ಬೆಂಗಳೂರು: ರಾಜಧಾನಿಯಲ್ಲಿ ಕಳೆದೆರಡು ದಿನದಿಂದ ಇದ್ದಕ್ಕಿದ್ದಂತೆ ಮಳೆ ಸುರಿದು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಇದರ ಬೆನ್ನಿಗೇ ಬೆಂಗಳೂರಿನಲ್ಲಿ ಸಾಂಕ್ರಾಮಿಕ ರೋಗಗಳಾದ ಡೆಂಘೆ ಹಾಗೂ ಮಲೇಯಾ ಉಲ್ಬಣಗೊಂಡಿದೆ.
ನೀರು ಸರಾಗವಾಗಿ ಹರಿದು ಹೋಗುವ ಕಡೆಗಳಲ್ಲಿ ಸೊಳ್ಳೆಗಳು ಸಂತಾನೋತ್ಪತ್ತಿ ಮಾಡುವುದಿಲ್ಲವಾದ್ಧರಿಂದ ಅಲ್ಲಿ ಡೆಂಢೆ, ಮಲೇರಿಯಾದಂತಹ ಅಪಾಯ ಕಡಿಮೆ. ಆದರೆ ಇತ್ತೀಚಿನ ದಿನಗಳಲ್ಲಿ ಬೆಂಗಳೂರಿಗರು ಸೊಳ್ಳೆ ಕಾಟದಿಂದ ರೋಸಿ ಹೋಗಿದ್ದಾರೆ. ರಾಜಕಾಲುವೆಗಳು, ಅನೇಕ ತಗ್ಗು ಪ್ರದೇಶಗಳಲ್ಲಿ ನೀರು ಸರಾಗವಾಗಿ ಹರಿದುಹೋಗಲು ಸಾಧ್ಯವಾಗುತ್ತಿಲ್ಲ. ಬೆಂಗಳೂರಿನ ಅನೇಕ ಕಡೆಗಳಲ್ಲಿ ಮೂಲಸೌಕರ್ಯ ಕಾಮಗಾರಿಗಳೂ ನಡೆಯುತ್ತಿರುವುದರಿಂದ ನೀರು ನಿಲ್ಲಲು ಅವಕಾಶ ಮಾಡಿಕೊಟ್ಟಿದೆ.
ಈ ವರ್ಷ ಬೆಂಗಳೂರಿನಲ್ಲಿ 1,793 ಡೆಂಘೆ ಪ್ರಕರಣ ವರದಿಯಾಗಿದೆ ಎಂದು ಬಿಬಿಎಂಪಿ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಕಳೆದ ವರ್ಷವಿಡೀ ಬೆಂಗಳೂರಿನಲ್ಲಿ 1,800 ಡೆಂಘೆ ಪ್ರಕರಣ ವರದಿಯಾಗಿತ್ತು. ಮಲೇರಿಯಾ ಪ್ರಕರಣಗಳಲ್ಲೂ ಕಳೆದ ವರ್ಷಕ್ಕಿಂತ ವಿಪರೀತ ಹೆಚ್ಚಳವಾಗಿದ್ದು, ಇನ್ನೂ ಅಂಕಿ ಅಂಶಗಳು ಲಭ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಹೀಗೆಯೇ ಪ್ರಕರಣಗಳು ಹೆಚ್ಚಾಗುವ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೆ ಬಿಬಿಎಂಪಿ ಹಾಗೂ ರಾಜ್ಯ ಆರೋಗ್ಯ ಇಲಾಖೆ ಕ್ರಮವಹಿಸಲು ಮುಂದಾಗಿವೆ.
ನೀರು ನಿಲ್ಲದಂತೆ ತಡೆಯಲು ಸೂಚನೆ
ನೀರು ನಿಲ್ಲುವ ಸ್ಥಳಗಳನ್ನು ಗುರುತಿಸಿ ಸಮಸ್ಯೆ ಬಗೆಹರಿಸುವಂತೆ ಎಲ್ಲ ವಲಯಗಳಿಗೂ ಬಿಬಿಎಂಪಿ ವಿಶೇಸ ಆಯುಕ್ತರು ಸೂಚನೆ ನೀಡಿದ್ದಾರೆ. ಶಾಲಾ ಕಾಲೇಜು ಬಳಿ ಸೊಳ್ಳೆಗಳು ಹೆಚ್ಚಾಗುತ್ತಿವೆ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ನಿಗಾ ವಹಿಸಬೇಕಿದೆ. ತಗ್ಗು ಪ್ರದೇಶಗಳಲ್ಲಿರುವ ಮನೆಗಳಲ್ಲೂ ಆರೋಗ್ಯ ಸಿಬ್ಬಂದಿ ತೆರಳಿ ಪರಿಶೀಲನೆ ನಡೆಸಬೇಕು. ಈ ಸ್ಥಳಗಳಲ್ಲಿ ನೀರು ಸರಾಗವಾಗಿ ಹರಿಯುವಂತೆ ಮಾಡುವುದರ ಜತೆಗೆ ಲಾರ್ವಿಸೈಡ್ ಸಿಂಪಡಣೆ ಹಾಗೂ ಫಾಗ್ ಮಾಡಲು ತಯಾರಿ ನಡೆಸಲು ಸೂಚನೆ ನೀಡಿದ್ದಾರೆ.
ಹೆಚ್ಚಿನ ಓದಿಗಾಗಿ: ತಪ್ಪು ಮಾಡದಿದ್ದರೂ ಬೀಳುತ್ತೆ ಟ್ರಾಫಿಕ್ ದಂಡ !: ಪಾರಾಗಲು ಇಲ್ಲಿವೆ 6 ಸೂತ್ರಗಳು
ಪೂರ್ವ ವಿಭಾಗದಲ್ಲಿ ಹೆಚ್ಚು ಪ್ರಕರಣ
ಬೆಂಗಳೂರಿನ ಬಹುತೇಕ ಪ್ರದೇಶಗಳಲ್ಲಿ ಡೆಂಘೆ ಪ್ರಕರಣಗಳು ವರದಿಯಾಗಿದೆ. ಆದರೂ ಪೂರ್ವ ವಲಯದಲ್ಲಿ ಹೆಚ್ಚು ಸಮಸ್ಯೆ ಕಾಣಿಸಿಕೊಂಡಿದ್ದು, ಶೀಗ್ರ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ವಲಯ | ಡೆಂಘೆ ಪ್ರಕರಣಗಳು |
ಬೊಮ್ಮನಹಳ್ಳಿ | 104 |
ದಾಸರಹಳ್ಳಿ | 38 |
ಪೂರ್ವ | 653 |
ಮಹದೇವಪುರ | 342 |
ರಾಜರಾಜೇಶ್ವರಿ ನಗರ | 122 |
ದಕ್ಷಿಣ | 170 |
ಪಶ್ಚಿಮ | 162 |
ಯಲಹಂಕ | 202 |
ಡೆಂಘೆ, ಮಲೇರಿಯಾ ಬಾರದಂತೆ ತಡೆಯುವುದು ಹೇಗೆ?
- ಮನೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು
- ನೀರು ಹೆಚ್ಚಾಗಿ ಶೇಖರಣೆಯಾಗದಂತೆ ಕ್ರಮ ಕೈಗೊಳ್ಳಬೇಕು
- ಸೊಳ್ಳೆಗಳು ಲಾರ್ವಾ ಉತ್ಪತ್ತಿ ಮಡಲು ಅವಕಾಶ ನೀಡದಂತೆ ದ್ರಾವಣ ಸಿಂಪಡೆಣೆ ಮಾಡಬೇಕು
- ದೇಹವನ್ನು ಸಂಪೂರ್ಣವಾಗಿ ಬಟ್ಟೆಯಿಂದ ರಕ್ಷಣೆ ಮಾಡಬೇಕು
- ಮನೆಯಲ್ಲಿ ಸೊಳ್ಳೆ ಪರದೆ ಬಳಕೆ ಮಾಡಬೇಕು
- ಸೊಳ್ಳೆ ಪರದೆ ಸಾಧ್ಯವಾಗದ ಸ್ಥಳ, ಸಮಯದಲ್ಲಿ ಸೊಳ್ಳೆ ನಿರೋಧಕ ಕ್ರೀಂ ಬಳಸಬಹುದು
- ಮನೆಯಲ್ಲಿ ಸೊಳ್ಳೆಗಳನ್ನು ಆಕರ್ಷಣೆ ಮಾಡುವಂತಹ ಕೊಳೆತ ಪದಾರ್ಥಗಳಿದ್ದರೆ ತೆರವುಗೊಳಿಸಿ
- ಡೆಂಘೆ ಹಾಗೂ ಮಲೇರಿಯಾ ಗುಣಲಕ್ಷಣಗಳನ್ನು ತಿಳಿದು ಅಂತಹ ಸಂದರ್ಭದಲ್ಲಿ ವೈದ್ಯರ ಬಳಿ ಚಿಕಿತ್ಸೆ ಪಡೆಯಿರಿ
ಡೆಂಘೆಯ ಪ್ರಮುಖ ಗುಣಲಕ್ಷಣಗಳು
- ಜ್ವರ
- ತೀವ್ರ ತಲೆ ನೋವು
- ಮೈ ಕೈ ನೋವು
- ಸಂಧಿ ನೋವು
- ಹಸಿವಾಗದಿರುವಿಕೆ
- ಸೀನುವಿಕೆ
- ವಾಂತಿ
- ಚರ್ಮದಲ್ಲಿ ಉರಿ