ಬೆಂಗಳೂರು: ರಾಜ್ಯದಲ್ಲಿ ಕಳೆದ ಒಂದು ತಿಂಗಳಿಂದ ಬಿಸಿಲಿನ ತೀವ್ರತೆ ವೇಗವನ್ನು ಪಡೆದುಕೊಳ್ಳುತ್ತಲೇ ಇದೆ. ಆದರೆ, ಬುಧವಾರ ಕೊಡಗಿನ ಕೆಲವು ಕಡೆ ಮಳೆಯಾಗಿದ್ದು, ಸುಡು ಸುಡು ಬಿಸಿಲ ಬೇಗೆಗೆ ವರುಣ ತಂಪೆರೆದಿದ್ದಾನೆ. ಕೊಡಗು ಜಿಲ್ಲೆ ಮೂರ್ನಾಡು ಸಮೀಪದ ಕಿಗ್ಗಾಲು ಗ್ರಾಮದಲ್ಲಿ ಮಳೆಯಾಗಿದೆ. ಹೀಗಾಗಿ ಕರ್ನಾಟಕದ ಉಳಿದೆಡೆಯೂ ಮಳೆಯಾಗಬಹುದೇ ಎಂಬ ಆಶಾಭಾವನೆಯನ್ನು ಹುಟ್ಟುಹಾಕಿದೆ. ಆದರೆ, ಉಳಿದಂತೆ ಬಹುತೇಕ ಕಡೆ ರಾಜ್ಯಾದ್ಯಂತ ಶುಷ್ಕ ವಾತಾವರಣ ಮುಂದುವರಿದಿದ್ದು, ಇರುವ ತಾಪಮಾನಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್ ಹೆಚ್ಚಳವಾಗಬಹುದು ಎಂದು ಹವಾಮಾನ ಇಲಾಖೆ (Karnataka Weather Forecast) ತನ್ನ ಮುನ್ಸೂಚನಾ ವರದಿಯಲ್ಲಿ ಹೇಳಿದೆ.
ಉತ್ತರ ಒಳನಾಡಿನಲ್ಲಿನ ಸ್ಥಿತಿ ಹೇಗೆ?
ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಗುರುವಾರ ಮತ್ತು ಶುಕ್ರವಾರ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆ ಇದೆ. ಇದರಿಂದ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ ಹಾಗೂ ಹಾವೇರಿ, ಕಲಬುರಗಿ ಸೇರಿದಂತೆ ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಗರಿಷ್ಠ ಉಷ್ಣಾಂಶವು 40 ಡಿ.ಸೆ ಗಡಿದಾಟಲಿದೆ ಎಂದು ಅಂದಾಜಿಸಲಾಗಿದೆ.
ದಕ್ಷಿಣ ಒಳನಾಡಿನಲ್ಲಿ 2-3 ಡಿಗ್ರಿ ಸೆಲ್ಸಿಯಸ್ ಹೆಚ್ಚಳ
ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆಯಿದೆ. ಇದರಿಂದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ದಾವಣಗೆರೆ ಹಾಗೂ ವಿಜಯನಗರ, ಚಾಮರಾಜನಗರ, ತುಮಕೂರು, ಚಿತ್ರದುರ್ಗ ಬಿಸಿಲ ಧಗೆ ಹೆಚ್ಚಾಗಲಿದೆ.
ಇದನ್ನೂ ಓದಿ: Heat stroke: ಹೀಟ್‌ಸ್ಟ್ರೋಕ್‌ನ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ, ಇಲ್ಲದಿದ್ದರೆ ಅಪಾಯ ತಪ್ಪಿದ್ದಲ್ಲ!
ಬೆಂಗಳೂರಲ್ಲಿ ಗರಿಷ್ಠ ಉಷ್ಣಾಂಶ 35 ಡಿಗ್ರಿ ಸೆಲ್ಸಿಯಸ್
ಮುಂದಿನ 24 ಗಂಟೆಯಲ್ಲಿ ಬೆಂಗಳೂರಲ್ಲಿ ಗರಿಷ್ಠ ಉಷ್ಣಾಂಶ 35 ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಪ್ರಮುಖ ನಗರಗಳಲ್ಲಿನ ಇಂದಿನ ತಾಪಮಾನ ಹೀಗಿದೆ.
ನಗರದ ಹೆಸರು- ಗರಿಷ್ಠ ಉಷ್ಣಾಂಶ- ಕನಿಷ್ಠ ಉಷ್ಣಾಂಶ (ಡಿಗ್ರಿ ಸೆಲ್ಸಿಯಸ್)
ಬೆಂಗಳೂರು ನಗರ: 35 ಡಿ.ಸೆ – 22 ಡಿ.ಸೆ
ಮಂಗಳೂರು: 35 ಡಿ.ಸೆ – 24 ಡಿ.ಸೆ
ಚಿತ್ರದುರ್ಗ: 36 ಡಿ.ಸೆ – 23 ಡಿ.ಸೆ
ಗದಗ: 37 ಡಿ.ಸೆ – 22 ಡಿ.ಸೆ
ಹೊನ್ನಾವರ: 34 ಡಿ.ಸೆ- 23 ಡಿ.ಸೆ
ಕಲಬುರಗಿ: 38 ಡಿ.ಸೆ – 27 ಡಿ.ಸೆ
ಬೆಳಗಾವಿ: 37 ಡಿ.ಸೆ – 21 ಡಿ.ಸೆ
ಕಾರವಾರ: 35 ಡಿ.ಸೆ – 22 ಡಿ.ಸೆ