ಬೆಂಗಳೂರು: ಶಿಕ್ಷಣ ಇಲಾಖೆಯಿಂದ ಅನುಮತಿ ಇಲ್ಲದೆ ಶಾಲೆ ನಡೆಸುತ್ತಿದ್ದ ಮಾಗಡಿ ರಸ್ತೆಯ ಹೊಸಹಳ್ಳಿ ಗೊಲ್ಲರಪಾಳ್ಯದ ಆರ್ಕಿಡ್ ದಿ ಇಂಟರ್‌ನ್ಯಾಷನಲ್ ಸ್ಕೂಲ್ ಮೇಲೆ ಎಫ್ಐಆರ್ ದಾಖಲಾಗಿದೆ. ಶಿಕ್ಷಣ ಇಲಾಖೆಯಿಂದ ಅನುಮತಿ ಪಡೆಯದೇ ಶಾಲೆ ಪ್ರಾರಂಭ ಮಾಡಿರುವ ಬಗ್ಗೆ ಆರೋಪ ಕೇಳಿಬಂದಿದ್ದು, ಆರ್ಕಿಡ್ ಇಂಟರ್‌ನ್ಯಾಷನಲ್ ಶಾಲೆಯ ಕಾರ್ಯದರ್ಶಿ ಹಾಗೂ ಶಾಲಾ ಪ್ರಾಂಶುಪಾಲರ ವಿರುದ್ಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬ್ಯಾಡರಹಳ್ಳಿ ಠಾಣೆಯಲ್ಲಿ ಶಾಲೆ ಮೇಲೆ ಎಫ್ಐಆರ್ ದಾಖಲಿಸಿದ್ದು, ಶಾಲೆಯನ್ನು ತಾತ್ಕಾಲಿಕವಾಗಿ ಬಿಇಓ ರಮೇಶ್ ಸ್ಥಗಿತಗೊಳಿಸಿದ್ದಾರೆ. ಬೆಂಗಳೂರು ಉತ್ತರ ವಲಯ 1 ರಲ್ಲಿ ಬರುವ ಆರ್ಕಿಡ್ ದಿ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ 1ರಿಂದ 7ನೇ ತರಗತಿವರೆಗೆ ಪಾಠ ಮಾಡಲಾಗುತ್ತದೆ. ಆದರೆ, ಈಗ ಅನುಮತಿ ಇಲ್ಲದೇ ಪ್ರಾರಂಭ ಮಾಡಿದ್ದರಿಂದ ತರಗತಿಗಳನ್ನು ಸ್ಥಗಿತಗೊಳಿಸಲಾಗಿದೆ. ಆದರೆ, ಶಾಲೆಯಲ್ಲಿ ಎಲೆಕ್ಟ್ರಿಕ್ ಕೆಲಸ ನಡೆಯುತ್ತಿದೆ ಎಂಬ ಸಬೂಬು ಹೇಳಿ ಶಾಲೆಯಿಂದ ಪೋಷಕರಿಗೆ ತಪ್ಪು ಮಾಹಿತಿ ನೀಡಿದ್ದಾರೆನ್ನಲಾಗಿದೆ.
ಆನ್‌ಲೈನ್ ಕ್ಲಾಸ್ ಮಾಡುವುದಾಗಿ ಮೆಸೇಜ್ ಕಳುಹಿಸಲಾಗಿದೆ. ಆದರೆ, ಶಾಲೆ ಬಳಿ ಬಂದಾಗಲೇ ಪೋಷಕರಿಗೆ ಅಸಲಿ ಸತ್ಯ ತಿಳಿದಿದೆ. ಲಕ್ಷ ಲಕ್ಷ ಹಣ ಪಡೆದು ವಂಚನೆ ಮಾಡಲಾಗಿದೆಯೇ ಎಂಬ ಅನುಮಾನ ಈಗ ಪೋಷಕರಿಗೆ ಬಂದಿದ್ದು, ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.
ಇದನ್ನೂ ಓದಿ| ಬೆಳಗಾವಿ ಶಾಲಾ ಕಟ್ಟಡ ದುರಸ್ತಿ ಮಾಡಿ ಎಂದವರ ಮೇಲೆಯೇ FIR ದಾಖಲು?