Site icon Vistara News

Karnataka Election 2023 : ಕೊನೆಯ ಕ್ಷಣದ ಕೌತುಕ ಠುಸ್‌! ಈ ಯಾವ ಕ್ಷೇತ್ರದಲ್ಲಿಯೂ ಅಚ್ಚರಿಯ ಬೆಳವಣಿಗೆ ನಡೆಯಲಿಲ್ಲ!!

Karnataka Election 2023 some of dissidents withdraw their nomination

#image_title

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Election 2023) ನಾಮಪತ್ರ ಸಲ್ಲಿಕೆಯ ಅವಧಿ ಮುಕ್ತಾಯವಾಗಿದೆ. ಯಾರು ಎಲ್ಲಿಂದ ಸ್ಪರ್ಧಿಸಲಿದ್ದಾರೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಕೊನೆಯ ಕ್ಷಣದ ಕೌತುಕ ಠುಸ್‌ ಆಗಿದೆ. ಪದ್ಮನಾಭನಗರದಿಂದ ಸಂಸದ ಡಿ.ಕೆ.ಸುರೇಶ್‌, ಹೊಳೆನರಸೀಪುರದಿಂದ ಶಾಸಕ ಪ್ರೀತಂ ಗೌಡ ಸ್ಪರ್ಧಿಸಲಿಲ್ಲ. ಮಂಡ್ಯದಲ್ಲಿ ಜೆಡಿಎಸ್‌ ನಾಯಕ ಕುಮಾರಸ್ವಾಮಿ, ಸಂಸದೆ ಸುಮಲತಾ ಕೂಡ ಕಣಕ್ಕಿಳಿಯಲಿಲ್ಲ.

ಚುನಾವಣಾ ಆಯೋಗವು ಏ. 20ರ ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ನೀಡಿತ್ತು. ಕೊನೆಯ ದಿನ ಕೂಡ ನೂರಾರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಇವರಲ್ಲಿ ಪ್ರಮುಖ ನಾಯಕರೂ ಸೇರಿದ್ದಾರೆ.

ಅಶೋಕ್‌ ವಿರುದ್ಧ ಡಿಕೆಸು ಸ್ಪರ್ಧೆ ಇಲ್ಲ

ಸಚಿವ ಆರ್‌. ಅಶೋಕ್‌ ಸ್ಪರ್ಧಿಸುತ್ತಿರುವ ಪದ್ಮನಾಭನಗರದಿಂದ ಕಣಕ್ಕಿಳಿಯುವುದಾಗಿ ಪ್ರಕಟಿಸಿದ್ದ ಸಂಸದ ಡಿ.ಕೆ. ಸುರೇಶ್‌ ನಾಮಪತ್ರ ಸಲ್ಲಿಸಿಲ್ಲ. ಗುರುವಾರ ಬೆಳಗ್ಗೆ ಕೂಡ ಅವರು ಸ್ಪರ್ಧಿಸುವುದಾಗಿ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದರು. ಕೊನೆಯ ಕ್ಷಣದವರೆಗೂ ಕುತೂಹಲ ಉಳಿಸಿಕೊಂಡಿದ್ದ ಅವರು ಕನಕಪುರದಲ್ಲಿ ಮಾತ್ರ ನಾಮಪತ್ರ ಸಲ್ಲಿಸಿದ್ದಾರೆ.

ರಾಮನಗರ ಜಿಲ್ಲೆ ಕನಕಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ವಿರುದ್ಧ ಬಿಜೆಪಿಯು ಸಚಿವ ಆರ್.‌ ಅಶೋಕ್‌ ಅವರನ್ನು ಕಣಕ್ಕಿಳಿಸಿದೆ. ಅಶೋಕ್‌ ಬೆಂಗಳೂರಿನ ಪದ್ಮನಾಭನಗರದಿಂದಲೂ ಸ್ಪರ್ಧಿಸುತ್ತಿದ್ದಾರೆ. ಹೀಗಾಗಿ ಅವರಿಗೆ ಠಕ್ಕರ್‌ ನೀಡಲು, ಸಹೋದರ, ಸಂಸದ ಡಿ.ಕೆ. ಸುರೇಶ್‌ರನ್ನು ಪದ್ಮನಾಭನಗರದಲ್ಲಿ ಕಣಕ್ಕಿಳಿಸುವುದಾಗಿ ಸ್ವತಃ ಡಿ.ಕೆ. ಶಿವಕುಮಾರ್‌ ಹೇಳಿದ್ದರು. ಡಿ.ಕೆ. ಸುರೇಶ್‌ ಕೂಡ ಹೈಕಮಾಂಡ್‌ ಸೂಚಿಸಿದ ಕೂಡಲೇ ನಾಮಪತ್ರ ಸಲ್ಲಿಸುವುದಾಗಿ ಹೇಳುತ್ತಲೇ ಬಂದಿದ್ದರು.

ಈಗಾಗಲೇ ಕಾಂಗ್ರೆಸ್‌ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ರಘುನಾಥ್‌ ನಾಯ್ಡು ಕಣದಲ್ಲಿದ್ದಾರೆ. ಡಿ.ಕೆ.ಸುರೇಶ್‌ ಕಣಕ್ಕಿಳಿದರೆ ತಾವು ಕಣದಿಂದ ಹಿಂದೆ ಸರಿಯುವುದಾಗಿ ಅವರು ಪ್ರಕಟಿಸಿದ್ದರಿಂದ ತೀವ್ರ ಕುತೂಹಲ ಸೃಷ್ಟಿಯಾಗಿತ್ತು.

ಡಿ.ಕೆ. ಸುರೇಶ್‌ ಸ್ಪರ್ಧಿಸದೇ ಇರುವ ಕುರಿತು ಪ್ರತಿಕ್ರಿಯಿಸಿದ ಸಚಿವ ಅಶೋಕ್‌, ʻʻಪದ್ಮನಾಭನಗರ ಅಂದ್ರೆ ಪದ್ಮ ಅಂದರೆ ಕಮಲದ ನಗರ. ಈ ನಗರದಲ್ಲಿ ಕಮಲ ಮಾತ್ರ ಅರಳೋದು ಅಂತ ಗೊತ್ತಾಗಿ ಅವರು ಸ್ಪರ್ಧೆ ಮಾಡಿಲ್ಲʼʼ ಎಂದಿದ್ದಾರೆ.

ಮಂಡ್ಯದಲ್ಲಿ ಏರ್ಪಡದ ತ್ರಿಕೋನ ಸ್ಪರ್ಧೆ

ಜೆಡಿಎಸ್‌ ನಾಯಕ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಚನ್ನಪಟ್ಟಣ ಮಾತ್ರವಲ್ಲದೆ ಮಂಡ್ಯದಿಂದಲೂ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಅಲ್ಲಿಯ ನಾಯಕರು ಮಂಡ್ಯದಿಂದ ಸ್ಪರ್ಧೆ ಮಾಡುವಂತೆ ಒತ್ತಾಯ ಮಾಡುತ್ತಲೇ ಬಂದಿದ್ದರು. ಆದರೆ ತಾವು ಎರಡು ಕಡೆ ಸ್ಪರ್ಧೆ ಮಾಡುವ ಪರಿಸ್ಥಿತಿ ಈಗಿಲ್ಲ ಎಂದು ಕುಮಾರಸ್ವಾಮಿ ಹೇಳಿಕೊಂಡೇ ಬಂದಿದ್ದರಾದರೂ ಕೊನೆಯ ಕ್ಷಣದಲ್ಲಿ ಮಂಡ್ಯದಿಂದಲೂ ಸ್ಪರ್ಧೆ ಮಾಡಬಹುದೆಂದು ನಿರೀಕ್ಷಿಸಲಾಗುತ್ತಿತ್ತು.

ಹಿಂದೆ ಚನ್ನಪಟ್ಟಣ ಹಾಗೂ ರಾಮನಗರದಿಂದ ಕುಮಾರಸ್ವಾಮಿ ಸ್ಪರ್ಧಿಸಿದ್ದರಿಂದ ಈ ಬಾರಿ ಕೂಡ ಚನ್ನಪಟ್ಟಣದೊಂದಿಗೆ ಮಂಡ್ಯದಿಂದಲೂ ಕಣಕ್ಕಿಳಿಯುವ ಕುರಿತು ಕುಮಾರಸ್ವಾಮಿ ಯೋಚಿಸುತ್ತಿದ್ದಾರೆ ಎಂದು ಜೆಡಿಎಸ್‌ ಮೂಲಗಳೇ ಹೇಳಿದ್ದವು. ಅಲ್ಲದೆ, ನೀವು ಬಂದ್ರೆ ಜಿಲ್ಲೆಯಲ್ಲಿ 7ಕ್ಕೆ 7ಸ್ಥಾನ ಗೆಲ್ಲಬಹುದು ಎಂದು ಅಲ್ಲಿಯ ನಾಯಕರು ಒತ್ತಡ ಹೇರಿದ್ದರು.

ಈ ನಡುವೆ ಮಂಡ್ಯದಿಂದ ಕುಮಾರಸ್ವಾಮಿ ಸ್ಪರ್ಧೆ ಮಾಡಿದರೆ ತಾವು ಕೂಡ ಕಣಕ್ಕಿಳಿಯುವುದಾಗಿ ಬಿಜೆಪಿ ಬೆಂಬಲಿತ ಸಂಸದೆ, ನಟಿ ಸುಮಲತಾ ಕೂಡ ಹೇಳಿದ್ದರು. ಕಾಂಗ್ರೆಸ್‌ ಕೂಡ ನಟಿ ರಮ್ಯಾರನ್ನು ಮಂಡ್ಯದಿಂದ ಕಣಕ್ಕಿಳಿಸುವ ಚಿಂತನೆ ನಡೆಸಿದೆ ಎಂಬ ವರದಿಗಳಿದ್ದವು. ಹೀಗಾಗಿ ಮಂಡ್ಯ ವಿಧಾನಸಭಾ ಕ್ಷೇತ್ರದ ಚುನಾವಣೆ ತೀವ್ರ ಕುತೂಹಲ ಮೂಡಿಸಿತ್ತು. ಬಿಜೆಪಿ ಅಭ್ಯರ್ಥಿಯಾಗಲಿರುವ ಸುಮಲತಾರ ದಿಕ್ಕು ತಪ್ಪಿಸಲು ತಾವು ಅಲ್ಲಿಂದ ಸ್ಪರ್ಧಿಸುವುದಿಲ್ಲ‌ ಎಂದು ಕುಮಾರಸ್ವಾಮಿ ಹೇಳುತ್ತಿದ್ದಾರೆ. ಕೊನೆಯ ಕ್ಷಣದಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ ಎಂದೇ ಹೇಳಲಾಗುತ್ತಿದ್ದುದ್ದರಿಂದ ಗುರುವಾರ ಅವರು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ನಿರೀಕ್ಷಿಸಲಾಗುತ್ತಿತ್ತು.

ಗುರುವಾರ ಮಂಡ್ಯಕ್ಕೆ ಆಗಮಿಸಿದ್ದ ಕುಮಾರಸ್ವಾಮಿ ಆದಿಚುಂಚನಗಿರಿಯಲ್ಲಿ ನಡೆದ ವಿಶೇಷ ಪೂಜೆಯಲ್ಲಿ ಭಾಗವಹಿಸಿ ಅಲ್ಲಿಂದ ಚಿಕ್ಕಬಳ್ಳಾಪುರಕ್ಕೆ ತೆರಳಿದರು. ನಾಮಪತ್ರ ಸಲ್ಲಿಸುವ ಗೋಜಿಗೇ ಹೋಗಲಿಲ್ಲ. ಹೀಗಾಗಿ ನಟಿ ಸುಮಲತಾ ಕೂಡ ಕಣಕ್ಕಿಳಿಯಲ್ಲಿಲ್ಲ. ಮನ್‌ಮುಲ್‌ನ ಅಧ್ಯಕ್ಷ ರಾಮಚಂದ್ರು ಜೆಡಿಎಸ್‌ ಅಭ್ಯರ್ಥಿಯಾಗಿ ನಾಮಪತ್ರಸಲ್ಲಿಸಿದರು.

ಹೊಳೆನರಸೀಪುರಕ್ಕೆ ಹೋಗದ ಪ್ರೀತಂ

ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಮತ್ತೊಂದು ಕ್ಷೇತ್ರವೆಂದರೆ ಹೊಳೆನರಸೀಪುರ. ಈ ಕ್ಷೇತ್ರದಿಂದ ಜೆಡಿಎಸ್‌ ನಾಯಕ ರೇವಣ್ಣ ಸ್ಪರ್ಧಿಸುತ್ತಿದ್ದು, ಅವರಿಗೆ ಠಕ್ಕರ್‌ ನೀಡಲು ತಾವು ಸ್ಪರ್ಧಿಸುವುದಾಗಿ ಬಿಜೆಪಿ ಶಾಸಕ ಪ್ರೀತಂಗೌಡ ಹೇಳಿಕೆ ನೀಡಿ ಗಮನ ಸೆಳೆದಿದ್ದರು.

ಬಿಜೆಪಿ ಅಭ್ಯರ್ಥಿಯಾಗಿ ಪ್ರೀತಂಗೌಡ ಈಗಾಗಲೇ ಹಾಸನ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಇದರೊಂದಿಗೆ ಹೊಳೆನರಸೀಪುರದಿಂದಲೂ ಅವರು ಕಣಕ್ಕಿಳಿಯಲ್ಲಿದ್ದಾರೆಯೇ? ಅಥವಾ ಹಾಸನ ಕ್ಷೇತ್ರವನ್ನು ಪತ್ನಿಗೆ ಬಿಟ್ಟು, ತಾವು ಹೊಳೆನರಸೀಪುರದಿಂದ ಸ್ಪರ್ಧಿಸಲಿದ್ದಾರೆಯೇ ಎಂಬ ಕುತೂಹಲ ಮೂಡಿತ್ತು. ಬುಧವಾರ ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಪ್ರೀತಂಗೌಡ ಪತ್ನಿ ಕಾವ್ಯ ಎರಡುಪ್ರತಿ ನಾಮಪತ್ರ ಸಲ್ಲಿಸಿದ್ದರು. ಇದು ಈ ವದಂತಿಗಳಿಗೆ ಪುಷ್ಟಿ ನೀಡಿತ್ತು.

ಗುರುವಾರ ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಪ್ರೀತಂಗೌಡ, ʻʻಯಾವುದೇ ತಾಂತ್ರಿಕ ಸಮಸ್ಯೆ ಕಾರಣದಿಂದ ನನ್ನ ಪತ್ನಿ ನಾಮಪತ್ರ ಸಲ್ಲಿಕೆ ಮಾಡಿಲ್ಲ. ರಾಜಕೀಯ ತಂತ್ರದ ಭಗವಾಗಿಯೇ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ದೆಹಲಿಯ ನಾಯಕರು ತಂತ್ರ ಮಾಡಿದ್ದಾರೆ. ಅವರು ಹೇಳಿದ ಹಾಗೆ ನಾವು ಕೇಳುತ್ತಿದ್ದೇವೆʼʼ ಎಂದು ಹೇಳಿ ಈ ವದಂತಿಗೆ ರೋಚಕ ಟ್ವಿಸ್ಟ್ ಸಹ ಕೊಟ್ಟಿದ್ದರು.

ಈ ನಡುವೆ ಹೊಳೆನರಸೀಪುರದ ಬಿಜೆಪಿ ಅಭ್ಯರ್ಥಿ ದೇವರಾಜೇಗೌಡ, ಪ್ರೀತಂಗೌಡ ಈ ಕ್ಷೇತ್ರದಿಂದ ಸ್ಪರ್ಧಿಸುವುದಾದರೆ ತಾವು ಕಣದಿಂದ ಹಿಂದೆ ಸರಿಯಲು ಸಿದ್ಧ ಎಂಬ ಹೇಳಿಕೆ ನೀಡಿದ್ದರು. ಹೀಗಾಗಿ ಪ್ರೀತಂ ಸ್ಪರ್ಧೆ ಮಾಡಲಿದ್ದಾರೆಯೇ ಎಂಬುದು ತೀವ್ರ ಕುತೂಹಲ ಕೊನೆಯ ಗಳಿಗೆಯವರೆಗೂ ಇತ್ತು. ಗುರುವಾರ ಸಕಲೇಶಪುರಕ್ಕೆ ಹೋದ ಪ್ರೀತಂಗೌಡ ಹೊಳೆನರಸೀಪುರದ ಕಡೆಗೆ ಬರಲೇ ಇಲ್ಲ!

ಇದನ್ನೂ ಓದಿ: Karnataka Election 2023 : ಮುಳಬಾಗಿಲು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಬದಲು; ಆದಿನಾರಾಯಣಪ್ಪಗೆ ಟಿಕೆಟ್‌

Exit mobile version