ಆನೇಕಲ್: ಉಲ್ಫಾ ಉಗ್ರ ಬಂಧನ ಬೆನ್ನಲ್ಲೆ ಪಾಕಿಸ್ತಾನ ಪ್ರಜೆಯ ಬಂಧನವಾಗಿದೆ. ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಜಿಗಣಿ ಬಳಿಯ ಅಪಾರ್ಟ್‌ಮೆಂಟ್‌ನಲ್ಲಿ ನಾಲ್ವರು ವಿದೇಶಿ ಪ್ರಜೆಗಳು ಸೇರಿದಂತೆ ಓರ್ವ ಪಾಕಿಸ್ತಾನ ಪ್ರಜೆ (Jigani Police) ಬಂಧನವಾಗಿದೆ. ಪಾಕ್ ಪ್ರಜೆಗಳ ಹೆಸರು ರಷೀದ್ ಸಿದ್ದಿಕಿ@ ಶಂಕರ್ ಶರ್ಮಾ (48), ಆಯುಷಾ ಅನಿಫ್@ಆಶಾ ಶರ್ಮಾ(38), ಮೊಹಮ್ಮದ್ ಹನೀಫ್@ರಾಮ್ ಬಾಬಾ ಶರ್ಮಾ(73), ರುಬೀನಾ@ರಾಣಿ ಶರ್ಮಾ(61) ಬಂಧಿತರು
ರಾತ್ರಿ ಕಾರ್ಯಾಚರಣೆ ನಡೆಸಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿಯಾಗಿರುವ ಪಾಕ್ ಪ್ರಜೆಯು ಪತ್ನಿ, ಇಬ್ಬರು ಮಕ್ಕಳ ಜತೆ ವಾಸವಿದ್ದ. ಆತನ ಪತ್ನಿ ಬಾಂಗ್ಲಾದೇಶದವಳು ಎಂದು ತಿಳಿದು ಬಂದಿದೆ. ಧರ್ಮದ ವಿಚಾರದಲ್ಲಿ ಪಾಕಿಸ್ತಾನದಲ್ಲಿ ಭಿನ್ನಾಭಿಪ್ರಾಯ ಉಂಟಾಗಿತ್ತು. ಕೊನೆಗೆ ಅಲ್ಲಿ ಇರೋಕೆ ಆಗದೆ ಬಾಂಗ್ಲಾದೇಶಕ್ಕೆ ಎಸ್ಕೇಪ್ ಆಗಿದ್ದ. ಇದಾದ ಬಳಿಕ ಬಾಂಗ್ಲಾದೇಶದ ಢಾಕಾದಲ್ಲಿ ವಾಸವಿದ್ದ. ಢಾಕಾದಲ್ಲಿ ಇದ್ದುಕೊಂಡು ಅಲ್ಲಿನ ಯುವತಿಯ ವಿವಾಹವಾಗಿದ್ದ.
ಬಳಿಕ 2014ರಲ್ಲಿ ಪತ್ನಿ ಜತೆ ಅಕ್ರಮವಾಗಿ ದೆಹಲಿಗೆ ಬಂದಿದ್ದ. ಸ್ಥಳೀಯ ವ್ಯಕ್ತಿಯ ನೆರವಿನಿಂದ ಗುರುತಿನ ದಾಖಲೆಗಳನ್ನು ಸೃಷ್ಟಿಸಿಕೊಂಡಿದ್ದ. ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್ ಮಾಡಿಸಿಕೊಂಡು ಇಡೀ ಕುಟುಂಬ 2018ರಲ್ಲಿ ಬೆಂಗಳೂರಿಗೆ ಬಂದಿದ್ದರು. ಇಬ್ಬರು ಮಕ್ಕಳ ಜತೆಗೆ ದಂಪತಿ ಜಿಗಣಿಯಲ್ಲಿ ವಾಸವಿದ್ದರು. ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ಖಚಿತ ಮಾಹಿತಿ ಸಂಗ್ರಹಿಸಿದ್ದರು. ಕೇಂದ್ರ ಗುಪ್ತಚರ ಇಲಾಖೆ ನೀಡಿದ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಜಿಗಣಿ ಪೊಲೀಸರು ಎಲ್ಲರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಜಿಗಣಿ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ. ಪಾಕ್ ಪ್ರಜೆ ಬಂಧನದ ಹಿನ್ನೆಲೆ ಹಿರಿಯ ಪೊಲೀಸ್ ಅಧಿಕಾರಿಗಳು ದೌಡಾಯಿಸಿದ್ದಾರೆ. ಬೆಂಗಳೂರು ಗ್ರಾಮಾಂತರದ ಹೆಚ್ಚುವರಿ ಎಸ್‌ಪಿ ಕೆ ಎಸ್ ನಾಗರಾಜ್ ಭೇಟಿ ನೀಡಿ ಇನ್ಸ್‌ಸ್ಪೆಕ್ಟರ್ ಮಂಜುನಾಥ್ ಬಳಿ ಮಾಹಿತಿ ಸಂಗ್ರಹಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ