ಬೆಂಗಳೂರು: ಕೃತಕವಾಗಿ ಯಾರಾದರೂ ರಸಗೊಬ್ಬರ,ಬಿತ್ತನೆ ಬೀಜ ಅಭಾವ ಸೃಷ್ಟಿಸಿದರೆ ಅಂಥವರ ವಿರುದ್ಧ ಮುಲಾಜಿಲ್ಲದೇ ಕ್ರಮಕೈಗೊಳ್ಳಲಾಗುವುದೆಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಎಚ್ಚರಿಸಿದ್ದಾರೆ. ಕೆಲವರು ಬೇಕಂತಲೇ ಕೃತಕವಾಗಿ ರಸಗೊಬ್ಬರ, ಬಿತ್ತನೆ ಬೀಜಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲು ಕೃತಕವಾಗಿ ಅಭಾವ ಸೃಷ್ಟಿಸುತ್ತಿರುವುದು ತಿಳಿದುಬಂದಿದೆ ಎಂದು ತಿಳಿಸಿದರು.
ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೃಷಿ ಸಚಿವ, ಸಕಾಲಕ್ಕೆ ರಸಗೊಬ್ಬರ ಬಿತ್ತನೆಬೀಜ ಕೊರತೆಯಾಗದಂತೆ ಹಂತಹಂತವಾಗಿ ನೋಡಿಕೊಳ್ಳಲಾಗುತ್ತಿದೆ. ಯಾವುದೇ ಕಾರಣಕ್ಕೂ ರೈತನಿಗೆ ತೊಂದರೆಯಾಗಲು ಬಿಡುವುದಿಲ್ಲ ಎಂದರು.
ರಾಜ್ಯ ಸರ್ಕಾರದ ರಿಯಾಯಿತಿ ಯೋಜನೆಯಡಿ ಭತ್ತ, ರಾಗಿ, ಜೋಳ, ಮೆಕ್ಕೆಜೋಳ, ಉದ್ದು, ಹೆಸರು, ಕಡಲೆ, ಅಲಸಂದೆ, ನೆಲಗಡಲೆ, ಸೋಯಾವರೆ, ಸೂರ್ಯಕಾಂತಿ, ಗೋದಿ, ಕುಸುಬೆ ಮತ್ತು ನವಣೆ ಬಿತ್ತನೆ ಬೀಜಗಳನ್ನು ರಾಜ್ಯದ ಎಲ್ಲಾ ವರ್ಗದ ರೈತರಿಗೆ ವಿತರಿಸಲಾಗುತ್ತಿದೆ. ಸಾಮಾನ್ಯ ರೈತರಿಗೆ 50% ವರೆಗೆ ಹಾಗೂ ಪರಿಶಿಷ್ಟ ವರ್ಗ ಮತ್ತು ಪರಿಶಿಷ್ಟ ಪಂಗಡದವರಿಗೆ 75% ವರೆಗೆ ರೀಯಾಯಿತಿ ದರದಲ್ಲಿ ಉತ್ತಮ ಗುಣಮಟ್ಟದ ಬಿತ್ತನೆ ಬೀಜ ಲಭ್ಯವಾಗುವಂತೆ ಮಾಡಲಾಗುತ್ತಿದೆ. ಈಗಾಗಲೇ ರೈತ ಸಂಪರ್ಕ ಕೇಂದ್ರಗಳಲ್ಲಿ 3505.8 ಕ್ವಿಂಟಾಲ್‌ಗಳಷ್ಟು ಬಿತ್ತನೆ ಬೀಜಗಳನ್ನು ವಿತರಣೆ ಮಾಡಲಾಗಿದ್ದು, 2185.8 ಕ್ವಿಂಟಾಲ್‌ಗಳಷ್ಟು ದಾಸ್ತಾನು ಇದೆ. ಬಿತ್ತನೆ ಬೀಜದ ಕೊರತೆಯಿರುವುದಿಲ್ಲ ಎಂದು ಭರವಸೆ ನೀಡಿದರು.
ಇದನ್ನೂ ಓದಿ | Explainer: ಶ್ರೀಲಂಕಾದಲ್ಲಿ ಮತ್ತೆ ಎಮರ್ಜೆನ್ಸಿ, ಹಸಿವು, ಪ್ರತಿಭಟನೆ, ಹಾಹಾಕಾರ
2021-22ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 12.67 ಲಕ್ಷ ರೈತರು ಬೆಳೆವಿಮೆಗಾಗಿ ನೊಂದಣಿ ಮಾಡಿಕೊಂಡಿದ್ದಾರೆ. ಈಗಾಗಲೇ ರಾಜ್ಯದ ವಿವಿಧೆಡೆ ಬಿತ್ತನೆ ವಿಫಲಗೊಂಡು ನಷ್ಟ ಅನುಭವಿಸಿದ ರೈತರಿಗೆ 2.10 ಲಕ್ಷ ರೈತರಿಗೆ ₹135,72 ಕೋಟಿ ಬೆಳೆವಿಮೆ ಪರಿಹಾರ ಮೊತ್ತ ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ. ಉಳಿದ ರೈತರ ಬೆಳೆ ವಿಮೆಯನ್ನು, ಇನ್ನು ಒಂದು ವಾರದೊಳಗೆ ಪರಿಹಾರ ಮೊತ್ತವನ್ನು ಇತ್ಯರ್ಥಪಡಿಸಲಾಗುವುದು ಎಂದು ತಿಳಿಸಿದರು.
2022-23ನೇ ಸಾಲಿನ ಮುಂಗಾರು ಹಂಗಾಮಿನ ವಿವರ ಈ ಕೆಳಗಿನಂತಿದೆ.
ಇದೇ ವೇಳೆ ಸಚಿವ ಬಿ.ಸಿ.ಪಟೀಲ್ ʼಪಕ್ಷದ ವರಿಷ್ಠರು ಅವರ ಕರ್ತವ್ಯ ಮಾಡುತ್ತಾರೆ. ಅಂತೆಯೇ ಪಕ್ಷದ ಆಜ್ಞೆಯನ್ನು ನಾವು ಪಾಲಿಸುತ್ತಾ ನಮ್ಮ ಕರ್ತವ್ಯ ನಿಭಾಯಿಸುತ್ತೇವೆ. ಪಕ್ಷದ ಸಂಘಟನೆ ಬೂತ್ ಮಟ್ಟದಲ್ಲಿ ಸಂಘಟನೆ ಚೆನ್ನಾಗಿದೆ. ನಮ್ಮ ಪ್ರಧಾನಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳ ಸಾಧನೆ, ಕಾರ್ಯವೈಖರಿ ನೋಡಿ ಬಹಳಷ್ಟು ಜನ ಬಿಜೆಪಿಯತ್ತ ವಾಲುತ್ತಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಹೇಳಲು ಸಾಧನೆಗಳು ಸಾಕಷ್ಟು ಇವೆʼ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ವಿರುದ್ಧ ಗುಡುಗಿದ ಬಿ.ಸಿ.ಪಾಟೀಲ್ ʼನಮ್ಮ ಪಕ್ಷದ ಸಾಧನೆಯ ಪ್ರಗತಿ ಹೇಳಲು ಸಾಕಷ್ಟು ಇದೆ. ಕಾಂಗ್ರೆಸ್‌ನವರಿಗೆ ಆರೋಪ ಮಾಡುವುದನ್ನು ಬಿಟ್ಟರೆ ಬೇರೇನೂ ಇಲ್ಲ. ಪ್ರಚಾರಕ್ಕಾಗಿ ಕಾಂಗ್ರೆಸ್‌ನವರು ಕೇವಲ ಆರೋಪ ಮಾಡುತ್ತಾರೆ. ಕೆಲವರಿಗೆ ಪ್ರಚಾರವೇ ಕಾಯಿಲೆ ಆಗಿದೆ. ಆರೋಪ ಮಾಡಿದ ಮಾತ್ರಕ್ಕೆ ಎಲ್ಲವೂ ಸತ್ಯವಾಗುವುದಿಲ್ಲ. ಬಿಜೆಪಿಯಲ್ಲಿ ಶಿಷ್ಟಾಚಾರ ವ್ಯವಸ್ಥೆಯಿದೆ. ಬಿಜೆಪಿ ಬಿಟ್ಟರೆ ಬೇರ್ಯಾವ ಪಕ್ಷದಲ್ಲೂ ಇಂತಹ ಶಿಸ್ತಿನ ವ್ಯವಸ್ಥೆ ಇಲ್ಲʼ ಎಂದು ಸಮರ್ಪಕವಾಗಿ ಉತ್ತರಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಬಿಜೆಪಿ ಪ್ರಧಾನಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಸ್. ಶಿವಪ್ರಸಾದ್ ಉಪಸ್ಥಿತರಿದ್ದರು.