Site icon Vistara News

BBMP Election | ಬೆಂಕಿ ಬಿದ್ದ ಮೇಲೆ ಬಾವಿ ತೋಡಲು ಪ್ರಾರಂಭಿಸಿದ BJP

BJP Preparing for BBMP Election in 2022

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯನ್ನು (BBMP Election) ಮುಂದಿನ ವಿಧಾನಸಭೆ ಚುನಾವಣೆ ಮುಗಿಯುವವರೆಗೂ ಮುಂದೂಡಲು ರಾಜ್ಯ ಸರ್ಕಾರದ ಜತೆಗೂಡಿ ಎಲ್ಲ ರಾಜಕೀಯ ಪಕ್ಷಗಳೂ ನಡೆಸಿದ ʼಸಾಮೂಹಿಕ ಪ್ರಯತ್ನʼಕ್ಕೆ ಸುಪ್ರೀಂಕೋರ್ಟ್‌ ಬ್ರೇಕ್‌ ಹಾಕಿದ ಬೆನ್ನಲ್ಲೇ ಇದೀಗ ಅನಿವಾರ್ಯವಾಗಿ ಚುನಾವಣೆಗೆ ಸಿದ್ಧತೆ ನಡೆಯುತ್ತಿದೆ.

ಈಗಾಗಲೆ ಪ್ರತಿಪಕ್ಷ ಕಾಂಗ್ರೆಸ್‌ ಒಂದೆರಡು ಸಭೆಗಳನ್ನು ಬೆಂಗಳೂರು ಕುರಿತು ನಡೆಸಿದೆ. ಇದೀಗ ಬಿಜೆಪಿಯೂ ಸಿದ್ಧತೆಗೆ ಚಾಲನೆ ನೀಡಿದೆ. ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯ ಬಿಜೆಪಿ ಕಚೇರಿಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಈ ಕುರಿತು ಅನೇಕ ವಿಚಾರ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗಿದೆ.

ಇದನ್ನೂ ಓದಿ | BBMP ELECTION | ರಾಜ್ಯ ಸರ್ಕಾರಕ್ಕೆ ವಾರ್ಡ್‌ ಮರುವಿಂಗಡಣೆ ಪಟ್ಟಿ ಸಲ್ಲಿಸಿದ ಬಿಬಿಎಂಪಿ

ಬಿಬಿಎಂಪಿಗೆ ಈ ವೇಳೆಗಾಗಲೆ ಚುನಾವಣೆ ನಡೆದು ಒಂದು ವರ್ಷಕ್ಕಿಂತ ಹೆಚ್ಚಾಗಬೇಕಿತ್ತು. 2020ರ ಸೆಪ್ಟೆಂಬರ್‌ 30ಕ್ಕೇ ಬಿಬಿಎಂಪಿ ಅವಧಿ ಪೂರ್ಣಗೊಂಡಿದೆ. ಅವಧಿ ಮುಕ್ತಾಯಕ್ಕೂ ಮುನ್ನವೇ ರಾಜ್ಯ ಚುನಾವಣಾ ಆಯೋಗ ರಾಜ್ಯ ಸರಕಾರಕ್ಕೆ ಅನೇಕ ಪತ್ರ ಬರೆದಿತ್ತು. ಆದರೆ ಮೀಸಲು ನಿಗದಿ, ಕ್ಷೇತ್ರ ಮರುವಿಂಗಡಣೆಗೆ ರಾಜ್ಯ ಸರ್ಕಾರ ತಲೆ ಕೆಡಿಸಿಕೊಳ್ಳದೆ ಈ ಪತ್ರಗಳನ್ನು ಕಡೆಗಣಿಸಿತ್ತು. ಈ ಕುರಿತು ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿ, ರಾಜ್ಯ ಸರಕಾರಕ್ಕೆ ನ್ಯಾಯಾಲಯ ಛೀಮಾರಿ ಹಾಕಿತ್ತು. ಎರಡು ತಿಂಗಳೊಳಗಾಗಿ ಚುನಾವಣೆ ನಡೆಸುವಂತೆ 2021ರಲ್ಲಿ ಆದೇಶಿಸಿತು.

ಆದರೆ ಈ ಆದೇಶವನ್ನೂ ಬೈಪಾಸ್‌ ಮಾಡಲು ರಾಜ್ಯ ಸರ್ಕಾರ ಮುಂದಾಯಿತು. ಈಗಿನ ವಾರ್ಡ್‌ ಮರುವಿಂಗಡಣೆ ಹಳೆಯ ಜನಸಂಖ್ಯಾ ಸಮೀಕ್ಷೆಗೆ ಆಧಾರದಲ್ಲಿ ನಡೆದಿದ್ದು, ಬೆಂಗಳೂರಿನಲ್ಲಿನ ಪ್ರಸ್ತುತ ಜನಸಂಖ್ಯೆ ಆಧಾರದಲ್ಲಿ ವಾರ್ಡ್‌ ಮರು ವಿಂಗಡಣೆ ಮಾಡಬೇಕೆಂದು ಶಾಸಕ ರಘು ನೇತೃತ್ವದಲ್ಲಿ ಸಮಿತಿ ರಚಿಸಿತು. ಈ ಸಮಿತಿಯು ಸಂಖ್ಯಾ ಶಾಸ್ತ್ರದ ಆಧಾರದಲ್ಲಿ ಬೆಂಗಳೂರಿಗೆ 243 ವಾರ್ಡ್‌ ನಿಗದಿಪಡಿಸಿತು. ಇದನ್ನಾಧರಿಸಿ ಹೈಕೋರ್ಟ್‌ನಲ್ಲಿ ನೀಡಿದ್ದ ಆದೇಶದ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ತಡೆಯಾಜ್ಞೆ ತರಲಾಯಿತು. ಇದೇ ವೇಳೆ ಮಧ್ಯಪ್ರದೇಶದ ಪ್ರಕರಣವೊಂದರ ಕುರಿತಂತೆ ಆದೇಶ ನೀಡಿದ ಸುಪ್ರೀಂಕೋರ್ಟ್‌, ದೇಶದೆ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನೂ ನಡೆಸುವಂತೆ ಆದೇಶಿಸಿತು.

ಇದರ ನಂತರ ಬಿಬಿಎಂಪಿ ಕುರಿತ ಪ್ರಕರಣದಲ್ಲೂ, ಕ್ಷೇತ್ರ ಮರುವಿಂಗಡನೆ, ಮೀಸಲಾತಿ ಹಂಚಿಕೆ ಪ್ರಕ್ರಿಯೆಯನ್ನು 8 ವಾರದೊಳಗೆ ಪೂರ್ಣಗೊಳಿಸಬೇಕು ಎಂದು ರಾಜ್ಯ ಸರ್ಕಾರ ರಚಿಸಿದ್ದ ಮರುವಿಂಗಡನಾ ಆಯೋಗಕ್ಕೆ ಸುಪ್ರೀಂಕೋರ್ಟ್‌ ಮೇ 20ರಂದು ಸೂಚಿಸಿತು. ಅದರ ಪ್ರಕಾರ ಇನ್ನು ನಾಲ್ಕೈದು ವಾರದಲ್ಲಿ ಮರುವಿಂಗಡಣೆ ಮುಗಿಯಬೇಕಿದೆ. ಚುನಾವಣೆಯನ್ನು ಮುಂದೂಡಲು ಮೇಲ್ನೋಟಕ್ಕೆ ಬಿಜೆಪಿ ಮಾತ್ರ ಪ್ರಯತ್ನಿಸಿತು ಎನ್ನುವಂತೆ ಕಾಣುತ್ತದೆ. ಆದರೆ ಎಲ್ಲ ಪಕ್ಷಗಳಿಗೂ ಈ ಮುಂದೂಡಿಕೆ ಅಗತ್ಯವಿತ್ತು.

15 ದಿನಕ್ಕೊಮ್ಮೆ ಸಭೆ

ಇದೀಗ ಚುನಾವಣೆ ಅನಿವಾರ್ಯ ಎಂದರಿತ ಸರ್ಕಾರ, ಈ ಕುರಿತು ಗಂಭೀರವಾಗಿ ಚಿಂತನೆ ನಡೆಸಿದೆ. ಒಂದು ಕಡೆ ಬಿಜೆಪಿ ಸಂಗಟನೆಯ ವತಿಯಿಂದ ಬೂತ್‌ ಸಮಿತಿಗಳ ಬಲವರ್ಧನೆಗೆ ಪ್ರಯತ್ನ ಆರಂಭಿಸಲಾಗಿದೆ. ಇನ್ನೊಂದೆಡೆ, ಬೆಂಗಳೂರಿನ ಸಚಿವರು, ಶಾಸಕರ ಜತೆಗೆ ಸಿಎಂ ಬೊಮ್ಮಾಯಿ ಗುರುವಾರ ಸಭೆ ನಡೆಸಿದರು. ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಸಹ ಉಪಸ್ಥಿತರಿದ್ದರು. ರಾಜ್ಯ ಬಿಜೆಪಿ ಕಚೇರಿಯಲ್ಲಿ ಸಭೆ ನಂತರ ಮಾತನಾಡಿದ ಬೊಮ್ಮಾಯಿ, ಬಿಬಿಎಂಪಿ ಚುನಾವಣೆಗೆ ಈಗಿನಿಂದಲೇ ತಯಾರಿ ಮಾಡಬೇಕು ಎಂದು ತೀರ್ಮಾನಿಸಲಾಗಿದೆ.

ಈಗಾಗಲೆ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡಿ, ಆದಷ್ಟೂ ಬೇಗನೆ ಕಾಮಗಾರಿಗಳನ್ನು ಮುಗಿಸಬೇಕು. ಬೆಂಗಳೂರಿಗೇ ಒಂದು ಪ್ರತ್ಯೇಕ ವಿಷನ್‌ ಡಾಕ್ಯುಮೆಂಟ್‌ ರಚಿಸಬೇಕು. ಅದಕ್ಕಾಗಿ ತಜ್ಞರ ಸಮಿತಿ ರಚಿಸುವುದರ ಜತೆಗೆ ಪ್ರತಿ 15 ದಿನಕ್ಕೊಮ್ಮೆ ಸಭೆ ಸೇರಲು ನಿರ್ಧರಿಸಲಾಗಿದೆ. ಜನಾಭಿಪ್ರಾಐವನ್ನು ಪಡೆದು ವಿಷನ್‌ ಡಾಕ್ಯುಮೆಂಟ್‌ ರಚಿಸಲಾಗುತ್ತದೆ, ಇದಕ್ಕೆ ಶಾಸಕರು ಹಾಗೂ ಸಚಿವರ ಸಲಹೆಯನ್ನೂ ಪಡೆಯಲಾಗುತ್ತದೆ ಎಂದರು.

ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ನಗರೋತ್ಥಾನ ಕೆಲಸ, ಮಳೆ ಹಾನಿ ಪ್ರದೇಶ, ಸಬರ್ಬನ್‌ ಕಾರ್ಯ, ಮೆಟ್ರೊ ಎರಡನೇ ಹಂತವನ್ನು ಒಂದು ವರ್ಷಕ್ಕೆ ಮುನ್ನವೇ ಮುಕ್ತಾಯಗೊಳಿಸಲು ಪ್ರಯತ್ನಿಸುತ್ತಿದ್ದೇವೆ. ಮುಖ್ಯ ಚರಂಡಿ ನಿರ್ಮಾಣ ಕಾರ್ಯಗಳಿಗೂ ಆದೇಶ ನೀಡಲಾಗಿದೆ. 75 ಪಾರ್ಕ್ ಮತ್ತು ಕೆರೆಗಳ ಅಭಿವೃದ್ಧಿಗೆ ಈಗಾಗಲೇ ಆದೇಶವನ್ನು ನೀಡಲಾಗಿದೆ. ಬೆಂಗಳೂರಿಗೆ ಹಲವು ಸೌಲಭ್ಯಗಳನ್ನು ನೀಡಲು ಆಡಳಿತಾತ್ಮಕ ಅನುಮೋದನೆಗಳನ್ನು ನೀಡಲಾಗಿದೆ ಎಂದರು.

ಇದನ್ನೂ ಓದಿ | ಆದ್ಯತೆ ಮೇರೆಗೆ ತ್ವರಿತಗತಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಿ: ಅಧಿಕಾರಿಗಳಿಗೆ BBMP ಮುಖ್ಯ ಆಯುಕ್ತರ ಸೂಚನೆ

Exit mobile version