ಬೆಂಗಳೂರು: ಭಯೋತ್ಪಾದನೆ ಚಟುವಟಿಕೆ ಹಿನ್ನೆಲೆಯಲ್ಲಿ ಬೆಂಗಳೂರು ಸಿಸಿಬಿ ಪೊಲೀಸರಿಂದ ಬಂಧಿತನಾಗಿರುವ ಶಂಕಿತ ಉಗ್ರ ಅಸ್ಸಾಂ ಮೂಲದ ಅಖ್ತರ್ ಹುಸೇನ್ ತೀವ್ರ ವಿಚಾರಣೆ ಮುಂದುವರಿದಿದೆ. ತನ್ನ ಸ್ನೇಹಿತರು ಹಾಗೂ ಭಯೋತ್ಪಾದನೆ ವಿಚಾರವಾಗಿ ಸಂಪೂರ್ಣ ಅಸ್ಸಾಮಿ ಭಾಷೆಯಲ್ಲೇ ಸಂವಹನ ನಡೆಸಿರುವ ಶಂಕಿತನ ವಿಚಾರಣೆಯನ್ನು ಮುಂದುವರಿಸಲು ಪೊಲೀಸರಿಗೆ ಭಾಷೆಯೇ ತೊಡಕಾಗಿದೆ.
ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಲೇ, ಉಗ್ರ ಚಟುವಟಿಕೆಯಲ್ಲಿ ಶಾಮೀಲಾಗಿದ್ದವನನ್ನು ಸೋಮವಾರ ಸಿಸಿಬಿ ಪೊಲೀಸರು ಬಂಧಿಸಿದ್ದರು. ಆತನ ಸಂಪರ್ಕದಲ್ಲಿದ್ದ ಜುಬಾ ಎಂಬಾತನನ್ನ ಸೋಮವಾರ ತಡರಾತ್ರಿ ತಮಿಳುನಾಡಿನಿಂದ ಕರೆ ತರಲಾಗಿದೆ. ಜಿಹಾದಿ ಸಂಬಂಧಿತ ಪೋಸ್ಟ್‌ಗಳು ಹಾಗೂ ಕಾಶ್ಮೀರ ವಿಚಾರವಾಗಿ ಪ್ರಚೋದನಕಾರಿ ಸಂದೇಶಗಳನ್ನು ಅಖ್ತರ್ ರವಾನೆ ಮಾಡುತ್ತಿದ್ದ. ಸಾಕಷ್ಟು ಯುವಕರನ್ನು ಉಗ್ರ ಸಂಘಟನೆಗೆ ಸೇರಲು ಪ್ರೇರೇಪಿಸುತ್ತಿದ್ದ ಎಂದು ಹೇಳಲಾಗಿದೆ. ತೆಲಂಗಾಣದ ಆಕ್ಟೋಪಸ್ ತಂಡದ ಪೋಸ್ಟ್‌ಗಳ ಬಗ್ಗೆ ನಿರಂತರವಾಗಿ ಪೊಲೀಸರು ಕಣ್ಣಿಟ್ಟಿದ್ದರು. ಪೋಸ್ಟ್‌ಗಳನ್ನು ತೀವ್ರ ಮಾನಿಟರಿಂಗ್ ಮಾಡಿದ ನಂತರ ಅಖ್ತರ್‌ನ ಭಯೋತ್ಪಾದನೆ ಲಿಂಕ್ ಸಾಬೀತಾಗಿತ್ತು.
ಸತತ ಎರಡು ತಿಂಗಳು ಈತನ ಚಲನವಲನಗಳ ಮೇಲೆ ನಿಗಾ ವಹಿಸಿ, ಬಂಧಿಸುವಲ್ಲಿ ಸಫಲರಾಗಿದ್ದಾರೆ. ಸೋಮವಾರ ಬಂಧಿಸಲಾಗಿರುವ ಮತ್ತೊಬ್ಬ ಶಂಕಿತ ಜುಬಾನನ್ನು ವಿಚಾರಣೆ ನಡೆಸುವಾಗ ಮತ್ತಷ್ಟು ಮಹತ್ವದ ಸಂಗತಿಗಳು ಹೊರಬೀಳುವ ನಿರೀಕ್ಷೆಯಲ್ಲಿ ಪೊಲೀಸರಿದ್ದಾರೆ.
ಅಖ್ತರ್ ಹುಸೇನ್ ಮೊಬೈಲ್ ಚಾಟ್
ತನ್ನ ಸ್ನೇಹಿತರ ಜತೆಯಷ್ಟೆ ಅಲ್ಲದೆ, ಅಲ್‌ಖೈದಾ ಸಂಘಟನೆಯ ಜತೆಗೂ ಅಸ್ಸಾಮಿ ಭಾಷೆಯಲ್ಲೇ ಚಾಟ್ ಮಾಡುತ್ತಿದ್ದ. ಈತನ ಮೊಬೈಲ್ ವಶಕ್ಕೆ ಪಡೆದ ಪೊಲೀಸರಿಗೆ ಇದರಲ್ಲಿ ಏನಿದೆಯೆಂದು ಅರ್ಥ ಮಾಡಿಕೊಳ್ಳುವುದೇ ತಲೆಬಿಸಿಯಾಗಿತ್ತು. ಕೊನೆಗೆ ಅಸ್ಸಾಮಿ ಭಾಷಾ ಪರಿಣಿತರೊಬ್ಬರನ್ನು ಹುಡುಕಿ ಕರೆತಂದು ಕೆಲಸವನ್ನು ಸುಲಭವಾಗಿಸಿಕೊಂಡಿದ್ದರು. ಆದರೂ ಇನ್ನೂ ಆನೇಕ ಕಡೆಗಳಲ್ಲಿ ಅಸ್ಸಾಮಿ ಭಾಷೆಯ ಸಂವಹನ ನಡೆಸಿರುವುದು ಪೊಲೀಸರಿಗೆ ಅದನ್ನು ತಿಳಿಯುವುದು, ಅದರಲ್ಲಿರುವ ಗೂಢಾರ್ಥಗಳನ್ನು ಅರಿಯುವುದು ಸವಾಲಾಗಿದೆ.
ಇದನ್ನೂ ಓದಿ | Terrorist Arrest | ಬೆಂಗಳೂರಲ್ಲಿ ಶಂಕಿತ ಉಗ್ರ ವಶಕ್ಕೆ; ಉತ್ತರ ಭಾರತದಿಂದ ಬಂದು ತಲೆಮರೆಸಿಕೊಂಡಿದ್ದ!
ತಿಲಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಿಟಿಪಿ ಪ್ರದೇಶದ ಕಟ್ಟಡದ 3ನೇ ಮಹಡಿಯಲ್ಲಿ ಅಖ್ತರ್ ಹುಸೇನ್ ವಾಸವಾಗಿದ್ದ. ರೂಮ್ನಲ್ಲಿದ್ದ ಇತರ ಮೂವರು ಯುವಕರು ಫುಡ್ ಡೆಲಿವರಿ ಕೆಲಸ ಮಾಡುತ್ತಿದ್ದರು. ನಾಲ್ವರೂ ರಾತ್ರಿ ವೇಳೆ ಮಾತ್ರ ಓಡಾಟ ನಡೆಸುತ್ತಿದ್ದು, ಸ್ಥಳೀಯರೊಂದಿಗೆ ಸಂಪರ್ಕದಲ್ಲಿ ಇರಲಿಲ್ಲ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ | Terrorist arrest | ಒಂದೂವರೆ ವರ್ಷದಿಂದ ಬೆಂಗಳೂರಿನಲ್ಲಿದ್ದ ಶಂಕಿತ ಉಗ್ರ