ಬೆಂಗಳೂರು: Acid Attack ಮಾಡಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಅತಿಯಾದ ಬುದ್ಧಿವಂತಿಕೆ ತೋರಿದ್ದೇ ಆ್ಯಸಿಡ್ ನಾಗೇಶನಿಗೆ ಮುಳುವಾಯಿತೆ? ಪೊಲೀಸರ ಪ್ರಾಥಮಿಕ ಹಂತದ ತನಿಖೆಯ ಪ್ರಕಾರ ಇದು ಹೌದು! ಅಂದು ಮಗಳನ್ನು ಅಪ್ಪ ಸಂತೋಷದಿಂದ ಆಫಿಸ್‌ಗೆ ಡ್ರಾಪ್ ಮಾಡಿದ್ದರು. ಆಫಿಸ್ ಗೆ ಇನ್ನೂ ಯಾರೂ ಬಂದಿರಲಿಲ್ಲ. ಹಾಗಾಗಿ ಯುವತಿ ಹೊರಗಡೆಯೇ ನಿಂತದ್ದಳು. ಕಿರಾತಕ ನಾಗ ಧುತ್ತನೆ ಅಲ್ಲಿಗೆ ಧಾವಿಸಿ ಯುವತಿಯ ಮುಖದ ಮೇಲೆ ಆ್ಯಸಿಡ್ ಎರಚಿದ್ದ.
ದಾಳಿ ನಡೆಸಿ ತಲೆಮರೆಸಿಕೊಂಡಿದ್ದ ಪಾಪಿ ನಾಗ, ಇಪ್ಪತ್ತು ದಿನಕ್ಕೂ ಮೊದಲೇ ತಯಾರಿ ನಡೆಸಿದ್ದ ಎಂಬ ಮಾಹಿತಿ ಲಭ್ಯವಾಗಿತ್ತು. ಸ್ನೇಹಿತರಿಗೆ ಈ ಬಗ್ಗೆ ಸುಳಿವು ಕೊಟ್ಟಿದ್ದ ನಾಗೇಶ್‌ನನ್ನು ಹುಡುಕಲು ಪೊಲೀಸರು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡಿದ್ದರು! ದೈವ ಭಕ್ತನಾಗಿರುವ ನಾಗೇಶ್ ಪ್ರವಾಸಕ್ಕೆ ಹೋಗುವುದಾಗಿ ಸ್ನೇಹಿತರ ಬಳಿ ಹೇಳಿಕೊಂಡಿದ್ದ. ಎಲ್ಲಿಗೆ ಹೋಗ್ತಿಯಪ್ಪ ಎಂದು ಪ್ರಶ್ನಿಸಿದಾಗ, ಟಿವಿ-ಪೇಪರ್‌ನಲ್ಲಿ ಬರುತ್ತೆ ನೋಡಿ ಎಂದು ಮಾರ್ಮಿಕವಾಗಿ ಹೇಳಿ ಹೊರಟು ಬಿಟ್ಟಿದ್ದ.
ಇದನ್ನೂ ಓದಿ |Acid Attack | ಪಾಪ ತೊಳೆಯಲು ದೇವಸ್ಥಾನದಲ್ಲಿ ಅಡಗಿದ್ದ ಆ್ಯಸಿಡ್ ನಾಗೇಶ್ ಅರೆಸ್ಟ್
ಸತತ 16 ದಿನಗಳ ಕಾಲ ನಾಗೇಶ್ ಪೊಲೀಸರನ್ನು ಯಾಮಾರಿಸಿದ್ದ. ಆತನನ್ನು ಹುಡುಕಲು ಪೊಲೀಸರು ಮಾಡಿದ ತಂತ್ರಗಳು ಒಂದೆರಡಲ್ಲ. Acid Attack ಪ್ರಕರಣವನ್ನು ಭೇದಿಸಲು ತಮ್ಮ ಹಳೇ ಬೇಸಿಕ್ ಪೊಲೀಸಿಂಗ್ ಮೊರೆ ಹೋಗಿ ನಾಗೇಶ್‌ನನ್ನು ಬಂಧಿಸಿದ್ದರು. ಚಾಲಾಕಿ ನಾಗೇಶ್ ತಮಿಳುನಾಡಿನ ತಿರುವಣ್ಣಾಮಲೈನಲ್ಲಿರುವ ಆಶ್ರಮದಲ್ಲಿ ಸ್ವಾಮಿಯ ವೇಷ ಧರಿಸಿ ತಲೆಮರೆಸಿಕೊಳ್ಳಲು ಪ್ಲ್ಯಾನ್ ಮಾಡಿದ್ದ. ಒಂದು ಹಂತದಲ್ಲಿ, ಕೋರ್ಟ್ ಗೆ ಹೋಗಿ ಎಲ್ಲ ವಿಚಾರ ಹೇಳಬೇಕು ಎಂದೂ ಯೋಚಿಸಿದ್ದ.
ನಂತರ ಆತ ಹೊರಟಿದ್ದು ತಿರುಪತಿಗೆ. ಬಸ್‌ನಲ್ಲೇ ಪ್ರಯಾಣ ಮಾಡಿದ ನಾಗ, ಮಧ್ಯದಲ್ಲೆ ಇಳಿದು ಸೀದಾ ಆಶ್ರಮಕ್ಕೆ ಕಾರ್ ಮೂಲಕ ಹೋಗಿದ್ದ. ತನ್ನ ಬೈಕ್ ರಸ್ತೆ ಮಧ್ಯೆಯೇ ಬಿಟ್ಟು ಹೋಗಿದ್ದ. ಪೊಲೀಸರು ಅದಾಗಲೇ ಎಲ್ಲಾ ಕಡೆ ಭಿತ್ತಿ ಪತ್ರಗಳನ್ನ ಹಂಚಿಕೊಂಡು ಬಂದಿದ್ದರು. ಹಾಗಾಗಿ ಕಾರಿನ ಚಾಲಕ ನಾಗೇಶ್ ನನ್ನು ಗುರುತಿಸಿ ಬಿಟ್ಟ. ತಕ್ಷಣ ಎಚ್ಚೆತ್ತ ಆತ ಸ್ಥಳೀಯ ಪೊಲೀಸ್ ಇನ್ ಸ್ಪೆಕ್ಟ್‌ರ್‌ಗೆ ಮಾಹಿತಿ ನೀಡಿದ.
ಸುಮಾರು 100 ಮಂದಿ ಪೊಲೀಸರು ಅದಾಗಲೇ ಇವನ ಹುಡುಕಾಟದಲ್ಲಿ ತೊಡಗಿದ್ದರು. ದೈವಭಕ್ತ ನಾಗ ದೇವರ ಮುಂದೆಯೇ ಪೊಲೀಸರಿಗೆ ಸಿಕ್ಕಿಹಾಕಿಕೊಂಡ. ಪೊಲೀಸರನ್ನು ಕಂಡು ತಬ್ಬಿಬ್ಬಾದ. ಹುಡುಗಿಯ ಮನೆಯವರು ಪ್ರಚೋದಿಸಿದ ಕಾರಣ ಆ್ಯಸಿಡ್ ಎರಚಿದೆ ಎಂದು ಹೇಳಿಕೊಂಡ. ಅವಳನ್ನ 7 ವರ್ಷದಿಂದ ಲವ್ ಮಾಡ್ತಿದ್ದೆ.. ಆದರೆ, ಮದುವೆ ಆಗು ಎಂದರೆ ಅಣ್ಣ ಅಂದು ಬಿಟ್ಟಳು. ಹೀಗಾಗಿ ನನಗೆ ಕೋಪ ಬಂದಿತ್ತು. ಅಂದೇ ಆ್ಯಸಿಡ್ ಖರೀದಿ ಮಾಡಿದ್ದೆ. ಆದ್ರೆ ಹಾಕಬೇಕು ಅನ್ಕೊಂಡಿರಲಿಲ್ಲ. ಹುಡುಗಿ ಮನೆಯವರು, ನಾಗೇಶ ಆ್ಯಸಿಡ್ ಹಾಕ್ತಾನಂತೆ ಅಂತ ಹುಯಿಲೆಬ್ಬಿಸಿದರು. ಹೇಗೂ ಇವರು ಅಪಪ್ರಚಾರ ಮಾಡ್ತಿದ್ದಾರೆ, ಹಾಗಾಗಿ ಆ್ಯಸಿಡ್ ಹಾಕಿಯೇ ಬಿಡೋಣ ಎಂದು ತೀರ್ಮಾನಿಸಿ ಈ ಕೃತ್ಯ ಎಸಗಿದೆ ಎಂದು ನಾಗೇಶ್ ಹೇಳಿಕೊಂಡಿದ್ದಾನೆ.
ಪೊಲೀಸರು ಬಂಧಿಸಿದ ಮೇಲೂ ನಾಗೇಶ ಪೊಲೀಸರನ್ನು ಯಾಮಾರಿಸಲು ನೋಡಿದ್ದ. ಮೂತ್ರ ವಿಸರ್ಜನೆಗಾಗಿ ವಾಹನ ನಿಲ್ಲಿಸಲು ಹೇಳಿ ಓಡಿ ಹೋಗಲು ಯತ್ನಿಸಿದ್ದ. ಇದಕ್ಕೆ ಪ್ರತಿಯಾಗಿ ಪೊಲೀಸರ ಗುಂಡೇಟು ತಿಂದ. ಈಗ ಶಿವ ಶಿವ ಅಂತ ದೇವರ ಸ್ಮರಣೆ ಮಾಡಿಕೊಂಡು ಆಸ್ಪತ್ರೆಯಲ್ಲಿ ಟ್ರೀಟ್‌ಮೆಂಟ್ ತೆಗೆದುಕೊಳ್ಳುತ್ತಿದ್ದಾನೆ. ಮುಂದೆ ಆತನಿಗೆ ತಕ್ಕ ಶಿಕ್ಷೆಯೂ ಕಾದಿದೆ.
ಇದನ್ನೂ ಓದಿ | Acid Attack | ಆ್ಯಸಿಡ್ ನಾಗೇಶ್ ಬಂಧನಕ್ಕೆ ಕೈಕೊಟ್ಟ Technology: ಪೊಲೀಸರ ಕೈಹಿಡಿದ ಓಲ್ಡ್ ಟೆಕ್ನಿಕ್