ಬೆಂಗಳೂರು: ಮಾಜಿ ಸಚಿವ ಹಾಗೂ ಮಹಾಲಕ್ಷ್ಮಿ ಲೇಔಟ್ ಶಾಸಕ ಕೆ. ಗೋಪಾಲಯ್ಯ (MLA K Gopalaiah Case) ಅವರಿಗೆ ಮಂಗಳವಾರ ರಾತ್ರಿ ಜೀವ ಬೆದರಿಕೆ (Threatening Call) ಹಾಕಿದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಬಿಡುಗಡೆಯಾಗಿರುವ ಬಸವೇಶ್ವರ ನಗರದ ಮಾಜಿ ಕಾರ್ಪೊರೇಟರ್ ಪದ್ಮರಾಜ್ (Ex corporator Padmaraj) ಅವರು ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. ತಾನು 2010ರಲ್ಲಿ ಬಿಜೆಪಿ ಹಿರಿಯ ನಾಯಕ ಆರ್. ಅಶೋಕ್ (R. Ashok) ಅವರಿಗೆ 1 ಕೋಟಿ ರೂ. ಕೊಟ್ಟಿದ್ದಾಗಿ ಹೇಳಿದ್ದಾರೆ. ತನ್ನನ್ನು ಬಿಬಿಎಂಪಿ ಮೇಯರ್ (BBMP Mayor) ಮಾಡುವುದಾಗಿ ಅಶೋಕ್ ಅವರು ಈ ಮೊತ್ತವನ್ನು ಪಡೆದಿದ್ದರು ಎಂದು ಆರೋಪಿಸಿದ್ದಾರೆ.
ಮಂಗಳವಾರ ರಾತ್ರಿ 11.01ರ ಹೊತ್ತಿಗೆ ಪದ್ಮರಾಜ್ ಅವರು ಗೋಪಾಲಯ್ಯ ಅವರಿಗೆ ಕರೆ ಮಾಡಿ ಹಣ ಕೊಡುವಂತೆ ಕೇಳಿದ್ದರು ಎನ್ನಲಾಗಿದೆ. ಹಣ ಕೊಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾಗಿ ಆರೋಪಿಸಲಾಗಿದೆ. ಗೋಪಾಲಯ್ಯ ಅವರು ಈ ಸಂಬಂಧ ಕಾಮಾಕ್ಷಿಪಾಳ್ಯ ಠಾಣೆಗೆ ದೂರು ನೀಡಿದ್ದರು. ಕಾಮಾಕ್ಷಿಪಾಳ್ಯ ಪೊಲೀಸರು ಬೆಳಗ್ಗೆ ಪದ್ಮರಾಜ್ ಅವರನ್ನು ಬಂಧಿಸಿದರು. ಈ ನಡುವೆ, ರಾಜ್ಯ ವಿಧಾನಸಭೆ ಮತ್ತು ವಿಧಾನ ಪರಿಷತ್‌ನಲ್ಲಿ ಗೋಪಾಲಯ್ಯ ಅವರಿಗೆ ಎದುರಾದ ಜೀವ ಬೆದರಿಕೆ ಬಗ್ಗೆ ಚರ್ಚೆ ನಡೆದು ಕ್ರಮ ಕೈಗೊಳ್ಳಲು ಆಗ್ರಹಿಸಲಾಯಿತು.
ಬಂಧಿತ ಪದ್ಮರಾಜ್ ಅವರನ್ನು ಪೊಲೀಸರು 39ನೇ ಎಸಿಎಂಎಂ ಕೋರ್ಟ್‌ಗೆ ಹಾಜರುಪಡಿಸಿದ್ದು ಕೋರ್ಟ್ ಅವರಿಗೆ ಜಾಮೀನು ಮಂಜೂರು ಮಾಡಿದೆ.
ಜಾಮೀನು ಪಡೆದು ಹೊರಬಂದ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಪದ್ಮರಾಜ್ ತಾನು ಗೋಪಾಲಯ್ಯ ಅವರಿಗೆ ಜೀವ ಬೆದರಿಕೆ ಹಾಕಿಲ್ಲ ಎಂದು ಹೇಳಿದರು. ಅದರ ಜತೆಗೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ಮೇಲೆ ಗಂಭೀರ ಆರೋಪ ಮಾಡಿದರು.
ಇದನ್ನೂ ಓದಿ: MLA Gopalaiah : ಹಣ ಕೊಡದಿದ್ರೆ ಕೊಲ್ತೀನಿ; ಬಿಜೆಪಿ ಶಾಸಕ ಗೋಪಾಲಯ್ಯಗೆ ಮಧ್ಯರಾತ್ರಿ ಬೆದರಿಕೆ
ಮಂಜುನಾಥನ ಮೇಲಾಣೆ, ಜೀವ ಬೆದರಿಕೆ ಹಾಕಿಲ್ಲ ಎಂದ ಪದ್ಮರಾಜ್
ಗೋಪಾಲಯ್ಯ ಅವರಿಗೆ ನಾನು ಕರೆ ಮಾಡಿದ್ದು ನಿಜ, ಮಾತನಾಡಿದ್ದು ನಿಜ. ಆದರೆ ಜೀವ ಬೆದರಿಕೆ ಹಾಕಿಲ್ಲ ಎಂದು ಹೇಳಿದರು. ನಾನು ಬೆದರಿಕೆ ಹಾಕಿದ್ದೇನೆ ಎನ್ನುವುದು ಸತ್ಯಕ್ಕೆ ದೂರವಾದ ಆರೋಪ. ಕೊಲೆ ಬೆದರಿಕೆ ಹಾಕುವ ವ್ಯಕ್ತಿ ನಾನಲ್ಲ. ಮಂಜುನಾಥನ ಮೇಲೆ ಆಣೆ ಮಾಡಿ ಹೇಳುತ್ತೇನೆ, ನಾನು ಬೆದರಿಕೆ ಹಾಕಿಲ್ಲ. ದೇವರು ಅವರಿಗೆ ಒಳ್ಳೆಯದು ಮಾಡಲಿ ಎಂದು ಹೇಳಿದರು.
ನಾನು ಗುತ್ತಿಗೆ ಕೊಡಿಸುವ ವಿಚಾರಕ್ಕೆ, ಸಂಬಂಧಿಸಿ 15 ಲಕ್ಷ ರೂ. ಹಣ ಕೊಟ್ಟಿದ್ದೆ, ಆದರೆ, ಅವರು ಗುತ್ತಿಗೆ ಕೊಡಿಸಲಿಲ್ಲ. ಅದಕ್ಕೆ ಕರೆ ಮಾಡಿ ಮಾತನಾಡಿದೆ. ಆಗ ಒಂದಷ್ಟು ಮಾತುಗಳಾದವು. ಅದನ್ನೇ ಜೀವ ಬೆದರಿಕೆ ಎಂದು ದೂರು ಕೊಟ್ಟಿದ್ದಾರೆ ಎಂದು ಧನರಾಜ್ ಹೇಳಿದರು.
ಮೇಯರ್ ಮಾಡ್ತೇನೆ ಅಂತ ಅಶೋಕ್ ಒಂದು ಕೋಟಿ ಕೊಟ್ಟಿದ್ದೆ
2010ರಲ್ಲಿ ಬಿಜೆಪಿ ನಾಯಕರಾದ ಆರ್. ಅಶೋಕ್ ಅವರು ನನ್ನನ್ನು ಮೇಯರ್ ಮಾಡ್ತಿನಿ ಅಂತ ಒಂದು ಕೋಟಿ ಹಣ ತೆಗೆದುಕೊಂಡಿದ್ದರು. ಮೇಯರ್ ಮಾಡಿಸೋದಾಗಿ ಹೇಳಿದ್ದರಿಂದ ಒಂದು ಕೋಟಿ ರೂ. ಕೊಟ್ಟಿದ್ದೆ. ಆದರೆ, ಇವತ್ತಿಗೂ ಮೇಯರ್ ಮಾಡಿಲ್ಲ. ಮುಂದೆ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಅದನ್ನು ನಾನು ಮರಳಿ ಪಡೆದಿದ್ದೇನೆ ಎಂದು ಹೇಳಿದರು ಪದ್ಮರಾಜ್.
ರಾಜಾಜಿ ನಗರ ಟಿಕೆಟ್ ಕೊಡಿಸ್ತೀನಿ ಎಂದಿದ್ರಾ ಗೋಪಾಲಯ್ಯ?
ಗೋಪಾಲಯ್ಯ ಮತ್ತು ಪದ್ಮರಾಜ್ ನಡುವಿನ ಜಗಳ, ಜೀವ ಬೆದರಿಕೆ ಹಿಂದೆ ಹಲವಾರು ವಿಚಾರಗಳ ಚರ್ಚೆಯಾಗುತ್ತಿದೆ. ಗೋಪಾಲಯ್ಯ ಅವರು ಪದ್ಮರಾಜ್ ರಾಜಾಜಿನಗರ ಟಿಕೆಟ್ ಕೊಡಿಸುವ ಭರವಸೆ ನೀಡಿದ್ದರೆಂದು ಹೇಳಲಾಗುತ್ತಿದೆ. ಟಿಕೆಟ್ ಸಿಗದ ವಿಚಾರದಲ್ಲಿ ಅವರಿಬ್ಬರ ನಡುವೆ ಜಗಳ ನಡೆದಿದೆ ಎನ್ನಲಾಗುತ್ತಿದೆ. ಪದ್ಮರಾಜ್ ಅವರು ಟಿಕೆಟ್ ಸಿಗುವ ಭರವಸೆಯಲ್ಲಿ ಒಂದಷ್ಟು ಹಣ ಖರ್ಚು ಮಾಡಿದ್ದರು. ಆದರೆ, ಟಿಕೆಟ್ ಸಿಗದೆ ಇದ್ದುದಕ್ಕೆ ಪದ್ಮರಾಜ್ ಅವರು ಹತಾಶೆಗೊಳಗಾಗಿದ್ದಾರೆ ಎನ್ನಲಾಗಿದೆ.
ಗೋಪಾಲಯ್ಯಗೆ ಪದ್ಮರಾಜ್ ಯಾವುದೇ ಸಾಲ ನೀಡಿಲ್ಲ ಎಂದ ಪೊಲೀಸರು
ಗೋಪಾಲಯ್ಯ ಅವರಿಗೆ ಪದ್ಮನಾಭ್ ಒಂದಷ್ಟು ಸಾಲ ನೀಡಿದ್ದರು ಎಂಬ ವಾದಗಳು ಕೇಳಿಬಂದಿದ್ದರು. ಆದರೆ, ಈ ಬಗ್ಗೆ ಯಾವುದೇ ದಾಖಲೆ ಪದ್ಮರಾಜ್ ಬಳಿ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.