ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder case) ನಟ ದರ್ಶನ್ (Actor Darshan) ಜೈಲು ಸೇರಿ ಇಂದಿಗೆ (ಸೆ.29ಕ್ಕೆ) 100 ದಿನಗಳಾಗಿವೆ. ಪರಪ್ಪನ ಅಗ್ರಹಾರದಿಂದ ಸ್ಥಳಾಂತರಗೊಂಡು ಬಳ್ಳಾರಿ ಜೈಲಿನಲ್ಲಿ ಸೆರೆಮನೆ ವಾಸ ಅನುಭವಿಸಿದ ದರ್ಶನ್, ನೂರು ದಿನ ಎರಡು ಜೈಲಿನಲ್ಲಿ ಕಳೆದಿದ್ದು, ಈಗ ಜಾಮೀನು ಕೋರಿ ಕೋರ್ಟ್ ಮೊರೆ ಹೋಗಿದ್ದಾರೆ. ಹಾಗಾದರೆ ದರ್ಶನ್ ಪಾಲಿಗೆ ಕಳೆದ ನೂರು ದಿನ ಹೇಗಿತ್ತು?
ಗೆಳತಿ ಪವಿತ್ರಾಗೌಡಗೆ ಚಿತ್ರದುರ್ಗದ ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಕಳಿಸಿದ್ದಕ್ಕೆ ಸಿಟ್ಟಾದ ನಟ ದರ್ಶನ್ ಮತ್ತು ಗ್ಯಾಂಗ್ ಪಟ್ಟಣಗೆರೆ ಶೆಡ್‌ಗೆ ಕಿಡ್ನ್ಯಾಪ್ ಮಾಡಿಕೊಂಡು ಬಂದು ಹತ್ಯೆ ನಡೆಸಿದ್ದರು. ಬಳಿಕ ಮೃತದೇಹವನ್ನು ಸುಮನಹಳ್ಳಿ ಬ್ರಿಡ್ಜ್ ಸಮೀಪದ ರಾಜಕಾಲುವೆಯಲ್ಲಿ ಬಿಸಾಡಿ ಹೋಗಿದ್ದರು. ಈ ಸಂಬಂಧ ತನಿಖೆಗಿಳಿದಾಗ ನಟ ದರ್ಶನ್ ಕೈವಾಡ ಇರುವುದು ತಿಳಿದುಬಂದಿತ್ತು. ಹೀಗಾಗಿ ಕಳೆದ ಜೂನ್ 11ರಂದು ಕಾಮಾಕ್ಷಿಪಾಳ್ಯ ಪೊಲೀಸರು ನಟ ದರ್ಶನ್ ಬಂಧಿಸಿ ವಿಚಾರಣೆ ನಡೆಸಿದ್ದರು. ಸುಮಾರು 12 ದಿನ ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆ, ತನಿಖೆ ಎದುರಿಸಿದ್ದ ದರ್ಶನ್‌ನನ್ನು ಜೂನ್ 22 ರಂದು ಕೋರ್ಟ್ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿತ್ತು.
ಜೂನ್ 22ರಂದು ಕಾಮಾಕ್ಷಿಪಾಳ್ಯ ಪೊಲೀಸರು ದರ್ಶನ್‌ನ ಪರಪ್ಪನ ಅಗ್ರಹಾರ ಜೈಲಿಗೆ ಬಿಟ್ಟು ಬಂದಿದ್ದರು. ಅಂದಿನಿಂದ ನಟ ದರ್ಶನ್ ಜೈಲಿನಲ್ಲಿದ್ದು, ಸೆಂಚುರಿ ದಾಟಿದೆ. ಇನ್ನು ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ ಬಳಿಕ ರಾಜಾತಿಥ್ಯ ಪಡೆದ ವಿವಾದ ಕೂಡ ಎದುರಾಗಿತ್ತು. ರೌಡಿಶೀಟರ್‌ಗಳ ಜತೆಗೂಡಿ ರಾಜಾತಿಥ್ಯ ಪಡೆದ ಆರೋಪ ಎದುರಿಸಿದ ದರ್ಶನ್ ಮೇಲೆ ಎರಡು ಪ್ರತ್ಯೇಕ ಎಫ್ಐಆರ್‌ಗಳು ಕೂಡ ದಾಖಲಾಗಿತ್ತು.
ಇದನ್ನೂ ಓದಿ: Actor Darshan : ನಟ ದರ್ಶನ್ ಬಿಡುಗಡೆಗೆ ಮುಹೂರ್ತ ಫಿಕ್ಸ್; ಜನ್ಮ ಜಾತಕದ ಪ್ರಕಾರ ಶುಭ ಸಮಯ ಶುರು
ಜೈಲಿನ ಲಾನ್‌ನಲ್ಲಿ ಕುಳಿತು ಸಿಗರೇಟ್ ಸೇವನೆ ಹಾಗೂ ಆರೋಪಿ ಮೊಬೈಲ್‌ನಲ್ಲಿ ವಿಡಿಯೋ ಕರೆಯಲ್ಲಿ ಮಾತಾನಾಡಿದ್ದಕ್ಕೆ ದರ್ಶನ್ ವಿರುದ್ಧ ಎರಡು ಪ್ರತ್ಯೇಕ ಕೇಸ್ ದಾಖಲಿಸಿ ತನಿಖೆ ಕೂಡ ನಡೆಸಲಾಗಿತ್ತು. ಈ ಬೆನ್ನಲ್ಲೆ ಪೊಲೀಸರು ದರ್ಶನ್ ಮತ್ತು ಗ್ಯಾಂಗ್‌ನನ್ನು ಬೇರೆಬೇರೆ ಜೈಲುಗಳಿಗೆ ಸ್ಥಳಾಂತರ ಮಾಡಲು ಕೋರ್ಟ್‌ನಲ್ಲಿ ಮನವಿ ಮಾಡಿದ್ದರು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ದರ್ಶನ್‌ರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲು ಆದೇಶಿಸಿತ್ತು.
ರಾಜಾತಿಥ್ಯ ಆರೋಪ ಎದುರಿಸಿದ್ದ ದರ್ಶನ್ ಗ್ಯಾಂಗ್ ಆಗಸ್ಟ್ 29 ರಂದು ಬಳ್ಳಾರಿ ಜೈಲುಗೆ ಶಿಫ್ಟ್ ಮಾಡಲಾಗಿತ್ತು. ಕಳೆದ 32 ದಿನಗಳಿಂದ ದರ್ಶನ್ ಬಳ್ಳಾರಿ ಜೈಲಿನಲ್ಲಿ ಮೊಕ್ಕಾಂ ಹೂಡಿದ್ದಾರೆ. ಈ ನಡುವೆ ದರ್ಶನ್ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ಸಿಟಿ ಸಿವಿಲ್ ಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ನಡೆದಿದೆ. ಕಾಮಾಕ್ಷಿಪಾಳ್ಯ ಪೊಲೀಸರು ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಿದ್ದಾರೆ. ಇದೇ ಸೋಮವಾರ ಅಂದರೆ ಸೆ.30ರಂದು ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ನೂರು ದಿನಗಳ ನಂತರ ನಟ ದರ್ಶನ್‌ಗೆ ಜಾಮೀನು ಸಿಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ