ಬೆಂಗಳೂರು: ನಾಯಕತ್ವ ಗೊಂದಲ, ಎರಡೆರಡು ಬೃಹತ್ ರ‍್ಯಾಲಿಗಳ ನಂತರ 2023ರ ವಿಧಾನಸಭೆ ಚುನಾವಣೆಗೆ ರಾಜ್ಯ ಕಾಂಗ್ರೆಸ್ ಚಾಲನೆ ನೀಡಿದೆ. ಮಾಜಿ ಸಚಿವ ಎಂ.ಬಿ. ಪಾಟೀಲ್ ಅಧ್ಯಕ್ಷತೆಯ ಪ್ರಚಾರ ಸಮಿತಿ ಕಚೇರಿ ಉದ್ಘಾಟನೆ ಜತೆಗೆ ಪ್ರಮುಖ ಸಭೆ ನಡೆಸಿರುವ ನಾಯಕರು, ನಂತರ ರಾಜ್ಯ ಸರ್ಕಾರದ ವಿರುದ್ಧ ಜಂಟಿ ಸುದ್ದಿಗೋಷ್ಠಿ ಆಯೋಜಿಸುವ ಮೂಲಕ ಮುಂದಡಿ ಇಟ್ಟಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಪ್ರಚಾರ ಸಮಿತಿ ಕಚೇರಿಯನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲ ಉದ್ಘಾಟಿಸಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಹಿರಿಯ ನಾಯಕ ಎಚ್.ಕೆ.ಪಾಟೀಲ್, ಸುನೀಲ್ ಕನಗೋಳು, ವಾರ್ ರೂಂ ಉಸ್ತುವಾರಿ ಕುಂದಗೋಳ ಮತ್ತಿತರರಿದ್ದರು. ಉದ್ಘಾಟನೆ ನಂತರ ಎಲ್ಲ ನಾಯಕರೂ ಕೆಲಕಾಲ ಸಭೆ ನಡೆಸಿ ಮುಂದಿನ ಕಾರ್ಯತಂತ್ರಗಳ ಕುರಿತು ಚರ್ಚೆ ನಡೆಸಿದರು.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎಂ.ಬಿ. ಪಾಟೀಲ್, ಪಕ್ಷದ ಎಲ್ಲ ನಾಯಕರು ನನ್ನ ಮೇಲೆ ವಿಶ್ವಾಸ ಇಟ್ಟು ಪ್ರಚಾರ ಸಮಿತಿ ಅಧ್ಯಕ್ಷನನ್ನಾಗಿ ಮಾಡಿದ್ದಾರೆ. ಪದಾಧಿಕಾರಿಗಳ ಪಟ್ಟಿ ಬಹುತೇಕ ಅಂತಿಮವಾಗಿದ್ದು, ಕೆಲವೇ ದಿನಗಳಲ್ಲಿ ಬಿಡುಗಡೆ ಮಾಡುತ್ತೇವೆ. ಕ್ರಿಯಾಶೀಲರಾಗಿರುವ ಅನೇಕರಿಗೆ ಅವಕಾಶ ನೀಡಲಾಗಿದೆ ಎಂದರು.
ಪ್ರಚಾರ ಸಮಿತಿ ಅಧ್ಯಕ್ಷನಾಗಿ ಆಗಸ್ಟ್ 19ರಂದು ಪ್ರಥಮ ಹಂತದ ರಾಜ್ಯ ಪ್ರವಾಸ ಹಮ್ಮಿಕೊಂಡಿದ್ದೇನೆ. 19ರಂದು ಕಲಬುರ್ಗಿಯಿಂದ ಆರಂಭವಾಗಿ, 20ರಂದು ಹುಬ್ಬಳ್ಳಿ, ಅಂದು ಸಂಜೆ ಧಾರವಾಡ, 23ರಂದು ಚಿತ್ರದುರ್ಗ, 24ರಂದು ಶಿವಮೊಗ್ಗ, 26ರಂದು ಮೈಸೂರು, 27ರಂದು ಚಾಮರಾಜನಗರ, ಸೆಪ್ಟೆಂಬರ್ 1ರಂದು ಮಂಗಳೂರು, 2ರಂದು ಉಡುಪಿ, 3ರಂದು ತುಮಕೂರು, 5ರಂದು ಕೊಪ್ಪಳ, 6 ಬಳ್ಳಾರಿ, ವಿಜಯನಗರ, 7ರಂದು ರಾಯಚೂರು, 8ರಂದು ಯಾದಗಿರಿ ಹಾಗೂ ಬೀದರ್ ಜಿಲ್ಲೆಗಳ ಪ್ರವಾಸ ಮಾಡುತ್ತಿದ್ದೇನೆ. ಸೆ.27ರಿಂದ ರಾಜ್ಯದಲ್ಲಿ ಆರಂಭವಾಗಲಿರುವ ಭಾರತ್ ಜೋಡೋ ಕಾರ್ಯಕ್ರಮ ತಯಾರಿ ಗಮನದಲ್ಲಿಟ್ಟುಕೊಂಡು ಉಳಿದ ಪ್ರವಾಸ ಹಮ್ಮಿಕೊಳ್ಳುತ್ತೇನೆ ಎಂದರು.
ಇದನ್ನೂ ಓದಿ | ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲಿ ಎಂದು ಆಸೆ ಪಡುತ್ತೇನೆ: ಸಚಿವ ಶ್ರೀರಾಮುಲು ಹೇಳಿಕೆ
ಪಕ್ಷದ ನಾಯಕರೆಲ್ಲರೂ ಚರ್ಚೆ ಮಾಡಿ ಕಾಂಗ್ರೆಸ್ ಪಕ್ಷದ ಸಾಧನೆಗಳು, ಪ್ರಥಮ ಪ್ರಧಾನಿ ನೆಹರೂ ಅವರಿಂದ ಮನಮೋಹನ್ ಸಿಂಗ್ ಅವರ ಕಾಲದವರೆಗೂ ಕಾಂಗ್ರೆಸ್ ಸರ್ಕಾರದ ಕೊಡುಗೆಗಳನ್ನು ರಾಜ್ಯದ ಜನರಿಗೆ ತಿಳಿಸಲು ಕಾರ್ಯಕ್ರಮ ರೂಪಿಸುತ್ತೇವೆ. ರಾಜ್ಯದಲ್ಲಿ ಕೆಂಗಲ್ ಹನುಮಂತಯ್ಯ ಅವರ ಸರ್ಕಾರದಿಂದ ಸಿದ್ದರಾಮಯ್ಯ ಅವರ ಸರ್ಕಾರದ ವರೆಗೆ ಕಾಂಗ್ರೆಸ್ ಸರ್ಕಾರದ ಕೊಡುಗೆಗಳನ್ನು ಪ್ರಚಾರ ಮಾಡುತ್ತೇವೆ. ಬಿಜೆಪಿ ಸರ್ಕಾರದ ವೈಫಲ್ಯಗಳು, ಅಧಿಕಾರಕ್ಕೆ ಬರುವ ಮುನ್ನ ಬಿಜೆಪಿ ಕೊಟ್ಟಿದ್ದ ಮಾತು, ಅದರ ವೈಫಲ್ಯಗಳನ್ನು ಜನರಿಗೆ ತಿಳಿಸಬೇಕು ಎಂದು ತೀರ್ಮಾನ ಮಾಡಿದ್ದೇವೆ ಎಂದರು.
ಸುನೀಲ್ ಕುಂದಗೋಳ ಅವರಿಂದ ಚುನಾವಣೆಗೆ ಸಲಹೆ ಪಡೆಯುವ ಸ್ಥಿತಿ ಬಂದಿದೆಯೇ ಪಕ್ಷಕ್ಕೆ ಎಂಬ ಪ್ರಶ್ನೆಗೆ, ‘ಸುನೀಲ್ ಅವರು 2018ರಲ್ಲಿ ಬಿಜೆಪಿಗೆ ಚುನಾವಣೆಯಲ್ಲಿ ನೆರವು ನೀಡಿದ್ದಾಗ ಅದಕ್ಕೆ ಯಾರ ಆಕ್ಷೇಪವೂ ಇರಲಿಲ್ಲ. ಈಗ ಏಕೆ? ಆಗ ಅವರು ವಾಣಿಜ್ಯ ಉದ್ದೇಶದಿಂದ ಸಲಹೆ ನೀಡಿದ್ದರು. ಆದರೆ ಈಗ ಸುನೀಲ್ ಅವರು ಪಕ್ಷ ಸೇರಿದ್ದಾರೆ, ಅವರು ಕಾಂಗ್ರೆಸಿಗರಾಗಿ ಕೆಲಸ ಮಾಡುತ್ತಿದ್ದಾರೆ’ ಎಂದರು.
ನಂತರ ಮಾತನಾಡಿದ ಪ್ರಿಯಾಂಕ್ ಖರ್ಗೆ, ‘ಚುನಾವಣೆ ಮಾಡುವ ರೀತಿ ಬದಲಾಗಿದೆ. ಹೊಸ ತಂತ್ರಜ್ಞಾನ ಬಂದಿವೆ, ಅಭಿಪ್ರಾಯ ಸಂಗ್ರಹಿಸಿದೆ. ಅಂತರ್ಜಾಲ, ಮೊಬೈಲ್ ಬಳಕೆ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿದೆ. ಮಾಧ್ಯಮದಲ್ಲಿ ಮುದ್ರಣ, ವಿದ್ಯುನ್ಮಾನ ಮಾಧ್ಯಮ ಈಗ ಡಿಜಿಟಲ್ ಮಾಧ್ಯಮ ಬಂದಿದೆ. ಅದೇ ರೀತಿ ಚುನಾವಣೆಯಲ್ಲಿ ಹೊಸ ಆವಿಷ್ಕಾರ ಬರುತ್ತಿದೆ. ಕಳೆದ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಶೇ.4ಕ್ಕೂ ಹೆಚ್ಚು ಜನ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಭಾವಿತರಾಗಿದ್ದಾರೆ. ಮತದಾರರ ಅಂಕಿಅಂಶ, ಬೂತ್ ಮಟ್ಟದಲ್ಲಿ ನಿರ್ವಹಣೆ, ಹೊಸ ಮತದಾರರ ಗುರುತಿಸುವುದನ್ನು ವೃತ್ತಿಪರವಾಗಿ ಮಾಡಬೇಕಾಗುತ್ತದೆ. ಯಾವುದೇ ಪಕ್ಷದಲ್ಲಿ ಈ ವಿಚಾರವಾಗಿ ತಜ್ಞರಿಲ್ಲ. ಹೀಗಾಗಿ ಬಿಜೆಪಿಯವರು ಬಿಲಿಯನ್ ಮೈಂಡ್ಸ್ ಎಂಬ ಸಂಸ್ಥೆಯನ್ನು ನೇಮಿಸಿಕೊಂಡಿದ್ದಾರೆ. ನಮಗೆ ಅರ್ಥವಾಗದ ಕೆಲವು ವಿಚಾರಗಳ ಬಗ್ಗೆ ತಜ್ಞರಿಂದ ಸಲಹೆ ಪಡೆಯುತ್ತೇವೆ. ಅವರು ಹೇಳಿದ್ದರಲ್ಲಿ ಏನಾದರೂ ತಪ್ಪಿದ್ದರೆ ನಮ್ಮ ಪಕ್ಷದಲ್ಲಿರುವ ಹಿರಿಯರು ಅದನ್ನು ತಿದ್ದುತ್ತಾರೆ’ ಎಂದು ತಿಳಿಸಿದರು.
ಕಾಂಗ್ರೆಸ್ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಮಾತನಾಡಿ, ನಮ್ಮ ಪ್ರಚಾರ ಸಮಿತಿ ಅಧ್ಯಕ್ಷರು ಮೊದಲ ಹಂತದ ಪ್ರವಾಸ ಮಾಡಿ ರಾಜ್ಯ ಮಟ್ಟದ ಪದಾಧಿಕಾರಿಗಳನ್ನು ನೇಮಿಸಿ, ನಂತರ ಜಿಲ್ಲಾ ಮಟ್ಟದ ಪದಾಧಿಕಾರಿ ಆಯ್ಕೆ ಮಾಡಬೇಕಾಗುತ್ತದೆ. ಸ್ಥಳೀಯ ನಾಯಕರ ಜತೆ ಚರ್ಚೆ ಮಾಡಲು ಈ ಪ್ರವಾಸ ಮಾಡುತ್ತಿದ್ದಾರೆ. ಮುಂದೆ ಪಕ್ಷ ಯಾವ ದಿಕ್ಕಿನಲ್ಲಿ ಸಾಗಬೇಕು ಎಂಬುದರ ಬಗ್ಗೆ ಪಕ್ಷದ ಎಲ್ಲ ಹಿರಿಯ ನಾಯಕರು ಚರ್ಚೆ ಮಾಡುತ್ತಿದ್ದಾರೆ. ಪಕ್ಷದ ಆಂತರಿಕ ಸಮೀಕ್ಷೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ನಮ್ಮ ಆಂತರಿಕ ಸಮೀಕ್ಷೆ ಪ್ರಕಾರ ನಮಗೆ ಈಗಾಗಲೇ 136 ಸ್ಥಾನಗಳು ಸಿಗಲಿವೆ. ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರು 150 ಸ್ಥಾನಗಳ ಗುರಿ ನೀಡಿದ್ದು, ಮೊದಲ ಹಂತದ ಸಮೀಕ್ಷೆಯಲ್ಲಿ ನಾವು 136ರಷ್ಟು ತಲುಪಿದ್ದೇವೆ’ ಎಂದು ಉತ್ತರಿಸಿದರು.
ಜಂಟಿ ಸುದ್ದಿಗೋಷ್ಠಿಯಲ್ಲಿ ಸರ್ಕಾರದ ವಿರುದ್ಧ ವಾಗ್ದಾಳಿ
ಪ್ರಚಾರ ಸಮಿತಿ ಕಚೇರಿ ಉದ್ಘಾಟನೆ ನಂತರ ಕೆಪಿಸಿಸಿ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಜಂಟಿ ಸುದ್ದಿಗೋಷ್ಠಿ ನಡೆಸಿದರು.
ರಣದೀಪ್‌ಸಿಂಗ್ ಸುರ್ಜೆವಾಲ ಮಾತನಾಡಿ, ರಾಜ್ಯದಲ್ಲಿನ ರಾಜಕೀಯ ವಿದ್ಯಮಾನಗಳ ವಿಚಾರವಾಗಿ ಚರ್ಚೆ ನಡೆಸಿದ್ದೇವೆ. ಬೊಮ್ಮಾಯಿ ಸರ್ಕಾರ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದು, ಇದರಿಂದ ರಾಜ್ಯದಲ್ಲಿ ಕಾನೂನು ಉಲ್ಲಂಘನೆ ಹೆಚ್ಚಾಗುತ್ತಿದೆ. ಇಡೀ ದೇಶದಲ್ಲಿ ಅತ್ಯಂತ ಅಸಮರ್ಥ ಮುಖ್ಯಮಂತ್ರಿ ಎಂದರೆ ಅದು ಕರ್ನಾಟಕ ರಾಜ್ಯದಲ್ಲಿರುವ ಬೊಮ್ಮಾಯಿ. ಬೊಮ್ಮಾಯಿ ಅವರು 40% ಕಮಿಷನ್ ಸರ್ಕಾರದ ಮುಖಂಡರಾಗಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲರಾಗಿದ್ದಾರೆ. ಕಿಡಿಗೇಡಿಗಳು, ಸಮಾಜಘಾತುಕ ಸಂಘಟನೆಗಳು ಜನರನ್ನು ಹಾಡಹಗಲೇ ಹತ್ಯೆ ಮಾಡುತ್ತಿದ್ದಾರೆ. ಬಿಜೆಪಿಯ ಕಾರ್ಯಕರ್ತರೇ ಹತ್ಯೆಯಾಗುತ್ತಿದ್ದರೂ ಈ ಸರ್ಕಾರ ವೈಮರೆತು ಕೂತಿದೆ. ಆ ಮೂಲಕ ಜನರಿಗೆ ದ್ರೋಹ ಬಗೆಯುತ್ತಿದೆ. ಜನರ ಸಹಕಾರದೊಂದಿಗೆ ಈ ಸರ್ಕಾರವನ್ನು ನಾವು ಕಿತ್ತೊಗೆಯುವವರೆಗೂ ನಾವು ವಿರಮಿಸುವುದಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದೇವೆ ಎಂದರು.
ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಈ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ನಾಶವಾಗಿದ್ದು, ಪ್ರವೀಣ್ ಹತ್ಯೆ ಖಂಡಿಸಿ ಅವರ ಪಕ್ಷದವರೇ ಟೀಕೆ ಮಾಡುತ್ತಿದ್ದಾರೆ. ಹೀಗಾಗಿ ಚುನಾವಣೆ ಯಾವಾಗ ನಡೆಯಲಿದೆ ಎಂದು ಜನರು ಕಾಯುತ್ತಿದ್ದಾರೆ. ಈ ಸರ್ಕಾರದಲ್ಲಿ ಯಾರಿಗೂ ರಕ್ಷಣೆ ಇಲ್ಲ ಎಂದು ಅರ್ಥವಾಗುತ್ತದೆ. ರಾಜ್ಯದಲ್ಲಿ ಇಷ್ಟೊಂದು ಭ್ರಷ್ಟಾಚಾರ, ಕಾನೂನು ಸುವ್ಯವಸ್ಥೆ ಹದಗೆಟ್ಟಿತ್ತ? ಈ ಸರ್ಕಾರದಲ್ಲಿ ಯಾರಿಗೂ ರಕ್ಷಣೆ ಇಲ್ಲ, ಬಡವರಿಗೆ ನ್ಯಾಯ ಸಿಗುವುದಿಲ್ಲ ಎಂದರು.
ಇದನ್ನೂ ಓದಿ | ಪರಮೇಶ್ವರ್ ಕಾಲಿಗೆ ನಮಸ್ಕಾರ, ಸಿದ್ದರಾಮಯ್ಯಗೆ ಹ್ಯಾಂಡ್‌ಶೇಕ್: ಡಿಕೆಶಿ ನಡೆ ಕುತೂಹಲ