ರಾಮನಗರ: ಕಳೆದ ಎರಡು ಮೂರು ದಿನಗಳಿಂದ ರಾಜ್ಯದ ಹಲವು ಕಡೆ ಭಾರಿ ಮಳೆಯಾಗುತ್ತಿದೆ. ರಾಮನಗರ ಜಿಲ್ಲೆಯಲ್ಲಿಯೂ ತೀವ್ರ ಮಳೆ ದಾಖಲಾಗಿದ್ದರಿಂದ ಪರಿಸ್ಥಿತಿ ಕೈಮೀರಿದ್ದು, ಕೆರೆಕೊಳ್ಳಗಳು ಕೋಡಿ ಬಿದ್ದಿವೆ. ಈ ಹಿನ್ನೆಲೆಯಲ್ಲಿ ಇನ್ನು ಮೂರು ದಿನಗಳ ಕಾಲ ಮೈಸೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಲಾಗಿದೆ. ಹೀಗಾಗಿ ಬದಲಿ ಮಾರ್ಗ ಅನುಸರಿಸುವಂತೆ ಕೋರಲಾಗಿದೆ.
ಬೆಂಗಳೂರು-ಕನಕಪುರ-ಮೈಸೂರು ಮಾರ್ಗವಾಗಿ ಇಷ್ಟು ದಿನ ಸಂಚಾರ ಮಾಡಲಾಗುತ್ತಿತ್ತು. ಆದರೆ, ಭಾರಿ ಮಳೆಯಿಂದ ರಾಮನಗರ ಭಾಗಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಕನಕಪುರ ಮಾರ್ಗವಾಗಿ ಮೈಸೂರಿಗೆ ತೆರಳುವ ಮಾರ್ಗವನ್ನು ಬಂದ್ ಮಾಡಿ ಆದೇಶಿಸಲಾಗಿದೆ.
ಕೆರೆ, ಕಟ್ಟೆಗಳು ಕೋಡಿ ಬಿದ್ದಿರುವುದರಿಂದ ರಸ್ತೆಗಳು ಹದಗೆಟ್ಟಿವೆ. ಈ ಹಿನ್ನೆಲೆಯಲ್ಲಿ ರಸ್ತೆ ದುರಸ್ತಿ ಕಾರ್ಯಕ್ಕೆ ಮುಂದಾಗಲಾಗಿದೆ. ವಾಹನ ಸಂಚಾರ ದಟ್ಟಣೆ ಹೆಚ್ಚಾಗುವುದರಿಂದ ಮಾರ್ಗ ಬದಲಾವಣೆಗೆ ತೀರ್ಮಾನಿಸಲಾಗಿದ್ದು, ರಾಮನಗರ ಜಿಲ್ಲಾ ಪೊಲೀಸರು ಸುತ್ತೋಲೆ ಹೊರಡಿಸಿದ್ದಾರೆ.
ಕುಣಿಗಲ್ ಮಾರ್ಗವಾಗಿ ಸಂಚರಿಸಲು ಸೂಚನೆ
ಕನಕಪುರ ಮಾರ್ಗ ಬಂದ್ ಆಗಿರುವ ಹಿನ್ನೆಲೆಯಲ್ಲಿ ಮೈಸೂರಿಗೆ ತೆರಳುವ ನಾಗರಿಕರು ಬೆಂಗಳೂರಿನಿಂದ ಕುಣಿಗಲ್ ಮಾರ್ಗವಾಗಿ ಮೈಸೂರಿಗೆ ರಸ್ತೆ ಮೂಲಕ ಸಂಚರಿಸಬಹುದಾಗಿದೆ. ಮೂರು ದಿನಗಳ ಕಾಲ ಕನಕಪುರ ಮಾರ್ಗದಲ್ಲಿ ರಸ್ತೆ ದುರಸ್ತಿ ಮಾಡಲಾಗುತ್ತಿದ್ದು, ಅಲ್ಲಿಯವರೆಗೆ ಮಾರ್ಗ ಬದಲಾವಣೆಗೆ ಸಹಕರಿಸಬೇಕು ಎಂದು ಪ್ರಕಟಣೆಯಲ್ಲಿ ಕೋರಲಾಗಿದೆ.
ಇದನ್ನೂ ಓದಿ | 54 ವರ್ಷ ವಯಸ್ಸು, 44 ವರ್ಷ ಅನುಭವ, 164 ಕೇಸು, 3 ಹೆಂಡ್ತಿ, 20 ಬಾರಿ ಜೈಲು: ಇದು ಒಬ್ಬ ಕಳ್ಳನ ಬಯೊಡಾಟಾ