ಬೆಂಗಳೂರು: ಶಾಸಕ ಮುನಿರತ್ನ (MLA Muniratna) ಹನಿ ಟ್ರ್ಯಾಪ್ ಕೇಸ್ ದಿನೆದಿನೇ ತಿರುವು ಪಡೆದುಕೊಳ್ಳುತ್ತಾ ಹೋಗುತ್ತಿದೆ. ಮುನಿರತ್ನ ಸದ್ಯ ಎಸ್ಐಟಿ ಕಸ್ಟಡಿಯಲ್ಲಿದ್ದರೆ, ಅತ್ತ ವಿಚಾರಣೆ ವಿಭಿನ್ನ ಸ್ವರೂಪ ಪಡೆದುಕೊಂಡಿದೆ. ಪ್ರಕರಣ ಸಂಬಂಧ ಸಂತ್ರಸ್ತೆಯ ಹೇಳಿಕೆ ದಾಖಲಿಸಿರುವ ಅಧಿಕಾರಿಗಳು ಆ ಹೇಳಿಕೆ ಮೇರೆಗೆ ಹಲವು ಗಣ್ಯರಿಗೆ ನೋಟಿಸ್ ನೀಡಲಿದ್ದಾರೆ. ಹಾಗಾದರೆ ಈ ಪ್ರಕರಣದಲ್ಲಿ ಮುನಿರತ್ನ ಜತೆ ಕೈಜೋಡಿಸಿದ ಆ ರಾಜಕಾರಣಿಗಳು ಯಾರು?
ಎಸ್ಐಟಿ ಅಧಿಕಾರಿಗಳಿಂದ ಹನಿಟ್ರ್ಯಾಪ್ ಕೇಸ್ ತನಿಖೆ ಚುರುಕುಗೊಂಡಿದೆ. ಪ್ರಕರಣ ಸಂಬಂಧ ಶಾಸಕ ಮುನಿರತ್ನ ವಿಚಾರಣೆ ಅನುಭವಿಸುತ್ತಿದ್ದರೆ, ಅತ್ತ ಸಂತ್ರಸ್ತೆ ವಿಚಾರಣೆಯಲ್ಲಿ ಕುತೂಹಲಕಾರಿ ಸಂಗತಿಯನ್ನು ಬಹಿರಂಗ ಪಡಿಸಿದ್ದು, ಪ್ರಕರಣದಲ್ಲಿ ಮುನಿರತ್ನ ಜತೆಗೆ ಇನ್ನು ಹಲವರು ಭಾಗಿಯಾಗಿದ್ದರು. ಅದರಲ್ಲಿ ಹಲವು ಅಧಿಕಾರಿಗಳು, ಮಾಜಿ ಕಾರ್ಪೋರೇಟರ್‌ಗಳು, ರಾಜಕಾರಣಿಗಳು ಈ ಹನಿ ಟ್ರ್ಯಾಪ್‌ನಲ್ಲಿ ಶಾಮಿಲಾಗಿದ್ದಾರೆ ಎಂದಿದ್ದಾಳೆ. ಸದ್ಯ ಈ ಬಗ್ಗೆ ಎಸ್ಐಟಿ ಅಧಿಕಾರಿಗಳು ತನಿಖೆಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಆ ಪ್ರಬಲ ವ್ಯಕ್ತಿಗಳಿಗೆ ನೋಟಿಸ್ ನೀಡಲಿದ್ದಾರೆ.
ಇನ್ನು ಮುನಿರತ್ನ ಸಂಬಂಧ ಹೇಳಿಕೆ ದಾಖಲಿಸುವಾಗ ಖುದ್ದು ಸಂತ್ರಸ್ಥ ಮಹಿಳೆಯಿಂದಲೇ ಹೆಸರು ಉಲ್ಲೇಖ ಆಗಿದೆ. ಈ ಟ್ರ್ಯಾಪ್‌ನಲ್ಲಿ ಯಾರೆಲ್ಲ ಭಾಗಿಯಾಗಿದ್ದರು ಎಂದು ಪ್ರಭಾವಿಗಳ ಹೆಸರನ್ನು ಹೇಳಿದ್ದಾರೆ. ಸದ್ಯ ಈ ಬಗ್ಗೆ ಎಸ್ಐಟಿ ಕೆಲ ಮಾಜಿ ಕಾರ್ಪೋರೇಟರ್‌ಗಳಿಗೆ ಅಧಿಕಾರಿಗಳಿಗೆ ನೋಟಿಸ್ ಕೊಟ್ಟು ವಿಚಾರಣೆಗೆ ಹಾಜರಾಗಲು ಸೂಚನೆ ನೀಡುವ ಸಾಧ್ಯತೆ ಇದೆ. ಕಾರ್ಪೋರೇಟರ್ ಜತೆಗೆ ಅಧಿಕಾರಿಗಳಲ್ಲದೆ ಪ್ರಭಾವಿ ರಾಜಕಾರಣಿಗಳು ಸಹ ಈ ಕೇಸ್‌ನಲ್ಲಿ ಭಾಗಿಯಾಗಿದ್ದಾರೆ ಎಂದು ಮಹಿಳೆ ವಿಚಾರಣೆಯಲ್ಲಿ ಹೇಳಿದ್ದು, ಈ ಬಗ್ಗೆ ಎಸ್ಐಟಿ ಆ ರಾಜಕಾರಣಿಗಳಿಗೆ ನೋಟಿಸ್ ನೀಡುವ ಮುನ್ನ ಹಿರಿಯ ಅಧಿಕಾರಿಗಳ ಜತೆ ಚರ್ಚೆ ನಡೆಸಲಿದ್ದಾರೆ.
ಇದೆಲ್ಲ ಒಂದು ಕಡೆಯಾದರೆ ಅತ್ಯಾಚಾರ ಕೇಸ್‌ನ ತನಿಖೆ ಜತೆಗೆ ಹನಿಟ್ರ್ಯಾಪ್ ಕೇಸ್‌ನ ಮೂಲಕ್ಕೆ ಕೈ ಹಾಕಿರುವ ಎಸ್ಐಟಿ ಅಧಿಕಾರಿಗಳು ಮುನಿರತ್ನರ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಸದ್ಯ ಸಂತ್ರಸ್ತೆ ಹೇಳಿಕೆ ಸಂಚಲನಕ್ಕೆ ಕಾರಣವಾಗಿದ್ದು, ಎಲ್ಲಾ ಆಯಾಮಾಗಳಲ್ಲಿ ತನಿಖೆ ನಡೆಯುತ್ತಿದೆ.