿಲ್ಲ. ಬಿಜೆಪಿಯು ಎಸ್‌ಟಿ ಸಮುದಾಯದಿಂದ ವಿಧಾನಸಭೆ ಚುನಾವಣೆಗೆ ʼನವಶಕ್ತಿʼ ಪಡೆಯುವ ನಿರೀಕ್ಷೆಯಲ್ಲಿದೆ.

ಇದನ್ನೂ ಓದಿ | Ramulu effect| ಎಸ್‌ಟಿ ಸಮಾವೇಶದ ಮೂಲಕ ಭಾರತ್‌ ಜೋಡೋ, ಸಿದ್ದರಾಮೋತ್ಸವಕ್ಕೆ ಟಾಂಗ್‌: ರಾಮುಲುಗೆ ಪ್ರತಿಷ್ಠೆ

Exit mobile version