Site icon Vistara News

Crime news | ಬೆಂಗಳೂರಿನ ಬೀದಿಯಲ್ಲಿ ಹೆಣಗಳು ಬೀಳುತ್ತಿವೆ, ಹೊಯ್ಸಳ ಗಸ್ತು ಎಲ್ಲಿದೆ?

hoyasala police

ಬೆಂಗಳೂರು: ರಾಜಧಾನಿಯ ಜನನಿಬಿಡ ಬೀದಿಗಳಲ್ಲೇ ರಾತ್ರೋರಾತ್ರಿ ಹೆಣಗಳು ಬೀಳುತ್ತಿವೆ. ಕೊಲೆಪಾತಕಿಗಳು ಬೇರೆ ಜಿಲ್ಲೆಗೆ ಎಸ್ಕೇಪ್‌ ಆಗುತ್ತಾರೆ. ರೌಡಿಗಳು ಹೊಡೆದಾಡಿಕೊಳ್ಳುತ್ತಾರೆ. ಇದೆಲ್ಲವನ್ನೂ ಗಮನಿಸಿದಾಗ, ಬೆಂಗಳೂರಿನಲ್ಲಿ ನಿಜಕ್ಕೂ ಹೊಯ್ಸಳ ಪೊಲೀಸ್ ಗಸ್ತು ವ್ಯವಸ್ಥೆ ಸರಿಯಾಗಿ ಇದೆಯಾ‌ ಎಂಬ ಅನುಮಾನ ಮೂಡಿದೆ.

ಬೆಂಗಳೂರಿನಲ್ಲಿ ಇತ್ತೀಚಿಗೆ ನಡೆದ ಎರಡು ಕೊಲೆ ಪ್ರಕರಣಗಳು ಪೊಲೀಸ್ ಗಸ್ತಿನ ಬಗ್ಗೆ ಅನುಮಾನ ಹುಟ್ಟು ಹಾಕಿವೆ. ಕೆ.ಪಿ ಆಗ್ರಹಾರದಲ್ಲಿ, ವಾಸದ ಮನೆಗಳೇ ಹೆಚ್ಚಾಗಿರುವ ಜಾಗದಲ್ಲಿ ನಡುಬೀದಿಯಲ್ಲಿ ಆರು ಮಂದಿಯ ತಂಡ ವ್ಯಕ್ತಿಯೊಬ್ಬನನ್ನು ಭೀಕರ ವಾಗಿ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿತ್ತು. ಕೊಲೆ ಮಾಡಿದ ಬಳಿಕ ಆರೋಪಿಗಳು ಆರಾಮವಾಗಿ ಬೇರೆ ಜಿಲ್ಲೆಗೆ ಪರಾರಿಯಾಗಿದ್ದರು. ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೂಡ ಕೊಲೆ ಮಾಡಿ, ಹೆಣವನ್ನು ಠಾಣೆ ಪಕ್ಕದಲ್ಲೇ ಹಾಕಿ ಹೋಗಿದ್ದರು. ಇತ್ತೀಚೆಗೆ ಕೆಲವು ಕಡೆ ಬೀದಿಗಳಲ್ಲಿ ಹಾಗೂ ಬಾರ್‌ಗಳಲ್ಲಿ ರೌಡಿ ಗ್ಯಾಂಗ್‌ಗಳು ಹೊಡೆದಾಡಿಕೊಂಡಿದ್ದವು.

ಇದನ್ನೂ ಓದಿ | Murder by husband | ಪೇಟೆಗೆ ಕರೆ ತಂದು ಲಾರಿ ಕೆಳಗೆ ತಳ್ಳಿ ಪತ್ನಿಯನ್ನು ಕೊಲೆ ಮಾಡಿದ ಪತಿ!

ಕೊಲೆ ಮಾಡಿ ಅನಾಯಸವಾಗಿ ಆರೋಪಿಗಳು ಹೋಗುತ್ತಿದ್ದರೂ, ಪೊಲೀಸ್ ಇಲಾಖೆ ಮಾತ್ರ ಹೊಯ್ಸಳ ಗಸ್ತು ತುಂಬಾ ಚೆನ್ನಾಗಿದೆ ಎಂದು ಹೇಳುತ್ತಿದೆ. ಜನನಿಬಿಡ ಸ್ಥಳಗಳಲ್ಲೇ ಕೊಲೆ ಮಾಡಿ ಹೋದರೂ ಪೊಲೀಸ್ ಗಸ್ತಿಗೆ ಮಾತ್ರ ಆರೋಪಿಗಳು ಸಿಗುತ್ತಿಲ್ಲ. ಈ ಹಿಂದೆ ಬೀಟ್‌ನಲ್ಲಿ ಘಟನೆ ನಡೆದಿದ್ದರೆ ಆಯಾ ಬೀಟ್ ಪೊಲೀಸರೇ ಹೊಣೆ ಎಂದು ಆಗಿನ ಪೊಲೀಸ್ ಆಯುಕ್ತ ಕಮಲ್ ಪಂಥ್ ಹೇಳಿದ್ದರು. ಅಷ್ಟಲ್ಲದೆ ತಮ್ಮ ಚೇಂಬರ್‌ನಲ್ಲಿಯೇ ಕೂತು ಹೊಯ್ಸಳ ಬೀಟ್ ಅನ್ನು ಮಾನಿಟರ್ ಮಾಡುತ್ತಿದ್ದರು. ಹೀಗಾಗಿ ಬೀಟ್‌ಗಳನ್ನು ಪೊಲೀಸರು ಶ್ರದ್ಧೆಯಿಂದ ಮಾಡುತ್ತಿದ್ದರು.

ಸದ್ಯ ಅಂತಹ ಬಿಗಿ ಇಲ್ಲದ ಕಾರಣ ಹೀಗಾಗಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಕೃತ್ಯಗಳು ನಡೆದ ಬಳಿಕವೂ ಆರೋಪಿಗಳು ಸಿಗದೆ ಪರಾರಿಯಾಗುತ್ತಿದ್ದಾರೆ. ಹೊಯ್ಸಳ ಬೀಟ್‌ ಇನ್ನಷ್ಟು ಚುರುಕಾಗಬೇಕಿದೆ ಎನ್ನುತ್ತಿದ್ದಾರೆ ಜನ.

ಇದನ್ನೂ ಓದಿ | Murder Case | 24 ಬಾರಿ ಕಲ್ಲು ಎತ್ತಿಹಾಕಿ ಯುವಕನ ಕೊಲೆ; ಆರೋಪಿಗಳನ್ನು ಬಂಧಿಸಿದ ಪೊಲೀಸರು

Exit mobile version