ಬೆಂಗಳೂರು: ಮನಬಂದಂತೆ ಬಿಬಿಎಂಪಿ ವಾರ್ಡ್ ಮೀಸಲಾತಿ ಪ್ರಕಟಿಸಲಾಗಿದೆ ಎಂದು ಆರೋಪಿಸಿ ರಾಜ್ಯ ಸರ್ಕಾರದ ವಿರುದ್ಧ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ನಾಯಕರು ನಂತರ ವಿಕಾಸಸೌಧಕ್ಕೆ ತೆರಳಿ ನಗರಾಭಿವೃದ್ಧಿ ಕಚೇರಿ ಫಲಕವನ್ನು ʻಆರ್‌ಎಸ್‌ಎಸ್ ಕಚೇರಿ, ಬಿಜೆಪಿ ಕಚೇರಿʼ ಎಂದು ಬದಲಾಯಿಸಿದರು.
ಬಿಬಿಎಂಪಿ ವಾರ್ಡ್ ಮರುವಿಂಡಣೆ ವೇಳೆಯೇ ಬಿಜೆಪಿಗೆ ಅನುಕೂಲವಾಗುವಂತೆ ರೂಪಿಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಬುಧವಾರ ಸಂಜೆ ಪ್ರಕಟಿಸಿದ ವಾರ್ಡ್ ಮೀಸಲಾತಿ ಕರಡು ಅಧಿಸೂಚನೆಯಲ್ಲಿಯೂ ಇದೇ ರೀತಿ ವರ್ತನೆ ಮಾಡಲಾಗಿದೆ ಎಂದು ಕೆಪಿಸಿಸಿ ಕಚೇರಿಯಲ್ಲಿ ಶಾಸಕರಾದ ರಾಮಲಿಂಗಾರೆಡ್ಡಿ, ಕೃಷ್ಣ ಭೈರೇಗೌಡ, ದಿನೇಶ್ ಗುಂಡೂರಾವ್, ಜಮೀರ್ ಅಹ್ಮದ್ ಖಾನ್, ರಿಜ್ವಾನ್ ಅರ್ಷದ್, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ಸಂಸದ ಡಿ.ಕೆ. ಸುರೇಶ್ ಮತ್ತಿತರರು ಸುದ್ದಿಗೋಷ್ಠಿ ನಡೆಸಿದರು.
ಡಿ.ಕೆ. ಸುರೇಶ್ ಮಾತನಾಡುವ ಸಂದರ್ಭದಲ್ಲಿ, ಆರ್‌ಎಸ್‌ಎಸ್ ಕಚೇರಿ ಕೇಶವ ಕೃಪಾದಲ್ಲಿ ಹಾಗೂ ಬಿಜೆಪಿ ಕಚೇರಿಯಲ್ಲಿ ಸಿದ್ಧಪಡಿಸಿಟ್ಟುಕೊಂಡಿದ್ದ ಪಟ್ಟಿಯನ್ನು ನಗರಾಭಿವೃದ್ಧಿ ಇಲಾಖೆ ಅನುಮೋದಿಸಿದೆ. ನಗರಾಭಿವೃದ್ಧಿ ಕಚೇರಿ ಫಲಕವನ್ನು ಬಿಜೆಪಿ ಮತ್ತು ಆರ್‌ಎಸ್‌ಎಸ್ ಕಚೇರಿ ಎಂದು ಬದಲಿಸಬೇಕು ಎಂದರು. ಸುದ್ದಿಗೋಷ್ಠಿ ಮುಕ್ತಾಯದ ವೇಳೆಗೆ ಇದೇ ನಿರ್ಧಾರವನ್ನು ಕೈಗೊಂಡ ನಾಯಕರು ನೇರವಾಗಿ ವಿಕಾಸಸೌಧಕ್ಕೆ ತೆರಳಿದರು.
ಇದನ್ನೂ ಓದಿ | BBMP ಮೀಸಲಾತಿ ವಿರೋಧಿಸಿ UD ಕಚೇರಿಗೆ BJP ಕಚೇರಿ ಬೋರ್ಡ್: ಮುತ್ತಿಗೆಗೆ ಕಾಂಗ್ರೆಸ್ ನಿರ್ಧಾರ
ಶಾಸಕರು ಘೊಷಣೆ ಮಾಡುತ್ತಿದ್ದಂತೆಯೇ ವಿಧಾನಸೌಧ ಪ್ರವೇಶ ದ್ವಾರದಲ್ಲಿ ಭದ್ರತೆ ಹೆಚ್ಚಳ ಮಾಡಲಾಗಿತ್ತು. ಆದರೆ ಇದನ್ನು ಲೆಕ್ಕಿಸದೆ ಒಳಪ್ರವೇಶಿಸಿದ ಎಲ್ಲರೂ ನೇರವಾಗಿ ನಗರಾಭಿವೃದ್ಧಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಕಚೇರಿಗೆ ಮುತ್ತಿಗೆ ಹಾಕಿದರು.
ಈ ವೇಳೆಗೆ ಸಿದ್ಧಪಡಿಸಿಟ್ಟುಕೊಂಡಿದ್ದ, ʻಆರ್‌ಎಸ್‌ಎಸ್ ಕಚೇರಿ, ಬಿಜೆಪಿ ಕಚೇರಿʼ ಎಂಬ ಫಲಕವನ್ನು ರಾಕೇಶ್ ಸಿಂಗ್ ಹೆಸರಿದ್ದ ಫಲಕದ ಮೇಲೆ ಇರಿಸಿದರು. ಈ ವೇಳೆ ಪೊಲೀಸರು ತಡೆಯಲು ಪ್ರಯತ್ನ ನಡೆಸಿದರೂ ಸಾಧ್ಯವಾಗಲಿಲ್ಲ. ಒಮ್ಮೆ ಫಲಕವನ್ನು ಇರಿಸಿದ ನಂತರ ಪೊಲೀಸರು ಅದನ್ನು ಕಿತ್ತುಹಾಕಿದರು. ಈ ವೇಳೆಯಲ್ಲಿ ಪೊಲೀಸರು ಮತ್ತು ಕಾಂಗ್ರೆಸ್ ನಾಯಕರ ನಡುವೆ ಮಾತಿನ ಚಕಮಕಿ, ನೂಕಾಟ ತಳ್ಳಾಟಕ್ಕೆ ವಿಕಾಸಸೌಧ ಸಾಕ್ಷಿಯಾಯಿತು. ಸರ್ಕಾರದ ವಿರುದ್ಧ ಘೋಷಣೆ ಕೂಗಿ ಕೆಲಕಾಲ ಧರಣಿ ನಡೆಸಿದರು.
ಚುನಾವಣೆಗೆ ಸಿದ್ಧ: ಡಿ.ಕೆ. ಶಿವಕುಮಾರ್
ಬಿಬಿಎಂಪಿ ವಾರ್ಡ್ ಮೀಸಲಾತಿ ಕುರಿತು ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಬಿಜೆಪಿಗೆ, ಅದರ ಕಾರ್ಯಕರ್ತರಿಗೆ ಅನುಕೂಲ ಆಗುವಂತೆ ವಾರ್ಡ್ ಮೀಸಲಾತಿ ಮಾಡಿದ್ದಾರೆ. ಸಾಮಾಜಿಕ ನ್ಯಾಯಕ್ಕೆ ಅನ್ಯಾಯ ಮಾಡಿದ್ದಾರೆ. ನಮ್ಮ ಪಕ್ಷದ ನಾಯಕರಿಗೆ ಅವಕಾಶ ತಪ್ಪಿಸಲು ಹೀಗೆ ಮಾಡಿದ್ದಾರೆ. ಮಹಿಳೆಯರಿಗೆ ಬಿಜೆಪಿಯವರು ಅನ್ಯಾಯ ಮಾಡಿದ್ದಾರೆ. ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಇದರ ವಿರುದ್ಧ ಹೋರಾಟ ಮುಂದುವರಿಸುತ್ತೇವೆ. ಜತೆಗೆ ಕಾನೂನಾತ್ಮಕ ಹೋರಾಟವನ್ನೂ ಮಾಡುತ್ತೇವೆ. ಮೋಸಕ್ಕೆ ಮತ್ತೊಂದು ಹೆಸರೇ ಬಿಜೆಪಿ. ಇಷ್ಟೆಲ್ಲ ಹೋರಾಟದ ನಡುವೆಯೂ ಚುನಾವಣೆಗೆ ನಾವು ಸಿದ್ಧರಿದ್ದೇವೆ ಎಂದರು.
ಇದನ್ನೂ ಓದಿ | BBMP ಮೀಸಲಾತಿ ಎಡವಟ್ಟು: ಕಾಂಗ್ರೆಸ್ ಕ್ಷೇತ್ರದಲ್ಲಿ 72%, BJP ಕ್ಷೇತ್ರದಲ್ಲಿ 34% ಮಹಿಳಾ ಮೀಸಲು