Site icon Vistara News

ಬಿ.ಕಾಂ. ಓದಿ ಕಾರು ಕಳ್ಳತನಕ್ಕೆ ಇಳಿದ: ಟೆಕ್ನಾಲಜಿಯೇ ಈತನ ಬಂಡವಾಳ

ಕಾರು ಕಳ್ಳ

ಬೆಂಗಳೂರು: ಆತ ಓದಿದ್ದು ಬಿ.ಕಾಂ. ಆದರೆ ಮಾಡುತ್ತಿದ್ದ ಕೆಲಸ ಮಾತ್ರ ಕಾರು ಕಳ್ಳತನ. 10ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಖಾಗಿದ್ದ ಕುಖ್ಯಾತ ಕಾರು ಕಳ್ಳನಾದ ಈತ ಹೈಟೆಕ್‌ ತಂತ್ರಜ್ಞಾನ ಬಳಕೆಯಲ್ಲಿ ನಿಪುಣ. ಈಗ ಬೆಂಗಳೂರು ಆಗ್ನೇಯ ವಿಭಾಗ ಪೊಲೀಸರು ಕಾರ್ಯಾಚರಣೆ ನಡೆಸಿ ಈತನನ್ನು ಬಂಧಿಸಿದ್ದಾರೆ.

ಆರೋಪಿ ಅರುಣ್ ಕುಮಾರ್‌ ಅಲಿಯಾಸ್‌ ಶಿವ ಆಂಧ್ರ ಪ್ರದೇಶದಿಂದ ಬಂದು ಕರ್ನಾಟಕದಲ್ಲಿ ಕಾರುಗಳನ್ನು ಕದ್ದು ಬಳಿಕ ತಮಿಳುನಾಡಿನಲ್ಲಿ ನಕಲಿ ನಂಬರ್ ಪ್ಲೇಟ್ ಹಾಕಿ ಮಾರಾಟ ಮಾಡುತ್ತಿದ್ದ. ಮೆಕ್ಯಾನಿಕ್‌ ಕೆಲಸ ಮಾಡುವುದರ ಜತೆಗೆ ಕಾರು ಕಳ್ಳತನಕ್ಕೆ ಇಳಿದಿದ್ದ ಈ ಖದೀಮನ ಕಾರ್ಯವೈಖರಿಯೇ ವಿಭಿನ್ನ.

ಇದನ್ನೂ ಓದಿ | ಕಳ್ಳತನ ಮಾಡಲು ಬಂದಿದ್ದವ ಮಹಡಿಯಿಂದ ಬಿದ್ದು ಸಾವು

ಬಿ.ಕಾಂ ಓದಿದ್ದ ಅರುಣ್‌, ಟೆಕ್ನಾಲಜಿ ಮೂಲಕ ಕಣ್ಣು ಮುಚ್ಚಿ ಕಣ್ಣು ಬಿಡುವುದರೊಳಗೆ ಕಾರುಗಳನ್ನು ಎಗರಿಸುತ್ತಿದ್ದ.

Xtool auto Diagnostic tool ಎಂಬ ಉಪಕರಣವನ್ನು ಬಳಸುವುದು ಹೇಗೆ ಎಂದು ಯುಟ್ಯೂಬ್ ವಿಡಿಯೋ ಮೂಲಕ ಕಲಿತುಕೊಂಡಿದ್ದ. ಮೊದಲಿಗೆ ಡಿವೈಸ್‌ಅನ್ನು ಕಾರ್‌ಗೆ ಕನೆಕ್ಟ್ ಮಾಡುತ್ತಿದ್ದ. ಅದನ್ನು ಕಾರ್‌ನ ನಕಲಿ ಕೀ ಡಿವೈಸ್‌ಗೆ ಕನೆಕ್ಟ್ ಮಾಡಲಾಗುತ್ತಿತ್ತು. ಡಿವೈಸ್‌ನಲ್ಲಿರುವ ಕಾರ್‌ ಲಾಕ್‌ನ ಆಫ್ ಅನ್ನು ತೆರೆದು ಸಿಸ್ಟಮ್ ಆಪರೇಟ್‌ ಮೂಲಕ ಕಾರು ಸ್ಟಾಟ್ ಮಾಡುತ್ತಿದ್ದ. ಯಾರಿಗೂ ಅನುಮಾನವೇ ಬಾರದಂತೆ ಲಕ್ಷಾಂತರ ರೂ. ಬೆಲೆಬಾಳುವ ವಾಹನಗಳನ್ನು ಹೊತ್ತೊಯ್ಯುತ್ತಿದ್ದ. ಹೇಗೆ ಕಳ್ಳತನ ಮಾಡುತ್ತಿದ್ದ ಎಂಬುದನ್ನು ಪೊಲೀಸರ ಎದುರಿಗೆ ಡೆಮೊ ತೋರಿಸಿದ್ದನ್ನು ಕಂಡು ಪೊಲೀಸರೇ ದಂಗಾಗಿದ್ದಾರೆ.

ಆರೋಪಿ ಅರುಣ್‌ ಕುಮಾರ್‌ ಅಲಿಯಾಸ್‌ ಶಿವ

ಈ ಕುರಿತು ಮಾಹಿತಿ ನೀಡಿರುವ ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ. ಬಾಬಾ, Xtool auto Diagnostic tool ಡಿವೈಸ್ ಬಳಸಿ ಕಾರು ಕಳ್ಳತನವನ್ನು ಮಾಡುತ್ತಿದ್ದ. ಆರೋಪಿಯಿಂದ 70 ಲಕ್ಷ ಮೌಲ್ಯದ 10 ಕಾರು 1 ಬೈಕ್ ವಶಕ್ಕೆ ಪಡೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ.

ಆರೋಪಿಯು ಮಾರುತಿ ಕಂಪನಿಯ ಕಾರುಗಳನ್ನೇ ಕಳ್ಳತನ ಮಾಡುತ್ತಿದ್ದ. ಕದ್ದ ಕಾರನ್ನು ತಮಿಳುನಾಡಿನ ಜಿಲ್ಲೆಗಳಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ. ಬೆಂಗಳೂರಿನ ಹತ್ತು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರು ಕಳ್ಳತನ ಮಾಡಿ ಪೊಲೀಸರಿಗೆ ಚಳ್ಳೇಹಣ್ಣು ತಿನ್ನಿಸುತ್ತಿದ್ದ ಅರುಣ್‌ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಆರೋಪಿಯನ್ನು ಹೆಚ್ಚಿನ ತನಿಖೆಗೆ ಒಳಪಡಿಸಲಾಗಿದೆ.

ಇದನ್ನೂ ಓದಿ | ಚಿನ್ನ, ಬೆಳ್ಳಿ, ಹಣ ಅಲ್ಲ; ಬೈಕ್‌ನಲ್ಲಿ ಬಂದು ಪಾಟ್‌, ಚಪ್ಪಲಿ ಕದಿಯುವ ಕಳ್ಳರು ಇವರು

Exit mobile version