Site icon Vistara News

ನವಶಕ್ತಿ ಸಮಾವೇಶ | ಕೇಸರಿ, ಕುಂಕುಮದ ಅಲೆಯಲ್ಲಿ ಕೊಚ್ಚಿ ಹೋಗಲಿದೆ ಕಾಂಗ್ರೆಸ್‌: ಸಿ.ಟಿ. ರವಿ ಭಾಷಣ

C T ravi Navashakti samavesha

ಬಳ್ಳಾರಿ: ಕಾಂಗ್ರೆಸ್‌ನಲ್ಲಿ ಕೆಲವರಿಗೆ ಕುಂಕುಮ, ಕೇಸರಿಯನ್ನು ಕಂಡರೆ ಆಗುವುದಿಲ್ಲ ಮುಂದಿನ ಚುನಾವಣೆಯಲ್ಲಿ ಇದೇ ಕುಂಕುಮ, ಕೇಸರಿ ಅಲೆಯ ಮೂಲಕ ಕಾಂಗ್ರೆಸ್‌ ಅನ್ನು ಕೊಚ್ಚಿ ಹೋಗುವಂತೆ ಮಾಡೋಣ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ತಿಳಿಸಿದ್ದಾರೆ. ಬಿಜೆಪಿ ಎಸ್‌ಟಿ ಮೋರ್ಚಾ ವತಿಯಿಂದ ಆಯೋಜಿಸಿರುವ ನವಶಕ್ತಿ ಸಮಾವೇಶ ಕಾರ್ಯಕ್ರಮದಲ್ಲಿ ನೆರೆದಿದ್ದ ಲಕ್ಷಾಂತರ ಜನರನ್ನು ಉದ್ದೇಶಿಸಿ ಮಾತನಾಡಿದರು.

ಇಲ್ಲಿ ಜನ ಬಂದಿರುವುದು ಪ್ರೀತಿಯಿಂದ ಕೃತಜ್ಞತೆ ಸಲ್ಲಿಸಲು. ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಬಿಜೆಪಿ ಇಂದು ಕೆಲಸ ಮಾಡಿದೆ, ಆದರೆ ಕಾಂಗ್ರೆಸ್‌ ಈ ಕೆಲಸವನ್ನು ಮಾಡಿರಲಿಲ್ಲ. ನಮ್ಮ ಸರ್ಕಾರ ಇಚ್ಛಾಶಕ್ತಿ ಪ್ರದರ್ಶನ ಮಾಡಿದ್ದರಿಂದ ಶೇ.೩ ಇದ್ದ ಮೀಸಲಾತಿ ಶೇ.7ಕ್ಕೆ ಹೆಚ್ಚಳವಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೂ ಎಸ್‌ಟಿ ಸಮುದಾಯದವರು ಎಂದು ಹೇಳಲು ಹೆಮ್ಮೆಯಿದೆ.

ಕಾಂಗ್ರೆಸ್‌ಗೆ ಇದೆಲ್ಲದರಿಂದ ಹೊಟ್ಟೆಕಿಚ್ಚು ಶುರುವಾಗಿದೆ. ನಾವು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ, ಸಾಮಾಜಿಕ ಬದ್ಧತೆಯನ್ನು ಉಳಿಸಿಕೊಂಡಿದ್ದೇವೆ. ಮಾಡಿಬಿಟ್ಟರೆ ಆಗಿ ಹೋಯ್ತ? ಎಂದು ಪ್ರಶ್ನಿಸುತ್ತಾರೆ ಕೆಲವರು. ಅವರಿಗೆ ಮಾಡಲು ಯೋಗ್ಯತೆ ಇರಲಿಲ್ಲ, ನಾವು ಮಾಡಿದ್ದೇವೆ.

ಇಂದಿನ ಕಾಂಗ್ರೆಸ್‌ಗೆ ಮಹಾತ್ಮಾ ಗಾಂಧಿಯವರ ಹೆಸರನ್ನು ಹೇಳುವ ಅಧಿಕಾರ ಇಲ್ಲ. ಈಗಿನ ಕಾಂಗ್ರೆಸ್‌, ಮತಾಂತರಕ್ಕೆ ಕುಮ್ಮಕ್ಕು ನೀಡುತ್ತಿರುವ ಕಾಂಗ್ರೆಸ್‌. ಕಾಂಗ್ರೆಸ್‌ನಲ್ಲಿ ಪ್ರೊಮೋಷನ್‌ ಸಿಗಬೇಕು ಎಂದರೆ ಮತಾಂತರ ಆಗಬೇಕು ಅಥವಾ ಮತಾಂತರಕ್ಕೆ ಕುಮ್ಮಕ್ಕು ನೀಡಬೇಕು. ಕೆಪಿಸಿಸಿ ಅಧ್ಯಕ್ಷರು ಶಿವನ ಜಾಗವನ್ನೇ ಮತಾಂತರ ಮಾಡಲು ಹೊರಟರು, ಅವರಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ ಒಲಿದುಬಂತು. ಸಿದ್ದರಾಮಯ್ಯ ಅವರಿಗೆ ಕುಂಕುಮ, ಕೇಸರಿ ಕಂಡೆ ಆಗುವುದಿಲ್ಲ. ಹಾಗಾಗಿ ಇಂತಹ ಕಾಂಗ್ರೆಸ್‌ ಅನ್ನು ಕೇಸರಿ ಅಲೆ, ಕುಂಕುಮದ ಅಲೆಯ ಮೂಲಕ ಹೊರಹಾಕೋಣ. ಕೇಸರಿ, ಕುಂಕುಮದ ಅಲೆಯಿಂದ ಕೊಚ್ಚಿ ಹೋಗಲಿದೆ ಎಂದರು.

ರಾಮಾಯಣವನ್ನೇ ಕಾಲ್ಪನಿಕ ಎಂದಿದ್ದು ಕಾಂಗ್ರೆಸ್‌ ಎಂದ ಸಿ.ಟಿ. ರವಿ, ರಾಮಾಯಣ ಇಲ್ಲ ಎಂದರೆ ಹನುಮಂತ ಇಲ್ಲ, ವಾಲ್ಮೀಕಿ, ಕುರುಬರೂ ಇಲ್ಲ. ರಾಮಾಯಣ ಇಲ್ಲ ಎಂದರೆ ಧರ್ಮಕ್ಕೆ ಅಪಚಾರ ಎಸಗಿದಂತೆ ಎಂದರು. ಹಿಂದು ಎಂದರೆ ಕೆಟ್ಟ ಶಬ್ದ ಎಂದು ಒಬ್ಬರು ಹೇಳುತ್ತಾರೆ ಎನ್ನುತ್ತಾ ಸತೀಶ್‌ ಜಾರಕಿಹೊಳಿ ವಿರುದ್ಧ ಹರಿಹಾಯ್ದ ಸಿ.ಟಿ. ರವಿ, ಇವತ್ತು ಮದಕರಿ ನಾಯಕ, ಗಂಡುಗಲಿ ಕುಮಾರ ರಾಮ ಎಲ್ಲರನ್ನೂ ಕಾಂಗ್ರೆಸ್‌ ಅವಮಾನಿಸಿದೆ.

ಇಂತಹ ಕಾಂಗ್ರೆಸ್‌ನ ಅಭ್ಯರ್ಥಿಗಳು ಉತ್ತರಪ್ರದೇಶದಂತೆ ಠೇವಣಿ ಕಳೆದುಕೊಳ್ಳುವಂತೆ ಮಾಡಬೇಕು ಎಂದು ಕರೆ ನೀಡಿದರು.

ಕೆ.ಎಂ.ಎಫ್‌. ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮಾತನಾಡಿ, ನಮ್ಮ ಸಮಾಜ ಅನೇಕ ವರ್ಷಗಳಿಂದ ಮೀಸಲಾತಿಗಾಗಿ ಹೋರಾಟ ಮಾಡುತ್ತಿತ್ತು. ಆದರೆ ನಮ್ಮ ಬಿಜೆಪಿ ಸರ್ಕಾರ, ಸಿಎಂ ಬಸವರಾಜ ಬೊಮ್ಮಾಯಿ ಅವರು ಆದೇಶ ಮಾಡಿ ಸೌಲಭ್ಯ ದೊರಕಿಸಿಕೊಟ್ಟಿದ್ದಾರೆ. ಈ ಸೌಲಭ್ಯವನ್ನು ಬಳಸಿಕೊಂಡು ನಮ್ಮ ಸಮುದಾಯ ಆರ್ಥಿಕ, ಶೈಕ್ಷಣಿಕವಾಗಿ ಏಳಿಗೆ ಕಾಣಬೇಕು. ವಾಲ್ಮೀಕಿ ಸಮುದಾಯವು ಮುಖ್ಯಮಂತ್ರಿಯವರ ಮೇಲೆ, ಬಿಜೆಪಿ ಸರ್ಕಾರದ ಮೇಳೆ ಇರಿಸಬೇಕು.

ಇದನ್ನೂ ಓದಿ | Bharatiya Janata Party | ನಿಜವಾದ ಅಹಿಂದ ನಾಯಕ ಬೊಮ್ಮಾಯಿ ಎಂದ ಬಿಜೆಪಿ; ಕ್ರೆಡಿಟ್‌ ತಗೊಂಡ್ರೆ ತಪ್ಪೇನು ಎಂದ ತಾರಾ

Exit mobile version