ಬೆಂಗಳೂರು: ಈ ವರ್ಷದ ದಸರಾ ವೇಳೆಗೆ ಉದ್ಘಾಟನೆಯಾಗುತ್ತದೆ ಎಂಬ ನಿರೀಕ್ಷೆ ಮೂಡಿಸಿದ್ದ ಮಹತ್ವಾಕಾಂಕ್ಷಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಸದ್ಯಕ್ಕಂತೂ ಲೋಕಾರ್ಪಣೆ ಆಗುವುದಿಲ್ಲ. ಈ ಕುರಿತು ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಇಲಾಖೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಬೆಂಗಳೂರಿಗೆ ಆಗಮಿಸಿದ್ದ ಕೇಂದ್ರ ಭೂ ಸಂಪರ್ಕ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಸಭೆ ನಡೆಸಿದ ನಂತರ ಸುದ್ದಿಗಾರರಿಗೆ ಬೊಮ್ಮಾಯಿ ಮಾಹಿತಿ ನೀಡಿದರು.
ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ವೇ ಕುರಿತು ಮಾಹಿತಿ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ, ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ವೇ ಕಾಮಗಾರಿ ಇನ್ನಷ್ಟು ವೇಗವಾಗಿ ಪೂರ್ಣಗೊಳ್ಳಬೇಕು ಎಂದು ಚರ್ಚೆ ನಡೆದಿದೆ. ಜತೆಗೆ, ಅಲ್ಲಿನ ಮಳೆನೀರು ಚರಂಡಿ ವ್ಯವಸ್ಥೆಗಳ ತೊಡಕುಗಳ ಬಗ್ಗೆ ಹೊಸದಾಗಿ ಗೊತ್ತಾಗಿದೆ.
ಎಲ್ಲೆಲ್ಲಿ ನೀರು ನಿಂತಿದೆ ಹಾಗೂ ಎಲ್ಲೆಲ್ಲಿ ನೀರು ನಿಲ್ಲಬಹುದೆಂದು ತಿಳಿದುಕೊಂಡು ಒಳಚರಂಡಿ ವ್ಯವಸ್ಥೆ ನಿರ್ಮಾಣಕ್ಕೆ ಹೊಸ ಯೋಜನೆ ತಯಾರಿಸಲು ಸಚಿವರು ಸೂಚಿಸಿದ್ದಾರೆ. ಎಕ್ಸಿಟ್ ಪಾಯಿಂಟ್‌ಗಳ ಬಗ್ಗೆ ಬೇಡಿಕೆಯಿದ್ದು, ಈ ಕುರಿತೂ ಚರ್ಚಿಸುವುದಾಗಿ ತಿಳಿಸಿದ್ದಾರೆ. ಇದು ತಾಂತ್ರಿಕ ಯೋಜನೆಯಾಗಿದ್ದು, ಮುಂದಿನ ದಿನಗಳಲ್ಲಿ ಮಾಡುವುದಾಗಿ ತಿಳಿಸಿದ್ದಾರೆ ಎಂದರು.
ಯಾವಾಗ ಉದ್ಘಾಟನೆ ಆಗಬಹುದು ಎಂಬ ಪ್ರಶ್ನೆಗ ಉತ್ತರಿಸಿದ ಸಿಎಂ ಬೊಮ್ಮಾಯಿ, ಈಗಲೇ ಉದ್ಘಾಟನೆ ದಿನಾಂಕ ಹೇಳಲು ಸಾಧ್ಯವಿಲ್ಲ. ಇನ್ನೂ ಸಾಕಷ್ಟು ಕೆಲಸಗಳು ಬಾಕಿ ಉಳಿದಿವೆ. ಭೂಸ್ವಾಧೀನ ಕುರಿತು ಸಮಸ್ಯೆಗಳಿವೆ ಎಂದು ತಿಳಿಸಿದರು.
ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಭಾರೀ ಪ್ರಮಾಣದ ನೀರು ನಿಂತಿತ್ತು. ಸುತ್ತಮುತ್ತಲಿನ ಜಮೀನುಗಳಿಗೂ ಅಭೂತಪೂರ್ವವೆಂಬಂತೆ ನೀರು ನುಗ್ಗಿದ್ದರಿಂದ ಸಾಕಷ್ಟು ಬೆಳೆ ಹಾನಿಯಾಗಿತ್ತು, ಇದಕ್ಕೆ ಹೆದ್ದಾರಿಯಲ್ಲಿನ ಅವೈಜ್ಞಾನಿಕ ಕಾಮಗಾರಿಯೇ ಕಾರಣ ಎಂದು ಸುತ್ತಮಜತ್ತಲಿನ ಗ್ರಾಮಸ್ಥರು ದೂರಿದ್ದರು.
ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಯವರು ಕರೆ ಮಾಡಿದ ಹಿನ್ನೆಲೆಯಲ್ಲಿ ಆಗಸ್ಟ್ 29ರಂದು ಸಿಎಂ ಬಸವರಾಜ ಬೊಮ್ಮಾಯಿ ತೆರಳೀ ಪ್ರದೇಶದಲ್ಲಿ ಪರಿಶೀಲನೆ ನಡೆಸಿದ್ದರು.
ಇದನ್ನೂ ಓದಿ | ಮುಂದಿನ ದಸರಾದೊಳಗೆ ಬೆಂಗಳೂರು- ಮೈಸೂರು ದಶಪಥ ಪೂರ್ಣ: ಪ್ರತಾಪ್‌ಸಿಂಹ
ರಾಷ್ಟ್ರೀಯ ಹೆದ್ದಾರಿಗಳ ಬಗ್ಗೆ ಪ್ರೋತ್ಸಾಹದಾಯಕ ಚರ್ಚೆ
ಪೂನಾ – ಬೆಂಗಳೂರು ಹೆದ್ದಾರಿಯಿಂದ ಚನ್ನೈ ರಾಷ್ಟ್ರೀಯ ಹೆದ್ದಾರಿ ಬಳಿ ತಮಿಳು ನಾಡು ಮೂಲಕ ಹಾದುಹೋಗಿ ವಾಪಸ್ಸು ಬರುತ್ತದೆ. ಈ ಮಧ್ಯೆ 40-50ಕಿಮೀ ನೇರವಾಗಿ ಸಂಪರ್ಕ ಮಾಡಲು ಸಾಧ್ಯವಿದೆ. ಹೊಸದಾಗಿ ಈ ಅಂಶವನ್ನೂ ಅಳವಡಿಸಿಕೊಳ್ಳಬೇಕೆಂಬ ವಿಚಾರವನ್ನು ತಿಳಿಸಲಾಗಿದೆ. ಅದನ್ನು ಪರಿಶೀಲಿಸುವುದಾಗಿ ಕೇಂದ್ರ ಸಚಿವರು ತಿಳಿಸಿದ್ದಾರೆ ಎಂದು ಸಿಎಂ ಹೇಳಿದ್ದಾರೆ.
ಕೇಂದ್ರ ರಸ್ತೆ ನಿಧಿಯಡಿ ನಿಯಮಿತ ಕಾಮಗಾರಿಗಳು, ಅದಕ್ಕೆ ಅಗತ್ಯವಿರುವ ಅನುದಾನ, ಹೆಚ್ಚಿನ ಹೆದ್ದಾರಿಗಳನ್ನು ಘೋಷಿಸುವುದರ ಬಗ್ಗೆ ಈಗಾಗಲೇ ಪತ್ರವನ್ನು ಕಳುಹಿಸಲಾಗಿತ್ತು. ಸಚಿವರು ಈ ಬಗ್ಗೆ ಸಕಾರಾತ್ಮಕವಾಗಿದ್ದಾರೆ. ಶುಕ್ರವಾರ ಬೆಳಗ್ಗೆ ಮತ್ತೊಮ್ಮೆ ಈ ಬಗ್ಗೆ ಸಭೆ ನಡೆಸಿ ಕೂಡಲೇ ಏನು ಮಾಡಲು ಸಾಧ್ಯ, ಎಲ್ಲಾ ಏಜೆನ್ಸಿಗಳು, ಸರ್ಕಾರದ ಪ್ರಾಧಿಕಾರಗಳು ಹೇಗೆ ಕೆಲಸ ಮಾಡಲು ಸಾಧ್ಯ? ಕೇಂದ್ರ ಸರ್ಕಾರದಿಂದ ಏನು ಮಾಡಲು ಸಾಧ್ಯ ಎನ್ನುವ ಬಗ್ಗೆ ಸ್ಥೂಲವಾಗಿ ಚರ್ಚಿಸಲಾಗುವುದು ಎಂದು ನಿತಿನ್ ಗಡ್ಕರಿ ಅವರು ಭರವಸೆ ನೀಡಿದ್ದಾರೆ. ಚರ್ಚೆ ಬಹಳಷ್ಟು ಪ್ರೋತ್ಸಾಹದಾಯಕವಾಗಿದೆ. ಬಹಳಷ್ಟು ಸಮಸ್ಯೆಗಳಿಗೆ ಪರಿಹಾರ ರೂಪದಲ್ಲಿ ಚರ್ಚೆ ಮಾಡಲಾಗಿದೆ ಎಂದರು.
ಇದನ್ನೂ ಓದಿ | Rain News | ರಾಮನಗರದಲ್ಲಿ ಮಳೆ ಅಬ್ಬರ: ಅರ್ಕಾವತಿ ನದಿ ರಭಸಕ್ಕೆ ಕೊಚ್ಚಿಹೋದ ಹರಿಸಂದ್ರ ಸೇತುವೆ