ಬೆಂಗಳೂರಿನಲ್ಲಿ ಸಂಜೆಯಾದರೆ ಸಾಕು, ಅದೂ ಸಂಜೆಮಳೆ ಸುರಿದು ನಿಂತು ತಂಪಾದ ಗಾಳಿ ಬೀಸುತ್ತಿರಲು, ಮನೆಯೊಳಗೆ ಬಂಧಿಯಾಗಿ ಕೂರಲು ಯಾರಿಗೆ ತಾನೇ ಮನಸ್ಸಾದೀತು. ತಣ್ಣಗಿನ ಗಾಳಿಗೆ ಮೈಯೊಡ್ಡಿ ಸಂಜೆ ಗಲ್ಲಿಯೊಂದರಲ್ಲಿ ಇಷ್ಟದ್ದನ್ನು ಇಷ್ಟಪಟ್ಟವರೊಡನೆ ಕೂತು ತಿಂದರೆ ಮನಸ್ಸು ಹಗುರ, ಹೊಟ್ಟೆ ಭಾರ.
ಹಾಗಾದರೆ ಬೆಂಗಳೂರಿನಲ್ಲಿ ಟ್ರೈ ಮಾಡಲೇಬೇಕಾದ ತಿಂಡಿ ಅಡ್ಡಾಗಳು ಯಾವುದು ಎಂದರೆ ಹೆಸರಿಸುವ ಕಷ್ಟ ಯಾರಿಗೂ ಬೇಡ. ಪಟ್ಟಿ ಹನುಮಂತನ ಬಾಲದ ಹಾಗೆ ಉದ್ದ ಬೆಳೆದೀತು. ಒಂದೊಂದು ಏರಿಯಾದಲ್ಲೇ ಕನಿಷ್ಟ ಐದಾರು ಪ್ರಸಿದ್ಧ ತಿಂಡಿ ಅಡ್ಡಾಗಳು ಖಂಡಿತ ಇದ್ದೇ ಇರುತ್ತದೆ. ಹನುಮಂತನ ಬಾಲ ಉದ್ದವಿದ್ದರೂ ಕಷ್ಟಪಟ್ಟು ಕೆಲವನ್ನು ಇಲ್ಲಿ ಕೊಡುವ ಪ್ರಯತ್ನ ಮಾಡಲಾಗಿದೆ.
1. ವಿವಿ ಪುರಂ ತಿಂಡಿಬೀದಿ: ಈ ಹೆಸರು ಕೇಳದವರು ಬೆಂಗಳೂರಿನಲ್ಲಿ ಇದ್ದರೆ ಅವರದ್ದೂ ಒಂದು ಜನ್ಮವಾ ಎಂದು ತಿಂಡಿಪ್ರಿಯರು ಬಾಯಿ ಬಡಕೊಂಡಾರು. ದಶಕಗಳಿಂದ ವಿವಿ ಪುರಂಗೆ ಅಂಥ ಹೆಸರು. ಜೇಬಿನಲ್ಲಿ ದುಡ್ಡಿಲ್ಲದಿದ್ರೂ, ಚಿಲ್ಲರೆ ಕಾಸು ಎಣಿಸಿಕೊಂಡು ಇಲ್ಲಿ ಬಂದರೂ ಹೊಟ್ಟೆ ಬಿರಿಯುವಷ್ಟು ತಿಂದುಕೊಂಡು ಹೋಗಬಹುದು. ಇಲ್ಲಿನ ಪೊಟೇಟೋ ಟ್ವಿಸ್ಟರ್, ಸಿಹಿ ಬೇಳೆ ಹೋಳಿಗೆ, ಮಸಾಲೆ ದೋಸೆ, ಶಿವಣ್ಣ ಗುಲ್ಕಂದ್ ಸೆಂಟರಿನ ರೋಸ್ ಗುಲ್ಕಂದ್ ಮಾತ್ರ ಮರೆಯದೆ ತಿನ್ನಲೇಬೇಕು.
2. ಶ್ರೀಸಾಗರ್-ಸಿಟಿಆರ್, ಮಲ್ಲೇಶ್ವರಂ: ಬಾಯಲ್ಲಿ ನೀರೂರಿಸುವ ಕ್ರಿಸ್ಪಿ ಬೆಣ್ಣೆ ಮಸಾಲೆ ದೋಸೆ ತಿನ್ನಬೇಕೆಂದರೆ ಸಿಟಿಆರ್‌ಗೆ ಭೇಟಿ ಕೊಡಲೇಬೇಕು. ಆರು ದಶಕಗಳಿಂದ ದೋಸೆಗೆ ಹೆಸರುವಾಸಿಯಾಗಿರುವ ಇಲ್ಲಿ ಇಡ್ಲಿ ವಡೆ, ಕೇಸರಿಭಾತ್, ಪೂರಿ ಸಾಗು ಕೂಡಾ ಚೆನ್ನಾಗಿರುತ್ತದೆ.
3. ಹರಿ ಸೂಪರ್ ಸ್ಯಾಂಡ್‌ವಿಚ್, ಜಯನಗರ: ಜಯನಗರದಲ್ಲಿ ಆ ತುದಿಯಿಂದ ಈ ತುದಿಗೆ ಅಡ್ಡಾಡಿದರೆ ತಿನ್ನಲು ಎಷ್ಟೆಲ್ಲ ಅವಕಾಶಗಳಿವೆ! ಜಯನಗರ ಮೂರನೇ ಬ್ಲಾಕಿನ ಹರಿ ಸೂಪರ್ ಸ್ಯಾಂಡ್‌ವಿಚ್ ಕೂಡಾ ಅಂಥದ್ದೇ ಒಂದು. ಇಲ್ಲಿ ಬಗೆಬಗೆಯ ಸ್ಯಾಂಡ್‌ವಿಚ್‌ಗಳೂ, ಚಾಟ್‌ಗಳೂ ದೊರೆಯುತ್ತವೆ.
4. ಖಾನ್ ಸಾಹೇಬ್ ಗ್ರಿಲ್ಸ್ ಅಂಡ್ ರೋಲ್ಸ್, ಇಂದಿರಾನಗರ: ಕ್ರಂಚೀ ರೋಲ್‌ಗಳು ಹಾಗೂ ಗ್ರಿಲ್‌ಗಳಲ್ಲಿ ವೈರೈಟಿ ತಿನ್ನಬೇಕಾದಲ್ಲಿ ಇಂದಿರಾನಗರ ಎರಡನೇ ಹಂತದಲ್ಲಿರುವ ಖಾನ್ ಸಾಹೇಬರಲ್ಲಿಗೆ ಭೇಟಿ ಕೊಡಬೇಕು. ಇಲ್ಲಿನ ಕಟಿ ರೋಲ್ಸ್, ಚಿಕನ್ ಸೀಖ್ ರೋಲ್ ಅದ್ಭುತ.
5.ಪುಚ್ಕಾಸ್, ಮಾರತ್‌ಹಳ್ಳಿ: ಮಾರತ್ ಹಳ್ಳಿಯ ಸಿಲ್ವರ್ ಸ್ಪ್ರಿಂಗ್ ಲೇಔಟ್‌ನ ಪುಚ್ಕಾಸ್ ಪಾನಿಪುರಿಗೆ ಹೇಳಿ ಮಾಡಿಸಿದ್ದು. ಇಲ್ಲಿನ ಪಾನಿಪುರಿಯ ಜೊತೆಗೆ ಬಿಸಿಬಿಸಿ ಜಿಲೇಬಿ ಕೂಡಾ ಎಲ್ಲರ ಹಾಟ್ ಫೇವರಿಟ್.
6. ಚಟರ್ ಪಟರ್, ಬನಶಂಕರಿ: ಚಾಟ್‌ನಲ್ಲೂ ವೆರೈಟಿ ಬೇಕೆಂದರೆ ಇಲ್ಲಿಗೆ ಬರಬೇಕು. ಬೇಲ್‌ಪುರಿ, ದಬೇಲಿ, ಬಗೆಬಗೆಯ ಫ್ಲೇವರ್ಡ್ ಪಾನಿಪುರಿಗಳು, ಬ್ಲ್ಯಾಕ್‌ಕರೆಂಟ್ ಗಪಾಗಪ್ ಸೇರಿದಂತೆ ತರಹೇವಾರಿ ಹೆಸರಿನ ಚಾಟ್‌ಗಳು ಇಲ್ಲಿ ಲಭ್ಯ. ಹೆಸರಿಗೆ ತಕ್ಕಂತೆ ಚಟರ್ ಪಟರ್!
7. ದಾದರ್ ವಡಾಪಾವ್, ಇಂದಿರಾನಗರ: ಹೆಸರೇ ಹೇಳುವಂತೆ ಮುಂಬೈ ಶೈಲಿಯ ವಡಾಪಾವ್ ತಿನ್ನಬೇಕೆನಿಸಿದರೆ ಇದು ಹೇಳಿ ಮಾಡಿಸಿದ ಜಾಗ. ಇಲ್ಲಿ ಸೆಝ್ವಾನ್, ಆಲೂ, ಪನೀರ್ ಮತ್ತಿತರ ಹಲವು ಬಗೆಯ ವಡಾಪಾವ್ ಇವೆ. ಇಲ್ಲಿನ ಚಟ್ ಪಟಾ ವಡಾಪಾವ್, ಚಟ್ನಿ ಗ್ರಿಲ್ಡ್ ಸ್ಯಾಂಡ್‌ವಿಚ್ ಎಲ್ಲರ ಹಾಟ್ ಫೇವರಿಟ್.
ಇದನ್ನೂ ಓದಿ: ಒಲಿಂಪಿಕ್ಸ್‌ಗೆ ಸೇರಿಸಿ: ವಿದ್ಯಾರ್ಥಿ ಭವನದ ವೇಯ್ಟರ್ ಬಗ್ಗೆ ಆನಂದ್ ಮಹೀಂದ್ರ ಟ್ವೀಟ್
8. ಶಾಹಿ ದರ್ಬಾರ್, ಯಶವಂತಪುರ: ಮತ್ತೀಕೆರೆಯ ಎಂ ಎಸ್ ರಾಮಯ್ಯ ಮೈದಾನದ ಪಕ್ಕದಲ್ಲೇ ಇರುವ ಶಾಹಿ ದರ್ಬಾರ್ ಬಗೆಬಗೆಯ ರೋಲ್‌ಗಳಿಗೆ ಫೇಮಸ್ಸು. ಎಗ್ ರೋಲ್, ವೆಜ್ ರೋಲ್, ಪನೀರ್ ರೋಲ್, ಚಿಕನ್ ರೋಲ್ ಇಲ್ಲಿನ ಕೆಲವು ತಿನ್ನಲೇಬೇಕಾದ ವೆರೈಟಿಗಳು.
9. ಆರ್ ಆರ್ಸ್ ಬ್ಲೂ ಮೌಂಟ್ ಅಂಡ್ ಬಾಂಬೆ ಸ್ಯಾಂಡ್‌ವಿಚ್, ವಸಂತನಗರ: ವಸಂತನಗರದ ಎಂಟನೇ ಮುಖ್ಯರಸ್ತೆಯಲ್ಲಿರುವ ಈ ಅಂಗಡಿಯ ಸುತ್ತಮುತ್ತ ಹಲವಾರು ಇಂಥದ್ದೇ ಬಗೆಯ ಅಂಗಡಿಗಳಿರುವುದರಿಂದ ಈ ಏರಿಯಾವನ್ನೇ ಲೋಫರ್ಸ್ ಲೇನ್ ಎಂದೂ ಕರೆಯುತ್ತಾರಂತೆ. ಇಲ್ಲಿನ ಚಿಕನ್ ಬೋಟ್, ಮೆಕ್ಸಿಕನ್ ಚಾಟ್ ಬಹಳ ರುಚಿ.
10. ಚೆಟ್ಟೀಸ್ ಕಾರ್ನರ್, ಕುಮಾರಪಾರ್ಕ್ ವೆಸ್ಟ್: ನೀವು ಹೊಸ ತಲೆಮಾರಿನ ಸ್ಟ್ರೀಟ್ ಫುಡ್ ಪ್ರಿಯರಾದಲ್ಲಿ ಈ ಶಾಪ್ ನಿಮಗಾಗಿಯೇ ಇದೆ. ನಾನಾ ಪ್ರಯೋಗಗಳಿಗೆ ಸದಾ ತೆರೆದ ಮನಸ್ಸಿರುವ ಸಹೋದರರಿಬ್ಬರು ೧೯೯೭ರಲ್ಲಿ ಶುರುಮಾಡಿದ ಇದರಲ್ಲಿ ಪಾಶ್ಚಿಮಾತ್ಯ ಹಾಗೂ ಭಾರತೀಯ ರುಚಿಗಳ ಸಂಗಮವಿದೆ. ಬೆಂಗಳೂರಿಗೆ ಮೊದಲ ಬಾರಿಗೆ ಪೊಟೇಟೋ ಟ್ವಿಸ್ಟರ್ ಪರಿಚಯಿಸಿದ ಕೀರ್ತಿಯೂ ಇವರಿಗೇ ಸಲ್ಲುತ್ತದೆ. ಬನ್ ನಿಪ್ಪಟ್ ಮಸಾಲಾ, ಮಸಾಲಾ ಸೋಡಾ ಇಲ್ಲಿ ಬಲು ರುಚಿ.
ಇದನ್ನೂ ಓದಿ: Healthy breakfast | ಬೆಳಗಿನ ತಿಂಡಿಗಳು: ನಮ್ಮಲ್ಲೇ ಇದೆ, ನಮ್ಮ ಆರೋಗ್ಯದ ಸೀಕ್ರೆಟ್!