ಬೆಂಗಳೂರು: ಹೈಕೋರ್ಟ್ ಏಕಸದಸ್ಯ ಪೀಠದ ಆದೇಶ ಪ್ರಶ್ನೆ ಮಾಡಿ ದ್ವಿಸದಸ್ಯ ಪೀಠಕ್ಕೆ ಅಪೀಲು ಅರ್ಜಿ ಸಲ್ಲಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತೀರ್ಮಾನ ಮಾಡಿದ್ದಾರೆ. ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ದೆಹಲಿಯಿಂದ ವಾಪಸ್ ಆಗಿದ್ದು, ಎರಡು ಪ್ರತ್ಯೇಕ ಅಪೀಲು ಅರ್ಜಿ ಸಲ್ಲಿಸಲು ತೀರ್ಮಾನಿಸಲಾಗಿದೆ. ಸಿಎಂ ಪರ ವಕೀಲರು ಸೋಮವಾರ ದ್ವಿಸದಸ್ಯ ಪೀಠದ ಮುಂದೆ ಅರ್ಜಿ ಸಲ್ಲಿಕೆ ಮಾಡಲಿದ್ದಾರೆ. ಏಕಸದಸ್ಯ ಪೀಠದ ಆದೇಶದಲ್ಲಿ ಕೆಲ ವಿಚಾರಗಳ ಬಗ್ಗೆ ಅಪೀಲು ಸಲ್ಲಿಸಲಿದ್ದಾರೆ.
ಮತ್ತೊಂದು ಜನಪ್ರತಿನಿಧಿಗಳ ನ್ಯಾಯಾಲಯದ ಆದೇಶದ ವಿರುದ್ಧ ಅಪೀಲು ಅರ್ಜಿ ಅಲ್ಲಿಸಲಿದ್ದಾರೆ. ಜುಲೈ ಒಂದು 2024 ರಿಂದ ಹೊಸ ಕಾನೂನು ಬಂದಿದೆ. ಬಿಎನ್ಎಸ್ಎಸ್ ಅಡಿಯಲ್ಲಿ ವಿಚಾರಣೆ ಆಗಬೇಕು. ಹಳೆಯ ಸಿಪಿಆರ್ಪಿ ಐಪಿಸಿಯಲ್ಲಿ ಆರೋಪಿಗೆ ರಕ್ಷಣೆ ಕಡಿಮೆ ಇದೆ. ಹೀಗಾಗಿ ಬಿಎನ್ಎಸ್ಎಸ್ ಅಡಿಯಲ್ಲಿ ತನಿಖೆಗೆ ಆದೇಶ ಮಾಡಬೇಕಿತ್ತು. ಆದರೆ ನ್ಯಾಯಲಯದ ಹಳೆಯ ಕಾನೂನು ಪ್ರಕಾರ ಮಾಡಿರುವುದು ಸರಿಯಲ್ಲ ಎಂದು ಸಿಎಂ ಸಿದ್ದರಾಮಯ್ಯ ಪರ ವಕೀಲರು ಅಪೀಲು ಸಲ್ಲಿಕೆ ಮಾಡಲಿದ್ದಾರೆ. ಅರ್ಜಿ ತೀರ್ಮಾನ ಆಗುವವರೆಗೂ ಮುಡಾ ತನಿಖೆಗೆ ಸಿದ್ದರಾಮಯ್ಯ ತಡೆ ಕೋರಲಿದ್ದಾರೆ.
ಸಿಎಂ ವಿರುದ್ಧದ ತನಿಖೆಗೆ ನಾಲ್ಕು ತಂಡಗಳ ರಚನೆ
ಸಿದ್ದರಾಮಯ್ಯ ವಿರುದ್ಧದ ಎಫ್ಐಆರ್ ದಾಖಲು ಹಿನ್ನೆಲೆಯಲ್ಲಿ ತನಿಖೆಗೆ ನಾಲ್ಕು ತಂಡಗಳ ರಚನೆ ಮಾಡಲಾಗಿದೆ.
ಎಸ್‌ಪಿ ಉದೇಶ್, ಡಿವೈಎಸ್‌ಪಿ ಎಸ್.ಮಾಲತೀಶ್, ಚಾಮರಾಜನಗರ ಡಿವೈಎಸ್‌ಪಿ ಮ್ಯಾಥ್ಯೂ ಥಾಮಸ್ ಹಾಗೂ ಇನ್‌ಸ್ಪೆಕ್ಟರ್ ಒಳಗೊಂಡ ತನಿಖಾ ತಂಡ ಇದಾಗಿದೆ. ಎಲ್ಲಾ ಅಧಿಕಾರಿಗಳ ಜತೆ ಎಸ್‌ಪಿ ಸಭೆ ನಡೆಸಿದ್ದು, ಕೋರ್ಟ್‌ನಿಂದ ನೀಡಿರುವ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ದೂರಿನಲ್ಲಿ ಅಡಕವಾಗಿರುವ ದಾಖಲೆಗಳನ್ನು ಇನ್ನು ಒಂದೆರಡು ದಿನಗಳ ಕಾಲ ಪರಿಶೀಲನೆ ನಡೆಸಲಿದ್ದಾರೆ. ಬಳಿಕ ಪ್ರತಿಯೊಬ್ಬ ಅಧಿಕಾರಿಗಳ ಕೆಲಸವನ್ನು ವಿಂಗಡಣೆ ಮಾಡಿಕೊಳ್ಳಲಿದ್ದಾರೆ. ಸದ್ಯಕ್ಕೆ ಎಲ್ಲ ದಾಖಲೆಗಳನ್ನು ಓದಿಕೊಂಡು ಪಾಯಿಂಟ್ಸ್ ಮಾಡಿಕೊಳ್ಳುತ್ತಿದ್ದಾರೆ.
ಏನಿದು ಮುಡಾ ಪ್ರಕರಣ?
ಮುಡಾ ನಿವೇಶನ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಆರ್‌ಟಿಐ ಕಾರ್ಯಕರ್ತ ಟಿ.ಜೆ. ಅಬ್ರಾಹಂ, ರಾಜ್ಯಪಾಲರಿಗೆ ದೂರು ನೀಡಿದ್ದರು. ಇದೇ ದೂರು ಸಿಎಂ ಸಿದ್ದರಾಮಯ್ಯನವರಿಗೆ ಸಂಕಷ್ಟ ತಂದಿತ್ತು. ಟಿ.ಜೆ. ಅಬ್ರಾಹಂ ನೀಡಿದ ದೂರಿನ ಮೇರೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ನಿಮ್ಮ ವಿರುದ್ಧ ಯಾಕೆ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಬಾರದು ಎಂದು ಸಿದ್ದರಾಮಯ್ಯಗೆ ಶೋಕಾಸ್ ನೋಟಿಸ್ ನೀಡಿದ್ದರು. ಸಿದ್ದರಾಮಯ್ಯಗೆ ನೀಡಿರುವ ನೋಟಿಸ್ ವಾಪಸ್ ಪಡೆಯಬೇಕೆಂದು ಸಚಿವ ಸಂಪುಟ ನಿರ್ಣಯ ಅಂಗೀಕರಿಸಿತ್ತು. ಆದರೆ ರಾಜ್ಯಪಾಲರು ಸಚಿವ ಸಂಪುಟದ ನಿರ್ಣಯ ಧಿಕ್ಕರಿಸಿ ಸಿಎಂ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಅಕ್ರಮಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರದ ಕುರಿತು ತಟಸ್ಥ, ವಸ್ತುನಿಷ್ಠ ಮತ್ತು ನಿಷ್ಪಕ್ಷಪಾತ ತನಿಖೆ ಅಗತ್ಯ ಎಂದು ಸಿಎಂ ವಿರುದ್ಧ ಪ್ರಕರಣ ದಾಖಲಿಸಲು ಅನುಮತಿ ಕೋರಿ ಪ್ರದೀಪ್ ಕುಮಾರ್ ಎಸ್.ಪಿ, ಟಿ.ಜೆ. ಅಬ್ರಹಾಂ ಮತ್ತು ಸ್ನೇಹಮಯಿ ಕೃಷ್ಣ ಅರ್ಜಿಗಳನ್ನು ಸಲ್ಲಿಸಿದ್ದರು.
ಮೈಸೂರಿನ ಸ್ನೇಹಮಯಿ ಕೃಷ್ಣ, ಸಿಎಂ ವಿರುದ್ಧ ಮತ್ತೂಂದು ದೂರು ಸಲ್ಲಿಸಿದ್ದರು. ಅಕ್ರಮ ಭೂ ಡಿನೋಟಿಫಿಕೇಶನ್‌ಗೆ ಸಿದ್ದರಾಮಯ್ಯ ಪ್ರಭಾವ ಬೀರಿದ್ದಾರೆಂದು ಆರೋಪಿಸಿದ್ದರು. ಮೈಸೂರು ಮೂಲದ ಸ್ನೇಹಮಯಿ ಕೃಷ್ಣ, 1979ರಲ್ಲಿ ಮೈಸೂರು ತಾಲೂಕು ವರುಣದ ಉತ್ತನಹಳ್ಳಿಯಲ್ಲಿ ಆಶ್ರಯ ಮನೆಗಳಿಗಾಗಿ ಭೂಸ್ವಾಧೀನ ಮಾಡಿದ್ದ ಜಮೀನಿಗೆ 30 ವರ್ಷದ ಬಳಿಕ ಡಿನೋಟಿಫೈ ಮಾಡುವಂತೆ ಸಿದ್ದರಾಮಯ್ಯ ಪತ್ರ ಬರೆದಿದ್ದರು. ಮರಪ್ಪ ಎಂಬುವವರ ಹೆಸರಿಗೆ 1.39 ಎಕರೆ ಜಮೀನು ಡಿನೋಟಿಫೈ ಮಾಡುವಂತೆ ಸಿದ್ದರಾಮಯ್ಯ ಶಿಫಾರಸು ಮಾಡಿದ್ದರು. ಮರಪ್ಪ ಎಂಬುವವರಿಗೆ ಸಂಬಂಧವೇ ಇರದಿದ್ದರೂ ನಕಲಿ ದಾಖಲೆ ಆಧರಿಸಿ ಮರಪ್ಪ ಹೆಸರಿಗೆ ಡಿನೋಟಿಫೈ ಮಾಡಲಾಗಿದೆ ಎಂದು ದೂರುದಾರ ಆರೋಪಿಸಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ