ಬೆಂಗಳೂರು: ಅನೇಕ ತಿಂಗಳ ನಂತರ ಪ್ರಕಟವಾಗಿರುವ ಬಿಬಿಎಂಪಿ ಮೀಸಲಾತಿ ಪಟ್ಟಿಯನ್ನು ಆರ್‌ಎಸ್‌ಎಸ್ ಹಾಗೂ ಬಿಜೆಪಿ ಕಚೇರಿಗಳಲ್ಲಿ ನಿರ್ಧಾರ ಮಾಡಿ ಅದನ್ನು ಕಣ್ಮುಚ್ಚಿಕೊಂಡು ನಗರಾಭಿವೃದ್ಧಿ (UD) ಇಲಾಖೆ ಅನುಮತಿ ನೀಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಕುರಿತು ಬೆಂಗಳೂರಿನ ಕಾಂಗ್ರೆಸ್ ಶಾಸಕರು ಹಾಗೂ ಸಂಸದರು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ನಗರಾಭಿವೃದ್ಧಿ ಕಚೇರಿಗೆ ಬಿಜೆಪಿ ಕಚೇರಿ ಎಂದು ನಾಮಫಲಕ ಅಳವಡಿಸಲು ನಿರ್ಧಾರ ಮಾಡಿದರು.
ಮೊದಲು ಮಾತನಾಡಿದ ಬಿಟಿಎಂ ವಿಧಾನಸಭಾ ಕ್ಷೇತ್ರದ ಶಾಸಕ ರಾಮಲಿಂಗಾರೆಡ್ಡಿ, ಈ ಹಿಂದೆ ವಾರ್ಡ್ ಮರುವಿಂಗಡಣೆ ಮಾಡುವ ಸಂದರ್ಭದಲ್ಲಿಯೂ ಬಿಜೆಪಿ ಲೋಕಸಭಾ ಸದಸ್ಯರು, ಸ್ಥಳೀಯ ಬಿಜೆಪಿ ಮುಖಂಡರ ಅನುಕೂಲಕ್ಕೆ ತಕ್ಕಂತೆ ಮಾಡಲಾಗಿತ್ತು. ಬಿಜೆಪಿ ಕಾರ್ಯಕರ್ತರು ಮಾಡಿ ಕೊಟ್ಟಿದ್ದ ಪಟ್ಟಿಯನ್ನು ಕೇಶವ ಕೃಪಾದಲ್ಲಿ ಕುಳಿತು ಅಂತಿಮಗೊಳಿಸಿದ್ದರು. ಇದಕ್ಕೆ ಪಕ್ಷದ ಮೂಲಕ ಹಾಗೂ ಸಾರ್ವಜನಿಕರೂ ಸೇರಿ ಮೂರು ಸಾವಿರಕ್ಕಿಂತ ಹೆಚ್ಚು ಆಕ್ಷೇಪಣೆಗಳು ವ್ಯಕ್ತವಾದವು. ಆದರೆ ಈ ಆಕ್ಷೇಪಣೆಗಳನ್ನು ಲೆಕ್ಕಿಸದೆ ಪ್ರಕಟಿಸಿದರು.
ನಗರಾಭಿವೃದ್ಧಿ ಇಲಾಖೆ ರಬ್ಬರ್ ಸ್ಟಾಂಪ್ ಇಲಾಖೆ ಆಗಿದೆ. ಸಿಎಂ ಕಚೇರಿಯಿಂದ ಬಂದಿದ್ದನ್ನು ಕಣ್ಮುಚ್ಚಿ ಒಪ್ಪುತ್ತಿದ್ದಾರೆ. ಇದೀಗ ಮೀಸಲಾತಿಯಲ್ಲೂ, ಬಿಜೆಪಿ ಶಾಸಕರಿಗೆ ಅನುಕೂಲವಾಗುವಂತೆ ಮಾಡಿದ್ದಾರೆ. ನಿಯಮಾವಳಿಗಳನ್ನು ಮೀರಲಾಗಿದೆ. ನಮ್ಮ ಒಂಭತ್ತು ವಾರ್ಡ್‌ನಲ್ಲಿ ಎಂಟನ್ನು ಮಹಿಳಾ ಮೀಸಲಾತಿ ಮಾಡಿದ್ದಾರೆ. ದಿನೇಶ್ ಗುಂಡೂರಾವ್ ಅವರ ಕ್ಷೇತ್ರದಲ್ಲಿ ಎಲ್ಲ ವಾರ್ಡ್‌ಗಳನ್ನೂ ಮಹಿಳಾ ಮೀಸಲು ಮಾಡಲಾಗಿದೆ. ಎಸ್‌ಸಿಎಸ್‌ಟಿ ಮೀಸಲಾತಿಯಲ್ಲೂ ನಿಯಮವನ್ನು ಉಲ್ಲಂಘನೆ ಮಾಡಿದ್ದಾರೆ. ವಾಮಮಾರ್ಗದಲ್ಲಿ ಅಧಿಕಾರ ಹಿಡಿಯಲು ಅನೈತಿಕವಾಗಿ ಬಿಜೆಪಿಯವರು ಮೀಸಲಾತಿ ಪ್ರಕಟಿಸಿದ್ದಾರೆ ಎಂದರು.
ಇದನ್ನೂ ಓದಿ | BBMP ಮೀಸಲಾತಿ ಎಡವಟ್ಟು: ಸಂಪೂರ್ಣ ವಾರ್ಡ್ ಮಹಿಳಾ ಮೀಸಲು, SCST ಪ್ರಮಾಣ ಕಡಿತ
ಚಾಮರಾಜಪೇಟೆ ಶಾಸಕ ಬಿ.ಜಡ್. ಜಮೀರ್ ಅಹ್ಮದ್ ಖಾನ್ ಮಾತನಾಡಿ, ಕ್ಷೇತ್ರದಲ್ಲಿ ಎಲ್ಲವನ್ನೂ ಮಹಿಳೆ ಮೀಸಲು ಮಾಡಿದ್ದಾರೆ. ನಮ್ಮ ಕ್ಷೇತ್ರದಲ್ಲಿ ಎಸ್‌ಟಿ ಸಮುದಾಯ ಕೇವಲ 300-400 ಮತ ಇದ್ದರೂ ಆ ಸಮುದಾಯಕ್ಕೆ ಮೀಸಲು ನೀಡಿದ್ದಾರೆ. ಕಾಂಗ್ರೆಸ್‌ನವರು ಗೆಲ್ಲಬಾರದು ಎಂಬ ಕಾರಣಕ್ಕೆ ಮೀಸಲು ಮಾಡಲಾಗಿದೆ ಎಂದರು.
ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಮಾತನಾಡಿ, ಈ ಬಾರಿ ಪ್ರಕಟಿಸಿರುವ ಮೀಸಲಾತಿ ಪಟ್ಟಿ ಬೆಂಗಳೂರು ನಗರದ ಹಿತಾಸಕ್ತಿಗೆ ಅನುಗುಣವಾಗಿ ಇಲ್ಲ. ಒಂದು ಮಾನದಂಡ ಇಟ್ಟುಕೊಂಡು, ಅದನ್ನು ಮೀರಿ ಮೀಸಲಾತಿ ಮಾಡಲಾಗಿದೆ. ಬಿಜೆಪಿ ಗೆಲ್ಲಬೇಕು ಎಂಬುದನ್ನೇ ಆಧಾರವಾಗಿಸಿಕೊಂಡು ಮೀಸಲಾತಿಯನ್ನು ಮಾಡಲಾಗಿದ್ದು, ಇದು ಅಧಿಕಾರಿಗಳು ಮಾಡಿದ ಹಾಗೆ ಕಾಣುತ್ತಿಲ್ಲ. ಒಂದು ವಾರ್ಡ್‌ನಲ್ಲಿ 19 ಸಾವಿರ, ಮತ್ತೊಂದು ವಾರ್ಡ್‌ನಲ್ಲಿ 32 ಸಾವಿರ ಜನಸಂಖ್ಯೆ ಇದೆ. ಸಾರ್ವಜನಿಕರ ಅಭಿಪ್ರಾಯಕ್ಕೆ ಮನ್ನಣೆ ನೀಡದೆ ಸ್ಥಳೀಯ ಕಾರ್ಯಕರ್ತರ ಸಲಹೆಗೆ ಅನುಗುಣವಾಗಿ ಮೀಸಲಾತಿ ಪಟ್ಟಿ ಸಿದ್ಧಪಡಿಸಲಾಗಿದೆ. ಪಾರದರ್ಶಕವಾಗಿ ಚುನಾವಣೆ ಮಾಡಿದರೆ ಗೆಲ್ಲುವುದಿಲ್ಲ ಎಂಬುದು ಬಿಜೆಪಿಗೆ ಗೊತ್ತಾಗಿದೆ, ಹಾಗಾಗಿ ಈ ಮೂಲಕ ಚುನಾವಣೆ ಗೆಲ್ಲಲು ಹೊರಟಿದ್ದಾರೆ. ಈ ಮೀಸಲಾತಿ ವಿರುದ್ಧವೂ ನ್ಯಾಯಾಲಯದ ಮೆಟ್ಟಿಲು ಏರುವ ಕುರಿತು ನಿರ್ಧಾರ ಮಾಡುತ್ತೇವೆ ಎಂದರು.
ಸಂಸದ ಡಿ.ಕೆ. ಸುರೇಶ್ ಮಾತನಾಡಿ, ಕೇಶವ ಕೃಪಾದಲ್ಲಿ ಪಟ್ಟಿ ಸಿದ್ಧಪಡಿಸಿಟ್ಟುಕೊಂಡು ನಗರಾಭಿವೃದ್ಧಿ ಇಲಾಖೆಯಲ್ಲಿ ಅಂತಿಮಗೊಳಿಸಲಾಗಿದೆ. ನಮ್ಮ ನಾಯಕರು ಒಪ್ಪುವುದಾದರೆ ನಗರಾಭಿವೃದ್ಧಿ ಕಚೇರಿಯನ್ನು ಬಿಜೆಪಿ ಕಚೇರಿ ಎಂದು ಬೋರ್ಡ್ ಬದಲಾಯಿಸುತ್ತೇವೆ. ನಿಯಮಾವಳಿಗಳನ್ನು ಮೀರಿ ಮೀಸಲಾತಿ ನಿಗದಿ ಮಾಡಲಾಗಿದೆ. ನ್ಯಾಯಸಮ್ಮತವಾಗಿ ನೀಡಬೇಕಿದ್ದ ಸಾಮಾಜಿಕ ನ್ಯಾಯವನ್ನು ನಿರಾಕರಿಸಲಾಗಿದೆ. ಬೆಂಗಳೂರಿನ ಹೊಣೆಯನ್ನು ಸಿಎಂ ಇಟ್ಟುಕೊಂಡಿದ್ದು, ಬೆಂಗಳೂರಿನ ಬಿಜೆಪಿ ಶಾಸಕರ ಕೈಗೊಂಬೆಯಾಗಿ ಈ ಕೆಲಸ ಮಾಡಿದ್ದಾರೆ ಎಂದರು. ನಾವು ನ್ಯಾಯಕ್ಕಾಗಿ ನ್ಯಾಯಾಲಯಕ್ಕೂ ಮನವಿ ಮಾಡುತ್ತೇವೆ ಎಂದರು.
ಬ್ಯಾಟರಾಯನಪುರ ಶಾಸಕ ಕೃಷ್ಣಭೈರೇಗೌಡ ಮಾತನಾಡಿ, ಬೆಂಗಳೂರಿನ ಅಭಿವೃದ್ಧಿಯಲ್ಲಿ ಕಾಂಗ್ರೆಸ್ ಪಾತ್ರ ಮಹದ್ವದ್ದಾಗಿದೆ. ತಮ್ಮ ವಿರುದ್ಧ ಜನಾಭಿಪ್ರಾಯವಿರುವುದನ್ನು ಬಿಜೆಪಿ ಅರಿತಿದೆ. ಜಪ್ಪಯ್ಯ ಎಂದರೂ ಗೆಲ್ಲಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ವಾಮ ಮಾರ್ಗದಲ್ಲಿ, ಕಾಂಗ್ರೆಸ್ ಸದಸ್ಯರು ಗೆಲ್ಲಲು ಆಗದಂತೆ ಮೀಸಲು ನಿಗದಿ ಮಾಡಿದ್ದಾರೆ. ಇದು ರಾಜಕೀಯ ಹೇಡಿಗಳು ನಡೆದುಕೊಳ್ಳುವಂತಹ ರೀತಿ ಎಂದರು ಅಸಮಾಧಾನ ಹೊರಹಾಕಿದರು.
ಗಾಂಧಿನಗರ ಶಾಸಕ ದಿನೇಶ್ ಗುಂಡೂರಾವ್ ಮಾತನಾಡಿ, ಬೆಂಗಳೂರು ಅಭಿವೃದ್ಧಿಗಾಗಿ ಈ ಹಿಂದೆ ನೀಡಿದ್ದ ಅನೇಕ ಸಲಹೆಗಳನ್ನು ಲೆಕ್ಕಿಸದೆ ಕೇವಲ ಚುನಾವಣೆ ಉದ್ದೇಶಕ್ಕಾಗಿ ಬಿಬಿಎಂಪಿ ಕಾಯ್ದೆ ರೂಪಿಸಲಾಯಿತು. ಕಾಯ್ದೆಯಾಗಿ ಒಂದು ವರ್ಷವಾದರೂ ವಾರ್ಡ್ ಮರುವಿಂಗಡಣೆ, ಮೀಸಲಾತಿ ಕುರಿತು ಸಾರ್ವಜನಿಕರ ಜತೆ ಚರ್ಚೆ ನಡೆಸದೆ ಗೊಂದಲದ ಗೂಡಾಗಿಸಿದ್ದಾರೆ. ಬಿಜೆಪಿ ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ ಮೀಸಲು ನಿಗದಿ ಮಾಡಲಾಗಿದೆ. ಕಾಂಗ್ರೆಸ್‌ನ ಪ್ರಬಲ ಅಭ್ಯರ್ಥಿಗಳು ಗೆಲ್ಲಬಾರದು ಎಂಬ ದುರುದ್ದೇಶ ಇದರ ಹಿಂದೆ ಇದೆ. ಈ ಮೀಸಲಾತಿಯಿಂದ ತಮಗೂ ಅನ್ಯಾಯವಾಗಿದೆ ಎಂದು ಬಿಜೆಪಿ ಸ್ಥಳೀಯ ನಾಯಕರೂ ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಇಡೀ ನಗರವನ್ನು ಬಿಜೆಪಿ ಶಾಸಕರ ಹಾಗೂ ಆರ್‌ಎಸ್‌ಎಸ್ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಂಚು ರೂಪಿಸಿದ್ದಾರೆ ಎಂದರು.
ಮುತ್ತಿಗೆ ಹಾಕಲು ನಿರ್ಧಾರ
ನಗರಾಭಿವೃದ್ಧಿ ಕಚೇರಿಗೆ ಮುತ್ತಿಗೆ ಹಾಕುವ ಕುರಿತು ಡಿ.ಕೆ. ಸುರೇಶ್ ಸಲಹೆಗೆ ಎಲ್ಲ ಶಾಸಕರೂ ಒಪ್ಪಿಗೆ ಸೂಚಿಸಿದರು. ಈಗಿಂದೀಗಲೇ ವಿಧಾನಸೌಧಕ್ಕೆ ತೆರಳಿ ಅಲ್ಲಿರುವ ನಗರಾಭಿವೃದ್ಧಿ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ನಾಮಫಲಕ ಬದಲಾವಣೆ ಮಾಡಲಾಗುತ್ತದೆ ಎಂದು ಘೋಷಿಸಿದರು. ಕಾಂಗ್ರೆಸ್ ನಾಯಕರು ಘೋಷಣೆ ಮಾಡಿದ ಬೆನ್ನಲ್ಲೇ ವಿಧಾನಸೌಧದ ಪ್ರವೇಶದ್ವಾರದಲ್ಲಿ ಭದ್ರತೆಯನ್ನು ಹೆಚ್ಚಳ ಮಾಡಲಾಗಿದೆ.
ಇದನ್ನೂ ಓದಿ | BBMP ಮೀಸಲಾತಿ ಎಡವಟ್ಟು: ಕಾಂಗ್ರೆಸ್ ಕ್ಷೇತ್ರದಲ್ಲಿ 72%, BJP ಕ್ಷೇತ್ರದಲ್ಲಿ 34% ಮಹಿಳಾ ಮೀಸಲು