ಬೆಂಗಳೂರು: ರಾಜಕಾಲುವೆ ಒತ್ತುವರಿ ಸಂಬಂಧ ಕಾಂಗ್ರೆಸ್ ಕಾರ್ಯಕರ್ತೆಗೆ ಆವಾಜ್ ಹಾಕಿ ಕೈಯಿಂದ ಮನವಿ ಪತ್ರ ಕಿತ್ತುಕೊಂಡದ್ದಕ್ಕೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ವಿವಾದ ತಲೆಯೆತ್ತಿರುವಾಗಲೇ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ. ನಾನೇನು ಮಹಿಳೆಯನ್ನು ಅತ್ಯಾಚಾರ ಮಾಡಲು ಹೋಗಿದ್ದೆನೇ? ಎಂದು ಮಾಧ್ಯಮದವರಲ್ಲಿ ಪ್ರಶ್ನಿಸುವ ಮೂಲಕ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಓರ್ವ ಮಹಿಳೆ ಶಾಸಕ ಅರವಿಂದ್ ಲಿಂಬಾವಳಿ ಅವರಿಗೆ ಮನವಿ ನೀಡಲು ಗುರುವಾರ ಮದ್ಯಾಹ್ನ ಬಂದರು. ಆಗ ಶಾಸಕರು ಆ ಮಹಿಳೆಗೆ ಆವಾಜ್ ಹಾಕಿದ ದೃಶ್ಯ ಕಂಡುಬಂದಿತ್ತು. ಮಹಿಳೆ ನೀಡಲು ಬಂದ ಮನವಿ ಪತ್ರವನ್ನು ಕಸಿದುಕೊಂಡು ಕೂಗಾಡಿದ್ದರು. ʼನಿಂಗೆ ಮಾನ ಮರ್ಯಾದೆ ಇದೆಯೇ? ನಾಚಿಕೆ ಅಗಲ್ವಾ ನಿಂಗೆ?ʼ ಎಂದು ಆವಾಜ್ ಹಾಕಿ ನಂತರ ಮಹಿಳೆಯನ್ನು ಸ್ಟೇಷನ್‌ಗೆ ಕರೆದುಕೊಂಡು ಹೋಗಲು ಪೊಲೀಸರಿಗೆ ಹೇಳಿದ್ದರು.
ರೂತ್ ಸಗಾಯ್ ಮೇರಿ ಎಂಬ ಹೆಸರಿನ ಮಹಿಳೆ ಸ್ಥಳೀಯ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತೆ ಎನ್ನಲಾಗಿದ್ದು, ರಾಜಕಾಲುವೆ ಒತ್ತುವರಿ ತೆರವು ಸಂಬಂಧ ಗುರುವಾರ ಮದ್ಯಾಹ್ನ ಒತ್ತುವರಿ ತೆರವಿಗೆ ಸಂಬಂಧಿಸಿ ಬಿಬಿಎಂಪಿ ಅಧಿಕಾರಿಗಳ ಜತೆಗೆ ವಾಗ್ವಾದ ನಡೆದಿತ್ತು.
ನಂತರ ಅದೇ ದಿನ ಮದ್ಯಾಹ್ನ ಕೆರೆ ಕೋಡಿ ಸಮೀಪ ಲಿಂಬಾವಳಿ ವೀಕ್ಷಣೆ ಮಾಡುತ್ತಿದ್ದ ಸ್ಥಳಕ್ಕೆ ಬಂದ ಮಹಿಳೆ ಮನವಿ ನೀಡಲು ಮುಂದಾಗಿದ್ದರು. ಈ ವೇಳೆ ಶಾಸಕರು ಮಹಿಳೆಯ ಕೈಯಲ್ಲಿದ್ದ ಮನವಿ ಪತ್ರವನ್ನು ಕಿತ್ತುಕೊಂಡು ಕಳಿಸಿದ್ದರು. ಅಲ್ಲಿಂದ ಪೊಲೀಸ್ ಠಾಣೆಗೆ ತೆರಳಿದ ಮಹಿಳೆ, ಶಾಸಕರ ವಿರುದ್ಧ ದೂರು ನೀಡಿದ್ದರು. ರೂತ್ ಸಗಾಯ್ ಮೇರಿ, ಆಕೆಯ ಪತಿ ಹಾಗೂ ಮಗನ ವಿರುದ್ಧ ಬಿಬಿಎಂಪಿ ವೈಟ್‌ಫೀಲ್ಡ್ ಸರ್ಕಲ್‌ನ ಕಂದಾಯ ನಿರೀಕ್ಷಕ ಪಾರ್ಥಸಾರಥಿ ಅವರು ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಲಾಗಿತ್ತು.
ಅತ್ಯಾಚಾರ ಮಾಡಿದ್ದೇನ? ಎಂದ ಶಾಸಕ
ವಿವಾದ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ವಿವಿಧ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಲು ಮುಂದಾದ ಲಿಂಬಾವಳಿ, ಈ ಸಂಬಂಧ ಮಾಧ್ಯಮದವರ ಪ್ರಶ್ನೆಗೆ ವ್ಯಘ್ರವಾಗಿದ್ದಾರೆ. ನೀವು ಮಹಿಳಾಪರ ಮಾತ್ರ ಮಾತನಾಡುತ್ತಿದ್ದೀರ. ಅವರು ಒತ್ತುವರಿ ಮಾಡಿದ್ದಾರೆ, ಜನಪರವಾಗಿಯೂ ಮಾತನಾಡಬೇಕು. ಅದನ್ನು ಬಿಟ್ಟು, ಮಹಿಳೆಗೆ ಹಾಗೆ ಮಾಡಿದಿರಿ, ಹೀಗೆ ಮಾಡಿದಿರಿ ಎಂದು ಪ್ರಶ್ನಿಸುತ್ತೀರ. ನಾನೇನು ಅವಳನ್ನು ಅತ್ಯಾಚಾರ ಮಾಡಿದ್ದೀನ? ಎಂದು ಮಾಧ್ಯಮ ಪ್ರತಿನಿಧಿಗಳ ವಿರುದ್ಧ ಹರಿಹಾಯ್ದಿದ್ದಾರೆ.
ಇದನ್ನೂ ಓದಿ | ಶಾಸಕ ಲಿಂಬಾವಳಿ ಆವಾಜ್ ಹಾಕಿದ್ದ ಮಹಿಳೆ ವಿರುದ್ಧ FIR: ಬಿಬಿಎಂಪಿ ಅಧಿಕಾರಿಯಿಂದ ದೂರು
ಬಹಿರಂಗ ಕ್ಷಮೆ ಯಾಚಿಸಬೇಕು
ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ವಿರುದ್ಧ ಸುದ್ದಿಗೋಷ್ಟಿ ನಡೆಸಿರುವ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್, ಮಹಿಳೆ ಮೇಲೆ ತೋರಿರುವ ದರ್ಪವನ್ನು ಕಾಂಗ್ರೆಸ್ ಪಕ್ಷದ ಪರವಾಗಿ ಖಂಡಿಸುತ್ತೇವೆ. ಶಾಸಕರು ಆ ಮಹಿಳೆಗೆ ಬಹಿರಂಗವಾಗಿ ಬೇಷರತ್ ಕ್ಷಮೆ ಕೇಳಬೇಕು. ಇಲ್ಲವಾದರೆ ನಿಮ್ಮಂತಹ ನಾಲಾಯಕ್ ನಾಯಕರ ರಾಜೀನಾಮೆಯನ್ನು ನಿಮ್ಮ ನಾಯಕರು ಪಡೆಯಬೇಕು.
ಈ ವಿಚಾರವಾಗಿ ಕೇವಲ ಪತ್ರಿಕಾಗೋಷ್ಠಿ ನಡೆಸಿ ಸುಮ್ಮನಾಗುವುದಿಲ್ಲ. ರಾಜ್ಯದಲ್ಲಿ ಮಹಿಳಾ ಆಯೋಗ ಎಂಬುದು ಇದ್ದರೆ ಮಹಿಳೆಯರ ಪರವಾಗಿ ಕೆಲಸ ಮಾಡುತ್ತಿದೆ ಎಂಬ ನಂಬಿಕೆ ಇದೆ. ನಾವು ಈ ವಿಚಾರವಾಗಿ ಮಹಿಳಾ ಆಯೋಗಕ್ಕೂ ದೂರು ನೀಡುತ್ತೇವೆ. ಮಹಿಳೆಯರು ಅನ್ಯಾಯ ಸಹಿಸಿಕೊಳ್ಳುವುದು ಸರಿಯಲ್ಲ, ಅವರು ತಮಗಾದ ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು ಎಂದರು.
ಬಿಜೆಪಿ ಮಹಿಳೆಯರು ಬೆಂಬಲಕ್ಕೆ ಬರಲಿ
ಅರವಿಂದ ಲಿಂಬಾವಳಿ ವಿರುದ್ಧ ಕಾನೂನು ಹೋರಾಟ ನಡೆಸುತ್ತೇನೆ ಎಂದಿರುವ ದೂರುದಾರ ಮಹಿಳೆ ರೂತ್ ಸಗಾಯಿ ಮೇರಿ, ಈ ಬಗ್ಗೆ ಮಹಿಳಾ ಆಯೋಗಕ್ಕೆ ದೂರು ನೀಡುವುದಾಗಿ ಹೇಳಿದ್ದಾರೆ. ಅತ್ಯಾಚಾರ ಮಾಡಿದ್ದೇನೆಯೇ ಎಂದು ಹೇಳಿರುವ ಲಿಂಬಾವಳಿ, ರಾಜ್ಯದ ಮಹಿಳೆಯರ ಕ್ಷಮೆ ಯಾಚಿಸಬೇಕು. ಪೊಲೀಸ್ ಸೇರಿ ಎಲ್ಲ ಅಧಿಕಾರಿಗಳೂ ಶಾಸಕರ ಪರ ನಿಂತಿದ್ದಾರೆ. ಕ್ಷೇತ್ರದಲ್ಲಿ ಸಾಮಾನ್ಯ ಜನರು ಬದುಕುವ ವಾತಾವರಣ ನಿರ್ಮಾಣ ಆಗಬೇಕು. ಶೋಭಾ ಕರಂದ್ಲಾಜೆ, ನಿರ್ಮಲಾ ಸೀತರಾಮನ್ ಹಾಗೂ ಬಿಜೆಪಿಯ ಎಲ್ಲರೂ ನನ್ನ ಬೆಂಬಲಕ್ಕೆ ಬರಬೇಕು ಎಂದಿದ್ದಾರೆ.
ಮಹಿಳಾ ಆಯೋಗಕ್ಕೆ ದೂರು
ಅರವಿಂದ ಲಿಂಬಾವಳಿ ವಿರುದ್ಧ ರಾಜ್ಯ ಮಹಿಳಾ ಆಯೋಗದಲ್ಲಿ ಎರಡು ದೂರು ದಾಖಲಾಗಿದೆ.ನಮ್ಮ ಕರುನಾಡು ಯುವ ಸೇನೆ ಹಾಗೂ ವಕೀಲರ ಸಂಘದಿಂದ ಮೊದಲ ದೂರು ಹಾಗೂ ಆಮ್ ಆದ್ಮಿ ಪಕ್ಷದಿಂದ ಎರಡನೇ ದೂರು ದಾಖಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮಿಳಾ ನಾಯ್ಡು, ಅರವಿಂದ ಲಿಂಬಾವಳಿ ವಿಚಾರವಾಗಿ ದೂರು ಬಂದಿದೆ. ಮಾಧ್ಯಮ ಮುಖಾಂತರ ಪ್ರಕರಣದ ಪೂರ್ಣ ಮಾಹಿತಿ ಪಡೆಯಲಾಗಿದೆ. ಪ್ರಕರಣದ ಕುರಿತು ವೈಟ್‌ಫೀಲ್ಡ್ ಡಿಸಿಪಿರವರಿಂದ ಹೆಚ್ಚು ಮಾಹಿತಿ ನೀಡಿಲು ಕೋರಿದ್ದೇನೆ.
ಮಹಿಳೆಯರಿಗೆ ರಕ್ಷಣೆ ಕೊಡುವುದು ನಮ್ಮ ಕರ್ತವ್ಯ. ಜನಪ್ರತಿನಿಧಿಯಾದರೂ ಸಾಮಾನ್ಯರಾದರೂ ಗೌರವಯುತವಾಗಿ ಮಾತನಾಡಬೇಕು. ಮಹಿಳೆಯರಿಗೆ ಗೌರವ ಕೊಡಬೇಕು. ಆ ಮಹಿಳೆಗೆ ಸೂಕ್ತ ಭದ್ರತೆ ಕೊಡಬೇಕು ಎಂದು ಹೇಳಿದ್ದೇನೆ. ಈ ಹಿಂದಿನ ಪ್ರಕರಣದಲ್ಲಿ, ಪ್ರಿಯಾಂಕ್ ಖರ್ಗೆಯವರೂ ಕ್ಷಮೆ ಯಾಚಿಸಬೇಕು ಹಾಗೂ ಸ್ಪಷ್ಟೀಕರಣ ನೀಡಬೇಕು ಎಂದು ಕೋರಿದ್ದೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ | Aravind Limbavali | ಒಬ್ಬರೇ ಅಲ್ಲ ಲಿಂಬಾವಳಿ, ದೇಶಾದ್ಯಂತ ಇದೆ ಇಂಥ ರಾಜಕಾರಣಿಗಳ ಹಾವಳಿ!