ಬೆಂಗಳೂರು: ಇಂದು ಮುಂಜಾನೆ ರಾಜ್ಯದಾದ್ಯಂತ ಲೋಕಾಯುಕ್ತ ಅಧಿಕಾರಿಗಳು (Lokayukta Raid) ಭ್ರಷ್ಟಾಚಾರ ಆರೋಪ (Corruption) ದೂರು ದಾಖಲಾಗಿರುವ ಅಧಿಕಾರಿಗಳ ಮನೆಗಳು ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ. ಅಧಿಕಾರಿಗಳು ನಿದ್ರೆಯಿಂದ ಏಳುವ ಮೊದಲೇ ದಾಳಿ ನಡೆದಿದೆ.
ರಾಜ್ಯದ ಒಟ್ಟು 54 ಸ್ಥಳಗಳಲ್ಲಿ ಲೋಕಾಯುಕ್ತ ದಾಳಿ ನಡೆಸಿದ್ದು, 100 ಜನ ಅಧಿಕಾರಿಗಳು ಸ್ಥಳೀಯ ಪೊಲೀಸರನ್ನು ಬಳಸಿಕೊಂಡು ದಾಳಿಯಲ್ಲಿ ಪಾಲ್ಗೊಂಡಿದ್ದಾರೆ. ಲೋಕಾಯುಕ್ತದಲ್ಲಿ 12 ಭ್ರಷ್ಟಾಚಾರ ಪ್ರಕರಣಗಳು ದಾಖಲಾಗಿದ್ದವು. ಬೆಂಗಳೂರು 3 ಪ್ರಕರಣ, ಮೈಸೂರು 2, ಶಿವಮೊಗ್ಗ 2, ಯಾದಗಿರಿ 1 ಸೇರಿ ಒಟ್ಟು 12 ಪ್ರಕರಣ ದಾಖಲಾಗಿದ್ದವು. ಈ ಹಿನ್ನೆಲೆಯಲ್ಲಿ ಇಂದು ದಾಳಿಗಳು ನಡೆದಿವೆ.
ಮೈಸೂರು: ಮೈಸೂರಿನಲ್ಲಿ ಕಾರ್ಮಿಕ ಇಲಾಖೆ ಇನ್ಸ್‌ಪೆಕ್ಟರ್ ಚೇತನ್ ಮನೆ ಮೇಲೆ ಲೋಕಾಯುಕ್ತ ರೈಡ್ ಮಾಡಿದೆ. ಆದಾಯಕ್ಕೂ ಮೀರಿ ಆಸ್ತಿ ಸಂಪಾದನೆ ಹಿನ್ನೆಲೆಯಲ್ಲಿ ಮೈಸೂರಿನ ಶಾರದಾದೇವಿ ನಗರದಲ್ಲಿರುವ ಚೇತನ್ ಮನೆ ಮೇಲೆ ದಾಳಿ ನಡೆದಿದೆ.
ತುಮಕೂರು: ಕೆಐಎಡಿಬಿ ಅಪರ ನಿರ್ದೇಶಕ ಸಿ.ಟಿ ಮುದ್ದುಕುಮಾರ್ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ಬೆಂಗಳೂರಿನ ನಾಗರಭಾವಿಯ 2ನೇ ಹಂತದಲ್ಲಿರುವ ವಾಸದ ಮನೆ, ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಖನಿಜ ಭವನದಲ್ಲಿರುವ ಕಚೇರಿ, ತುಮಕೂರು ನಗರದ ಬನಶಂಕರಿಯಲ್ಲಿರುವ ಮನೆ, ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿರುವ ಮನೆ, ಚಿಕ್ಕನಾಯಕನಹಳ್ಳಿ ತಾಲೂಕಿನ ಶೆಟ್ಟಿಕೆರೆ ಹೋಬಳಿ ರಂಗನಾಥಪುರದಲ್ಲಿರುವ ಫಾರಂಹೌಸ್, ತುಮಕೂರಿನ ಅಂತರಸನಹಳ್ಳಿಯ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಫ್ಯಾಕ್ಟರಿ (ಪ್ಲಾಸ್ಟಿಕ್ ಬಾಟಲ್ ತಯಾರಿಕಾ ಘಟಕ) ಸೇರಿದಂತೆ ಒಟ್ಟು 7 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ತುಮಕೂರು ಲೋಕಾಯುಕ್ತ ಎಸ್.ಪಿ ಲಕ್ಷ್ಮೀ ಗಣೇಶ್ ಮಾರ್ಗದರ್ಶನದಲ್ಲಿ ಲೋಕಾಯುಕ್ತ ಡಿವೈಎಸ್ಪಿ ಬಿ.ಉಮಾಶಂಕರ್, ರಾಮಕೃಷ್ಣಯ್ಯ, ಇನ್ಸ್ಪೆಕ್ಟರ್‌ಗಳಾದ ಶಿವರುದ್ರಪ್ಪ ಮೇಟಿ, ಮಹಮ್ಮದ್ ಸಲೀಂ ಇನ್ನಿತರ ಅಧಿಕಾರಿಗಳ ತಂಡಗಳಿಂದ ದಾಳಿ ನಡೆದಿದೆ.
ಯಾರ್ಯಾರ ಮೇಲೆ ದಾಳಿ?
ತುಮಕೂರು – ಮುದ್ದುಕುಮಾರ್ ಅಡಿಷನಲ್ ಡೈರೆಕ್ಟರ್ ಇಂಡಸ್ಟ್ರಿ ಆ್ಯಂಡ್ ಕಾಮರ್ಸ್ ಡಿಪಾರ್ಟ್ಮೆಂಟ್
ಯಾದಗಿರಿ – ಬಲವಂತ್ ಯೋಜನ ನಿರ್ದೇಶಕ , ಯಾದಗಿರಿ ಜಿಲ್ಲಾ ಪಂಚಾಯತ್
ಬೆಂಗಳೂರು ಗ್ರಾಮಾಂತರ – ಸಿದ್ದಪ್ಪ ಹಿರಿಯ ಪಶು ವೈದ್ಯ ದೊಡ್ಡಬಳ್ಳಾಪುರ
ಬೆಂಗಳೂರು ಗ್ರಾಮಾಂತರ ನರಸಿಂಹ ಮೂರ್ತಿ ಕೆ – ಮುನ್ಸಿಪಲ್ ಅಡ್ಮಿನಿಸ್ಟ್ರೇಷನ್ ಸರ್ವಿಸ್ ಕಮೀಷನರ್ ಹೆಬ್ಬಗೋಡಿ
ಬೆಂಗಳೂರು ಸಿಟಿ – ಬಿವಿ ರಾಜ ಎಫ್ ಡಿ ಎ ಕೆಐ ಎ ಡಿಬಿ
ಬೆಂಗಳೂರು ಸಿಟಿ – ರಮೇಶ್ ಕುಮಾರ್ ಜಂಟಿ ಆಯುಕ್ತ ವಾಣಿಜ್ಯ ತೆರಿಗೆ ಇಲಾಖೆ
ಬೆಂಗಳೂರು ಸಿಟಿ- ಅಕ್ತರ್ ಅಲಿ – ಡೆಪ್ಯೂಟಿ ಕಂಟ್ರೋಲರ್ ಮಾಪನಾ ಇಲಾಖೆ
ಶಿವಮೊಗ್ಗ – ಸಿ ನಾಗೇಶ್ – ಅಂತರಗಂಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಭದ್ರಾವತಿ
ಶಿವಮೊಗ್ಗ ಪ್ರಕಾಶ್ – ಡೆಪ್ಯೂಟಿ ಡೈರೆಕ್ಟರ್ – ತೋಟಗಾರಿಕಾ ಇಲಾಖೆ
ಬೆಂಗಳೂರು ಸಿಟಿ – ಚೇತನ್ ಕುಮಾರ್ – ಕಾರ್ಮಿಕಇಲಾಖೆ ಅಧಿಕಾರಿ ಮಂಡ್ಯ ವಿಭಾಗ
ಬೆಂಗಳೂರು ಸಿಟಿ – ಆನಂದ್ ಸಿ ಎಲ್ – ಕಮೀಷನರ್ ಮಂಗಳೂರು ಮಹಾನಗರ ಪಾಲಿಕೆ
ಬೆಂಗಳೂರು ಸಿಟಿ – ಮಂಜುನಾಥ್ ಟಿ ಆರ್ – ಎಫ್ ಡಿಎ ಬೆಂಗಳೂರು ನಾರ್ತ್ ಸಬ್ ಡಿವಿಷನ್ ಆಫೀಸರ್
ಇದನ್ನೂ ಓದಿ: DK Shivakumar: `ಲೋಕಾಯುಕ್ತಕ್ಕೆ ಕೊಟ್ಟ ಮೇಲೆ ಸಿಬಿಐಗೇನು ಕೆಲಸ?’ ಅಕ್ರಮ ಆಸ್ತಿ ಕೇಸ್ ಬಗ್ಗೆ ಡಿಕೆ ಶಿವಕುಮಾರ್ ಪ್ರಶ್ನೆ