ಬೆಂಗಳೂರು: ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಜಮೀನು ಹಗರಣ (MUDA Scam) ಸಂಬಂಧಿಸಿ ಇಂದು ಮೈಸೂರಿನಲ್ಲಿ (Mysore) ಬೃಹತ್ ಪ್ರತಿಭಟನೆ (BJP Protest) ಹಮ್ಮಿಕೊಂಡಿರುವ ಬಿಜೆಪಿಯ ನಾಯಕರನ್ನು (BJP leaders) ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ (Bangalore Mysore highway) ಪೊಲೀಸರು ತಡೆದು ಬಂಧಿಸಿದ್ದಾರೆ.
ಮುಡಾ ಹಗರಣ ವಿರೋಧಿಸಿ ಪ್ರತಿಭಟನೆಗೆ ಮೈಸೂರಿಗೆ ಹೊರಟ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಮುನಿರತ್ನ ಮುಂತಾದ ನಾಯಕರನ್ನು ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಪೊಲೀಸರು ತಡೆದರು. ಈ ಸಂದರ್ಭದಲ್ಲಿ ಕಣಮಿಣಕಿ ಟೋಲ್ ಬಳಿ ರಸ್ತೆ ತಡೆದು ಬಿಜೆಪಿ ನಾಯಕರು ಪ್ರತಿಭಟಿಸಿದರು. ಆಗ ಪೊಲೀಸರು ಬಿಜೆಪಿ ನಾಯಕರನ್ನು ಬಂಧಿಸಿ ಬಿಡದಿ ಪೊಲೀಸ್ ಠಾಣೆಗೆ ಕರೆದೊಯ್ದರು. ಬಿಡದಿ ಪೊಲೀಸ್ ಠಾಣೆ ಮುಂದೆಯೂ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದರು.
ಈ ನಡುವೆ, ಮೈಸೂರಿಗೆ ಪ್ರತಿಭಟನೆಗಾಗಿ ಬೆಂಗಳೂರು ಹಾಗೂ ರಾಮನಗರ ಮುಂತಾದ ಕಡೆಗಳಿಂದ ಬಿಜೆಪಿ ಕಾರ್ಯಕರ್ತ ಹೊರಟಿದ್ದಾರೆ. ಆದರೆ ಪೊಲೀಸರು ಅವರನ್ನು ಹೆದ್ದಾರಿಯಲ್ಲಿಯೇ ತಡೆದು ವಾಪಸ್ ಕಳಿಸಲು ಮುಂದಾಗಿದ್ದಾರೆ. ಇದರಿಂದ ರೊಚ್ಚಿಗೆದ್ದ ಕಾರ್ಯಕರ್ತರು ರಸ್ತೆಯಲ್ಲೇ ಕುಳಿತು ಪ್ರತಿಭಟಿಸುತ್ತಿದ್ದಾರೆ.
ಹೋರಾಟ ಹತ್ತಿಕ್ಕುವ ಕೆಲಸ: ವಿಜಯೇಂದ್ರ
ʼಈ ಭ್ರಷ್ಟ ಕಾಂಗ್ರೆಸ್ ಸರ್ಕಾರ ಹೋರಾಟ ಹತ್ತಿಕ್ಕುವ ಕೆಲಸ ಮಾಡುತ್ತಿದೆʼ ಎಂದು ಬಿಡದಿಯಲ್ಲಿ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಡದಿಯಲ್ಲಿ ತಮ್ಮನ್ನು ಪೊಲೀಸರು ತಡೆದು ಬಂಧಿಸಿದ ಬಳಿಕ ಅವರು ಮಾತನಾಡಿದರು. “ಮೈಸೂರು ರ್ಯಾಲಿ ತಡೆಯಬಹುದು. ಆದರೆ ಸಿಎಂ ಅವರೇ, ಸತ್ಯ ಮರೆಮಾಚಲು ಸಾಧ್ಯವಿಲ್ಲ. ಮುಡಾ ಹಗರಣದಿಂದ ನೀವು ಬಚಾವ್ ಆಗಲು ಸಾಧ್ಯವಿಲ್ಲ. ನಾವು ಹೆದರಿಕೆಯಿಂದ ಓಡಿ ಹೋಗೊಲ್ಲ. ಈ ಭ್ರಷ್ಟಾಚಾರಕ್ಕೆ ಶಿಕ್ಷೆ ಆಗಬೇಕು. ಮುಡಾ ಹಗರಣದಲ್ಲಿ ಸಿಎಂ ರಾಜೀನಾಮೆ ಕೊಡೋವರೆಗೂ ನಾವು ಹೋರಾಟ ಮುಂದುವರೆಸುತ್ತೇವೆ” ಎಂದು ಹೇಳಿದರು.
“ಮುಡಾ ಹಗರಣವನ್ನು ಸಿಬಿಐಗೆ ಕೊಡೋವರೆಗೂ ಪ್ರತಿಭಟನೆ ಬಿಡೋದಿಲ್ಲ. ಅಧಿವೇಶನದಲ್ಲಿ ಈ ವಿಷಯ ದೊಡ್ಡ ಮಟ್ಟದಲ್ಲಿ ಪ್ರಸ್ತಾಪ ಮಾಡ್ತೀವಿ. ಸಿಬಿಐಗೆ ಕೇಸ್ ಕೋಡೊವರೆಗೂ ನಮ್ಮ ಹೋರಾಟ ಮಾಡ್ತೀವಿ. ಮುಂದಿನ ಹೋರಾಟದ ಬಗ್ಗೆ ಹಿರಿಯರ ಜೊತೆ ಚರ್ಚೆ ಮಾಡಿ ನಿರ್ಧಾರ ಮಾಡ್ತೀವಿ. ಸಿಎಂ ಅವರು ತಪ್ಪಿಸಿಕೊಂಡು ಹೋಗಲು ಸಾಧ್ಯವಿಲ್ಲ. ಹಿಂದುಳಿದ ವರ್ಗದ ನಾಯಕ ಅಂತ ಮುಖವಾಡ ಹಾಕಿಕೊಂಡಿದ್ದೀರಾ. ನೀವು ರಾಜೀನಾಮೆ ಕೊಡೋ ಸಮಯ ಬಂದಿದೆ. ಸಿಎಂ ರಾಜೀನಾಮೆ ಕೊಡಬೇಕು” ಎಂದು ಬಿಡದಿ ಪೊಲೀಸ್ ಠಾಣೆ ಮುಂದೆ ವಿಜಯೇಂದ್ರ ಹೇಳಿಕೆ ನೀಡಿದ್ದಾರೆ.
ಪ್ರಯಾಣಿಕರನ್ನು ರಸ್ತೆಯಲ್ಲೇ ತಡೆದರು
ಚಾಮರಾಜನಗರ: ಮೈಸೂರಿನಲ್ಲಿ ಮೂಡಾ ಹಗರಣ ವಿರುದ್ಧ ಬಿಜೆಪಿ ಪ್ರತಿಭಟನೆ ಹಿನ್ನೆಲೆಯಲ್ಲಿ ಚಾಮರಾಜನಗರದಿಂದ ಮೈಸೂರಿಗೆ ಪ್ರತಿಭಟನೆಗೆ ತೆರಳುತ್ತಿರುವವರನ್ನು ಪೊಲೀಸರು ತಡೆದರು. ʼನಾವು ಪ್ರತಿಭಟನೆಗೆ ಹೋಗುತ್ತಿಲ್ಲ, ಚಾಮುಂಡಿ ಬೆಟ್ಟಕ್ಕೆ ಹೋಗುತ್ತಿದ್ದೇವೆʼ ಎಂದು ಪ್ರಯಾಣಿಕರು ಪ್ರತಿಭಟಿಸಿದರು. ದೇವನೂರು ಮಠ ಹಾಗು ಚಾಮುಂಡಿ ಬೆಟ್ಟಕ್ಕೆ ಹೋಗುತ್ತಿದ್ದೇವೆ. ನಮ್ಮನ್ನು ಹೋಗಲು ಬಿಡಿ ಎಂದು ಟಿ.ಟಿ. ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು. ರಸ್ತೆ ಮಧ್ಯದಲ್ಲೇ ವಾಹನ ತಡೆದು ಪ್ರಯಾಣಿಕರನ್ನು ಪೊಲೀಸರು ಕೆಳಗಡೆ ಇಳಿಸಿದ್ದು, ಪೊಲೀಸರ ವರ್ತನೆಗೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿ ಸಂತೇಮರಳ್ಳಿಯ ನಿವಾಸಿಗಳು ರಸ್ತೆಯಲ್ಲೇ ಕುಳಿತು ಪ್ರತಿಭಟಿಸಿದರು.
ಇದನ್ನೂ ಓದಿ: BY Vijayendra: 12ರಂದು ಮೈಸೂರಿನಲ್ಲಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ; ಸಿಎಂ ರಾಜೀನಾಮೆ, ಸಿಬಿಐ ತನಿಖೆಗೆ ವಿಜಯೇಂದ್ರ ಆಗ್ರಹ