Site icon Vistara News

ಬಿಬಿಎಂಪಿ ಚುನಾವಣೆಗೆ ಹಾದಿ ಸುಗಮ: ವಾರ್ಡ್‌ ವಿಂಗಡಣೆ ಕುರಿತು ಹೈಕೋರ್ಟ್‌ ಮಹತ್ವದ ಆದೇಶ

BBMP and high court

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಚುನಾವಣೆಗೂ ಮುನ್ನ ರಾಜ್ಯ ಸರ್ಕಾರ ನಡೆಸಿರುವ ಕ್ಷೇತ್ರ ಪುನರ್ವಿಂಗಡಣೆಯು ಅವೈಜ್ಞಾನಿಕವಾಗಿದೆ ಎಂದು ಸಲ್ಲಿಕೆಯಾಗಿದ್ದ ಎಲ್ಲ ಅರ್ಜಿಗಳನ್ನೂ ಹೈಕೋರ್ಟ್‌ ವಜಾ ಮಾಡಿದೆ. ಇದೀಗ ಮೌಖಿಕ ಆದೇಶ ನೀಡಿರುವ ನ್ಯಾಯಾಲಯ, ಸೆಪ್ಟೆಂಬರ್‌ 21ರಂದು ತೀರ್ಪಿನ ಪ್ರತಿಯನ್ನು ಬಿಡುಗಡೆ ಮಾಡುವುದಾಗಿ ಹೇಳಿದೆ.

ಚಾಮರಾಜಪೇಟೆ, ಜಯನಗರ, ಶಿವಾಜಿನಗರ ಸೇರೊ ಅನೇಕ ವಿಧಾನಸಭೆ ಕ್ಷೇತ್ರಗಳಲ್ಲಿ ಕ್ಷೇತ್ರ ಪುನರ್ವಿಂಗಡಣೆಯನ್ನು ಅವೈಜ್ಞಾನಿಕವಾಗಿ ನಡೆಸಲಾಗಿದೆ. ಕೆಲವು ಕಡೆ 30 ಸಾವಿರ ಜನಸಂಖ್ಯೆಯಿದ್ದರೆ ಕೆಲವೆಡೆ 40 ಸಾವಿರ ಜನರಿದ್ದಾರೆ. ವಿಧಾನಸಭಾ ಕ್ಷೇತ್ರಗಳ ಹೊರಗೆ ಕ್ಷೇತ್ರಗಳನ್ನು ಸೇರಿಸುವಂತಿಲ್ಲ ಎಂಬ ನಿಯಮವನ್ನು ಮೀರಿ ವಾರ್ಡ್‌ಗಳನ್ನು ರಚನೆ ಮಾಡಲಾಗಿದೆ ಎಂದು ಕಾಂಗ್ರೆಸ್‌ನ ಜಮೀರ್‌ ಅಹ್ಮದ್‌ ಖಾನ್‌, ಬಿಜೆಪಿಯ ಸತೀಶ್‌ ರೆಡ್ಡಿ, ಈಜಿಪುರದ ಕೆ. ಮಹದೇವು ಸೇರಿ ಅನೇಕರು ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದರು.

ಈ ಕುರಿತು ನ್ಯಾಯಮೂರ್ತಿ ಹೇಮಂತ್‌ ಚಂದನಗೌಡರ್‌ ಅವರಿದ್ದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು. ಈ ಕುರಿತು ವಾದ ಮಂಡಿಸಿದ್ದ ರಾಜ್ಯ ಚುನಾವಣಾ ಆಯೋಗದ ಪರ ವಕೀಲರಾದ ಕೆ.ಎನ್‌. ಫಣೀಂದ್ರ ಅವರು, ಈಗ ನಿಗದಿಯಾಗಿರುವ ಕ್ಷೇತ್ರ ಪುನರ್ವಿಂಗಡಣೆಯ ಪ್ರಕಾರವೇ ಚುನಾವಣೆ ನಡೆಯಬೇಕು. ಹಾಗೇನಾದರೂ ತಕರಾರು, ಲೋಪಗಳು ಇದ್ದಲ್ಲಿ ಮುಂದಿನ ಚುನಾವಣೆಯಲ್ಲಿ ಸರಿಪಡಿಸಿಕೊಳ್ಳಬಹುದು. ಚುನಾಯಿತ ಪ್ರತಿನಿಧಿಗಳಿಲ್ಲದೆ ಪಾಲಿಕೆಯನ್ನು ಕಾರ್ಯಾಂಗದ ಕೈಯಲ್ಲಿ ಇರಿಸುವುದು ಸೂಕ್ತವಲ್ಲ ಎಂದು ವಾದಿಸಿದ್ದರು.

ವಾದಗಳನ್ನು ಆಲಿಸಿದ ನ್ಯಾಯಪೀಠ, ಕ್ಷೇತ್ರ ಪುನರವಿಂಗಡಣೆಯಲ್ಲಿನ ಲೋಪಗಳನ್ನು ಸರಿಪಡಿಸಬೇಕು ಎಂಬ ವಾದವನ್ನು ಒಪ್ಪಲಿಲ್ಲ. ವ್ಯತ್ಯಾಸ ಹಾಗೂ ಲೋಪಗಳನ್ನು ನಂತರ ಬರಲಿರುವ ಸರ್ಕಾರಗಳು ಸರಿಪಡಿಸಲಿವೆ ಎಂದು ಹೇಳಿ ಅರ್ಜಿಗಳನ್ನು ವಜಾ ಮಾಡಿತು.

ಹೈಕೋರ್ಟ್‌ನಲ್ಲಿ ಅರ್ಜಿಗಳು ವಜಾ ಆಗಿರುವ ಹಿನ್ನೆಲೆಯಲ್ಲಿ, ಶೀಘ್ರದಲ್ಲೆ ರಾಜ್ಯ ಚುನಾವಣಾ ಆಯೋಗ ಚುನಾವಣೆಯನ್ನು ಘೋಷಿಸುವ ಸಾಧ್ಯತೆಯಿದೆ.

ಇದನ್ನೂ ಓದಿ | ಬಿಬಿಎಂಪಿ ಚುನಾವಣೆ | ಒಂದೇ ದಿನ ಮೂರೂ ಪಕ್ಷಗಳ ರಣಕಹಳೆ: ಚುನಾವಣಾ ಕಣ ಸಿದ್ಧತೆ ಆರಂಭ

Exit mobile version