ಬೆಂಗಳೂರು: ರಾಜ್ಯ ರಾಜಧಾನಿಯ ವೈಟ್‌ಫೀಲ್ಡ್‌ನಲ್ಲಿ ನಡೆದ (Blast in Bengaluru) ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ (Rameshwaram Cafe Blast) ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ಅಧಿಕಾರಿಗಳಿಗೆ ಸ್ಫೋಟಕ ಮಾಹಿತಿ ಲಭ್ಯವಾಗಿದೆ. ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಿಸಲು ಪಾಕಿಸ್ತಾನ ಪಿತೂರಿ ನಡೆಸಿರುವ ಮಹತ್ವದ ವಿಚಾರ ಬಹಿರಂಗವಾಗಿದೆ. ಸ್ಫೋಟದ ಆರೋಪಿಗಳಾದ ಅಬ್ದುಲ್ ಮತೀನ್ ತಾಹಾ (Abdul Mateen Taha) ಹಾಗೂ ಮುಸಾವೀರ್ ಹುಸೇನ್ ಶಜೀಬ್ (Mussavir Shazeeb Hussain) ಅವರು ಪಾಕಿಸ್ತಾನದ ಜತೆ ನಂಟು ಹೊಂದಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಬಾಂಬ್ ದಾಳಿಯ ರೂವಾರಿಗಳಾದ ಅಬ್ದುಲ್ ಮತೀನ್ ತಾಹಾ ಹಾಗೂ ಮುಸಾವೀರ್ ಹುಸೇನ್ ಶಜೀಬ್ ಅವರು ಪಾಕಿಸ್ತಾನದ ಕರ್ನಲ್ (Colonel) ಎಂಬ ಗೌಪ್ಯ (Code Name) ಹೆಸರು ಹೊಂದಿರುವವನ ಜತೆ ನಂಟು ಹೊಂದಿದ್ದರು. ಅಷ್ಟೇ ಅಲ್ಲ, ಐಎಸ್ ಅಲ್-ಹಿಂದ್ ಎಂಬ ಉಗ್ರ ಸಂಘಟನೆ ಜತೆ ಇವರು 2019-20ರಿಂದಲೂ ಸಂಪರ್ಕ ಹೊಂದಿದ್ದರು ಎಂಬ ಮಾಹಿತಿ ಎನ್‌ಐಎಗೆ ಲಭ್ಯವಾಗಿದೆ. ಹಾಗಾಗಿ, ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಪಾಕಿಸ್ತಾನದ ನಂಟಿನ ಕುರಿತು ಎನ್‌ಐಎ ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್‌ಗೂ ನಂಟು
ಕರ್ನಲ್ ಎಂಬ ಕೋಡ್ ನೇಮ್ ಇರುವ ಶಂಕಿತನಿಗೂ, 2022ರಲ್ಲಿ ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟಕ್ಕೂ ನಂಟಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಅಬುಧಾಬಿಯಲ್ಲಿರುವ ಕರ್ನಲ್ ಎಂಬ ಶಂಕಿತ ಉಗ್ರನ ಹೆಸರು ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಬಳಿಕ ಬಯಲಾಗಿದೆ. ಈತನು ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್‌ಐ ಜತೆ ನಂಟು ಹೊಂದಿದ್ದು, ಭಾರತದಲ್ಲಿ ಬಾಂಬ್ ದಾಳಿಗಳಿಗೆ ಪಿತೂರಿ ನಡೆಸುತ್ತಿದ್ದಾನೆ. ಇಸ್ಲಾಮಿಕ್ ಸ್ಟೇಟ್‌ನ ಸಣ್ಣ ಗುಂಪುಗಳನ್ನು ರಚಿಸಿ, ಅವುಗಳಿಗೆ ಸ್ಥಳೀಯ ಯುವಕರನ್ನು ನೇಮಿಸುವುದು ಈತನ ಕೆಲಸ ಎಂದು ತಿಳಿದುಬಂದಿದೆ.
2023ರ ಅಕ್ಟೋಬರ್‌ನಲ್ಲಿ ದೆಹಲಿಯಲ್ಲಿ ಪೊಲೀಸರು ಇಸ್ಲಾಮಿಕ್ ಸ್ಟೇಟ್ ಉಗ್ರರ ಜಾಲವೊಂದನ್ನು ಭೇದಿಸಿದ್ದರು. ದೇಶಾದ್ಯಂತ ಇಂತಹ ಸಣ್ಣ ಗುಂಪುಗಳನ್ನು ರಚಿಸಿ, ಅವುಗಳಿಗೆ ಯುವಕರನ್ನು ನೇಮಿಸಿ, ಭಾರತದಲ್ಲಿ ಬಾಂಬ್ ದಾಳಿ ನಡೆಸುವುದು ಈತನ ಸಂಚಾಗಿದೆ. ರಾಮೇಶ್ವರಂ ಕೆಫೆಯಲ್ಲಿ ಮಾರ್ಚ್ 1ರಂದು ಸಂಭವಿಸಿದ ಸ್ಫೋಟದ ಹಿಂದೆಯೂ ಈತನ ಕೈವಾಡ ಇದೆ ಎಂಬುದಾಗಿ ಎನ್‌ಐಗೆ ಮಾಹಿತಿ ಲಭ್ಯವಾಗಿದೆ. ಹಾಗಾಗಿ, ಪ್ರಕರಣದ ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: Rameshwaram Cafe Blast: ಐಟಿ ಬಿಟಿ ಜನರೇ ರಾಮೇಶ್ವರಂ ಕೆಫೆ ಬಾಂಬರ್‌ಗಳ ಟಾರ್ಗೆಟ್ ಆಗಿದ್ದರು!