Site icon Vistara News

ಮಳೆಗೆ ಮುಳುಗಿದ ಬೆಂಗಳೂರು ಪ್ರದೇಶಗಳು: ಮನೆ, ದೇವಸ್ಥಾನಕ್ಕೆ ನುಗ್ಗಿದ ನೀರು

ಬೆಂಗಳೂರು: ರಾಜ್ಯದ ಬೊಕ್ಕಸಕ್ಕೆ 60% ಆದಾಯ ತಂದುಕೊಡುವ ಬೆಂಗಳೂರಿನಲ್ಲಿ ಮೂಲಸೌಕರ್ಯ ಕಲ್ಪಿಸಲು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ(BBMP) ವಿಫಲವಾಗಿದೆ ಎನುವುದನ್ನು ಕೇವಲ ಎರಡು ದಿನ ಸುರಿದ ಮಳೆ (Bengaluru Rains) ನಿರೂಪಿಸಿದೆ.

ಗುರುವಾರ ಸಂಜೆ ಸುರಿದ ಮಳೆಗೆ ರಾಜಧಾನಿಯ ಅನೇಕ ಪ್ರತಿಷ್ಠಿತ ಬಡಾವಣೆಗಳ ರಸ್ತೆ ಹಾಗೂ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಮೊದಲೇ ಎಚ್ಚೆತ್ತುಕೊಳ್ಳದ ಬಿಬಿಎಂಪಿ ಅಧಿಕಾರಿಗಳು ನಂತರ ಸಿಬ್ಬಂದಿಯನ್ನು ಕಳುಹಿಸಿ ಮನೆಗಳಿಂದ ನೀರು ಹಾಗೂ ಹೂಳನ್ನು ತೆರವುಗೊಳಿಸುವ ಕೆಲಸ ಮಾಡಿದ್ದಾರೆ.

ಸಂಜೆ ಮಳೆ ಬಂದ ಕೆಲ ಹೊತ್ತಿಗೇ ಬಿಬಿಎಂಪಿ ಸಹಾಯವಾಣಿಗೆ ದೂರುಗಳ ಸುರಿಮಳೆ ಬಂದಿದೆ. ಮಳೆಯಿಂದ ನೀರು ನುಗ್ಗುವುದರ ಜತೆಗೆ ಅನೇಕ ಕಡೆಗಳಲ್ಲಿ ಮರಗಳು ಬಿದ್ದು ತೊಂದರೆ ಆಗಿದ್ದ ದೂರುಗಳೂ ಬಂದಿವೆ. ಕಾಮಾಕ್ಯ ಲೇಔಟ್‌, ಬಿಳೇಕಹಳ್ಳಿ ಹೊಸಕೆರೆಹಳ್ಳಿ ಮೂಕಾಂಬಿಕೆ ನಗರ, ಗುರಪ್ಪನ ಪಾಳ್ಯ, ಕಸ್ತೂರಿ ನಗರ ಮುಂತಾದೆಡೆಗಳಿಂದ ನೀರು ನುಗ್ಗಿದ ಕುರಿತು ದೂರುಗಳು ಸಲ್ಲಿಕೆಯಾದವು.

ಕತ್ರಿಗುಪ್ಪೆ ಚನ್ನಮ್ಮಕೆರೆ ಅಚ್ಚುಕಟ್ಟು ಪ್ರದೇಶ, ಎಐಸಿ ಕಾಲೋನಿ ಯಶ್ವಂತಪುರ, ಹನುಮಂತನಗರ, ಇಂದಿರಾ ನಗರ, ಚಾಮರಾಜಪೇಟೆ, ಜಯನಗರ 36ನೇ ಅಡ್ಡರಸ್ತೆ, ಕೋರಮಂಗಲ 8ಬೇ ಬ್ಲಾಕ್‌, ನಾಯಂಡನಹಳ್ಳಿ ಮುಂತಾದೆಡೆಗಳಲ್ಲಿ ಮರಗಳು ಉರುಳಿ ಬಿದ್ದ ದೂರು ಸಲ್ಲಿಕೆಯಾದವು.

ಕಾಮಾಕ್ಯ ಲೇಔಟ್‌ನಲ್ಲಿ ಅತಿ ಹೆಚ್ಚು ತೊಂದರೆ ಆಗಿದೆ. ಇನ್ನೇನು ರಾತ್ರಿ ಊಟಕ್ಕೆ ಸಿದ್ಧವಾಗುತ್ತಿದ್ದ ಜನರ ಮನೆಗಳಿಗೆ ನೀರು ನುಗ್ಗಿದೆ. ಮಲೆಯಲ್ಲಿದ್ದ ಪೀಠೋಪಕರಣ, ಟೈಲರಿಂಗ್‌ ಯಂತ್ರ, ಧವಸ ಧಾನ್ಯಗಳು ನೀರಿಗೆ ಆಹುತಿಯಾಗಿವೆ. ಸ್ಥಳಕ್ಕೆ ತೆರಳಿದ 80 ಬಿಬಿಎಂಪಿ ಸಿಬ್ಬಂದಿಯಿಂದ ಸ್ವಚ್ಚತಾ ಕಾರ್ಯ ನಡೆಸಲಾಯಿತು. ಒಂದು ಮನೆಗೆ ಇಬ್ಬರು ಬಿಬಿಎಂಪಿ ಸಿಬ್ಬಂದಿಯನ್ನು ಅಧಿಕಾರಿಗಳು ನಿಯೋಜನೆ ಮಾಡಿದ್ದರು. ಮನೆಗಳಿಗೆ ನೀರಿನ ಸಂಪರ್ಕ ಕಡಿತಗೊಂಡಿರುವುದರಿಂದ ಸ್ವಚ್ಛತಾ ಕಾರ್ಯಕ್ಕೆ ತೊಂದರೆಯಾಯಿತು.

ರಿಂಗ್ ರೋಡಿನ ಪಕ್ಕದ ಚರಂಡಿಯ ಬಳಿ ಕೆಲಸ ನಡೆಯುತ್ತಿದೆ. ಇಲ್ಲಿನ ಅಸರ್ಮಪಕವಾದ ಕಾಮಗಾರಿಯಾಗಿಯಿಂದ ಈ ರೀತಿಯ ತೊಂದರೆಯಾಗಿದೆ. ನೂರಾರು ಮನೆಗಳಿಗೆ ಲಕ್ಷಗಟ್ಟಲೆ ಹಾನಿಯಾಗಿದೆ. ಅಧಿಕಾರಿಗಳು ಯಾರೂ ಸ್ಥಳಕ್ಕೆ ಆಗಮಿಸಿಲ್ಲ. ಚುನಾವಣೆಯ ಸಂಧರ್ಭದಲ್ಲಿ ಬರುತ್ತಾರೆ, ಆದರೆ ಈಗ ಯಾರೂ ಬಂದಿಲ್ಲ. ನಮಗೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಬೇಕು ಎಂದು ಕಾಮಾಕ್ಯ ಲೇಔಟ್‌ ನಿವಾಸಿಗಳು ಆಗ್ರಹಿಸಿದರು.

ಮೂವರನ್ನು ಬದುಕಿಸಿದ ಸ್ಥಳೀಯರು

ಒಂದು ಮನೆಯ ಒಳಗೆ ವೃದ್ಧ, ಅನಾರೋಗ್ಯಪೀಡಿತ ಸೇರಿ ಮೂವರು ಸಿಲುಕಿಕೊಂಡಿದ್ದರು. ಮನೆಯ ಛಾವಣಿಯ ಶೀಟ್ ಒಡೆದು ಅವರನ್ನು ಮೇಲೆತ್ತಿದ ಸ್ಥಳೀಯರು ರಕ್ಷಣೆ ಮಾಡಿದರು. ಮನೆಗೆ ನಿನ್ನೆಯಷ್ಟೇ ತಂದಿದ್ದ ರೇಷನ್ ಮಳೆನೀರಿಗೆ ನೆನದಿದೆ. ರಾತ್ರಿ ನಾವು ಮನೆಯಿಂದ ಹೊರ ಬರದೇ ಇದ್ದರೆ ಸತ್ತೇ ಹೋಗುತ್ತಿದ್ದೆವು. ನಮ್ಮನ್ನು ಬದುಕಿಸಿದ ನಿಮಗೆ ಧನ್ಯವಾದ ಎಂದು ಕಣ್ಣೀರಿಡುತ್ತಲೇ ಸ್ಥಳೀಯರಿಗೆ ಕಾರ್ಮಿಕ ಕುಟುಂಬ ತಿಳಿಸಿತು.

ದೇವಸ್ಥಾನಕ್ಕೆ ನುಗ್ಗಿದ ನೀರು

ರಾತ್ರಿ ಸುರಿದ ಮಳೆಗೆ ಉತ್ತರಹಳ್ಳಿಯ ಕನ್ನಿಕಾ ಪರಮೇಶ್ವರಿ ದೇವಸ್ಥಾನಕ್ಕೆ ನೀರು ನುಗ್ಗಿದೆ. ದೇವಾಲಯದ ಸಭಾಂಗಣದಲ್ಲಿ ತುಂಬಿರುವ ಮಳೆ ನೀರು ಬೆಳಗ್ಗೆಯಾದರೂ ಖಾಲಿಯಾಗಿರಲಿಲ್ಲ. ನೆಲಮಹಡಿಯ ಸಭಾಂಗಣದ 8 ಅಡಿ ಮಳೆ ನೀರಿನಿಂದ ಜಲಾವೃತವಾಗಿತ್ತು. ಪಂಪ್‌ ಬಳಸಿ ದೇವಾಲಯ ಸಿಬ್ಬಂದಿ ನೀರು ಹೊರ ಹಾಕಿದರು. ಗರ್ಭಗುಡಿ ಮೊದಲ ಮಹಡಿಯಲ್ಲಿದ್ದದ್ದರಿಂದ ತೊಂದರೆ ಆಗಿರಲಿಲ್ಲ. ನೆಲ ಮಹಡಿಯ ಸಭಾಂಗಣದಲ್ಲಿ ಇಡಲಾಗಿದ್ದ ಪೂಜಾ ಸಾಮಗ್ರಿಗಳಿಗೆ ಹಾನಿಯಾಗಿದೆ ಎಂದು ದೇವಸ್ಥಾನದ ಸಿಬ್ಬಂದಿ ತಿಳಿಸಿದ್ದಾರೆ.

ಯಾರೂ ತಡೆಯೋಕ್ಕೆ ಆಗಲ್ಲ ಎಂದ ಅಧಿಕಾರಿ

ಪ್ರತಿ ಬಾರಿ ರಾಜ್ಯ ಹಾಗೂ ಬಿಬಿಎಂಪಿ ಬಜೆಟ್‌ನಲ್ಲೂ ಬೆಂಗಳೂರಿನಲ್ಲಿ ಮಳೆ ನೀರಿಗೆ ಹಾನಿಯಾದ ಪ್ರದೇಶಗಳ ಕುರಿತು ಯೋಜನೆ ರೂಪಿಸಲಾಗುತ್ತದೆ. ಬಿಬಿಎಂಪಿ ಆಯುಕ್ತರು, ವಿಶೇಷ ಆಯುಕ್ತರು ಸಭೆ ನಡೆಸಿ ಮುನ್ನೆಚ್ಚರಿಕೆ ಕ್ರಮಗಳನ್ನು ಚರ್ಚೆ ನಡೆಸಲಾಗುತ್ತದೆ. ಆದರೆ ಇದೀಗ ಬೆಂಗಳೂರಿನಲ್ಲಿ ಮಳೆಯಿಂದಾಗಿರುವ ತೊಂದರೆಗೆ ಏನೂ ಮಾಡಲಾಗುವುದಿಲ್ಲ ಎಂಬ ಉತ್ತರವನ್ನು ಬಿಬಿಎಂಪಿ ಅಧಿಕಾರಿಗಳು ನೀಡುತ್ತಿದ್ದಾರೆ. ಬೆಂಗಳೂರಿನಲ್ಲಿ ಮೂಲಸೌಕರ್ಯಕ್ಕೆ ಗಮನಹರಿಸುತ್ತಿಲ್ಲ ಎಂದು ಸಾಮಾನ್ಯ ಜನರ ಜತೆಗೆ ಉದ್ಯಮಿಗಳೂ ಅನೇಕ ಬಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಳೆ ಅವಾಂತರದ ಕುರಿತು ಪ್ರತಿಕ್ರಿಯೆ ನೀಡಿರುವ ಬಿಬಿಎಂಪಿ ದಕ್ಷಿಣ ವಲಯ ಜಂಟಿ ಆಯುಕ್ತ ಜಗದೀಶ್, ಕಳೆದ ರಾತ್ರಿ ಬೆಂಗಳೂರು ದಕ್ಷಿಣ ವಲಯದಲ್ಲಿ 76 ಸೆಂ.ಮೀ. ಮಳೆಯಾಗಿದೆ. ನಮ್ಮ ಸಿಬ್ಬಂದಿಗಳು ಕಾರ್ಯಚರಣೆ ನಡೆಸಿ ರಸ್ತೆ., ರಾಜಕಾಲುವೆ ಸ್ವಚ್ಛ ಮಾಡಿದ್ದಾರೆ. ಕಾಮಾಕ್ಯ ಟಾಕೀಸ್ ಅಕ್ಕಪಕ್ಕದಲ್ಲಿ ಸುಮಾರು 100 ಕ್ಕೂ ಅಧಿಕ ಮನೆಗಳಿಗೆ ನೀರು ತುಂಬಿದೆ. ರಾತ್ರಿ ಸುರಿದ ಬಾರೀ ಮಳೆಗೆ ರಾಜಕಾಲುವೆ ತುಂಬಿ ರಸ್ತೆಗೆ ನೀರು ಬಂದಿದೆ. ಇದು ಪ್ರಕೃತಿ ವಿಕೋಪ. ಯಾರೂ ತಡೆತೋದಕ್ಕೆ ಅಗುವುದಿಲ್ಲ. ಯಾವ ಯಾವ ಮನೆಗಳಿಗೆ ಹಾನಿ ಅಗಿದೆ ಎಂದು ನಮ್ಮ ಸಿಬ್ಬಂದಿ ಸಮೀಕ್ಷೆ ನಡೆಸಲಿದ್ದಾರೆ. ಇಂದು ಹಾನಿಯಾದ ಮನೆಗಳಿಗೆ ಪರಿಹಾರ ಹಣ ವಿತರಣೆ ಬಿಬಿಎಂಪಿ ವತಿಯಿಂದ ತಲಾ ₹10,000 ಪರಿಹಾರ ನೀಡಲಾಗುತ್ತದೆ ಎಂದು ಹೇಳಿದರು.

ಇದೇ ಮಾತನ್ನು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ಸಹ ಪುನರುಚ್ಛರಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಗೌರವ್‌ ಗುಪ್ತ, ಬಿಬಿಎಂಪಿ ವ್ಯಾಪ್ತಿಯಲ್ಲಿ ನಿನ್ನೆ ಗಣನೀಯ ಪ್ರಮಾಣದಲ್ಲಿ ಮಳೆ ಸುರಿದಿದೆ. ವಿದ್ಯಾಪೀಠ, ವಿವಿಪುರ, ಬೆಳ್ಳಂದೂರು, ಅಂಜನಪುರ ಸೇರಿ ಹಲವೆಡೆ ಸಾಕಷ್ಟು ಮಳೆ ಆಗಿದೆ. ಮಳೆಯಿಂದ ಫ್ಲಾಶ್ ಫ್ಲಡ್ಸ್ ಆಗುತ್ತಿದೆ. ನಿನ್ನೆ ಕಾಮಕ್ಯ ಥಿಯೇಟರ್ ಬಳಿ ತೊಂದರೆ ಆದ ಸ್ಥಳಕ್ಕೆ ನಾವು ಭೇಟಿ ನೀಡಿದ್ದೇವೆ. ಬ್ಲಾಕ್ ಫ್ಲೋ ಆಗಿ ಹಲವೆಡೆ ಮನೆಗಳಿಗೆ ಮಳೆ ನೀರು ನುಗ್ಗಿದೆ. ಕೊಳಚೆ ನೀರು ನುಗ್ಗಿದ ಕಡೆಗಳಲ್ಲಿ ಕಾರ್ಯಚರಣೆ ನಡೆಸಲಾಗಿದೆ. ಎಲ್ಲೆಲ್ಲಾ ಕೊಳಚೆ ನೀರು ನುಗ್ಗಿದೆ ಅದರ ವರದಿ ತರಿಸಲಾಗಿದೆ. ನಷ್ಟ ಅನುಭವಿಸಿದ ಕುಟುಂಬಗಳಿಗೆ ಪರಿಹಾರ ನೀಡಲಾಗುತ್ತದೆ.

ಹೆಚ್ಚಿನ ಓದಿಗಾಗಿ: ಬೆಂಗಳೂರಿನಲ್ಲಿ ಡೆಂಘೆ, ಮಲೇರಿಯಾ ಹೆಚ್ಚಳ: ಪಾರಾಗಲು ಇಲ್ಲಿದೆ ಉಪಾಯ

63 ಉಪ ವಿಭಾಗೀಯ ಮಟ್ಟದಲ್ಲಿ ತಂಡಗಳನ್ನು ರಚಿಸಲಾಗುತ್ತದೆ. ನಿನ್ನೆ, ಮೊನ್ನೆ ಮತ್ತು ಇಂದು 8 ವಲಯಗಳ ಅಧಿಕಾರಿಗಳ ಜತೆ ಸಭೆ ನಡೆಸಲಾಗಿದೆ. ಅರ್ಧ ತಾಸಿನಲ್ಲಿ 70 ಮಿಲಿ ಮೀಟರ್ ಮಳೆ ಸುರಿದಿದೆ. ಅರ್ಧ ತಾಸಿನಲ್ಲಿ ಮಳೆ ಆರ್ಭಟಿಸಿದರೆ ಅದರ ಕ್ಯಾಪಾಸಿಟಿ ತಡೆಯಲು ನಗರಕ್ಕೆ ಸಾಧ್ಯವಿಲ್ಲ. ಹೀಗಾಗಿ ಸಮಸ್ಯೆ ಉದ್ಭವಿಸಿದೆ. ಇಷ್ಟು ಪ್ರಮಾಣದಲ್ಲಿ, ಅದರಲ್ಲೂ ಬೇಸಿಗೆ ಕಾಲದಲ್ಲಿ ಮಳೆ ಬಂದರೆ ಸಮಸ್ಯೆ ಆಗುತ್ತದೆ. ಬೆಂಗಳೂರಿನಲ್ಲಿ 500ಕ್ಕೂ ಅಧಿಕ ಸೂಕ್ಷ್ಮ ಪ್ರದೇಶಗಳಿದ್ದು, ಈ ಪೈಕಿ 137ಸೂಕ್ಷ್ಮ ಪ್ರದೇಶಗಳನ್ನು ಸರಿಪಡಿಸಲಾಗುತ್ತದೆ. 18 ತಂಡಗಳನ್ನು ನಿಯೋಜಿಸಲಾಗಿದ್ದು, ಈ ತಂಡ ಟೊಳ್ಳು ಮರಗಳ (ಬೀಳುವ ಹಂತದ) ಸೆನ್ಸನ್ ಮಾಡುತ್ತದೆ ಎಂದಿದ್ದಾರೆ.

https://vistaranews.com/wp-content/uploads/2022/04/BBMP-Chief-Commissioner-Gaurav-Gupta-after-bengaluru-rains-2022.mp4

ಮಳೆಯಿಂದ ಅಥವಾ ಮರಗಳು ಬಿದ್ದು ತೊಂದರೆಯಾದರೆ ಸಂಪರ್ಕಿಸಲು ಬಿಬಿಎಂಪಿ ದೂರವಾಣಿ ಸಂಖ್ಯೆಗಳನ್ನು ನೀಡಿದೆ. ನಗರದಲ್ಲಿ ಎಲ್ಲಾದರೂ ಮರಗಳು ಬಿದ್ದಿರುವುದು ಅಥವಾ ರಸ್ತೆ/ ಜಂಕ್ಷನ್ ಗಳಲ್ಲಿ ನೀರು ನಿಂತಿರುವುದು ಕಂಡುಬಂದಲ್ಲಿ ಸಾರ್ವಜನಿಕರು ಪಾಲಿಕೆಯ ನಿಯಂತ್ರಣ ಕೊಠಡಿಗೆ ಕರೆಮಾಡಿದಲ್ಲಿ ಕೂಡಲೇ ಅಗತ್ಯ ಕ್ರಮ ಕೈಗೊಂಡು ಸಮಸ್ಯೆ ಬಗೆಹರಿಸಲಾಗುವುದು ಎಂದು ಗೌರವ್‌ ಗುಪ್ತಾ ತಿಳಿಸಿದ್ದಾರೆ.

Exit mobile version