ಬೆಂಗಳೂರು: ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ (Invest Karnataka 2022) ಈ ಬಾರಿ ಕರ್ನಾಟಕದಲ್ಲಿ ಆರು ಲಕ್ಷ ಕೋಟಿ ರೂ. ಹೂಡಿಕೆ ಒಪ್ಪಂದಗಳನ್ನು ಮಾಡಿಕೊಳ್ಳುವ ನಿರೀಕ್ಷೆಯಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಕಂಠೀರವ ಕ್ರೀಡಾಂಗಣದಲ್ಲಿ ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಕನ್ನಡದ ಬಗ್ಗೆ ಅಭಿಮಾನ ಮೂಡಿಸುವ ಹಾಗೂ ಕನ್ನಡಿಗರ ಹೃದಯವನ್ನು ಒಂದಾಗಿಸುವ ಹಾಡನ್ನು ಹಾಡಿ ವಿಶ್ವ ದಾಖಲೆ ನಿರ್ಮಾಣ ಮಾಡಿದ್ದೇವೆ. ಪ್ರತಿ ಗ್ರಾಮ, ಶಾಲೆಗಳಲ್ಲಿ ಯುವಕರು, ಮಕ್ಕಳು ಸೇರಿ ಕೋಟಿ ಗಾಯನವನ್ನು ಒಂದೇ ಕಾಲದಲ್ಲಿ ಮಾಡಿದ್ದೇವೆ. ವಿಧಾನಸೌಧದಲ್ಲಿ ಗಾಯನ ಮಾಡುವ ಮೂಲಕ, ಕನ್ನಡದ ಬಗ್ಗೆ ನಮ್ಮ ಸಂಕಲ್ಪ, ಬದ್ಧತೆಯನ್ನು ತೋರ್ಪಡಿಸಿದ್ದೇವೆ.
ಕನ್ನಡ ನಾಡು, ಶ್ರೇಷ್ಠವಾಗಿರುವ ನಾಡು. ನಿಸರ್ಗದತ್ತ ಸಂಪತ್ತು, 10 ಪರಿಸರ ವಲಯಗಳನ್ನು ಹೊಂದಿರುವ ಅತ್ಯಂತ ಪ್ರಗತಿಪರ ರಾಜ್ಯಗಳಲ್ಲಿ ಒಂದಾಗಿದೆ. ಕರ್ನಾಟಕವನ್ನು ಇನ್ನಷ್ಟು ಶಕ್ತಿಶಾಲಿಯನ್ನಾಗಿಸಿ, ಕನ್ನಡಿಗರಿಗೆ ಆರ್ಥಿಕ, ಸಾಮಾಜಿಕ ಭದ್ರತೆಯನ್ನು ನೀಡಿ ನಂಬರ್ 1 ರಾಜ್ಯವನ್ನಾಗಿಸುವ ಛಲ ತೊಟ್ಟಿದ್ದೇವೆ.
ನವೆಂಬರ್ ಮೊದಲ ವಾರದಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ಆಯೋಜನೆ ಆಗುತ್ತಿದೆ. ಈ ಸಮಾವೇಶದಲ್ಲಿ, ಕರ್ನಾಟಕಕ್ಕೆ ಸುಮಾರು ಆರು ಲಕ್ಷ ಕೋಟಿ ರೂ. ಹೂಡಿಕೆ ಒಪ್ಪಂದಗಳಾಗುವ ನಿರೀಕ್ಷೆಯಿದೆ. ನವೆಂಬರ್ ಎರಡನೇ ವಾರದಲ್ಲಿ ಟೆಕ್ ಸಮಿಟ್ ನಡೆಯಲಿದೆ. ಕರ್ನಾಟಕದಲ್ಲಿ ಅನೇಕ ಚಟುವಟಿಕೆಗಳು ನಡೆಯುತ್ತಿವೆ. ಕೋಟಿ ಕಂಠ ಗಾಯನದ ಮೂಲಕ, ನವ ಕರ್ನಾಟಕ ನಿರ್ಮಾಣದಿಂದ ನವ ಭಾರತ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದೇವೆ ಎಂದರು.
ಇದನ್ನೂ ಓದಿ | ಕೋಟಿ ಕಂಠ ಗಾಯನ | ಕಾಫಿ ನಾಡು ಚಂದುವನ್ನು ಮುತ್ತಿಕೊಂಡ ವಿದ್ಯಾರ್ಥಿಗಳು, ಬಿಡಿಸಿಕೊಳ್ಳಲು ಶಿಕ್ಷಕರು ಹೈರಾಣ