Site icon Vistara News

BBMP ಚುನಾವಣೆ ಸಿದ್ಧತೆಗೆ ಆರಂಭದಲ್ಲೇ ವಿಘ್ನ: ಬಿಜೆಪಿ ಸಭೆಯಿಂದ ಹೊರನಡೆದ ಸಚಿವ ಅಶ್ವತ್ಥನಾರಾಯಣ

BJP Meeting BBMP

ಬೆಂಗಳೂರು: ಎರಡು ವರ್ಷದಿಂದ ನನೆಗುದಿಗೆ ಬಿದ್ದಿರುವ ಬಿಬಿಎಂಪಿ ಚುನಾವಣೆಗಳು ನಡೆಯುವುದು ಬಹುತೇಕ ಖಚಿತ ಎನ್ನುವಂತೆ ಬಿಜೆಪಿ ಗಂಭೀರತೆ ಪಡೆದುಕೊಂಡಿದ್ದು, ಸಭೆ ನಡೆಸಿ ಚರ್ಚಿಸಿದೆ. ಆದರೆ ಚುನಾವಣೆ ಉಸ್ತುವಾರಿ ನೇಮಕ ಮಾಡುವ ಕುರಿತು ಮೊದಲ ಸಭೆಯಲ್ಲೆ ಅಸಮಾಧಾನ ಭುಗಿಲೆದ್ದಿದ್ದು, ಆರ್‌. ಅಶೋಕ್‌ ನೇತೃತ್ವಕ್ಕೆ ಸಚಿವ ಡಾ. ಸಿ.ಎನ್‌. ಅಶ್ವತ್ಥನಾರಾಯಣ ಆಕ್ರೋಶ ಹೊರಹಾಕಿದ್ದಾರೆ.

ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ರಾಜ್ಯ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅಧ್ಯಕ್ಷತೆಯಲ್ಲಿ BBMP ಚುನಾವಣೆ ಸಿದ್ಧತೆ ಸಭೆ ಆಯೋಜನೆಯಾಗಿತ್ತು. ಸಂಸದರಾದ ಪಿ.ಸಿ. ಮೋಹನ್‌, ಡಿ.ವಿ. ಸದಾನಂದಗೌಡ, ತೇಜಸ್ವಿ ಸೂರ್ಯ, ಸಚಿವರಾದ ವಿ. ಸೋಮಣ್ಣ, ಆರ್‌. ಅಶೊಕ್‌ ವೇದಿಕೆಯಲ್ಲಿದ್ದರು.

ಸಭೆಯಲ್ಲಿ ಚರ್ಚೆಯಾಗುತ್ತಲೇ BBMP ಚುನಾವಣೆ ಉಸ್ತುವಾರಿಯನ್ನು ಆರ್‌. ಅಶೊಕ್‌ ಅವರಿಗೆ ವಹಿಸುವುದು, ಜತೆಗೆ ಸಚಿವ ವಿ. ಸೋಮಣ್ಣ ಅವರು ಸಹ ಉಸ್ತುವಾರಿಯಾಗಿರುತ್ತಾರೆ ಎಂದು ತಿಳಿಸಲಾಯಿತು. ಡಾ. ಸಿ.ಎನ್‌. ಅಶ್ವತ್ಥನಾರಾಯಣ ಅವರು ವೇದಿಕೆಯ ಎದುರು ಉಳಿದ ನಾಯಕರ ಜತೆಗೆ ಕುಳಿತಿದ್ದರು. ಅಶೋಕ್‌ ಅವರಿಗೆ ಉಸ್ತುವಾರಿ ನೀಡುವುದಕ್ಕೆ ಅಶ್ವತ್ಥನಾರಾಯಣ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ. ತಮ್ಮನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ, ಸಭೆ ಮುಕ್ತಾಯವಾಗುವ ಮುನ್ನವೇ ಹೊರನಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಭೆಯ ನಂತರ ಸುದ್ದಿಗಾರರಿಗೆ ಆರ್‌. ಅಶೊಕ್‌ ಮಾಹಿತಿ ನೀಡಿದರು. ಬಿಬಿಎಂಪಿ ಗೆಲುವಿನ ಕಾರ್ಯತಂತ್ರ ಕುರಿತು ರಾಜ್ಯ ಅಧ್ಯಕ್ಷ ನಳಿನ್‍ ಕುಮಾರ್ ಕಟೀಲ್ ಅವರು ಸೂಚನೆಗಳನ್ನು ಕೊಟ್ಟಿದ್ದಾರೆ. ಅವುಗಳನ್ನು ಶಿರಸಾವಹಿಸಿ ಪಾಲಿಸಲಿದ್ದೇವೆ. ಕಾಂಗ್ರೆಸ್‍ನಲ್ಲಿ ಇರುವಂತೆ ಸಿಎಂ ಹುದ್ದೆ ವಿಚಾರ, ಇತರ ವಿಚಾರಗಳಲ್ಲಿ ನಮ್ಮಲ್ಲಿ ಭಿನ್ನಮತ ಇಲ್ಲ. ನಾವೆಲ್ಲರೂ ಸಾಮೂಹಿಕವಾಗಿ ಪಕ್ಷದ ಗೆಲುವಿಗಾಗಿ ಶ್ರಮಿಸಲಿದ್ದೇವೆ ಎಂದರು.

ಇದನ್ನೂ ಓದಿ | ಬಿಬಿಎಂಪಿ 243 ವಾರ್ಡ್‌ ರಚನೆಯಾಗಿದ್ದು ಸಂಖ್ಯಾಶಾಸ್ತ್ರದ ಆಧಾರದಲ್ಲಿ!

ಬೆಂಗಳೂರಿನ ನಮ್ಮೆಲ್ಲ ಶಾಸಕರು, ಎಲ್ಲ ಪದಾಧಿಕಾರಿಗಳು ಎರಡು ಗಂಟೆಗಳ ಕಾಲ ಬಿಬಿಎಂಪಿ ಚುನಾವಣೆ ಬಗ್ಗೆ ಚರ್ಚೆ ಮಾಡಿದ್ದೇವೆ. ಈಗಾಗಲೇ ಕೋರ್ಟ್ ನಿರ್ದೇಶನವೂ ಬಂದಿದೆ. ಮೀಸಲಾತಿ ಪ್ರಕಟಿಸಿ, ಮತದಾರರ ಪಟ್ಟಿ ಅಂತಿಮಗೊಳಿಸುವುದು ಇತ್ಯಾದಿ ಪ್ರಕ್ರಿಯೆ ನಡೆಸಲು ತಿಳಿಸಲಾಗಿದೆ. ಈ ಎಲ್ಲ ಪ್ರಕ್ರಿಯೆಗೆ ಪಕ್ಷದ ತಯಾರಿ ಸಂಬಂಧ ಸಭೆ ನಡೆಸಲಾಗಿದೆ. ಅರ್ಹ ಮತದಾರರ ಸೇರ್ಪಡೆ ನಡೆಯಲಿದೆ. ಈ ವಾರದಲ್ಲೇ ಬೂತ್ ಮಟ್ಟದ ಕಾರ್ಯಕರ್ತರ ಸಭೆ ನಡೆಸಲಾಗುವುದು. ಅಭ್ಯರ್ಥಿಗಳ ಆಯ್ಕೆ ಸಂಬಂಧ ಪ್ರಕ್ರಿಯೆಗಳು ನಡೆಯಲಿವೆ. ಬಿಜೆಪಿ ಪರವಾಗಿ ವಾತಾವರಣ ಇರುವಂತೆ ಮಾಡಲು ಕೆಲಸ ಮಾಡಲು ನಿರ್ಧರಿಸಲಾಗಿದೆ ಎಂದರು.

ಮುಖ್ಯಮಂತ್ರಿಗಳು ನೀಡಿದ ಸುಮಾರು 8 ಸಾವಿರ ಕೋಟಿ ರೂ. ಅನುದಾನದ ಕೆಲಸಗಳು ಕೂಡಲೇ ಆರಂಭಗೊಳ್ಳುವಂತೆ ನೋಡಿಕೊಳ್ಳಲಾಗುವುದು. ಪ್ರತಿ ಶಾಸಕರು ಹಾಗೂ ನಮ್ಮ ಶಾಸಕರು ಇಲ್ಲದ ಪ್ರದೇಶದಲ್ಲಿ ಸಂಸದರು- ಎಂಎಲ್‍ಸಿಗಳಿಗೆ ಜವಾಬ್ದಾರಿ ಕೊಡಲಾಗುವುದು. ಆಮ್‌ ಆದ್ಮಿ ಪಕ್ಷ, ಎಸ್‍ಡಿಪಿಐ, ಕೆಎಫ್‍ಡಿ, ಕೆಆರ್‌ಎಸ್ ಪಕ್ಷಗಳನ್ನು ಎದುರಿಸುವ ಬಗ್ಗೆ ಹಾಗೂ ಬಿಜೆಪಿ ಗೆದ್ದು ಅಧಿಕಾರ ಪಡೆಯುವ ಕುರಿತಂತೆ ಚರ್ಚೆ ನಡೆದಿದೆ. ಅಧಿಕಾರಿಗಳು ಮೀಸಲಾತಿ ಪ್ರಕ್ರಿಯೆಯನ್ನು ಈಗಾಗಲೇ ಆರಂಭಿಸಿದ್ದಾರೆ. ಮುಖ್ಯಮಂತ್ರಿಗಳು ಈ ಕುರಿತು ನಿರ್ಧರಿಸಲಿದ್ದಾರೆ ಎಂದು ಅವರು ಪ್ರಶ್ನೆಗೆ ಉತ್ತರಿಸಿದರು.

ಚುನಾವಣೆ ಎಂಬುದು ಒಂದು ಯುದ್ಧದಂತೆ ಎಂದು ತಿಳಿಸಿದ ಅಶೋಕ್‌, ಯುದ್ಧ ಗೆಲ್ಲಲು ಚುನಾವಣೆ ಪ್ರಕಟವಾದ ಕೂಡಲೇ ಪೂರ್ವತಯಾರಿ ಮಾಡಿಕೊಳ್ಳಬೇಕಾಗುತ್ತದೆ. ನಮ್ಮದೇ ಸರ್ಕಾರ-ನಮ್ಮ ಮುಖ್ಯಮಂತ್ರಿ, ನಮ್ಮದೇ ಆದ ಬದ್ಧತೆಯ ಕೇಡರ್ ಇರುವುದು ನಮಗೆ ಪ್ಲಸ್ ಪಾಯಿಂಟ್. ಈ ರೀತಿಯ ಕೇಡರ್ ಬೇರೆ ಯಾವ ಪಕ್ಷಕ್ಕೂ ಇಲ್ಲ ಎಂದು ಪ್ರಶ್ನೆಗೆ ಉತ್ತರ ನೀಡಿದರು. ಆಮ್ ಆದ್ಮಿ ಪಕ್ಷ ಉತ್ತರ ಭಾರತದಲ್ಲಿ ಪ್ರಭಾವ ಬೀರಬಹುದು. ದಕ್ಷಿಣ ಭಾರತದಲ್ಲಿ ಒಂದೇ ಒಂದು ಪಾಲಿಕೆ ಸೀಟನ್ನೂ ಗೆಲ್ಲಲಾಗದು ಎಂದು ತಿಳಿಸಿದರು.
ಎಸ್‍ಡಿಪಿಐ, ಪಿಎಫ್‍ಐ ನಿಷೇಧಿಸಬೇಕೆಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಈ ಕುರಿತು ಸಿಎಂ ಜತೆ ಮಾತನಾಡಲಾಗುವುದು. ಇದರ ಕುರಿತು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಬೇಕಿದೆ. ಕೇಂದ್ರ ಸರ್ಕಾರವು ತೀರ್ಮಾನ ಕೈಗೊಳ್ಳಲಿದೆ ಎಂದರು. ವಸತಿ ಸಚಿವ ವಿ ಸೋಮಣ್ಣ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.

ಇದನ್ನೂ ಓದಿ | ಬಿಬಿಎಂಪಿ ಚುನಾವಣೆ ಮುಂದೂಡಲು ʼಬಾಹ್ಯ ಬೆಂಬಲʼ ಮೊರೆ ಹೋದ ಸರ್ಕಾರ?

Exit mobile version